ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ತಾನರಿತು ಮಾಡುವಲ್ಲಿ ತಾ ಬೇಡದೆ ಅನ್ಯರಿಗೆ ಹೇಳಿ ಈಸಿಕೊಂಬ ಡಾಳಕತನವೇಕೆ? ಅದು ಗುರುಚರಕ್ಕೆ ಅರಿವಿನ ಮತವಲ್ಲ. ಇಂತಿವನರಿದು ಮರಳಿ ಕಾಡುವ ಶಬರವೇಷಿಗಳು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ತ್ರಿವಿಧಮೂರ್ತಿಯು ಕೂಡಿ ಭಕ್ತನ ಅಂಗದಲ್ಲಿ ನಿಂದು, ತಮ್ಮ ಸಂದನಳಿವುದಕ್ಕೆ ಮಂದಿರವ ಕಟ್ಟಿದ ಅಂದವನರಿಯದೆ, ಕರ್ತೃ ಭೃತ್ಯನೆಂದು ಕೊಂಡಾಡಲೇತಕ್ಕೆ? ಕಾಯ ಜೀವಕ್ಕೆ ಹಂಗುಂಟೆ ಅಯ್ಯಾ? ಭಕ್ತನ ಸತ್ಯ ಸದಾಶಿವಮೂರ್ತಿಲಿಂಗದ ಕೃತ್ಯ.
--------------
ಅರಿವಿನ ಮಾರಿತಂದೆ
ತನ್ನಾಸೆಯ ಹರಿದು ಶಿಷ್ಯಂಗೆ ಅನುಜ್ಞೆಯ ಮಾಡಿದಾಗವೆ ಬ್ರಹ್ಮಪಾಶ ಹರಿದುದು. ವೇಷಧಾರಿಗಳಲ್ಲಿ ಹೊಗದೆ ಈಷಣತ್ರಯವ ಬಿಟ್ಟು ನೆರೆ ಈಶನನರಿತುದೆ ಆ ಭಕ್ತಂಗೆ ವಾಸವನ ಲೇಸಕಿತ್ತುದು. ಇಂತೀ ಗುರುಚರದ ಉಭಯವನರಿತ ಸದ್ಭಕ್ತನ ಶರೀರವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ, ಲಿಂಗದ ಶೇಷವ ತಾ ಕೊಂಡೆನೆಂದು ಕೊಂಡುದು ಪ್ರಸಾದ. ಇದ್ದುದು ಸಯಿದಾನವೆಂದು ಉಂಡು ಉಂಡು ಲಿಂಗಕ್ಕೆ ಕೊಡಬಹುದೆ ಅಯ್ಯಾ? ಅದು ಮುನ್ನವೆ ಲಿಂಗಾರ್ಪಿತ. ತನ್ನಯ ಸಂದೇಹಕ್ಕೆ ಕೊಟ್ಟುಕೊಂಡೆನೆಂಬ ಭೇದವಲ್ಲದೆ, ಇಂತೀ ಗುಣ ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ತಾವರೆಯ ನಾಳದ ತೆರಪಿನಲ್ಲಿ, ಮೂರು ಲೋಕವನೊಳಕೊಂಡ ಗಾತ್ರದಾನೆ ಎಡತಾಕುತ್ತದೆ. ನಾಳ ಹರಿಯದು ಆನೆಯಂಗಕ್ಕೆ ನೋವಿಲ್ಲ. ಇದೇನು ಚೋದ್ಯವೆಂದು ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ತಲೆಯೊಳಗಳ ಬಾಯಲ್ಲಿ ಹಲವು ರುಚಿಯಿಲ್ಲದೆ ಕೆಳಗಳ ದ್ವಾರದಲ್ಲಿ ಉಣಬಹುದೆ ಅಯ್ಯಾ? ಹಿಡಿವುದನರಿತು, ಹಿಡಿದು ಬಿಡುವುದನರಿತು, ಬಿಟ್ಟು ಇಷ್ಟಪ್ರಾಣವನೊಡಗೂಡಬೇಕಲ್ಲದೆ, ಇಷ್ಟವಿಲ್ಲದ ಪ್ರಾಣ ವಸ್ತುವೆಂಬ ಮಿಟ್ಟೆಯ ಭಂಡರ ಮೆಚ್ಚುವನೆ, ಎನ್ನ ಸದಾಶಿವಮೂರ್ತಿಯನರಿತ ನಿರಂಗ?
--------------
ಅರಿವಿನ ಮಾರಿತಂದೆ
ತನ್ನಯ ವಿಶ್ವಾಸದಿಂದ ಗುರುವ ಮುಕ್ತನ ಮಾಡಿದ ಭಕ್ತನು, ತನ್ನಯ ವಿಶ್ವಾಸದಿಂದ ಚರವ ವಿರಕ್ತನ ಮಾಡಿದ ಭಕ್ತನು, ತನ್ನಯ ವಿಶ್ವಾಸದಿಂದ ಶಿಲೆಯ ಕುಲವನಳಿದು ಸದಮಲದ ಬೆಳಗ ತಂದಿಟ್ಟ ಸದ್ಭಕ್ತನು, ಆ ಭಕ್ತನಂಗವೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ತನ್ನ ಅಂಗದ ಮಲಿನವ ತಾನರಿದಂತೆ, ತನ್ನ ಕಂಗಳ ಕಸನ ತಾ ಕಳೆದಂತೆ, ಗುರುಲಿಂಗಜಂಗಮದ ಅಂಗವೆಂದು ತಾನೆಂದು ಭಿನ್ನಭಾವವ ಮಾಡಲಿಲ್ಲ. ಅದು ತಾ ಗಳಿಸಿದ ಧನ. ಈ ಮೂರು ತನ್ನಯ ಪ್ರಾಣ, ಈ ಗುಣ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ತನ್ನ ಕೈಯಲ್ಲಿ ಲಿಂಗವಿದ್ದು ತಾನಿದಿರಿಗೆ ಸ್ಮಶಾನದೀಕ್ಷೆಯ ಮಾಡಬಹುದೆ ಅಯ್ಯಾ? ಇಂತೀ ಉದರಘಾತಕ ಗುರು, ಶರೀರದಹನ ಶಿಷ್ಯ ಇಂತೀ ಉಭಯ ಪಾತಕರು, ಸದಾಶಿವಮೂರ್ತಿಲಿಂಗಕ್ಕೆ ಸ್ವಪ್ನದಲ್ಲಿ ದೂರ.
--------------
ಅರಿವಿನ ಮಾರಿತಂದೆ
ತೆಪ್ಪದ ಮೇಲೆ ನಿಂದು ಒತ್ತುವ ಕ್ರೀಯೇ ಲಿಂಗವಾಗಿ, ಹಿಡಿವ ಕಣೆಯೇ ಅರಿವ ಮುಖವಾಗಿ, ವ್ಯಾಪಕವೆಂಬ ಹೊಳೆ ದಾಂಟುವುದಕ್ಕೆ ಇದೆ ಪಥ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ತನ್ನ ಕುರಿತು ಪರಿಹರವ ಮಾಡಿಕೊಂಬಲ್ಲಿ ಅನ್ಯರ ಗುಣದೋಷವ ಸಂಪಾದಿಸಲಿಲ್ಲ. ಅದು ಒಡೆದಠಾವಿನಲ್ಲಿ ಒಸರುವುದಲ್ಲದೆ ಬೇರೊಂದೆಡೆಯಲ್ಲಿಲ್ಲ. ಇದು ಕಾರಣ, ಉಭಯವ ಅಲ್ಲ-ಅಹುದೆಂದೆನಲಿಲ್ಲ. ಸದ್ಭಕ್ತ ಮಾಡುವ ಸನ್ನದ್ಧ ಭಕ್ತಿ ಸದಾಶಿವಮೂರ್ತಿಲಿಂಗದ ಕೈಲೆಡೆಯ ಪ್ರಾಣ.
--------------
ಅರಿವಿನ ಮಾರಿತಂದೆ
ತನ್ನ ಶರೀರದ ಗುಣವನಳಿದು, ಕರಣೇಂದ್ರಿಯದ ಗುನ್ಮದ ಗಲಗ ಕಿತ್ತು, ಉಚ್ಚೆಯ ಬಚ್ಚಲ ಕೊಚ್ಚೆಯ ಕೊಳಕ ತೊಡೆದು, ತ್ರಿಸಂಧಿಯಲ್ಲಿ ತ್ರಿಗುಣದ ತ್ರಿಕಾಲವ ಭೇದಿಸುತ್ತ, ತನ್ನಯ ಕರಕಮಲದಲ್ಲಿ ಒದಗಿದ ಶಿಷ್ಯವರ್ಗದ ಅಸ್ತಿ ನಾಸ್ತಿಯನರಿತು ಬಿಡುಮುಡಿಯಲ್ಲಿ ಇರಬೇಕು. ಹೀಗಲ್ಲದೆ, ತೆಂಗನೇರಿದ ಲಂಡನಂತೆ ಎಲ್ಲವು ತನಗೆ ಸರಿಯೆಂದಡೆ, ಬಲ್ಲವರೊಪ್ಪುವರೆ ಅಯ್ಯಾ ಅವನ ಗುರುತನದ ಇರವು? ಬಟ್ಟೆಯ ಬಡಿದು ಉಂಬವಂಗೆ ಸತ್ಕರ್ಮದ ಜೀವದ ದಯವುಂಟೆ ಅಯ್ಯಾ? ಇದು ಕಾರಣದಲ್ಲಿ, ಸದ್ಭಾವ ಗುರುವಾಗಬೇಕು, ನಿರ್ಮಲಾತ್ಮಕ ಶಿಷ್ಯನಾಗಬೇಕು. ಇಂತೀ ಉಭಯವನರಿತಲ್ಲಿ ಉರಿ ಕರ್ಪುರದಿರವಿನಂತಾಗಬೇಕು, ಸದಾಶಿವಮೂರ್ತಿಲಿಂಗವನರಿವ ಭೇದಕ್ಕೆ.
--------------
ಅರಿವಿನ ಮಾರಿತಂದೆ
ತನುಸಂಬಂಧ ಬ್ರಹ್ಮನ ತೊಡಕಾದಲ್ಲಿ, ವಿಕಾರಸಂಬಂಧ ವಿಷ್ಣುವಿನ ತೊಡಕಾದಲ್ಲಿ, ಜೀವಸಂಬಂಧ ರುದ್ರನ ತೊಡಕಾದಲ್ಲಿ, ಇಂತೀ ಮೂರ ಹಿಂಗುವ ಹಿರಿಯರ ಆರನೂ ಕಾಣೆ. ಇಂತೀ ತ್ರಿವಿಧಕ್ಕೆ ಹೊರಗಾದಲ್ಲಿ ಮೀರಿ ಕಾಬ ತೆರ ಸಮಯಕ್ಕೆ ಹೊರಗು, ಸದಾಶಿವಮೂರ್ತಿಲಿಂಗವೆ ಅಂಗವಾದವನ ಇರವು.
--------------
ಅರಿವಿನ ಮಾರಿತಂದೆ