ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ? ಅರಿದವನಲ್ಲಿ ಒಡಗೂಡುವ ಸುಖವಲ್ಲದೆ, ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ, ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ. ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು ಅವ ಕೊಟ್ಟರಿವಿನ ಕುರುಹ ಮರೆಯಬೇಡ. ಆ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ ಅದೆ.
--------------
ಅರಿವಿನ ಮಾರಿತಂದೆ
ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ? ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ ಅರಿವಿಗೆ ಮುನಿವರುಂಟೆ ಅಯ್ಯಾ? ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದರುಂಟೆ ಅಯ್ಯಾ? ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ ಅರಿವಿಂಗೆ ಶರಣು ಮರವಿಂಗೆ ಮಥನವ ಮಾಡಿದಲ್ಲದೆ ಇರೆ. ಇದು ನೀವು ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು.
--------------
ಅರಿವಿನ ಮಾರಿತಂದೆ
ಕಯ್ಯೊಳಗಳ ಸಂಚ ಕಣ್ಣಿಗೆ ಮರೆಯಾದಂತೆ, ಎಲ್ಲರಿಗೆ ಚೋದ್ಯವಾಗಿ ತೋರುತ್ತಿಹುದು. ಆ ಪರಿಯಲ್ಲಿ ಅಸು ಘಟದ ಸಂಚವನರಿವ ಸಂಚಿತಾರ್ಥಿಗಳಂಗ, ಮಿಕ್ಕಾದ ಅಸು ಲೆಂಕರಿಗಿಲ್ಲ, ನಿಸ್ಸೀಮರಿಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
--------------
ಅರಿವಿನ ಮಾರಿತಂದೆ
ಕಾಳಿಯ ಕಡೆಗಣ್ಣ ಕಿತ್ತು, ಏಡಿಯ ಸರ್ವಾಂಗವ ಸೀಳಿ, ಅಚ್ಚ ಬೆಳ್ಳಿಗೆಯ ಹಾಲ ನಿಶ್ಚಯದಲ್ಲಿ ತೆಗೆದು ತೃಪ್ತಿಯಾಗಿ ಕೊಳ್ಳಬಲ್ಲಡೆ, ಆತನೆ ಸದಾಶಿವಮೂರ್ತಿಲಿಂಗವು.
--------------
ಅರಿವಿನ ಮಾರಿತಂದೆ
ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ, ಜೀವವುಳ್ಳನ್ನಕ್ಕ ಅರಿವುದು ಅಭೇದ್ಯ ವಸ್ತುವ, ಉಭಯವ ಕಡೆಗಾಣಿಸಿ ನಿಂದಲ್ಲಿ ಸದಾಶಿವಮೂರ್ತಿಲಿಂಗವೆಂದು ಕುರುಹಿಡಲಿಲ್ಲ.
--------------
ಅರಿವಿನ ಮಾರಿತಂದೆ
ಕಾಯದ ಕಕ್ಕುಲತೆಗಾಗಿ ಜೀವಿಗಳ ಬಾಗಿಲ ಕಾಯದೆ, ಈಷಣತ್ರಯಕ್ಕಾಗಿ ಭವದುಃಖಿಗಳ ಬಾಗಿಲಲ್ಲಿ ನಿಂದು ವೇಳೆಯ ಕಾವಂಗೆ ಭಾವರಹಿತ ಬ್ರಹ್ಮವೇಕೆ? ಅದು ನಾಣ್ನುಡಿಗಳೊಳಗು, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಕಲ್ಲು ಮರ ಮಣ್ಣಿನ ಮರೆಯಲ್ಲಿ ಪೂಜಿಸಿಕೊಂಬುದು ವಸ್ತುವೇರಿ ತನ್ನ ಮನಸ್ಸಿನ ಗೊತ್ತಲ್ಲದೆ. ಅಲ್ಲಿಪ್ಪುದನರಿವ ಅರಿವು ತಾನೆ ನಿಜವಸ್ತುವಾಗಿ ಬೆಳಗುತ್ತದೆ ಸದಾಶಿವಮೂರ್ತಿಲಿಂಗವೆಯಾಗಿ.
--------------
ಅರಿವಿನ ಮಾರಿತಂದೆ
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ಮೂರು ಕಣ್ಣ ಕಂಡ. ಒಂದು ಧರೆಯ ಕಣ್ಣು, ಒಂದು ಸಿರಿಯ ಕಣ್ಣು, ಒಂದು ಉರಿಯ ಕಣ್ಣು. ಉರಿ ಸಿರಿಯ ನುಂಗಿ, ಸಿರಿ ಧರೆಯ ನುಂಗಿ, ಧರೆ ಅರುಹಿರಿಯರ ನುಂಗಿತ್ತು. ಆ ಗುಣವನರಿಯಬೇಕು, ಸದಾಶಿವಮೂರ್ತಿಲಿಂಗವ ಭೇದಿಸಬೇಕು
--------------
ಅರಿವಿನ ಮಾರಿತಂದೆ
ಕಾಮಧೇನುವೆಂದಡೆ ಇಹುದಕ್ಕೆ ನೆಲೆ ಬೇಕು, ಕಲ್ಪತರುವೆಂದಡೆ ಹುಟ್ಟೂದಕ್ಕೆ ಭೂಮಿ ಬೇಕು, ಚಿಂತಾಮಣಿಯೆಂದಡೆ ತಾನೊಂದ ಚಿಂತಿಸಿ ಬೇಡಿಯಲ್ಲದೆ ಕೊಡದೊಂದುವ. ಇವಕ್ಕೆಲ್ಲಕ್ಕೂ ಒಂದೊಂದು ನಿಂದ ನೆಲೆ ವಾಸವಾಯಿತ್ತು. ಮನದರಿವಿಂಗೆ, ಕೈಯ ಕುರುಹಿಂಗೆ, ವಿಚಾರದಿಂದ ಒಳಹೊಕ್ಕು ನಿಂದು ನೋಡಲಾಗಿ, ಹಿಂದಳ ಕತ್ತಲೆಯ ಮುಂದಳ ಬೆಳಗಿನ ಉಭಯದ ಸಂದ್ಥಿಯಲ್ಲಿ ಸಲೆ ಸಂದು ತೋರುತ್ತದೆ, ನಿಜದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕಂಗಳಲ್ಲಿ ನೋಡಿ, ಕೈಯ್ಯಲ್ಲಿ ಮುಟ್ಟಿ, ನಾಸಿಕ ವಾಸನೆಯನರಿದು ಜಿಹ್ವೆಗೆ ರುಚಿ ಮುಟ್ಟುವುದಕ್ಕೆ ಮುನ್ನವೆ ಮೃದು ರಿಠಣ ಕರಿಣ[ತರ] ತಾನರಿವುದಕ್ಕೆ ಮೊದಲೆ, ಲಿಂಗ ಮುಂತಾಗಿ ಅರ್ಪಿಸಿಕೊಂಬುದು ಅರ್ಪಿತ ಅವಧಾನಿಯ ಯುಕ್ತಿ. ರಸಘಟಿಕೆಯ ಮಣಿ ಅಸಿಯ ಮೊನೆಗೆ ನಿಲುವಂತೆ, ಲಿಂಗ ಅರ್ಪಿತಕ್ಕೂ ಅರಿವ ಚಿತ್ತಕ್ಕೂ ಎಡೆಬಿಡುವಿಲ್ಲದ ಪರಿಪೂರ್ಣವಾಗಿ ನಿಂದುದು ಭರಿತಾರ್ಪಣ, ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಕೂಂಬಿನ ಮೇರಳ ಹಕ್ಕಿಯ ಆಕಾಶದ ಮೇರಳ ಗಿಡುಗ ಹಿಡಿಯಿತ್ತು. ಕೊಂಬು ಹಕ್ಕಿಯ ಕುಡದೆ ಗಿಡುಗನ ಕಡಿಯಿತ್ತು. ಹಕ್ಕಿಯ ಗಿಡುಗನ ಕೂಡಿ ಕಡಿವ ಕೊಂಬ ಚಿಟ್ಟೆಯ ಮರಿ ನುಂಗಿತ್ತು, ಸದಾಶಿವಮೂರ್ತಿಲಿಂಗವನರಿತು.
--------------
ಅರಿವಿನ ಮಾರಿತಂದೆ
ಕಲ್ಪತರುವಿಂಗೆ ಅಪ್ಪು ಎಯ್ದುವಂತೆ ಇಕ್ಷುದಂಡಕ್ಕೆ ಮಧುರರಸ ಬೆಚ್ಚಂತೆ, ಕ್ಷೀರವಿರೋದ್ಥಿಗೆ ಹಗೆ ಸ್ನೇಹವಾದಂತೆ, ಆ ಉಭಯದ ಭೇದ. ಇದಿರಿಟ್ಟು ಕುರುಹು ಅರಿವ ಮನ ಎರಡಳಿದಲ್ಲಿಯೇ ಕುರುಹಳಿದು ನಿಂದುಳುಮೆ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕೊಟ್ಟ ಕೂಗಿತ್ತು, ಹಾಲುವಕ್ಕಿ ಬಳಿಯಿತ್ತು, ಹಂಗ ಕಟ್ಟಿತ್ತು; ಅವನ ಅವಳ ಮದುವೆ ನಿಂದಿತ್ತು, ಇವನಿಗಾಯಿತ್ತು. ತಂದ ಮರುದಿನಕ್ಕೆ ಸತ್ತಳವಳು. ಮದುವಳಿಗ ಮಂಡೆಯ ಮೇಲೆ ಸೀರೆಯ ಹಾಕಿಕೊಂಡು, ಕೆಟ್ಟೆ ಕೆಟ್ಟೆ ಕೆಟ್ಟೆನೆಂದು ಹೋಗುತ್ತಿದ್ದನು, ಸದಾಶಿವಮೂರ್ತಿಲಿಂಗದಲ್ಲಿಗೆ.
--------------
ಅರಿವಿನ ಮಾರಿತಂದೆ
ಕೆಚ್ಚಲೊಳಗೆ ಕ್ಷೀರವಿಪ್ಪಂತೆ ಚಿತ್ತದೊಳಗೆ ವಸ್ತುವಿಪ್ಪ ಭೇದವನರಿಯಬೇಕು. ಕೆಚ್ಚಲ ಹೆರೆ ಹಿಂಗಿಯಲ್ಲದೆ ಹಾಲಿಗೊಪ್ಪವಿಲ್ಲ. ಚಿತ್ತದ ಕಲೆಯ ಬಿಟ್ಟು ವಸ್ತುಮಯ ತಾನಾಗಿ ಉಭಯ ರೂಪಿನಲ್ಲಿ ಅಡಗಿದ ವಸ್ತುವ ಹೆರೆ ಹಿಂಗಿದಲ್ಲಿ ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಕೋಣೆಯೊಳಗಳ ಮಿಂಡ, ನಡುಮನೆಯೊಳಗಳ ಗಂಡ, ಇವರಿಬ್ಬರ ಒಡಗೂಡವಳ ಚಂದವ ನೋಡಾ. ಕೈಯ್ಯಲ್ಲಿ ಕಣ್ಣು ಹುಟ್ಟಿ, ಬಾಯಲ್ಲಿ ಬಸುರು ಹುಟ್ಟಿ, ಮೊಲೆ ತಲೆಯಲ್ಲಿ, ಭಗ ಬೆನ್ನಿನಲ್ಲಿ ಈ ಹಾದರಗಿತ್ತಿಯ ಅಂದವ ಸದಾಶಿವಲಿಂಗವೆ ಬಲ್ಲ.
--------------
ಅರಿವಿನ ಮಾರಿತಂದೆ
ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ. ಜೀವ ಹಿಂಗೆ ಘಟವೊಂದು ದಿನಕ್ಕೆ ಆಶ್ರಯಿಸಿ ನಿಲಲರಿಯದು. ಒಂದ ಬಿಟ್ಟೊಂದ ಹಿಡಿವುದಕ್ಕೆ ಎಡೆತೆರಪಿಲ್ಲ. ಇದು ಕಾರಣದಲ್ಲಿ, ಇಷ್ಟಕ್ಕೂ ಪ್ರಾಣಕ್ಕೂ ಬೆಚ್ಚಂತಿರಬೇಕು. ನಿಂದ ಇರವಿನಲ್ಲಿ ಸಂದು, ಮತ್ತೊಂದು ವಿಚಾರಿಸಿಹೆನೆಂಬ ಸಂದೇಹವಳಿದಲ್ಲಿ ತೋರುತ್ತದೆ ಬೆಳಗು ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕಣ್ಣಿನ ಮನೆಯಲ್ಲಿ ಗನ್ನದ ಗರತಿ ಹಡದುಂಬುತ್ತೈದಾಳೆ. ಅವಳ ಕೂಟವ ಕೂಡುವುದಕ್ಕೆ, ತಲೆ ಕೆಳಗಾಗಿ, ಕಾಲು ಮೇಲಾಗಿ, ಕೈ ಅಪ್ರದಕ್ಷಿಣವಾಗಿ ತಕ್ಕೈಸಿಕೊಂಡು, ಹಿಂದುಮುಂದಾಗಿ ಮುತ್ತನಿಕ್ಕೆ, ಶಕ್ತಿಯ ಸುಖ ಲೇಸಾಯಿತ್ತು. ಸದಾಶಿವಮೂರ್ತಿಲಿಂಗ ಬಚ್ಚಬಯಲು.
--------------
ಅರಿವಿನ ಮಾರಿತಂದೆ
ಕೈ ಕಲಸಿ ಬಾಯಿ ಉಂಡಲ್ಲಿ ಅದಾವ ಹಂಗೆಂದೆನಬಹುದೆ? ಪೂಜಿಸಿಕೊಂಬಲ್ಲಿ ಕರ್ತು, ಪೂಜಿಸುವಾತ ಭೃತ್ಯನೆ? ಅದು ಜಗದ ಆಗುಚೇಗೆಯನರಿವುದಕ್ಕೆ ಉಭಯ ನಾಮವಾಯಿತ್ತು. ಹಣ್ಣು ರಸದಂತೆ ಭಿನ್ನವಿಲ್ಲ. ಸದಾಶಿವಮೂರ್ತಿಲಿಂಗ ತಾನೆ.
--------------
ಅರಿವಿನ ಮಾರಿತಂದೆ
ಕುಂಭಕ್ಕೆ ಜಲವ ತುಂಬುವಲ್ಲಿ ಶೋಧಿಸಿದಲ್ಲದೆ ಶುದ್ಧವಿಲ್ಲ. ತಾ ಭುಂಜಿಸುವ ದ್ರವ್ಯಕ್ಕೆ ಕಲ್ಲು ಕಡ್ಡಿ ಮುಳ್ಳು ಮೊದಲಾಗಿ ಶೋಧಿಸಿಕೊಂಡಲ್ಲದೆ, ಶುದ್ಧವಿಲ್ಲ[ದೆ] ಕಂಡುಕೊಳಬಹುದೆ? ಇಂತಿವನರಿತು ಸಂದೇಹದಲ್ಲಿ ಮಾಡುವ ಭಕ್ತಿ ಅಂಧಕ ಕಣ್ಣಿಯ ಹೊಸದಂದವಾಯಿತ್ತು. ಸಂದೇಹವ ಬಿಟ್ಟಿರು, ಅದು ನಿನ್ನಂಗ, ಸದಾಶಿವಮೂರ್ತಿಲಿಂಗದ ಸಂಗ.
--------------
ಅರಿವಿನ ಮಾರಿತಂದೆ
ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ? ಶಿಶು ಗರ್ಭದಲ್ಲಿ ಬಲಿವುದಕ್ಕೆ ಮೊದಲೆ ಅಸು ಘಟಿಸಿದುದುಂಟೆ, ಅಯ್ಯಾ? ಮಾಡುವ ಆಚರಣೆಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೊ? ಸೂಜಿಕಲ್ಲು ಸೂಜಿಯನರಸುವಂತೆ, ಉಭಯಕ್ಕೆ ಬಾಯಿಲ್ಲದೆ ಕಚ್ಚುವ ತೆರನ ನೋಡಾ, ಅಯ್ಯಾ! ಶಿಲೆ ಲೋಹದಿಂದ ಕಡೆಯೆ ನಿಮ್ಮಯ ಅರಿವಿನ ಭೇದ? ಅದರ ಮರೆಯ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕಂಗಳ ದೃಷ್ಟಿ ಪುರುಷನಾಗಿ, ಕೈಯ ದೃಷ್ಟಿ ಸತಿಯಾಗಿ, ಕೂಡಿಹೆನೆಂಬ ತವಕ ಉಭಯದ ಬಿಂದುವಾಗಿ ನಿಂದುದು ಸದಾಶಿವಮೂರ್ತಿಲಿಂಗದ ತದ್ರೂಪು.
--------------
ಅರಿವಿನ ಮಾರಿತಂದೆ
ಕ್ಷೀರಕ್ಕೆ ವಾರಿ ಅರತಲ್ಲದೆ ಮಧುರಗುಣವಿಲ್ಲ. ಶರೀರವಿಡಿದಿದ್ದಲ್ಲಿ ಅಂಗಕ್ಕೆ ಆಸೆ ಅರತು, ರೋಷ ಹಿಂಗಿ, ಈಷಣತ್ರಯದ ಲೇಸು ಕಷ್ಟವನರಿತು, ಈಶನ ವೇಷದ ಭಾಷೆಗೆ ತಪ್ಪದೆ ಇಪ್ಪುದು ಗುರುಚರಮತ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕೋಟಿ ಗುರುವಾಗಬಹುದು, ಭಕ್ತನಾಗಬಾರದು. ಕೋಟಿ ಚರವಾಗಬಹುದು, ಭಕ್ತನಾಗಬಾರದು. ಕೋಟಿ ಲಿಂಗವಾಗಬಹುದು, ಭಕ್ತನಾಗಬಾರದು. ತ್ರಿವಿಧಕ್ಕಾಧಾರ ಭಕ್ತನ ವಿಶ್ವಾಸ, ತ್ರಿವಿಧದ ಪ್ರಾಣ ಭಕ್ತನ ಚಿತ್ತ. ಭಕ್ತನ ಬಾಗಿಲಲ್ಲಿ ಈಶ್ವರನಿಪ್ಪ, ಭಕ್ತನ ಅಂಗಳದಲ್ಲಿ ಮಹಾಲಿಂಗವಿಪ್ಪುದು. ಭಕ್ತನ ಆಶ್ರಯದಲ್ಲಿ ಪ್ರಸಾದಕ್ಕೆ ಸದಾಶಿವಮೂರ್ತಿಲಿಂಗವು ಕಾಯಿದುಕೊಂಡಿಪ್ಪನು.
--------------
ಅರಿವಿನ ಮಾರಿತಂದೆ
ಕ್ರೀಯಲ್ಲಿ ಕಾಬುದಕ್ರೀಯಲ್ಲಿ ಕಂಡು, ಅರಿಕೆಯಲ್ಲಿ ಕಾಬುದ ಅರಿವಿನಲ್ಲಿ ಕಂಡು, ಮುಳ್ಳು ತಾಗಿದಡೆ ಮೊನೆಯಿಂದ ಕಳೆವಂತೆ, ತನ್ನಯ ಮರವೆಯ ತನ್ನ ಅರಿವಿನಿಂದ ಅರಿದು, ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು.
--------------
ಅರಿವಿನ ಮಾರಿತಂದೆ
ಕಲ್ಲಿನೊಳಗಳ ಜ್ಯೋತಿ, ಉರಿಯೊಳಗಳ ಉಷ್ಣ, ಹಣ್ಣಿನೊಳಗಳ ಸಾರದ ಸವಿಯಂತೆ, ಸವಿಲೇಪವಾದ ಚಿತ್ತದ ವಿಲಾಸಿತದಂತೆ ನಿಜಲಿಂಗದಲ್ಲಿ ಘನಬೆಳಗು ತೋರುತ್ತಲಿದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ

ಇನ್ನಷ್ಟು ...