ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾ ತೋಡಿದ ಬಾವಿಯಲ್ಲಿ ಡುಂಡುಕ ಭೇಕವೊಂದಾಗಿ ಇದ್ದವು. ಡುಂಡುಕ ಹಸಿದು ಭೇಕನ ನುಂಗಿತ್ತು. ಭೇಕ ಸಾಯದೆ ಡುಂಡುಕನ ಕರುಳ ತಿಂದು, ಡುಂಡುಕ ಸತ್ತು ಒಣಗಲಾಗಿ, ಅಂಗ ಬಿಗಿದು ಭೇಕನಲ್ಲಿಯೆ ಸತ್ತಿತ್ತು. ಎನ್ನ ಬಾವಿ ಕೆಟ್ಟಿತ್ತು, ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು.
--------------
ಅರಿವಿನ ಮಾರಿತಂದೆ
ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ ತಾಗಿತು ಮನ ಸಂದ ಗುರಿಯ. ಅದೇತರ ಗುಣದಿಂದ? ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ ಚಿತ್ತ ಹಸ್ತದ ಲಿಂಗದ ದೃಷ್ಟ. ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು ಕಾಯದ ನೆಮ್ಮುಗೆಯಲ್ಲಿ ಕಾಣಬೇಕು. ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ನಿರಾಳದಲ್ಲಿ ನೀರಕೋಟೆಯನಿಕ್ಕಿ, ಬಯಲ ಅಗಳ ತೆಗೆದು, ವಾಯುವ ತೆನೆ ಹೂಡಿ, ಅಶ್ವರಾಜನೆಂಬ ಅರಸು ಪಟ್ಟಣಕ್ಕೊಡೆಯನಾಗಿ, ಸೋಮಸೂರ್ಯವೀಧಿಗಳಲ್ಲಿ ಪಶ್ಚಿಮ ಕೇರಿಯ ಪೊಕ್ಕು, ದಕ್ಷಿಣದಲ್ಲಿ ನಿಂದು, ಪೂರ್ವದಲ್ಲಿ ಪರಸ್ಥಾನವ ಮಾಡಿ, ಉತ್ತರದ ಮಧ್ಯದಲ್ಲಿ ಸಿಂಹಾಸನಂ ಗೆಯಿದು, ಸಕಲೇಂದ್ರಿಯ ನಾನಾ ವಿಷಯ ಪರಿವಾರದಲ್ಲಿ, ಅರಿಗಳಿಗೆ ವಶವಲ್ಲದೆ ಸುಖಮಯನಾಗಿದ್ದ. ಸದಾಶಿವಮೂರ್ತಿಲಿಂಗವು ನಿರಾಳವಾಯಿತ್ತು.
--------------
ಅರಿವಿನ ಮಾರಿತಂದೆ
ನಂಜಿನ ಭೂಮಿಯ ಮೇಲೆ ಸಂದೇಹದ ಕವರವ ನೆಟ್ಟು, ಮಂಜುಳದ ಮೂರಂಗದ ಮುಂಡಿಗೆಯ ನೆಟ್ಟು, ಸರಂಗದ ಸುಮನದ ಡೊಂಕರತ ಬೆಮ್ಮರನ ಹಾಕಿ, ಗತಿಮತಿಯೆಂಬ ಇಕ್ಕೆಲದ ಸೂರಿಗೆ ನಿಶ್ಚಯವೆಂಬ ಹುಲುಬಡುವ ಹಾಕಿ ಏರಿಸಿದ ಗಳು ಚಿತ್ತಶುದ್ಧವೆಂಬ ಮೂಗುತಿ ಕೋಲಿನಲ್ಲಿ ನಿಂದಿತ್ತು. ಗಳು ತೊಲಗದ ಕಟ್ಟು ವಿಶ್ವಾಸ ನಿಶ್ಚಯದಲ್ಲಿ ನಿಂದಿತ್ತು. ಸಂದೇಹ ನಿಂದು ಹಂಜರವೇರಿತ್ತು. ಕಡೆ ನಡು ಮೊದಲೆನ್ನದ ತ್ರಿಗುಣದ ಕಂಥೆ ಕಟ್ಟಿ, ಅರಿದು ಮರೆಯದ ಹುಲ್ಲು ಕವಿಸಿತ್ತು. ಮನೆಯಾಯಿತ್ತು, ಮನದ ಕೊನೆಯ ಬಾಗಿಲು ಬಯಲಾಯಿತ್ತು, ಸದಾಶಿವಮೂರ್ತಿಲಿಂಗವು ನಿರಾಳವಾಯಿತ್ತು.
--------------
ಅರಿವಿನ ಮಾರಿತಂದೆ
ನಿಕ್ಷೇಪವ ನೀಕ್ಷೆಪಿಸುವಲ್ಲಿ ಮತ್ತಾರೂ ಅರಿಯದಂತೆ ಇರಿಸಬೇಕೆಂಬುದಕ್ಕಿಂದವು ಕಡೆಯೆ ಶಿವತತ್ವಪರಮಜ್ಞಾನ ? ಇಂತಿದನರಿತು ಲಿಂಗಬಾಹಿರರಲ್ಲಿ, ಕಂಡ ನಿಂದಠಾವಿನಲ್ಲಿ, ಬಂದಂತೆ ಬಾಯ ಬಡಿವರಲ್ಲಿ ಶಿವಪ್ರಸಂಗವನೊಂದನೂ ನುಡಿಯಲಾಗದು. ಮೀರಿ ನುಡಿದಡೆ ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ನೀತಿ ಲಿಂಗವಾಗಿ, ಸದ್ಗುಣ ಕಳೆಯಾಗಿ, ಆಚಾರವಿಡಿದು ತೋರುವ ಬೆಳಗು ವಸ್ತುವಾಗಿ, ಸ್ಫಟಿಕದ ಘಟವ ಹೊಳಚಿದಂತೆ, ಒಳಹೊರಗೆನ್ನದೆ ನಿರ್ಮಲ ತೋರುವಂತೆ, ಅದರಿರವು ಸುಚಿತ್ತನಾಗಿ ನಿಂದುದು ನಿರ್ಮಾಯ. ಸದಾಶಿವಮೂರ್ತಿಲಿಂಗವು ನಿರಂಜನಮಯಸ್ವರೂಪ.
--------------
ಅರಿವಿನ ಮಾರಿತಂದೆ
ನೋಡಿಹೆನೆಂದಡೆ ನೋಡಲಿಲ್ಲ, ಕೂಡಿಹೆನೆಂದಡೆ ಕೂಡಲಿಲ್ಲ. ಮುಂದೆ ಬೇಡಿಹೆನೆಂದಡೆ ಮೂರ್ತಿಯಲ್ಲದ ಕಾರಣ, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ನಾದ ಬ್ರಹ್ಮಶಕ್ತಿಯಾಗಿ, ಬಿಂದು ವಿಷ್ಣುಶಕ್ತಿಯಾಗಿ, ಕಳೆ ರುದ್ರಶಕ್ತಿಯಾಗಿ, ತ್ರಿವಿಧ ಪ್ರಾಣ ಅತೀತ ಭೇದ ಚೇತನನಾಗಿ, ಉಮಾಪತಿ ನಿರಸನ ಸ್ವಯಂಭು ಸದಾಶಿವಮೂರ್ತಿಲಿಂಗವು, ತ್ರಿವಿಧನಾಮ ನಷ್ಟವಾಯಿತ್ತು.
--------------
ಅರಿವಿನ ಮಾರಿತಂದೆ
ನಿಜಗುರುವಿನ ಇರವು ಹೇಗಿರಬೇಕೆಂದಡೆ: ನಿರ್ಮಲ ಸುಚಿತ್ತನಾಗಿ ತನ್ನ ಸೋಂಕುವ ಸುಖದುಃಖಗಳು ಬಂದಲ್ಲಿ ಆಗುಚೇಗೆಯನರಿಯದೆ, ಫಲವ ಹೊತ್ತ ತರುವಿನಂತೆ, ಕೆಚ್ಚಲ ಕ್ಷೀರದಂತೆ, ಕಪಿತ್ಥದ ಪಳ ಘಟ್ಟಿಗೊಂಡಂತೆ. ಹೊರಗಳ ಇರವು, ಒಳಗಳ ನಿಜ. ಲೌಕಿಕಕ್ಕೆ ಗುರುವಾಗಿ ಪರಮಾರ್ಥಕ್ಕೆ ಸದ್ಗುರುವಾಗಿ ಡುಂಡುಫಳದಂತೆ ಹೊರಗಳ ಬಿರುಬು, ಒಳಗಳ ಮಧುರಸಾರದಂತಿರಬೇಕು. ಕರು[ಣಿ] ಕಾರುಣ್ಯಾಂಬುಧಿ ಸದ್ಗುರುವಿನ ಇರವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ