ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ ತಮ್ಮ ವಿವರವ ತಾವರಿಯಬೇಕು. ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ ಗನ್ನದಿಂದ ತಾವು ಗಳಿಸಿ ಕೂಡುವುದು, ಅದು ತಾನೆ ಅನ್ಯಾಯವಲ್ಲವೆ? ಬಿರಿದ ಕಟ್ಟಿದ ಬಂಟ ಭಾಷೆಗೆ ತಪ್ಪಿದಡೆ, ರಾಜನ ಮುಖಕ್ಕೆ ಏರಿದಡೆ, ಅದೆ ಭಂಗ. ಇಂತಿವನರಿಯದೆ ಮೂಗ ಕೊಯಿದು ಮಾರಿ, ಹಣ್ಣ ಮೆಲುವ ಅಣ್ಣಗಳಿಗೇಕೆ ಗುರುಚರಸ್ಥಲ? ಇಂತಿವರೆಲ್ಲರು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಗುರುವಾದಲ್ಲಿ ಭವಂ ನಾಸ್ತಿಯಾಗಬೇಕು, ಚರವಾದಲ್ಲಿ ಆಚಾರ ಮೂರ್ತಿಯಾಗಬೇಕು, ಲಿಂಗವಾದಲ್ಲಿ ನಿರಂಗಮಯ ಅವಿರಳ ತತ್ವಸ್ವರೂಪವಾಗಬೇಕು. ಇಂತಿ ಮೂರು ಗುಣ ಭಾವಶುದ್ಧವಾದಲ್ಲಿ ಭಾವಿಸಿ ಅರಿವ ಸದ್ಭಕ್ತನಾಗಬೇಕು ಆತನಂಗದಿರವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಗುರುವಿಂಗೆ ಗುರುವಿಲ್ಲದೆ ಅರಿದ ಪರಿಯಿನ್ನೆಂತೊ? ಲಿಂಗಕ್ಕೆ ಕಳೆ ಶಕ್ತಿಸಂಪುಟವು ಇಲ್ಲದೆ ಅರಿದ ಪರಿಯಿನ್ನೆಂತೊ? ಜಂಗಮಕ್ಕೆ ಪದಫಲನಾಸ್ತಿಯಾಗಿಲ್ಲದೆ ಪ್ರಸಿದ್ಧನಹ ಪರಿಯಿನ್ನೆಂತೊ? ಇಂತಿ ಅರಿವನರಿದಲ್ಲಿ ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಗಂಡನಿಲ್ಲದ ಸತಿ ಯೋನಿಯಿಲ್ಲದೆ ಮಕ್ಕಳ ಹಡೆದು ನಾಲಗೆಯಲ್ಲದ ಬಾಯಲ್ಲಿ ಜೋಗುಳವಾಡುತ್ತೈದಾಳೆ. ತೊಟ್ಟಿಲಿಲ್ಲದೆ ನೇಣು ಹೊರತೆಯಾಗಿ ಗಂಟಕಟ್ಟಿ, [ಮೊಗ]ವಿಲ್ಲದೆ ಶಿಶು ಅಳುತ್ತದೆ. ಅದಕ್ಕೆ ಮೊಲೆಯಿಲ್ಲದ ಹಾಲು ಬೇಕು, ಸದಾಶಿವಮೂರ್ತಿಲಿಂಗವನರಿತಲ್ಲದಾಗದು.
--------------
ಅರಿವಿನ ಮಾರಿತಂದೆ
ಗುರುವಾದಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ. ಲಿಂಗವಾದಡೂ ಶಕ್ತಿಸಂಪುಟವುಳ್ಳನ್ನಕ್ಕ ಭವಕ್ಕೊಳಗು. ಜಂಗಮವಾದಡೂ ತನ್ನಿರವ ತಾನರಿಯದನ್ನಕ್ಕ ಪ್ರಸಿದ್ಧಭಾವಿಯಲ್ಲ. ಇಂತೀ ಇದನರಿತು ಪೂಜಿಸಬೇಕು, ತನ್ನಯ ಜನ್ಮವ ನಿವೃತ್ತಿಯ ಮಾಡಿಕೊಳಬಲ್ಲಡೆ. ಇದೆ ಸದ್ಭಕ್ತನಿರವು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ? ಘಟವಕೊಳಕೊಂಡಿದ್ದಾತ್ಮನನರಿಯಬಹುದೆ, ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ ಅಂಗ ವಸ್ತುವಾದಲ್ಲಿ ಹಿಂಗಿ ಅರಿವಠಾವಿನ್ನಾವುದು? ಕುಸುಮಕ್ಕೆ ಕಡೆ ನಡು ಮೊದಲಲ್ಲದೆ ಗಂಧಕ್ಕೆ ಕಡೆ ನಡು ಮೊದಲುಂಟೆ? ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ, ಕುರುಹನರಿತಲ್ಲಿಯೆ ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು.
--------------
ಅರಿವಿನ ಮಾರಿತಂದೆ
ಗುರುವಿಂಗಾಸೆಯ ಕಲಿಸದೆ, ಲಿಂಗವ ಬಿಂದುವಿನಲ್ಲಿ ಸಂದೇಹವ ಮಾಡಿಸದೆ, ಜಂಗಮವ ಸಕಲಸಂಕಲ್ಪದಲ್ಲಿ ಸಂದೇಹವ ಮಾಡಿಸದೆ ನಿಂದುದು ಪರಮವಿರಕ್ತ ಭಕ್ತನ ಸ್ಥಲ. ಅದು ತನ್ನಯ ಅಂಗ ಕಾಯ ಜೀವಜ್ಞಾನ ತ್ರಾಣದ ಭೇದ, ಸದಾಶಿವಮೂರ್ತಿಲಿಂಗಸಂಗದ ಸುಖ.
--------------
ಅರಿವಿನ ಮಾರಿತಂದೆ
ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ ಮೂರಕ್ಕೆ ಹೊರಗಾಗಿರಬೇಕು, ಮೂರಕ್ಕೆ ಒಳಗಾಗಿರಬೇಕು. ಮೂರರ ಒಳಗೆ ಕಂಡು ಮೂರರ ಹೊರಗನರಿತು, ನೆರೆ ನೀರನಾಗಿರಬೇಕು, ಸದಾಶಿವಮೂರ್ತಿಲಿಂಗವ ಮೀರಬೇಕು.
--------------
ಅರಿವಿನ ಮಾರಿತಂದೆ
ಗುರುಮಾರ್ಗವನರಿಯದೆ ಆತ್ಮತೇಜದಿಂದ ಪೀಳಿಗೆ ಶುದ್ಧವೆಂದು, ಆಗುಚೇಗೆಯನರಿಯದೆ ಉಪದೇಶವ ಮಾಡೂದಕ್ಕೊಡಲಾಹ, ಕಂಬಳಕ್ಕೆ [ಅಪೇಯವ] ತಿಂಬ, ದುರ್ಗುಣ ಕಾಯ ವಿಕಾರಿಗಳನೊಲ್ಲರು ಸದಾಶಿವಮೂರ್ತಿಲಿಂಗವನರಿದ ಶರಣರು.
--------------
ಅರಿವಿನ ಮಾರಿತಂದೆ
ಗುರುವಿಂಗೂ ಲಿಂಗಕ್ಕೂ ಜಂಗಮಕ್ಕೂ ಭಕ್ತನಂಗವೆ ಮಂದಿರವಾಗಿ, ಮನದ ವಿಶ್ರಾಂತಿಯೆ ಸುಖಭೋಜನ ಭೋಗಂಗಳಾಗಿ ತಾಳುವ ಕಾರಣ, ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ
ಗುರುವಾದಲ್ಲಿ, ಶಿಷ್ಯನ ಅಂಗದಲ್ಲಿ ಶಿಲೆಯಲ್ಲಿ ಉರಿಯಡಗಿದಂತಿರಬೇಕು. ಜಂಗಮವಾದಡೆ, ಭಕ್ತನಂಗದಲ್ಲಿ ಬಂಗಾರದಲ್ಲಿ ಬಣ್ಣವಡಗಿದಂತೆ ಅಡಗಿರಬೇಕು. ಲಿಂಗವಾದಡೆ, ಭಕ್ತನ ಚಿತ್ತದಲ್ಲಿ ಅರಗಿನಲ್ಲಿ ಅಪ್ಪುವಡಗಿ ಉರಿಯ ತೋರಿದಡೆ ಕರಗಿ ಉರಿಯಡಗಿ ಅಪ್ಪುವಲ್ಲಿಯೆ ಅರತಂತಿರಬೇಕು. ಇಂತೀ ಭೇದಂಗಳಲ್ಲಿ ಭೇದಿಸಿ ವರ್ಮವ ವರ್ಮದಿಂದರಿದು, ಕರ್ಮವ ಕರ್ಮದಲ್ಲಿ ಮಾಡಿ, ಕ್ರೀಯ ಕ್ರೀಯಲ್ಲಿ ಕಂಡು, ಭಾವಶುದ್ಧವಾಗಿ ನಿಂದ ಸದ್ಭಕ್ತನಂಗವೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಗುರುವೆಂದು ಅನುಸರಣೆಯ ಮಾಡಿದಲ್ಲಿ ಲಿಂಗವಿಲ್ಲ, ಲಿಂಗವೆಂದು ಅನುಸರಣೆಯ ಮಾಡಿದಲ್ಲಿ ಜಂಗಮವಿಲ್ಲ, ಜಂಗಮವೆಂದು ಅನುಸರಣೆಯ ಮಾಡಿದಲ್ಲಿ ಪಂಚಾಚಾರಶುದ್ಧಕ್ಕೆ ಹೊರಗು. ತಾ ಮಾಡುವ ಭಕ್ತಿ ತನಗೆ ಹಾನಿಯಾದ ಕಾರಣ, ತ್ರಿವಿಧಕ್ಕೆ ಅನುಸರಣೆಯ ಮಾಡಲಿಲ್ಲ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಗುರುವಿನ ಉಪಾಧಿಕೆಯ ಶಿಷ್ಯನರಿತಲ್ಲಿ ಆ ಗುರುವಿಂಗೆ ಹೇಳದೆ ಸುಮ್ಮನಿದ್ದಲ್ಲಿ ಗುರುದ್ರೋಹ ತನಗಾಯಿತ್ತು. ಹೇಳಿದ ಮಾತ ಕೇಳಿ ಆ ಸ್ಥಲಕ್ಕೆ ಭಿನ್ನಭಾವಿಯಾಗಲಾಗಿ, ಲಿಂಗಜಂಗಮದ ದ್ರೋಹ ಆ ಗುರುವಿಂಗಾಯಿತ್ತು. ಆ ಭಕ್ತಂಗೆ ಚಿತ್ತ ಮುಟ್ಟಿದಲ್ಲಿ ಗುರುವೆಂದು ಪ್ರಮಾಳಿಸಲಿಲ್ಲ. ಪ್ರಮಾಳಿಸದಿದ್ದಲ್ಲಿ ಆಚರಣೆಯ ತೊಡಕು. ಇಂತೀ ಉಭಯದ ಏರಿನಲ್ಲಿ ನೋವುತ್ತಿದೇನೆರಿ ಭಾವದ ಭ್ರಮೆಯ ಬಿಡಿಸು, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಗಂಧವೊಂದೆಂದಡೆ ಹಲವು ವಾಸನೆಯ ಕುಸುಮದಲ್ಲಿ ಸಿಕ್ಕಿ, ವಾಸನೆ ಭಿನ್ನವಾಗಿ ತೋರುವಂತೆ, ಆತ್ಮನೊಂದೆಂದಡೆ, ಹಲವು ಘಟದಲ್ಲಿ ಸಿಕ್ಕಿ, ಅವರವರ ನೆಲಹೊಲಂಗಳಲ್ಲಿ ಸಿಕ್ಕಿ, ಫಲಭೋಗಂಗಳಿಗೆ ಒಳಗಾಯಿತ್ತು. ಆತ್ಮನ ಒಲವರವೊಂದೆನಬಹುದೆ? ಸುಗಂಧಕ್ಕೂ ದುರ್ಗಂಧಕ್ಕೂ ಒಂದೆ ವಾಯು. ಅರಿವಾತ್ಮವೊಂದೆಂದಡೆ, ಉಭಯವನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಗುರುಚರಪರದ ಇರವು ಹೇಗಿರಬೇಕೆಂದಡೆ: ಉರಿಯನೊಳಕೊಂಡ ಕಲ್ಲಿನಂತಿಬೇಕು, ತೈಲವನೊಳಕೊಂಡ ತಿಲದಂತಿರಬೇಕು, ದ್ರವವನೊಳಕೊಂಡ ಅರಗಿನಂತಿರಬೇಕು, ಬಯಲನೊಳಕೊಂಡ ಕರ್ಪುರದಂತಿರಬೇಕು. ನೋಡಿದಡಂಗವಾಗಿ, ಮಥನಕ್ಕೆ ಬಯಲಾಗಿ ತೋರುತ್ತಿಹ ಮೂರ್ತಿ ತಾನೆ, ನಿರಂಗ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಗುರುಭಕ್ತನಾಗಿದ್ದಲ್ಲಿ ಆ ಗುರುವಿನ ಗುಣವ ವಿಚಾರಿಸಬೇಕು, ಲಿಂಗಭಕ್ತನಾಗಿದ್ದಲ್ಲಿ ಲಿಂಗದ ಮುಖವನರಿತು ಅರ್ಪಿತ ಅವಧಾನವರಿತಿರಬೇಕು. ಜಂಗಮಭಕ್ತನಾದಲ್ಲಿ ವಿರಕ್ತಭಾವವನರಸಬೇಕು. ಇಂತೀ ತ್ರಿವಿಧಗುಣವನರಿದು ಮಾಡುವ ಸದ್ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ
ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ: ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು, ರತ್ನಪುಂಜ ಕುಂದಣದ ಮೇಲೆ ನಿಂದು ಚಂದವ ಕಾಣಿಸಿಕೊಂಡಂತಿರಬೇಕು, ಶಂಖದ ಮೇಲೆ ಸಂಭ್ರಮದ ಜಾತಿ ಉತ್ತರ ನಿಂದು ತೋರಿದಂತಿರಬೇಕು, ಇಂತೀ ಭೇದ. ಘಟ ಗುರು, ಆತ್ಮ ಶಿಷ್ಯನಾಗಿ ತೋರುವ ಬೆಳಗು ತಾನೆ, ಸದಾಶಿವಮೂರ್ತಿಲಿಂಗವು.
--------------
ಅರಿವಿನ ಮಾರಿತಂದೆ
ಗುರುಲಿಂಗಜಂಗಮವೆಂಬ ತ್ರಿವಿಧಮೂರ್ತಿ ಕೂಡಿ ಭಕ್ತನಂಗದಲ್ಲಿ ನಿಂದು ತಮ್ಮ ಸಂದನಳಿವುದಕ್ಕೆ ಮಂದಿರವ ಕಟ್ಟಿದ ಅಂದವನರಿಯದೆ, ಕರ್ತೃಭೃತ್ಯರೆಂದು ಕೊಂಡಾಡಲೇತಕೆ? ಕಾಯ ಜೀವಕ್ಕೆ ಹಂಗುಂಟೆ ಪ್ರಭುವೇ? ಭಕ್ತನ ಸತ್ಯಸದಾಚಾರವೆ ಸದಾಶಿವಮೂರ್ತಿಲಿಂಗದ ಕೃತ್ಯವಾಚರಣೆಯಯ್ಯಾ ಪ್ರಭುವೆ.
--------------
ಅರಿವಿನ ಮಾರಿತಂದೆ
ಗುರುಜಂಗಮಲಿಂಗ ಭಕ್ತಿಮಾರ್ಗಸ್ಥಲ ಸಮರ್ಪಣ: ಪೃಥ್ವಿಜ್ಞಾನ, ಅಪ್ಪುಜ್ಞಾನ, ತೇಜಜ್ಞಾನ, ವಾಯುಜ್ಞಾನ, ಆಕಾಶಜ್ಞಾನ, ತಮಜ್ಞಾನ, ಪರಿಪೂರ್ಣಜ್ಞಾನ, ದಿವ್ಯಜ್ಞಾನ, ಇಂತೀ ಜ್ಞಾನಂಗಳಲ್ಲಿ ಕಂಡು ದೇಹಧರ್ಮಗಳನರಿತು, ಪಿಂಡಪ್ರಾಣ ಅಂಗಲಿಂಗ ಸಂಯೋಗಸಂಪದದಲ್ಲಿ ನಿಂದು ನೋಡು, ಸದಾಶಿವಮೂರ್ತಿಲಿಂಗದಲ್ಲಿ ಕಳೆ ಬೆಳಗುತ್ತದೆ
--------------
ಅರಿವಿನ ಮಾರಿತಂದೆ
ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು, ಜಂಗಮಮೂರ್ತಿಯ ಕಳೆ ಲಿಂಗದಲ್ಲಿಪ್ಪುದು, ಆ ಲಿಂಗದ ಕಳೆ ಅರಿದು ಮಾಡುವ ಭಕ್ತನಲ್ಲಿ ನಿತ್ಯನಿರಂಜನವಾಗಿ ಬೆಳಗುತ್ತಿಪ್ಪುದು ಸದಾಶಿವಮೂರ್ತಿಲಿಂಗದ ಹೃದಯವು ತಾನಾಗಿ.
--------------
ಅರಿವಿನ ಮಾರಿತಂದೆ
ಗಂಡ ತಪ್ಪಿ ನಡೆದಲ್ಲಿ ಹೆಂಡತಿ ಬಾಯಾಲುವುದೆ ಕಾರಣ. ಅದೆಂತೆಂದಡೆ: ಪುರುಷನ ಬಾಧೆಗೆ ಸತಿ ಸೆರೆಯೊಳಗಾದ ಕಾರಣ. ಗುರುಚರದ ಆಗು ಚೇಗೆಯನರಿವುದೆ ಲಕ್ಷಣ, ಸದ್ಭಕ್ತಿಯ ಭಾವ, ಸದಾಶಿವಮೂರ್ತಿಲಿಂಗದ ಪ್ರಾಣ.
--------------
ಅರಿವಿನ ಮಾರಿತಂದೆ