ಅಥವಾ

ಪ್ರಾರಂಭ ಪದದ ಹುಡುಕು

(19) (5) (2) (1) (6) (0) (0) (0) (4) (4) (0) (1) (0) (0) ಅಂ (19) ಅಃ (19) (27) (0) (23) (3) (0) (4) (0) (6) (0) (0) (0) (0) (2) (0) (0) (7) (0) (7) (0) (17) (6) (0) (19) (3) (31) (0) (5) (0) (1) (13) (8) (1) (23) (10) (0)
-->

ಪ್ರಾರಂಭ ಪದದ ಹೆಸರಿರುವ ವಚನಕಾರರು

ಅಕ್ಕಮಹಾದೇವಿ
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ ರಚನೆಗಳ ಮುಖ್ಯ ಲಕ್ಷಣ.
ಅಕ್ಕಮ್ಮ
ಹುಟ್ಟಿದ ಊರು ಏಲೇಶ್ವರ [ಏಲೇರಿ]. ಈಕೆಯ 154 ವಚನಗಳು ದೊರೆತಿವೆ. ವ್ರತ, ನೇಮ, ಆಚಾರ, ಶೀಲ ಇವು ಆಕೆಯ ವಚನಗಳಲ್ಲಿ ಹೆಚ್ಚು ಪರಿಶೀಲನೆಗೆ ಒಳಗಾಗಿವೆ.
ಅಖಂಡ ಮಂಡಲೇಶ್ವರ
-----
ಅಂಗಸೋಂಕಿನ ಲಿಂಗತಂದೆ
ಕಾಲ : 1160. ಕೃತಿಯ ವೈಶಿಷ್ಟ್ಯ : ಧಾರ್ಮಿಕ ವಿಚಾರಗಳೇ ಪ್ರಧಾನ. ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಚಂದಯ್ಯ, ಮಡಿವಾಳಯ್ಯ, ಹಡಪದಪ್ಪಣ್ಣ, ಸೊಡ್ಡಳ ಬಾಚರಸ, ಮೋಳಿಗೆ ಮಾರಯ್ಯ, ಅನಿಮಿಷ ದೇವರು, ಮರುಳ ಶಂಕರ ದೇವ, ಘಟ್ಟಿವಾಳಯ್ಯ, ಅಜಗಣ್ಣ, ನಿಜಗುಣ, ಸಿದ್ಧರಾಮ-ಇವರನ್ನು ನೆನೆದಿರುವನು. 770 ಅಮರ ಗಣಗಳಿಗೆ ನಮೋ ಎಂದಿರುವನು.
ಅಗ್ಘವಣಿ ಹಂಪಯ್ಯ
ಕಾಲ. ಸು. 1300. ಕುಂತಳ ದೇಶದ ಮುಕುಂದಪುರದವನು. ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ ಒದಗಿಸುವ ಕಾಯಕ ನಡೆಸುತ್ತಿದ್ದ. ಈತನ 14 ವಚನಗಳು ದೊರೆತಿವೆ. ಪಂಚಾಕ್ಷರಿ ಮಂತ್ರದ ಮಹಿಮೆ, ಭಕ್ತನ ಸ್ಥಿತಿಗಳ ವರ್ಣನೆ ಈತನ ವಚನಗಳ ಮುಖ್ಯ ಆಸಕ್ತಿ.
ಅಗ್ಘವಣಿ ಹೊನ್ನಯ್ಯ
ಕಾಲ ಸು. 1160. ಊರು: ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ). ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ ಒದಗಿಸುವ ಕಾಯಕ ನಡೆಸುತ್ತಿದ್ದ. 4 ವಚನಗಳು ದೊರೆತಿವೆ. ಮರಡಿಪುರ (1180) ಶಾಸನದಲ್ಲಿ ಈತನ ಉಲ್ಲೇಖವಿದೆ. ಅಬ್ಬಲೂರಿನಲ್ಲಿ ನಡೆದ ಪವಾಡ ಪ್ರಸಂಗದಲ್ಲಿ ಏಕಾಂತ ರಾಮಯ್ಯನ ತಲೆಯನ್ನು ಹರಿವಾಣದಲ್ಲಿಟ್ಟು ಮೆರೆಸಿದ ಅನ್ನುವ ಐತಿಹ್ಯವಿದೆ. ಶಿವಭಕ್ತಿ, ಉಗ್ರವಾದ ಏಕದೇವತಾ ನಿಷ್ಠೆ ಇವನ ವಚನಗಳಲ್ಲಿ ವ್ಯಕ್ತವಾಗಿವೆ.
ಅಜಗಣ್ಣ ತಂದೆ
ಕಾಲ: ಸು. 1160. ಊರು:ಲಕ್ಕುಂಡಿ. ಮುಕ್ತಾಯಕ್ಕನ ಅಣ್ಣ. ಶಿವಲಿಂಗವನ್ನು ಬಾಯಲ್ಲಿಟ್ಟುಕೊಂಡಿರುತ್ತಿದ್ದ ವಿಶಿಷ್ಟ ಗುಪ್ತಭಕ್ತ. ಮುಕ್ತಾಯಕ್ಕನ ವಚನಗಳಲ್ಲಿ ಈತನ ವ್ಯಕ್ತಿತ್ವದ ವರ್ಣನೆ ದೊರೆಯುತ್ತದೆ. ಈತನ 10 ವಚನಗಳು ದೊರೆತಿವೆ. ಗುರು, ಗುರು-ಶಿಷ್ಯ ಸಂಬಂಧ ಇವನ ವಚನಗಳ ಮುಖ್ಯ ಆಸಕ್ತಿ. ‘ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಸಮ’ ಎಂದು ಚನ್ನಬಸವಣ್ಣ ಹೊಗಳಿದ್ದಾನೆ.
ಅನಾಮಿಕ ನಾಚಯ್ಯ
ಕಾಲ: ಸು. 1160. ಊರು: ಮಾರುಡಿಗೆ. ವೃತ್ತಿ: ಗಾಣಿಗ. ಅನಾಮಿಕ ಎಂಬ ವಿಶೇಷಣವು ಈತ ಶೂದ್ರನಿರಬಹುದು ಅನ್ನುವುದರ ಸೂಚನೆ ಎಂಬುದು ವಿದ್ವಾಂಸರ ಅಭಿಪ್ರಾಯ. ಈತನ 5 ವಚನಗಳು ದೊರೆತಿವೆ. ಬೆಡಗಿನ ರೂಪದಲ್ಲಿ ತಾತ್ವಿಕ ಚಿಂತನೆಗಳ ಪ್ರಸ್ತಾಪ ಈತನ ವಚನಗಳ ವೈಶಿಷ್ಟ್ಯ,
ಅನುಗಲೇಶ್ವರ
-----
ಅಪ್ಪಿದೇವಯ್ಯ
ಕಾಲ: 1650. ಈತನ 1 ವಚನ ದೊರೆತಿದೆ. ಗುರು, ಲಿಂಗ, ಜಂಗಮ, ಪಾದೋದಕ ಎಂಬ ಪರಿಕಲ್ಪನೆಗಳ ವಿಮರ್ಶೆ ಇದೆ.
ಅಪ್ರಮಾಣ ಗುಹೇಶ್ವರ
-----
ಅಂಬಿಗರ ಚೌಡಯ್ಯ
ಕಾಲ; ಸು. 1160. ದೋಣಿ ನಡೆಸುವ ಕಾಯಕದವನು. ಈತನ 278 ವಚನಗಳು ದೊರೆತಿವೆ. ಕಸುಬಿನ ಅನುಭವಗಳನ್ನೇ ತನ್ನ ವಚನಗಳಲ್ಲಿ ರೂಪಕ, ನಿದರ್ಶನಗಳನ್ನಾಗಿ ಬಳಸಿಕೊಂಡಿದ್ದಾನೆ. ಧಾರ್ಮಿಕ ಜಿಜ್ಞಾಸೆ, ಜ್ಞಾನದ ಸ್ವರೂಪದಂಥ ತಾತ್ವಿಕ ಚಿಂತನೆಗಳೊಡನೆ ತೀವ್ರವಾದ ಭಾಷೆಯಲ್ಲಿ ಡಾಂಬಿಕತೆ, ಜಾತೀಯತೆಗಳನ್ನು ಟೀಕಿಸುತ್ತಾನೆ.
ಅಮರಗುಂಡದ ಮಲ್ಲಿಕಾರ್ಜುನ ತಂದೆ
ಕಾಲ ಸು. 1160. ಇಂದಿನ ತುಮಕೂರು ಜಿಲ್ಲೆಯ ಗುಬ್ಬಿಯವನು ಇರಬಹುದು ಎಂಬ ಊಹೆ ಇದೆ. ಇವನ 2 ವಚನಗಳು ದೊರೆತಿವೆ. ದೇಹವನ್ನೇ ಪಟ್ಟಣವೆಂದು ಕಲ್ಪಿಸಿಕೊಂಡು ದೇಹ, ಮನಸ್ಸು, ಆತ್ಮಗಳ ರಕ್ಷಣೆಯ ಬಗ್ಗೆ ಹೇಳಿರುವುದು ಕುತೂಹಲಕರವಾಗಿದೆ.
ಅಮುಗಿದೇವಯ್ಯ
ಕಾಲ, ಸು. 1160. ಸ್ಥಳ: ಸೊಲ್ಲಾಪುರ. ಬಟ್ಟೆ ನೇಯುವ ಕಾಯಕದವನು. ವರದಾನಿ ಈತನ ಹೆಂಡತಿ. ಮಹಾರಾಷ್ಟ್ರದ ಪುಳಜೆಯಲ್ಲಿ ದೊರೆತ ಶಾಸನಗಳಲ್ಲಿ ಈತನ ಪ್ರಸ್ತಾಪವಿದೆ. ಯಾದವ ಅರಸ ಸಿಂಘಣನು ಆಮುಗಿದೇವಯ್ಯನನ್ನು ಗೌರವಿಸಿದ ಪ್ರಸ್ತಾಪ ಶಾಸನದಲ್ಲಿದೆ. ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನನಿಂದ ತನ್ನ ಮನೆಯ ವಸ್ತುಗಳ ಗಂಟನ್ನು ಹೊರಿಸಿಕೊಂಡು ಹೋದ, ಸಿದ್ಧರಾಮನಿಗೆ ಬುದ್ಧಿ ಕಲಿಸಿದ ಕಥೆ ಕಾವ್ಯ, ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ಈತನ 30 ವಚನಗಳು ದೊರೆತಿವೆ.
ಅಮುಗೆ ರಾಯಮ್ಮ
ಕಾಲ, ಸು. 1160. ಊರು: ಸೊಲ್ಲಾಪುರ. ವರದಾನಿಯಮ್ಮ ಈಕೆಯ ಇನ್ನೊಂದು ಹೆಸರು, ಅಮುಗೆದೇವಯ್ಯನ ಹೆಂಡತಿ, ಗಂಡನೊಡನೆ ಕಲ್ಯಾಣಕ್ಕೆ ಹೋಗಿದ್ದಳು, ನಂತರ ಅವನೊಡನೆ ಪುಳಜೆಗೆ ಹಿಂದಿರುಗಿದಳು. ಈಕೆಯ 115 ವಚನಗಳು ದೊರೆತಿವೆ. ಆಚಾರಗಳನ್ನು ಕುರಿತ ವಿವರಣೆ, ತೀಕ್ಷ್ಣವಾದ ಸಮಾಜ ವಿಮರ್ಶೆ ಈಕೆಯ ವಚನಗಳಲ್ಲಿ ಕಾಣುವ ಸಂಗತಿಗಳು.
ಅರಿವಿನ ಮಾರಿತಂದೆ
ಕಾಲ, ಸು. 1160. ಅರಿವಿನ ಸ್ವರೂಪದ ಚರ್ಚೆ ಈತನ ಮುಖ್ಯ ಆಸಕ್ತಿ. ಈತನ 309 ವಚನಗಳು ದೊರೆತಿವೆ. ಗುರು, ಲಿಂಗ, ಜಂಗಮ ಮೊದಲಾದ ಪಾರಿಭಾಷಿಕಗಳ ಅರ್ಥವನ್ನು ಕುರಿತ ಚಿಂತನೆ ಈತನಲ್ಲಿದೆ. ಅನೇಕ ರಚನೆಗಳು ಬೆಡಗಿನ ವಚನಗಳ ರೂಪದಲ್ಲಿವೆ.
ಅಲ್ಲಮಪ್ರಭುದೇವರು
ಕಾಲ, ಸು. 1160. ಊರು: ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ. ಇವನ ಬದುಕನ್ನು ಕುರಿತು ಹರಿಹರ ಮತ್ತು ಚಾಮರಸ ಎರಡು ಬೇರೆ ಬೇರೆಯ ರೀತಿಯ ಕಥೆಗಳನ್ನು ಹೇಳಿದ್ದಾರೆ. ಅಲ್ಲಮನ ತಂದೆ ನಿರಹಂಕಾರ, ತಾಯಿ ಸುಜ್ಞಾನಿ, ಗುರು ಅನಿಮಿಷ. ಇವು ಕಲ್ಪಿತವಾದ ಹೆಸರುಗಳಾಂತೆ ತೋರುತ್ತವೆ. ತಂದೆ ‘ನಾಗವಾಸಾಧಿಪತಿ’. ಅಲ್ಲಮ ದೇವಸ್ಥಾನದಲ್ಲಿ ಮದ್ದಳೆಯನ್ನು ನುಡಿಸುತ್ತಿದ್ದ. ಅವನನ್ನು ಕಾಮಲತೆ ಎಂಬ ಹೆಣ್ಣು ಮೆಚ್ಚಿ ಮದುವೆಯಾದಳು. ಅವಳು ಜ್ವರಬಾಧೆಯಿಂದ ತೀರಿಕೊಂಡಳು. ತಾನೂ ಸಾಯಲು ಬಯಸಿದ ಅಲ್ಲಮ ಗುಹೆಯನ್ನು ಪ್ರವೇಶಿಸಿದಾಗ ಅಲ್ಲಿ ಅನಿಮಿಷನ ದರ್ಶನವೂ ದೀಕ್ಷೆಯೂ ದೊರೆಯಿತು ಅನ್ನುವುದು ಹರಿಹರ ತನ್ನ ರಗಳೆಯಲ್ಲಿ ಹೇಳುವ ಕಥೆ. ಅಲ್ಲಮನು ಪರಮ ವಿರಾಗಿ. ಅವನನ್ನು ಮೆಚ್ಚಿಬಂದ ಕಾಮಲತೆಯನ್ನು ಸೋಲಿಸಿ ಗೆದ್ದ ಎಂಬುದು ಚಾಮರಸ ‘ಪ್ರಭುಲಿಂಗಲೀಲೆ’ಯಲ್ಲಿ ಹೇಳುವ ಕಥೆ. ಅಲ್ಲಮ ದೇಶಸಂಚಾರಿಯಾಗಿ ಅನೇಕ ಸಾಧಕರನ್ನು ಭೇಟಿಯಾಗಿ, ಅವರೊಡನೆ ಸಂವಾದ ನಡೆಸಿ ಮಾರ್ಗದರ್ಶನ ಮಾಡುತ್ತ ಕಲ್ಯಾಣಕ್ಕೆ ಬಂದು ಅಲ್ಲಿನ ಅನುಭವ ಮಂಟಪದ ಮುಖ್ಯಸ್ಥನಾಗಿ, ನಂತರ ಶ್ರೀಶೈಲಕ್ಕೆ ತೆರಳಿ ಮತ್ತೆ ಮರಳಿದ್ದನ್ನು ‘ಶೂನ್ಯಸಂಪಾದನೆ’ಗಳು ಹೇಳುತ್ತವೆ. ಅಲ್ಲಮನ 1670 ವಚನಗಳು ದೊರೆತಿವೆ. ಇವುಗಳಲ್ಲಿ ಹನ್ನೆರಡನೆಯ ಶತಮಾನದ ವೈಚಾರಿಕ ವಾಗ್ವಾದದ ಚರಿತ್ರೆಯನ್ನು ಕಾಣಬಹುದೆಂದು ಸಂಸ್ಕೃತಿ ಚಿಂತಕರು ಭಾವಿಸುತ್ತಾರೆ. ಅಲ್ಲಮನನ್ನು ಕುರಿತ ದೊಡ್ಡಾಟ, ಬಯಲಾಟಗಳಿವೆ. ಅಲ್ಲಮನ ಸಮಾಧಿಸ್ಥಳವೆಂದು ಗುರುತಿಸುವ ಇಪ್ಪತ್ತಕ್ಕೂ ಹೆಚ್ಚು ಸ್ಥಳಗಳು ಕರ್ನಾಟಕದಲ್ಲಿವೆ. ಕವಿ ದರಾ ಬೇಂದ್ರೆಯವರು ಅಲ್ಲಮನನ್ನು ಕನ್ನಡ ಸಂಸ್ಕೃತಿಯ ನಾಲ್ಕು ನಾಯಕರತ್ನರಲ್ಲಿ ಒಬ್ಬನು ಎಂದಿದ್ದಾರೆ. ಅಲ್ಲಮ, ನಾಗಚಂದ್ರ ಚಿತ್ರಿಸಿದ ರಾವಣ, ಕುಮಾರವ್ಯಾಸನ ಕೃಷ್ಣ, ರತ್ನಾಕರ ಚಿತ್ರಿಸಿದ ಭರತ ಚಕ್ರವರ್ತಿ ಇವರು ನಾಲ್ಕು ಜನ ಕನ್ನಡ ಬದುಕಿನ ನಾಲ್ಕು ಸಾಧ್ಯತೆಗಳನ್ನು ತೋರಿದವರು ಎನ್ನುತ್ತಾರೆ. ಅನುಭಾವ, ಆಧ್ಯಾತ್ಮಗಳ ಚಿಂತನೆ ಅಲ್ಲಮ ವಚನಗಳ ಮುಖ್ಯ ವಸ್ತು. ಅನಿರೀಕ್ಷಿತವಾದ ಅರ್ಥಗಳ ನಿರ್ಮಾಣ, ಮತ್ತು ಅರ್ಥಗಳ ನಿರಾಕರಣೆ ಅಲ್ಲಮನ ದಾರಿ. ಉಜ್ವಲವಾದ ರೂಪಕಗಳನ್ನು ಬಳಸಿ ಅವನು ಹೇಳುವ ಮಾತುಗಳು ವ್ಯಕ್ತಿ ವಿಕಾಸ, ಧರ್ಮಚಿಂತನೆ, ಸಂಸ್ಕೃತಿ ಚಿಂತನೆಗಳ ದೃಷ್ಟಿಯಿಂದ ಮುಖ್ಯವಾಗಿವೆ.
ಅವಸರದ ರೇಕಣ್ಣ
ಕಾಲ ಸು. 1160. 105 ವಚನಗಳು ದೊರೆತಿವೆ. ತತ್ವಚಿಂತನೆ ಇವನ ಮುಖ್ಯ ಆಸಕ್ತಿ. ಬೆಡಗಿನ ವಚನಗಳ ಮಾರ್ಗಕ್ಕೆ ಒಲಿದವನು.
ಅಶ್ವಥರಾಮ
-----