ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಂದಿಸಿ ನಿಂದಿಸಬಾರದೆಂಬುದೆ ಕ್ರೀವಂತನ ಇರವು. ವಂದಿಸುವುದಕ್ಕೆ ಮುನ್ನವೆ ನಿಂದೆಗೊಡಲು ಮಾಡದೆ ಆ ಗುಣವ ಹಿಂಗಿಸಿ ವಂದಿಸುವುದೆ ಸದ್ಭಕ್ತನ ಇರವು, ಸನ್ಮತಿಯ ಪದವು. ಸದಾಶಿವಮೂರ್ತಿಲಿಂಗದ ಇರವು.
--------------
ಅರಿವಿನ ಮಾರಿತಂದೆ
ವಿಷ್ಣುಮಯ ಜಗವೆಂದಡೆ ಮಹಾಪ್ರಳಯದಲ್ಲಿ ವಟಪತ್ರಶಯನನಾದ. ಸೃಷ್ಟಿಗೆ ಅಜನೆಂದಡೆ ಹುಟ್ಟಿದುದಿಲ್ಲ ಶಿರ. ಲಯಕ್ಕೆ ರುದ್ರನಾದಡೆ ಕರದ ಕಪಾಲ ಬಿಟ್ಟುದಿಲ್ಲ, ಇಂತೀ ಮೂರು ಭೇದವನರಿತು ಮೀರಿದ ತತ್ವ, ಸದಾಶಿವಮೂರ್ತಿಲಿಂಗವೊಂದೆ ಭಾವ.
--------------
ಅರಿವಿನ ಮಾರಿತಂದೆ
ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು. ಊರೊಳಗೆ ಪಂಥ ರಣದೊಳಗೆ ಓಟವೆ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ, ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ವೇದವ ನುಡಿವಲ್ಲಿ ವಿಪ್ರರು ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ ? ಅದು ಈಚೆಯ ಮಾತು. ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ ದಿವ್ಯಜ್ಞಾನ ಪರಮಪ್ರಕಾಶವ ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು ?
--------------
ಅರಿವಿನ ಮಾರಿತಂದೆ
ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ ಎಲ್ಲಿ ನೋಡಿದಡೂ ವಿಚಾರವೊಂದೆ ಭೇದ. ಅರಿದಲ್ಲಿ ಮಲಕ್ಕೆ ಹೊರಗು, ಮರೆದಲ್ಲಿ ಮಲಕ್ಕೆ ಒಳಗು. ಅರಿವು ಮರವೆ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಬೆಳಗು.
--------------
ಅರಿವಿನ ಮಾರಿತಂದೆ
ವಿಷ್ಣು ದೈವವೆಂದಡೆ ಪಾಂಡವರ ಬಂಡಿಯ ಬೋವನಾದ, ಬ್ರಹ್ಮದೈವವೆಂದಡೆ ಆ ಬೋವಂಗೆ ಕಂದನಾದ, ಜಿನ ದೈವವೆಂದಡೆ ಆ ಬೋವನ ಅವತಾರವಾದ, ಮುಪ್ಪುರವ ಕೆಡಿಸುವಲ್ಲಿ ಕುಟ್ಟಿಲ ಭೌದ್ಧನಾದ, ರುದ್ರ ದೈವವೆಂದಡೆ ಅರ್ಧನಾರಿಗೆ ಸಿಕ್ಕಿದ. ಇಂತೀ ಸಮಯ ಕುಲಕ್ಕೆ ಹೊರಗಾಗಿ, ಶಕ್ತಿ ಸಮಯ ನಿರಸನವಾಗಿ ನಿಂದುದ ಸದಾಶಿವಮೂರ್ತಿಲಿಂಗವೊಂದಲ್ಲದಿಲ್ಲಾ ಎಂದೆ.
--------------
ಅರಿವಿನ ಮಾರಿತಂದೆ
ವೀರಶೈವ ಗುರುವಾಗಿ ಶುದ್ಧಶೈವಕ್ಕೆ ಹೊರಗಾಗಬೇಕು, ಶುದ್ಧಶೈವ ಗುರುವಾಗಿ ಮಾರ್ಗಶೈವಕ್ಕೆ ಹೊರಗಾಗಬೇಕು, ಮಾರ್ಗಶೈವ ಗುರುವಾಗಿ ಪೂರ್ವಶೈವಕ್ಕೆ ಹೊರಗಾಗಬೇಕು. ಇಂತೀ ಶೈವಂಗಳಲ್ಲಿ ಸನ್ನದ್ಧನಾಗಿ ತಿಳಿದು, ಅಂಗಲಿಂಗ ಆತ್ಮನಲ್ಲಿ ನಿಂದು ಸಂಯೋಗವ ಮಾಡಬೇಕು. ಮಾಡಿದಲ್ಲಿ ಕೂಡಿದ ಕಾರಣ ವೀರಶೈವವೆಂಬ ಹೆಸರಾಯಿತ್ತು. ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ವೇದಪಾಠಕ ಶಾಸ್ತ್ರವಿತ್ತು ಪುರಾಣಬಹುಶ್ರುತಿವಂತ ವಾಚಕ ಆಡಂಬರಭೇದಕ ಸಂಸ್ಕೃತ ಪ್ರಾಕೃತ ಅಪಭ್ರಂಶಿಕ ದೇಶಿಕ ಇವು ಮೊದಲಾದ ವಾಚಕ ಚಾರ್ವಾಕ ಮುಖಂಗಳಿಂದ ಹೋರುವ ಮಾಯಾವಾದದ ತೆರದವನಲ್ಲ. ಮೂಲಸಿದ್ಧಿ ರಸಸಿದ್ಧಿ ಅಂಜನಸಿದ್ಧಿ ಅದೃಶ್ಯೀಕರಣ ಕಾಯಸಿದ್ಧಿ ಇಂತೀ ಕುಟಿಲಂಗಳ ತೆರಕ್ಕಗೋಚರ, ಅಪ್ರಮಾಳ, ಅಂಗಲಿಂಗಸಂಬಂಧವಾದ ಶರಣನ ಇರವು ಎಂತೆಂದಡೆ: ಶಬ್ದ ಹತ್ತದ ಅಲೇಖದಂತೆ, ಅನಿಲ ಮುಟ್ಟದ ಕುಂಪಟೆಯಂತೆ, ಶ್ರುತಿ ಮುಟ್ಟದ ಕಡ್ಡಿಯಂತೆ, ಕೈಮುಟ್ಟದ ಗತಿಯಂತೆ, ನೆಯಿ ಮುಟ್ಟದ ದುಗ್ಧದಂತೆ, ಪವನ ಮುಟ್ಟದ ಪರ್ಣದಂತೆ ಭಾವ ಭ್ರಮೆಯೊಳಗಿದ್ದು ಇಲ್ಲದ ಶರಣನ ಇರವು, ಸದಾಶಿವಮೂರ್ತಿಲಿಂಗದ ಅಂಗವು ತಾನೆ.
--------------
ಅರಿವಿನ ಮಾರಿತಂದೆ
ವಾಯು ಬಯಲೆಂದಡೆ ತಿರುಗುವ ಆಲವಟ್ಟದಲ್ಲಿ ಸಿಕ್ಕಿ ಕುರುಹುಗೊಂಬುತಿದ್ದಿತ್ತು. ಇಂತೀ ಕುರುಹಿಲ್ಲದೆ ಅರಿವ ಪರಿಯಿನ್ನೆಂತೊ ? ಅರಿವ ಆತ್ಮ, ನಿಂದು ನುಡಿವಂಗದ ಕುರುಹಿನಲ್ಲಿದ್ದು ಮತ್ತೆ ತತ್ವವಾದ ಪರಿಯಿನ್ನೆಂತೊ ? ತೋರುವ ತೋರಿಕೆ ಅಂಗಮಯವಾದ ಮತ್ತೆ ಕುರುಹ ಹಿಂಗಿ ಅರಿವ ಪರಿಯಿನ್ನೆಂತೊ ? ಮೀರಿ ಕಾಬುದು ಮೂರು ತತ್ವದಿಂದ ಆಚೆಯಲ್ಲಿ. ಅಷ್ಟನರಿವ ತನಕ ಇಷ್ಟನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ವಸ್ತು ತ್ರಿವಿಧರೂಪಾದ ಪರಿ ಎಂತೆಂದಡೆ: ಕಾಯದ ಕರ್ಮವ ಕಳೆವುದಕ್ಕೆ ಗುರುರೂಪಾಗಿ, ಭಾವದ ಪ್ರಕೃತಿಯ ಕಳೆವುದಕ್ಕೆ ಚರರೂಪಾಗಿ, ಜೀವನ ಭಾವವ ಕಳೆವುದಕ್ಕೆ ಲಿಂಗರೂಪಾಗಿ, ಇಂತೀ ಮೂರರ ಗುಣವನರಿದು ಆಶ್ರಯಿಸುವ ಸದ್ಭಕ್ತನೆ, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ವೇಷವ ತೊಟ್ಟಡೆ ಜಗಕ್ಕಳುಕಲ್ಲದೆ ಎನಗಳುಕಿಲ್ಲ. ನೀ ಲಿಂಗವ ಕೊಟ್ಟಡೆ ನೀ ನಿನ್ನನರಿದು ನೀ ಭವಪಾಶಕ್ಕೆ ಹೊರಗಾಗಿ ಎನ್ನ ಹೊರಗು ಮಾಡಬೇಕಲ್ಲದೆ, ಕುರುಡನ ಕಯ್ಯ ಕೋಲ ಕುರುಡಹಿಡಿದಂತೆ ನೀ ಕರ್ತನಲ್ಲ ನಾ ಭೃತ್ಯನಲ್ಲ, ನೀ ಮುಕ್ತನಲ್ಲ ನಾ ಸತ್ಯನಲ್ಲ, ನಿಮ್ಮಯ ಚಿತ್ತ ನೊಂದಡೆ ನಿಮ್ಮಲ್ಲಿಯೆ ಇರಲಿ ಎನಗಾ ನೋವಿಲ್ಲ. ನೀನರಿದು ಬದುಕು ಸದಾಶಿವಮೂರ್ತಿಲಿಂಗವಾಗಬಲ್ಲಡೆ.
--------------
ಅರಿವಿನ ಮಾರಿತಂದೆ
ವೇಷದಲ್ಲಿ ತಿರುಗುವುದು ಸಮಯದ ಹಂಗು. ಮಾತಿನಲ್ಲಿ ತಿರುಗುವರೆಲ್ಲರು ಶಾಸ್ತ್ರದ ಹಂಗು. ಯತಿಭೇದದಲ್ಲಿ ತಿರುಗುವರೆಲ್ಲರು ಮನಸಿಜನ ಹಂಗು. ಆಸೆ ಅರತು ನಿಬ್ಬೆರಗಾಗಿ ತಿರುಗುವರೆಲ್ಲರು ಶರೀರದ ಹಂಗು. ಹಿಂದ ಮರೆದು ಮುಂದಳ ಮೋಕ್ಷವನರಸುವರೆಲ್ಲರು ರುದ್ರನ ಹಂಗು. ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥವೆಂಬ ಬಟ್ಟೆಯ ಮೆಟ್ಟದೆ, ಹಿಂದಳ ಇರವು ಮುಂದಳ ಸಂಶಯವೆಂಬುದ ಏನೆಂದರಿಯದೆ ನಿಂದುದು, ಸದಾಶಿವಮೂರ್ತಿಲಿಂಗದಲ್ಲಿ ಸಂದ ಮನ.
--------------
ಅರಿವಿನ ಮಾರಿತಂದೆ
ವಸ್ತು ಸ್ವಯಂಭುವಾಗಿದ್ದಲ್ಲಿ ನಾಮರೂಪುಕ್ರೀಗೆ ಹೊರಗಾಗಿದ್ದಿತ್ತು. ತನ್ನಯ ಸುಲೀಲೆ ಹಿಂಗಿ ಜಗಹಿತಾರ್ಥವಾಗಿ ಉಮಾಪತಿಯ ಧರಿಸಿದಲ್ಲಿ ತ್ರಿವಿಧಮೂರ್ತಿಯ ಭಾವ ಕಲ್ಪಿಸಿದಲ್ಲಿ, ಕ್ರಿಯಾಸಂಪದಕ್ಕೆ ಒಳಗಾಗಿ, ಅಷ್ಟವಿಧಾರ್ಚನೆ ಷೋಡಶ ಉಪಚರ್ಯವ ಮಾಡಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ವಸ್ತುವಿನ ಪಾದಮಂಡಲ ಬ್ರಹ್ಮಲೋಕವಾಯಿತ್ತು, ವಸ್ತುವಿನ ದೇಹಮಂಡಲ ಶಕ್ತಿಲೋಕವಾಯಿತ್ತು, ವಸ್ತುವಿನ ಶಿರಮಂಡಲ ರುದ್ರಲೋಕವಾಯಿತ್ತು. ತ್ರಿವಿಧಾಂಗ ತ್ರಿಕೂಟವಾಗಿ ತಿರುಗುವುದಕ್ಕೆ ಹೊರಗು, ಸ್ವಸ್ಥವಾಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು.
--------------
ಅರಿವಿನ ಮಾರಿತಂದೆ
ವಂದಿಸಿ ನಿಂದಿಸಲಿಲ್ಲ, ನಿಂದಿಸಿ ವಂದಿಸಲಿಲ್ಲ. ಮಡಿಲೊಳಗಳ ಸರ್ಪನಂತೆ ಸಂದೇಹಕ್ಕೊಡಲಾಯಿತ್ತೆನ್ನ ಮನ. ಅನುಸರಣೆಗೊಳಗಾಗದು, ವರ್ತಕವ ಬಿಡಲಾರದು. ಇನ್ನೆಂದಿಗೆ ಗುರುಶಿಷ್ಯನೆಂಬ ನಾಮ ನಷ್ಟವಹುದು? ಸದಾಶಿವಮೂರ್ತಿಲಿಂಗವು ನಿರೂಪಾಗಿಯಲ್ಲದೆ ಆಗದು.
--------------
ಅರಿವಿನ ಮಾರಿತಂದೆ
ವಸ್ತುಲೀಲಾಲೋಲನಾಗಿ ಅವತಾರಮೂರ್ತಿಯಾದಲ್ಲಿ ತ್ರಿಗುಣ ಸಂಭವವಾಯಿತ್ತು. ಪಂಚಭೌತಿಕ ಬಲಿದು ಪಂಚವಿಂಶತಿತತ್ವವಾಯಿತ್ತು. ಈ ಭೇದವ ಜಗಕ್ಕೆ ತೋರಿ, ತಾ ಹೊರಗಾದ ಸದಾಶಿವಮೂರ್ತಿಲಿಂಗದ ಬೆಡಗು.
--------------
ಅರಿವಿನ ಮಾರಿತಂದೆ
ವರ್ತಕದಲ್ಲಿ ವರ್ತಿಸುವನ್ನಕ್ಕ ಸತ್ಕ್ರೀಯ ಮಾಡಬೇಕು, ಅದು ಲೇಪವಾಗಿ ನಿಂದಲ್ಲಿ ಆತ್ಮನ ಅಳಿವ ಉಳಿವನರಿಯಬೇಕು. ಅದನರಿತು ನಿಂದು ಸ್ವಸ್ಥವಾದಲ್ಲಿ ತುರೀಯ. ಆ ತುರೀಯ ಸಮೇತ ಸಂತೋಷದಲ್ಲಿ ನಿಂದು ಸುಖನಿಶ್ಚಯವಾದುದೆ ಪರಮನಿರ್ವಾಣ, ಸದಾಶಿವಮೂರ್ತಿಲಿಂಗದ ಬೆಳಗಿನ ಕಳೆ.
--------------
ಅರಿವಿನ ಮಾರಿತಂದೆ
ವೇಷವರಿತು ಗುರುವಾಗಬೇಕು, ವೇಷವರಿತು ಚರವಾಗಬೇಕು, ಬ್ರಹ್ಮವರಿತು ಲಿಂಗವಾಗಬೇಕು, ಸಕಲಕೃತ ಭೇದವರಿತು ವಿರಕ್ತನಾಗಬೇಕು. ಇಂತೀ ಸಕಲಭ್ರಮೆಯನಡಗಿಸಿ ನಿಂದಲ್ಲಿ ಸದಾಶಿವಮೂರ್ತಿಲಿಂಗವನರಿದುದು.
--------------
ಅರಿವಿನ ಮಾರಿತಂದೆ
ವಾರಿಯ ಸಾರದ ಶೈತ್ಯದ ಇರವು. ವಹ್ನಿಯ ಜ್ವಾಲೆಯ [ಆ]ಟೋಪದ ಅಗ್ರದ ಲಯಭೇದದ ಧೂಮದಂತೆ. ಅರಿಕೆ ಒಡಲಾದ ಅಂಗ ಅರಿದು ಭೇದಿಸುವನ ಚಿತ್ತದ ಯೋಗ. ಇಂತೀ ಉಭಯವನರಿತಲ್ಲಿ ಇಷ್ಟ ಪ್ರಾಣ ಸಂಬಂಧ, ಸದಾಶಿವಮೂರ್ತಿಲಿಂಗ ಉಭಯವು ತಾನಾದ ಕಾರಣ.
--------------
ಅರಿವಿನ ಮಾರಿತಂದೆ
ವೇದ ಪ್ರಣವದ ಮೂಲ, ಶಾಸ್ತ್ರ ಪ್ರಣವದ ಶಾಖೆ, ಪುರಾಣ ಪ್ರಣವದ ಪರ್ಣ, ಎನ್ನಂಗಕ್ಕೆ ಕುರುಹಾಗಿ, ಮನಕ್ಕೆ ಅರಿವಾಗಿ, ಬೆಳಗಿಂಗೆ ಕಳೆಯಾಗಿ, ನಿಂದು ತೋರುತ್ತಿದ್ದವ ನೀನೆ, ಸದಾಶಿವಮೂರ್ತಿಲಿಂಗವು ನಾಮರೂಪಾಗಿ.
--------------
ಅರಿವಿನ ಮಾರಿತಂದೆ
ವಿಷ್ಣು ಆದಿಶಕ್ತಿಯ ಕಂದನಾಗಿ ಬಂದುದನಾರೂ ಅರಿಯರು. ಆ ಕಂದನ ಬೆಂಬಳಿಯಲ್ಲಿ ಕ್ರಿಯಾಶಕ್ತಿಗೆ ಬ್ರಹ್ಮ ಕಂದನಾಗಿ ಬಂದುದನಾರೂ ಅರಿಯರು. ಈ ಉಭಯದ ಆಧಾರವಾಗಿ ಜ್ಞಾನಶಕ್ತಿಯ ಬೆಂಬಳಿಯಲ್ಲಿ ಬಂದ ರುದ್ರನ ಆರೂ ಅರಿಯರು. ಇಂತೀ ತ್ರಿವಿಧಭೇದ ಪ್ರಳಯಕ್ಕೆ ಹೊರಗಾದ ಸದಾಶಿವಮೂರ್ತಿಲಿಂಗವನಾರೂ ಅರಿಯರು.
--------------
ಅರಿವಿನ ಮಾರಿತಂದೆ
ವೇದವನೋದಿದಲ್ಲಿ ಪ್ರಣವವನರಿಯಬೇಕು. ಶಾಸ್ತ್ರವ ಹೇಳಿದಲ್ಲಿ ಸಂಚಿತ ಕರ್ಮವನರಿಯಬೇಕು ಪುರಾಣವನೋದಿದಲ್ಲಿ ಪುಣ್ಯತಮಭೇದಂಗಳಲ್ಲಿ ಸನ್ನದ್ಧವ ತಿಳಿಯಬೇಕು. ಪನ್ನಗಫಲದಂತಾಗದೆ ಉಭಯಶುದ್ಧವಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ವಚನರಚನೆಯ ಬಲ್ಲ ಅರುಹಿರಿಯರೆಲ್ಲರು ಮೂರುಳ್ಳವನ ಬಾಗಿಲ ಕಾಯಿದೈಧಾರೆ. ಹೇಳಿ ಕೇಳಿ ಬಲ್ಲತನವಾದೆಹೆನೆಂಬವರೆಲ್ಲರು ಬಾಗಿಲಲ್ಲಿಯೆ ಸಿಕ್ಕಿದರು. ಸ್ಥಾವರಾದಿಗಳು ಮೊದಲಾಗಿ ಇದಿರಿಟ್ಟ ಕುರುಹೆಲ್ಲವು ತಾವಿದ್ದಠಾವಿಗೆ ತಂದುಕೊಂಬವರಿಂದ ಕಡೆಯೆ ಅರಿವುಳ್ಳ ಜ್ಞಾನಿಗಳೆಂಬವರು ? ಇದು ಕಾರಣ, ಸಂಚಿತ ಅಗಾಮಿ ಪ್ರಾರಬ್ಧ ಎಲ್ಲಿದ್ದಡೂ ತಪ್ಪದು. ಹಲುಬಿ ಹರಿದಾಡಬೇಡ, ಸದಾಶಿವಮೂರ್ತಿಲಿಂಗವ ಒಲವರವಿಲ್ಲದೆ ನೆರೆ ನಂಬು.
--------------
ಅರಿವಿನ ಮಾರಿತಂದೆ