ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ, ಆ ಜಂಗಮದರಿವು ಅಪ್ಪುವಾಗಿ, ಆ ಸುಭೂಮಿಯ ಬೀಜದ ಮೇಲೆ ಸುರಿಯೆ, ಆ ಭೂಮಿ ಶೈತ್ಯವಾಗಿ, ಆ ಬೀಜದ ಒಳಗು ಒಡೆದು ಅಂಕುರ ತಲೆದೋರಿ, ಭಕ್ತಿ ಜ್ಞಾನ ವೈರಾಗ್ಯವೆಂಬ ಮರ ಶಾಖೆ ಫಲ ಬಲಿದು ತುರೀಯ ನಿಂದು ಹಣ್ಣಾಯಿತ್ತು. ಆ ಹಣ್ಣ ಮೇಲಣ ಜಡವ ಕಳೆದು ಒಳಗಳ ಬಿತ್ತ ಮುಂದಕ್ಕೆ ಹುಟ್ಟದಂತೆ ಹಾಕಿ ಉಭಯದ ಮಧ್ಯದಲ್ಲಿ ನಿಂದ ಸವಿಸಾರವ ಸದಾಶಿವಮೂರ್ತಿಲಿಂಗಕ್ಕೆ ಅರ್ಪಿತವ ಮಾಡು.
--------------
ಅರಿವಿನ ಮಾರಿತಂದೆ
ಭಕ್ತ ತನ್ನಯ ಪಾಶವ ಗುರುವಿನ ಮುಖದಿಂದ ಕಳೆವ, ಆ ಗುರು ತನ್ನಯ ಪಾಶವ ಏತರಿಂದ ಕಳೆಯಬೇಕೆಂಬುದನರಿಯಬೇಕು. ಹಾಗರಿಯದೆ ಶಾಸ್ತ್ರಪಾಠಕನಾಗಿ ಮಾತಿನ ಮಾಲೆಯ ನುಡಿ[ವ] ಜ್ಞಾತೃ ಜ್ಞಾನ ಜ್ಞೇಯವನರಿಯ[ದ] ಭಾವಶುದ್ಧವಿಲ್ಲದ ಆಚಾರ್ಯನ ಕೈಯಿಂದ ಬಂದ ಪಾಷಾಣದ ಕುರುಹು ಅದೇತಕ್ಕೂ ಯೋಗ್ಯವಲ್ಲಾ ಎಂದೆ. ಅದು ಪುನಃ ಪ್ರತಿಷ್ಠೆಯಿಂದಲ್ಲದೆ ಲಿಂಗಚೇತನವಿಲ್ಲಾ ಎಂದೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಭಕ್ತಿಯ ನುಡಿವಲ್ಲಿ ಬಾಹ್ಯವಾಗಿರಬೇಕು, ಸತ್ಯವ ನುಡಿವಲ್ಲಿ ಮರೆಯಾಗಿರಬೇಕು. ವೇಶಿ ತಿರುಗಾಡುವಲ್ಲಿ ತನ್ನಯ ವೇಷವ ತೋರಬೇಕು, ಗರತಿಯಿಹಲ್ಲಿ ತನ್ನ ಪುರುಷನ ಅಡಕದಲ್ಲಿ ಅಡಗಬೇಕು. ದಿವ್ಯಜ್ಞಾನವ ದಿವಜರಲ್ಲಿ ಹೇಳುವ ತ್ರಿವಿಧ ಗುಡಿಹಿಗಳಿಗೆ ಅರುಹಿನ ಪಥವಿಲ್ಲ, ಸದಾಶಿವಮೂರ್ತಿಲಿಂಗಕ್ಕೆ ದೂರವಾಗಿಹರು.
--------------
ಅರಿವಿನ ಮಾರಿತಂದೆ
ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು. ಜಂಗಮಕ್ಕೆ ಸದ್ಭಕ್ತಿ, ಸದಾಚಾರ, ಸಕ್ರೀ ಇಂತೀ ಆಚಾರದಲ್ಲಿ ಇರಬೇಕು. ಅದೆಂತೆಂದಡೆ:ಪುರುಷನ ಆಚಾರ ಸತಿಗೆ ಕಟ್ಟು, ಜಂಗಮದ ಆಚಾರ ಭಕ್ತಂಗೆ ಸಂಪದದ ಬೆಳೆ. ಅವತಾರಕ್ಕೆ ವೇಷ, ಅರಿವಿಂಗೆ ಆಚಾರ. ಆ ಜಂಗಮಭಕ್ತನ ಇರವು ಘಟಪ್ರಾಣದಂತೆ. ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಭಕ್ತಿಹೀನ ಭಕ್ತಿಯ ಮಾಡುವಲ್ಲಿ ಗುರುಲಿಂಗಜಂಗಮದ ಇರವ ಸಂಪಾದಿಸಲಿಲ್ಲ. ಭಕ್ತಿಯುಳ್ಳವ ಅರಿತು ಭಕ್ತಿಯ ಮಾಡುವಲ್ಲಿ ಗುರುವಿನಲ್ಲಿ ಗುಣವನರಸಬೇಕು, ಲಿಂಗದಲ್ಲಿ ಲಕ್ಷಣವನರಸಬೇಕು, ಜಂಗಮದಲ್ಲಿ ವಿರಕ್ತಿಯನರಸಬೇಕು ಅದೆಂತೆಂದಡೆ: ಈ ತ್ರಿವಿಧವು ತನ್ನಯ ಪ್ರಾಣವಾದ ಕಾರಣ. ಪರುಷ ಶುದ್ದವಾಗಿಯಲ್ಲದೆ ಲೋಹದ ಕುಲವ ಕೆಡಿಸದು. ತಾ ಹಿಡಿದು ಆರಾಧಿಸುವ ವಸ್ತು ಶುದ್ಧವಾಗಿಯಲ್ಲದೆ ಪೂಜಿಸುವ ಭಕ್ತನ ಚಿತ್ತಶುದ್ಧವಿಲ್ಲ. ಸದಾಶಿವಮೂರ್ತಿಲಿಂಗ ಶುದ್ಧವಾಗಿಯಲ್ಲದೆ ಎನ್ನಂಗ ಶುದ್ಧವಿಲ್ಲ.
--------------
ಅರಿವಿನ ಮಾರಿತಂದೆ
ಭಕ್ತನಾದಲ್ಲಿ ಅರ್ಥಪ್ರಾಣ ಅಭಿಮಾನವೆನ್ನದೆ, ಮಾಡಿ ನೀಡಿ ಸಂದೇಹವ ಮಾಡಿದಲ್ಲಿಯೆ ಸಿಕ್ಕಿತ್ತು ಭಕ್ತಿಗೆ ಹಾನಿ, ಸತ್ಯದ ಬಾಗಿಲು ಮುಚ್ಚಿತ್ತು. ಆರೇನಾದಡೂ ಆಗಲಿ ಭಕ್ತಂಗೆ ಸತ್ಯವೆ ನಿತ್ಯದ ಬೆಳಗು. ಆ ಭಕ್ತನಂಗ ಸದಾಶಿವಮೂರ್ತಿಲಿಂಗದ ಘಟಸಂಭವ ಪ್ರಾಣ.
--------------
ಅರಿವಿನ ಮಾರಿತಂದೆ
ಭರಿತಾರ್ಪಣವೆಂಬುದು ಲಿಂಗಕ್ಕೊ ನಿನಗೊ? ಲಿಂಗಕ್ಕೆ ಸಂಕಲ್ಪ, ನಿನಗೆ ಮನೋಹರ. ಈ ಗುಣ ಓಗರ ಮೇಲೋಗರದ ಅಪೇಕ್ಷೆಯಲ್ಲದೆ, ಲಿಂಗದ ಒಡಲಲ್ಲ, ಸದಾಶಿವಮೂರ್ತಿಲಿಂಗಕ್ಕೆ ಸಲ್ಲ.
--------------
ಅರಿವಿನ ಮಾರಿತಂದೆ
ಭಕ್ತ ಗುರುಚರವ ನುಡಿದಲ್ಲಿ ನೋವುಂಟೆ ಅಯ್ಯಾ? ಪುರುಷ ಕಳ್ಳನಾದಲ್ಲಿ ಸತಿಗೆ ಸೆರೆ ಉಂಟು, ಸೂಳೆಯ ಮಿಂಡ ಸತ್ತಡೆ ಅವಳನಾರು ಸೆರೆಯ ತೆಗೆವರುಂಟೆ? ಸಜ್ಜನಭಕ್ತ ಏನೆಂದಡೂ ಸದಾಶಿವಮೂರ್ತಿಲಿಂಗಕ್ಕೆ ಒಳಗು
--------------
ಅರಿವಿನ ಮಾರಿತಂದೆ
ಭಕ್ತಂಗೆ ವಿಶ್ವಾಸ, ಗುರುಚರಕ್ಕೆ ವಿರಕ್ತಿ, ಭಕ್ತಂಗೆ ತ್ರಿವಿಧ ಕೂಡಿದ ಮಾಟ, ವಿರಕ್ತಂಗೆ ತ್ರಿವಿಧ ಹೊರಗಾಗಿ ಆಟ, ಭಕ್ತನ ನೆಮ್ಮುಗೆ ಗುರುಲಿಂಗಜಂಗಮದಲ್ಲಿ. ಗುರುಚರವಿರಕ್ತನ ನೆಮ್ಮುಗೆ ಸದಾಶಿವಮೂರ್ತಿಲಿಂಗದಲ್ಲಿ ಬೆಚ್ಚಂತಿರಬೇಕು.
--------------
ಅರಿವಿನ ಮಾರಿತಂದೆ
ಭೂಮಿಯ ಬಡತನಕ್ಕೆ ಗೆಯ್ದರುಂಟೆ? ತಳಿಗೆ ಹಸಿಯಿತ್ತೆಂದು ಇಕ್ಕಿದರುಂಟೆ? ಲಿಂಗಕ್ಕೆ ಉಪಚಾರವ ಮಾಡುವಾಗ ಆ ಅಂಗ ಏತರಿಂದವೊದಗಿತ್ತೆಂಬುದನ?. ತನ್ನ ಕುರಿತು ಮಾಡುವ ಸುಖಭೋಗಂಗಳಿಗೆ ಲಿಂಗಕ್ಕೆಂದು ಪ್ರಮಾಳಿಸಲಿಲ್ಲ ಅದೆಂತೆಂದಡೆ: ಬಯಲರಿಯದ ಜಗವುಂಟೆ? ವಾಯುವರಿಯದ ಗಂಧವುಂಟೆ? ಅಪ್ಪುವರತ ಸಕಲ ಚೇತನವುಂಟೆ? ದೃಷ್ಟವನೆ ಕಂಡು, ಇದಿರಿಟ್ಟು ಶ್ರೋತ್ರದಲ್ಲಿ ಕೇಳಿ, ಇಷ್ಟನರಿಯದೆ ನಾ ಕೊಟ್ಟೆ-ವಸ್ತು ಕೊಂಡಿತ್ತೆಂಬ ಭಾವವಳಿದು, ಅರಿದ ಮರೆಯಲ್ಲಿ ಬೆಳಗು ದೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಭಕ್ತಂಗೆ ವಿಶ್ವಾಸ, ಗುರುವಿಂಗೆ ಅರಿವು, ಉಭಯದ ಭೇದವೊಂದೆಯಾದ ಕಾರಣ. ಕಾಯಜೀವದ ತೆರದಂತೆ, ಕಾಯದ ರುಜೆಯ ಜೀವ ಅನುಭವಿಸುವಂತೆ, ಉಭಯ ನಿರ್ಧಾರವಾಗಿಯಲ್ಲದೆ, ಸದಾಶಿವಮೂರ್ತಿಲಿಂಗವನರಿಯಬಾರದು.
--------------
ಅರಿವಿನ ಮಾರಿತಂದೆ
ಭರಿತಾರ್ಪಣವ ನೈವೇದ್ಯವ ಮಾಡಿದಲ್ಲಿ ಲಿಂಗಪ್ರಸಾದವ ಮಿಗಿಸಬಹುದೆ ಅಯ್ಯಾ? ಲಿಂಗಕ್ಕೂ ತನಗೂ ಭರಿತವಾದಲ್ಲಿ ಶರಣರ ನಡುವೆ ಸುರಿಸಿಕೊಂಡು ಸೂಸಿದಡೆ ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ