ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಹಭೋಜನವ ಮಾಡುವನ ಇರವು ಹೇಗೆಂದಡೆ: ದಗ್ಧಪಟದಂತೆ, ಮಂಜಿನ ರಂಜನೆಯ ವಾರಿಯ ಧೂಮದಂತೆ, ಒಡಲಿನ ಆತ್ಮನ ಭೇದದಂತಿರಬೇಕು. ಆಕಾಶದ ಸಾಕಾರದಲ್ಲಿ ತೋರುವ ನಾನಾ ಛಾಯದಂತೆ, ಒಂದು ವರ್ಣದಲ್ಲಿ ನಿಲ್ಲದೆ ತೋರುವ ತೋರಿಕೆಯಂತೆ, ಕಾಯದ ಛಾಯವ ತೊಟ್ಟಿದ್ದಲ್ಲಿ ಲಿಂಗಕ್ಕೂ ತನಗೂ ಸಹಭೋಜನ ಸಲವುದೆಂದೆ. ಅದು ಉರಿಯೊಳಗಳ ಕರ್ಪುರದಂತೆ, ಕರ್ಪುರದೊಳಗಳ ಉರಿಯಂತೆ. ಅನ್ಯಬ್ಥಿನ್ನವಿಲ್ಲದಿರಬೇಕು, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ, ವಾಮದೇವಮುಖವೆ ಎನಗೆ ಚೆನ್ನಬಸವಣ್ಣನಯ್ಯಾ, ಅಘೋರಮುಖವೆ ಎನಗೆ ಮಡಿವಾಳಯ್ಯನಯ್ಯಾ, ತತ್ಪುರುಷಮುಖವೆ ಎನಗೆ ಸಿದ್ಧರಾಮಯ್ಯನಯ್ಯಾ, ಈಶಾನಮುಖವೆ ಎನಗೆ ಪ್ರಭುದೇವರಯ್ಯಾ, ಹೃದಯದ ಮುಖವೆ ಎನಗೆ ಗಣಂಗಳಯ್ಯಾ. ಇಂತಿವರ ಶ್ರೀಚರಣದಲ್ಲಿ ಉರಿಯುಂಡ ಕರ್ಪುರದಂತೆ ಬೆರಸಿದೆನಯ್ಯಾ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಸದ್ಭಕ್ತನ ಆಚರಣೆಯ ಕ್ರೀಯೆಂತುಂಟೆಂದಡೆ: ಜಂಗಮದ ಪಾದೋದಕ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ ಜಂಗಮದ ಕುಂದು ನಿಂದೆಯ ಕೇಳಬಾರದು. ಜಂಗಮಪ್ರಸಾದವ ಲಿಂಗಕ್ಕೆ ಕೊಡುವಲ್ಲಿ ಅರ್ಥ ಪ್ರಾಣ ಅಬ್ಥಿಮಾನವ ಮುಟ್ಟಿದಲ್ಲಿ ಚಿತ್ತದಲ್ಲಿ ಹೆಚ್ಚು ಕುಂದು ತೋರಿದಾಗಲೆ ಪ್ರಸಾದಕ್ಕೆ ದೂರ. ಇದು ಕಾರಣ, ದೇಹಭಾವವಳಿದವಂಗಲ್ಲದೆ ಪಾದೋದಕ ಪ್ರಸಾದವಿಲ್ಲಾ ಎಂದೆ. ವಿಶ್ವಾಸವುಂಟಾದಲ್ಲಿ ಕುರುಹಿನ ಮುದ್ರೆಯ ಬಯಕೆ ಉಂಟೆ ಅಯ್ಯಾ? ಅವಿಶ್ವಾಸವುಳ್ಳವಂಗೆ ಗುರುಚರದ ಮಾರ್ಗವಿಲ್ಲಾಯೆಂದೆ. ಸದಾಶಿವಮೂರ್ತಿಲಿಂಗವ ಹೀಗರಿವುದಕ್ಕೆಠಾವ ಕಾಣೆ.
--------------
ಅರಿವಿನ ಮಾರಿತಂದೆ
ಸಕಲವನರಿದಡೂ ಮಲತ್ರಯ ನಾಸ್ತಿಯಾಗಿರಬೇಕು. ಅರಿತು ನಿಂದುದಕ್ಕೆ ಅದೆ ಮುಖ್ಯ. ಮೃತ್ತಿಕೆಯ ಕೂಡಿದ ಜಲ ಆರದಿದ್ದಡೆ ಅದೆ ಪಂಕದೋರುವಂತೆ. ಏನನರಿತು ನುಡಿದಡೂ ಕುಲಛಲ ಮಲಂ ನಾಸ್ತಿಯಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಸಕಲಜ್ಞಾನಸಂಪನ್ನ ಕಲೆಯನರಿತೆನೆಂಬ ಅರುಹಿರಿಯರು ಹೇಳಿರಣ್ಣಾ. ಸಕಲ ಅರ್ಪಿತದಲ್ಲಿ ಲಿಂಗಮುಖವಾಗಿ ಇರಬೇಕೆಂಬ ಸಂದೇಹಿಗಳು ಹೇಳಿರಣ್ಣಾ. ಇಂದ್ರಿಯಂಗಳ ಮುಖದಿಂದ ಲಿಂಗವನರಿಯಬೇಕೋ? ಲಿಂಗದ ಮುಖದಿಂದ ಇಂದ್ರಿಯಂಗಳನರಿಯಬೇಕೊ? ಒಂದ ಬಿಟ್ಟು ಒಂದನರಿತಲ್ಲಿ ಹಿಂಗಬಾರದ ತೊಡಕು. ಉಭಯದ ಸಂದೇಹ ನಿಂದಲ್ಲಿ ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಸಹಪಂತಿಯಲ್ಲಿ ತನ್ನ ಗುರುವೆಂದು ವಿಶೇಷವ ಮಾಡಲಾಗದು. ಅದೆಂತೆಂದಡೆ: ಆ ಗುರುವಿಂಗೂ ಆ ಶಿಷ್ಯಂಗೂ ಎರಡಿಟ್ಟು ಮಾಡೂದಕ್ಕೆ ದೃಷ್ಟವ ತೋರಿದ ಮತ್ತೆ, ದ್ರವ್ಯಂಗಳಲ್ಲಿ ವಿಶೇಷವಾಗಿ ಕೈದುಡುಕಿದಡೆ ಮನ ಕೂರ್ತಡೆ ಅದೆ ಕಿಲ್ವಿಷ, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಸ್ಥಾವರಲಿಂಗಪೂಜೆ ಶುದ್ಧಶೈವ, ಮಾರ್ಗಶೈವ ಲಿಂಗಪೂಜೆ ಸಿಂಹಾಸನ. ಪೂರ್ವಶೈವಪೂಜೆ ಸಂಕಲ್ಪನಿರಾವರಣ, ವೀರಶೈವ ಲಿಂಗಪೂಜೆ ಅಂಗದ ಮೇಲೆ ಹಿಂಗದೆ ಧರಿಸಿಹುದು. ಇವೆಲ್ಲವು ಸರಿ, ಶೈವಪೂಜೆ ಅದೆಂತೆಂದಡೆ: ಇಷ್ಟಲಿಂಗ ಜೀವನ ಅಂಗ ಉಭಯವ ಕೂಡಿ ಲೀಯವಾಗಿದ್ದುದು ಶೈವಭೇದಂಗಳಿಗೆ ಹೊರಗು ಸದಾಶಿವಮೂರ್ತಿಲಿಂಗಕ್ಕೆ ಒಳಗು.
--------------
ಅರಿವಿನ ಮಾರಿತಂದೆ
ಸಕಲವೆಂಬನ್ನಕ್ಕ ನಿಃಕಲವುಂಟು, ನಿಃಕಲವೆಂಬುದು ನಾಮರೂಪು. ಅದೆಂತೆಂದಡೆ: ತ್ರಿವಿಧವ ಕೂಡಿ ಬೆಳಗುವ ಜ್ಯೋತಿಯ ಒಡಲೆ ಘಟವಾಗಿ ಬೆಳಗೆ, ಪ್ರಾಣವಾಗಿ ತೋರುವನ್ನಕ್ಕ ಮಾಯೆ ಸಂಗಲೇಪವಾಗಿಹುದು. ಅದರ ಬೆಡಗಡಗೆ ಸದಾಶಿವಮೂರ್ತಿಲಿಂಗವು ನಿರ್ಮಾಯ.
--------------
ಅರಿವಿನ ಮಾರಿತಂದೆ
ಸುಖದುಃಖದ ನಡುವೆ ಒಂದು ಅತಿರೇಕದ ಕೂಸು ಹುಟ್ಟಿ, ಹಾಲನೊಲ್ಲದೆ ಮೂರು ಕೂಳ ಬೇಡುತ್ತದೆ. ಕೂಳು ಕುದಿಯುವುದಕ್ಕೆ ಮೊದಲೆ ಗಂಜಿಯ ಕುಡಿದು ಕೂಸು ಹೇಳದೆ ಹೋಯಿತ್ತು, ಸದಾಶಿವಮೂರ್ತಿಲಿಂಗವನರಿದು.
--------------
ಅರಿವಿನ ಮಾರಿತಂದೆ
ಸೀತೆ ಸೆರೆಹೋಹಾಗ, ವಾಣಿಯ ನಾಸಿಕ ಅರಿವಾಗ, ಉಮಾದೇವಿಯ ಅಸುರನರಸುವಾಗ, ಉತ್ಪತ್ಯದಾತ, ಸ್ಥಿತಿಗೆ ಕರ್ತ, ಲಯಕ್ಕೊಡೆಯ ಎಲ್ಲಿ ಹೋದ[ರೆ]ಂದರಿ[ಯೆ] ಇಂತಿವ ಬಲ್ಲವ ಕಲ್ಲಿಗೆ ಹೊರಗಾದ ಸದಾಶಿವಮೂರ್ತಿಲಿಂಗವಲ್ಲದಿಲ್ಲ.
--------------
ಅರಿವಿನ ಮಾರಿತಂದೆ
ಸ್ವಪ್ನದ ಮಂದಿರದಲ್ಲಿ ನಿಃಕಲದ ಕೊಡಗೂಸು ಬಚ್ಚಬಯಲ ಕೊಡನ ಹೊತ್ತು ಕೈಬಿಟ್ಟಾಡುತ್ತೈದಾಳೆ. ಆ ಆಟ ದೇಹಿಕರಿಗೆ ಅಸಾಧ್ಯ. ಭಾವಭ್ರಮೆಯಳಿಲ್ಲದೆ ವಿರಕ್ತಿಭಾವವಿಲ್ಲ. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಸಿದ್ಧರಸ ಲೇಸೆಂದಡೆ ತಾನಿದ್ದ ಕುಡುಕೆ ಹೇಮವಾದುದಿಲ್ಲ. ಲೋಹಕ್ಕಲ್ಲದೆ ವೇಧಿಸುವುದಿಲ್ಲ. ವಸ್ತು ಸರ್ವಮಯದಲ್ಲಿ ಸಂಪೂರ್ಣವಾಗಿದ್ದಡೇನು, ತನ್ನ ಅರಿವವರ ಹೃದಯದಲ್ಲಿಯಲ್ಲದೆ ಇರ, ಸದಾಶಿವಮೂರ್ತಿಲಿಂಗದಿರವು.
--------------
ಅರಿವಿನ ಮಾರಿತಂದೆ
ಸಕಲಬ್ರಹ್ಮಾಂಡ ವಿಷ್ಣುಮಯ, ಉಭಯದ ಆತ್ಮಮಯ ಮಹಾಪ್ರಳಯ, ಕಾಲಾಂತಕ ರುದ್ರನು ಅನಾದಿವಸ್ತುವ ಅಂಶೀಭೂತವಾಗಿ, ತ್ರಿವಿಧಮಾರ್ಗಂಗಳಲ್ಲಿ ಜಗದ ಆಗುಚೇಗೆಯನರಿವುದಕ್ಕೆ ಸದಾಶಿವಮೂರ್ತಿ ಉಮಾಪತಿಯಾದ ಗುಣ ವಿವರ: ಭಕ್ತಿಭಾವದೇಹಿಕನಾಗಿ ಸಚ್ಚಿದಾನಂದ ನಿಃಕಲಬ್ರಹ್ಮಮೂರ್ತಿ ಸದಾಶಿವಮೂರ್ತಿಯಲ್ಲದಿಲ್ಲ.
--------------
ಅರಿವಿನ ಮಾರಿತಂದೆ
ಸೂಜಿಯ ಮೊನೆಯಲ್ಲಿ ದಾರವೇರಿ ಹಿನ್ನೆಯ ಹಂಗ ಬಿಡಿಸಿತ್ತು. ಉಂಬ ಹಂಗ ಕಣ್ಣುಕಂಡು ಬಾಯ ಹಂಗ ಬಿಡಿಸಿತ್ತು. ಮನ ಕಂಡು ಕೈಯ್ಯ ಸಂದೇಹವ ಬಿಡಿಸಿತ್ತು, ಮನ ಘನದಲ್ಲಿ ನಿಂದು ಸದಾಶಿವಮೂರ್ತಿಲಿಂಗದ ಕುರುಹಳಿಯಿತ್ತು.
--------------
ಅರಿವಿನ ಮಾರಿತಂದೆ
ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು, ಕಾರಣದಲ್ಲಿ ಅರಿವುದು ಒಂದೊ ಮೂರೊ ಎಂಬುದನರಿತಲ್ಲಿ ಸದಾಶಿವಮೂರ್ತಿಲಿಂಗಸಂಗವಾದುದು.
--------------
ಅರಿವಿನ ಮಾರಿತಂದೆ