ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಧಕಾರವೆಂಬ ಮನೆಯ ಬಾಗಿಲಲ್ಲಿ ಆರಂಗದ ಕರಡಿ ಕಟ್ಟಿ ಮೂರಂಗದ ಕೋಡಗ ಏಡಿಸಿ ಕಾಡುತ್ತಿದೆ. ಮೀರಿದೆನೆಂಬವರೆಲ್ಲರು ಕರಡಿಯ ಗಿಲಗಿನಲ್ಲಿ ಸತ್ತು, ಕೋಡಗದ ಚೇಷ್ಟೆಯಲ್ಲಿ ಸಿಕ್ಕಿ, ಬೇಡ ನಿಮಗೆ ಆರೂಢದ ಮಾತು. ಇಂತಿವ ಮೀರಿ ಅರಿದವಂಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
--------------
ಅರಿವಿನ ಮಾರಿತಂದೆ
ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು. ಆ ರಂಜನೆಯಂತೆ ಚಿತ್ತದ ಕಲೆ ಚಿತ್‍ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ. ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ ಗೊತ್ತಿನಲೈದಾನೆ. ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು. ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂಗವರಿಯದೆ ಲಿಂಗವಿದ್ದಲ್ಲಿಯೆ ಸಂಗವ ಮಾಡಿ, ಹಿಂದು ಮುಂದಳ ಸಂದೇಹವ ಮರೆಯಬೇಕು. ಅಂಗವರತಲ್ಲಿಯೆ ಲಿಂಗವ ಮರೆಯಿತ್ತು. ಸೆಲೆಯಿಲ್ಲದ ಬಾವಿಯ ತೋಡಿ ಸಂದೇಹಕ್ಕೊಳಗಾಹನಂತಾಗಬೇಡ. ಉಭಯವು ರೂಪಾಗಿದ್ದಲ್ಲಿ ಅರಿ ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಅಂಗವ ಮರೆದು ಲಿಂಗವನರಿಯಬೇಕೆಂಬರು, ಕರಣಂಗಳರತು ಘನಲಿಂಗವನರಿಯಬೇಕೆಂಬರು. ಅದು ನಾನಿಕ್ಕಿದ ತಡೆ ಕೇಳಿರಣ್ಣಾ. ಆಕಾಶ ಬಯಲಾದಡೆ ಮುಗಿಲು ರೂಪ ತೋರಿ ಅಳಿವ ಪರಿಯಿನ್ನೆಂತೊ? ನಕ್ಷತ್ರ ಚಂದ್ರ ಸೂರ್ಯಾದಿಗಳು ಗ್ರಹ ಪ್ರವರ್ತನವಹ ಪರಿಯಿನ್ನೆಂತೊ? ಅವು ವಾಯುಮಯ ಆಧಾರವಾಗಿ ತೋರುತ್ತಿಹ ನೆಮ್ಮುಗೆಯ ಇರವು. ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು, ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು. ಹೀಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ ಉಭಯದ ಅಬ್ಥಿಸಂದ್ಥಿಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂಬು ಅಂಬುಜದು[ಭ]ಯ[ದ] ಸಂಗದಲ್ಲಿ ನಿಃಸಂಗ ಬೆಳಗು ತೋರುತ್ತಿದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು. ಅದೆಂತೆಂದಡೆ: ಸತಿಪುರುಷರಿಗೆ ಸಂಯೋಗವಲ್ಲದೆ, ಅಂಗಹೀನಂಗೆ ಹಿಂಗದ ನವರಸವುಂಟೆ ಅಯ್ಯಾ? ಇಂತೀ ಲಿಂಗಬಾಹ್ಯಂಗೆ ವಿಭೂತಿಯ ಪಟ್ಟವೆಂದು ಕಟ್ಟಿದ ಗುರು ಕುಂಭೀಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ಅಂಗದ ಆಪ್ಯಾಯನವ ಆತ್ಮನರಿವಂತೆ, ಆತ್ಮನ ಸುಖದುಃಖವ ಅಂಗ ತಾಳುವಂತೆ, ಅಂಗಕ್ಕೂ ಆತ್ಮಕ್ಕೂ ಅನ್ಯಭಿನ್ನವಿಲ್ಲ. ಪೂಜಿಸುವ ಭಕ್ತ, ಪೂಜಿಸಿಕೊಂಬ ವಸ್ತು ಉಭಯವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ