ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಂಚಾಕ್ಷರಿಯ ಮಣಿಮಾಲೆಯಲ್ಲಿ ಸಂಚಿತ ಪ್ರಾರಬ್ಧ ಕರ್ಮವೆಂಬ ದಾರ ನಡುವೆ ಸಿಕ್ಕಿ, ಮಣಿಯ ತಿರುಗಾಡಿಸುತ್ತದೆ. ದಾರವ ಹರಿದು ಮಣಿಯ ದ್ವಾರವ ಮುಚ್ಚಿ ಉಲುಹಡಗಿ ನಿಲಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ, ಪುನರ್ದೀಕ್ಷೆ: ಇಂತೀ ದೀಕ್ಷೆಗಳಲ್ಲಿ ತಿಳಿಯಬೇಕು. ಪ್ರಥಮದೀಕ್ಷೆಯ ಮಾಡುವಲ್ಲಿ ಬ್ರಹ್ಮನ ಪಾಶವ ಹರಿಯಬೇಕು. ಪರಬ್ರಹ್ಮದೀಕ್ಷೆಯ ಮಾಡುವಲ್ಲಿ ವಿಷ್ಣುವಿನ ಪಾಶವ ಹರಿಯಬೇಕು; ಅಂಗಲಿಂಗದೀಕ್ಷೆಯ ಮಾಡುವಲ್ಲಿ ರುದ್ರನ ಪಾಶವ ಹರಿಯಬೇಕು; ಪುನರ್ದೀಕ್ಷೆಯ ಮಾಡುವಲ್ಲಿ ಆ ಘಟದಲ್ಲಿದ್ದ ಆತ್ಮನ ಕಳೆದು ಪುನರಪಿಯ ಮಾಡಿ ಪುನರ್ದೀಕ್ಷೆಯ ಮಾಡಬೇಕು. ಅದೆಂತೆಂದಡೆ, ಅದಕ್ಕೆ ದೃಷ್ಟ: ದ್ವಿಜರ ಗರ್ಭದಲ್ಲಿ ಜನಿಸಿದ ಪಿಂಡಕ್ಕೆ ಮಂತ್ರೋಚ್ಚರಣೆ ಮುಂಜಿಯಿಂದಲ್ಲದೆ ಭೂಸುರಕುಲವಿಲ್ಲ. ಇದನರಿತು ವಿಚಾರವ ಮಾಡಿ ಕೇಳಿ ಕಂಡು ಉಪದೇಶ ಗುರುವಾಗಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಪಂಚವಿಷಯಂಗಳೆಂದು, ಅಷ್ಟಮದಂಗಳೆಂದು, ಚತುಷ್ಟಯಭಾವಂಗಳೆಂದು, ಷೋಡಶಭೇದಂಗಳೆಂದು, ಸದ್ಗುಣಸಾಧಕಂಗಳೆಂದು, ತ್ರಿಗುಣಭೇದ ಆತ್ಮಂಗಳೆಂದು ಕಲ್ಪಿಸಿಕೊಂಡಿಪ್ಪ ಆತ್ಮನೊಂದೆ ಭೇದ. ಅದ ವಿಚಾರಿಸಿದಲ್ಲಿ ಅರಿದಡೆ ತಾ, ಮರೆದಡೆ ಜಗವಾಯಿತ್ತು. ಉಭಯವನಳಿದು ನಿಂದಲ್ಲಿ ಸದಾಶಿವಮೂರ್ತಿಲಿಂಗವಾಯಿತ್ತು.
--------------
ಅರಿವಿನ ಮಾರಿತಂದೆ
ಪಂಚತತ್ವದಲ್ಲಿದ್ದು ಪರತತ್ವವನರಿಬೇಕು. ಅದಕ್ಕೆ ದೃಷ್ಟ; ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ ? ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು. ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು. ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ? ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ. ಇದನರಿತು ಆತ್ಮವಾದವೆಂದು ಎನಲಿಲ್ಲ. ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ[ಳೆ]ದುಳಿಯಬೇಕು.
--------------
ಅರಿವಿನ ಮಾರಿತಂದೆ
ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ! ಕರದಿ ಕುರುಹಾಗಿ, ಅಡಗಿದೆಯಲ್ಲಾ! ಶೃಂಗಾರದ ನಿಳಯದ ಮುಚ್ಚುಳು ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ! ಕುರುಹು ಬಿನ್ನವಿಲ್ಲದೆ ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಪಾಶವರತು ಗುರುವಾಗಬೇಕು, ವೇಷವರತು ಚರವಾಗಬೇಕು, ಭ್ರಾಮಕವರತು ಲಿಂಗವಾಗಬೇಕು, ಸಕಲಕೃತಭೇದವರತು ವಿರಕ್ತನಾಗಬೇಕು. ಇಂತೀ ಸಕಲಭ್ರಮೆ ಅಡಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಪ್ರಾಣಕ್ಕೆ ಉಪದೇಶವ ಮಾಡಿ ಕಾಯಕ್ಕೆ ಲಿಂಗವ ಕೊಡಬೇಕು ಕಾಯಶುದ್ಧವ ಮಾಡಿ ಪ್ರಾಣಕ್ಕೆ ಅರಿವ ತೋರಬೇಕು. ಇಷ್ಟನರಿಯದೆ ದೀಕ್ಷೆಯ ಮಾಡಬಾರದು. ಕುರುಡನ ಕೈಯ್ಯಲ್ಲಿ ಕೂಳಕಲಸಿ, ಪ್ರತಿ ಕುರುಡಂಗೆ ಊಡಿಸಿದಂತಾಯಿತ್ತು. ಮಲಭಾಂಡ ಜೀವಿಯ ಕೈಯಲ್ಲಿ ಅನುಜ್ಞೆಯಾದ ಶಿಷ್ಯಂಗೆ ಉಭಯದ ಕೇಡಾಯಿತ್ತು, ಇದನರಿತು ನಡೆಯಿರಣ್ಣಾ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಪಾದಪ ಗುರುಭಾವ, ಶಾಖೆ ಚರಭಾವ, ಲಿಂಗ ಫಲಭಾವ, ರಸ ವಸ್ತುಭಾವ, ಭುಂಜಿಸುವಾತ ಭಕ್ತಿಭಾವ, ಭಕ್ತನಂಗ ಸದಾಶಿವಮೂರ್ತಿಲಿಂಗಭಾವ.
--------------
ಅರಿವಿನ ಮಾರಿತಂದೆ
ಪಾದವ ಕೊಡುವಲ್ಲಿ ಪದಂ ನಾಸ್ತಿಯಾಗಿರಬೇಕು. ಪೂಜಿಸುವಲ್ಲಿ ಮೂರರತು, ಮೂರನರಿದು, ಆರರಲ್ಲಿ ಆಶ್ರಯಿಸಿ, ತೋರಿಕೆ ಒಂದರಲ್ಲಿ ನಿಂದು, ಆ ಒಡಲಳಿದು ಸದಾಶಿವಮೂರ್ತಿಲಿಂಗದ ಒಡಲಾಗಬೇಕು
--------------
ಅರಿವಿನ ಮಾರಿತಂದೆ
ಪೃಥ್ವಿಯ ಅಪ್ಪುವಿನ ಆಧಾರದಿಂದ ಬೀಜವೊಡೆದು ಬೆಳೆವಂತೆ ಅರಿದು ಅರಿಹಿಸಿಕೊಂಬ ಉಭಯದ ಮಧ್ಯದಲ್ಲಿ ಜ್ಞಾನಶಕ್ತಿ ಕುರುಹಾಗಿ ಚಿದ್ಘನವಸ್ತು ಪತಿಯಾಗಿ. ಉಭಯದಿಂದ ಕೂಡಿ ಮೇಲನರಿತಲ್ಲಿ ಸದಾಶಿವಮೂರ್ತಿಲಿಂಗ ಬಚ್ಚಬಯಲು.
--------------
ಅರಿವಿನ ಮಾರಿತಂದೆ
ಪೃಥ್ವಿಜ್ಞಾನ ಪಿಪೀಲಿಕಾಸಂಬಂಧವಾಗಿಹುದು, ಅಪ್ಪುಜ್ಞಾನ ಮರ್ಕಟಸಂಬಂಧವಾಗಿಹುದು, ತೇಜಜ್ಞಾನ ಅಗ್ನಿಸಂಬಂಧವಾಗಿಹುದು, ವಾಯುಜ್ಞಾನ ಗಂಧಸಂಬಂಧವಾಗಿಹುದು, ಆಕಾಶಜ್ಞಾನ ವಿಹಂಗಸಂಬಂಧವಾಗಿಹುದು, ತಮಜ್ಞಾನ ಮಾರ್ಜಾಲಸಂಬಂಧವಾಗಿಹುದು, ಪರಿಪೂರ್ಣಜ್ಞಾನ ಕೂರ್ಮಸಂಬಂಧವಾಗಿಹುದು, ದಿವ್ಯಜ್ಞಾನ ಸರ್ವಮಯವಾಗಿ ನಾನಾಭೇದಂಗಳ ಭೇದಿಸುತ್ತಿಹುದು. ಇಂತೀ ಮನಜ್ಞಾನಭರಿತನಾಗಿ ದಶಗುಣಮರ್ಕಟನ ಮೆಟ್ಟಿನಿಂದು, ಬಟ್ಟಬಯಲ ತುಟ್ಟತುದಿಯ ಸದಾಶಿವಮೂರ್ತಿಲಿಂಗದ ಕಳೆ ಕಳಕಳಿಸುತ್ತದೆ ಚಿತ್ತದ ನೆನಹಿನಲ್ಲಿ.
--------------
ಅರಿವಿನ ಮಾರಿತಂದೆ
ಪಾಷಾಣದ ಘಟದಲ್ಲಿ, ರತ್ನದ ಜ್ಯೋತಿಯ ಬೆಳಗು ತೋರುವಂತೆ, ಆ ಬೆಳಗಿನ ಕುರುಹು ಘಟದಲ್ಲಿ ನಿಂದು ಇದಿರಿಂಗೆ ಕುರುಹಿಟ್ಟಿತ್ತು. ಆ ಬೆಳಗನೊಳಕೊಂಡ ಕಾರಣ ಪಾಷಾಣವೆಂಬ ಕುಲ ಹರಿದು, ರತ್ನವೆಂಬ ನಾಮವಾಯಿತ್ತು. ಇಂತೀ ಭೇದವನರಿದು ಉಭಯನಾಮ ನಷ್ಟವಾಹನ್ನಕ್ಕ ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕಕ್ಕೆ ಮುನ್ನವೆ ವಿಷ್ಣುಮಯ ಹುಟ್ಟಿದ ಠಾವುದು ಕಾಲಾಂಧರ ಕಲ್ಪಿತಕ್ಕೆ ಮುನ್ನವೆ ಬ್ರಹ್ಮನ ಉತ್ಪತ್ಯದ ನೆಲೆ ಯಾವುದು? ರೂಪು ನಿರೂಪಿಗೆ ಮುನ್ನವೆ ರುದ್ರನ ಲೀಲಾಭಾವವಾದಠಾವಾವುದು? ಇಂತಿವೆಲ್ಲವು ಅನಾದಿ ವಸ್ತು ಆದಿಶಕ್ತಿಯ ಈ ಈಚೆಯಿಂದಾದ ದೇವವರ್ಗ ಸಂತತಿ. ಯುಗಜುಗಂಗಳಲ್ಲಿ ಪರಿಭ್ರಮಣಕ್ಕೆ ತಿರುಗುವುದಕ್ಕೆ ಒಡಲಾಯಿತ್ತು. ಇಂತೀ ಭೇದಂಗಳನರಿತು ಘನಕಿರಿದಿಂಗೆ ತೆರಪುಂಟೆ ಅಯ್ಯಾ? ಸೂರಾಳ ವಿರಾಳ ನಿರಾಳಕ್ಕೆ ಮುನ್ನವೆ ಅಭೇದ್ಯ ಅಗೋಚರಮಯ ಲೋಕಕ್ಕೆ ಸದಾಶಿವಮೂರ್ತಿಲಿಂಗವೊಂದೆಯಲ್ಲದೆ ಹಲವು ಇಲ್ಲಾ ಎಂದೆ.
--------------
ಅರಿವಿನ ಮಾರಿತಂದೆ