ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನುವನರಿವನ್ನಕ್ಕ ಅರ್ಚನೆ, ಪುಣ್ಯವನರಿವನ್ನಕ್ಕ ಪೂಜೆ, ಶರೀರವುಳ್ಳನ್ನಕ್ಕ ಸುಖದುಃಖವ ಸಂತಾಪಿಸಬೇಕು. ತೆಪ್ಪದಲ್ಲಿ ನಿಂದು ಒತ್ತಿ ಹೊಳೆಯ ದಾಟುವಂತೆ. ಕ್ರೀಶುದ್ಧವಾದಲ್ಲಿ ಜ್ಞಾನದ ಗೊತ್ತು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅಂಧಕಾರವೆಂಬ ಮನೆಯ ಬಾಗಿಲಲ್ಲಿ ಆರಂಗದ ಕರಡಿ ಕಟ್ಟಿ ಮೂರಂಗದ ಕೋಡಗ ಏಡಿಸಿ ಕಾಡುತ್ತಿದೆ. ಮೀರಿದೆನೆಂಬವರೆಲ್ಲರು ಕರಡಿಯ ಗಿಲಗಿನಲ್ಲಿ ಸತ್ತು, ಕೋಡಗದ ಚೇಷ್ಟೆಯಲ್ಲಿ ಸಿಕ್ಕಿ, ಬೇಡ ನಿಮಗೆ ಆರೂಢದ ಮಾತು. ಇಂತಿವ ಮೀರಿ ಅರಿದವಂಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
--------------
ಅರಿವಿನ ಮಾರಿತಂದೆ
ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ ಗುರುಲಿಂಗಜಂಗಮದ ಪೂಜೆಯ ಮಾಡಬೇಕು. ನಾಮರೂಪು ಎಂಬನ್ನಕ್ಕ ಉಭಯವನರಿಯಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು. ಆ ರಂಜನೆಯಂತೆ ಚಿತ್ತದ ಕಲೆ ಚಿತ್‍ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ. ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ ಗೊತ್ತಿನಲೈದಾನೆ. ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು. ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂಗವರಿಯದೆ ಲಿಂಗವಿದ್ದಲ್ಲಿಯೆ ಸಂಗವ ಮಾಡಿ, ಹಿಂದು ಮುಂದಳ ಸಂದೇಹವ ಮರೆಯಬೇಕು. ಅಂಗವರತಲ್ಲಿಯೆ ಲಿಂಗವ ಮರೆಯಿತ್ತು. ಸೆಲೆಯಿಲ್ಲದ ಬಾವಿಯ ತೋಡಿ ಸಂದೇಹಕ್ಕೊಳಗಾಹನಂತಾಗಬೇಡ. ಉಭಯವು ರೂಪಾಗಿದ್ದಲ್ಲಿ ಅರಿ ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಅಂಗವ ಮರೆದು ಲಿಂಗವನರಿಯಬೇಕೆಂಬರು, ಕರಣಂಗಳರತು ಘನಲಿಂಗವನರಿಯಬೇಕೆಂಬರು. ಅದು ನಾನಿಕ್ಕಿದ ತಡೆ ಕೇಳಿರಣ್ಣಾ. ಆಕಾಶ ಬಯಲಾದಡೆ ಮುಗಿಲು ರೂಪ ತೋರಿ ಅಳಿವ ಪರಿಯಿನ್ನೆಂತೊ? ನಕ್ಷತ್ರ ಚಂದ್ರ ಸೂರ್ಯಾದಿಗಳು ಗ್ರಹ ಪ್ರವರ್ತನವಹ ಪರಿಯಿನ್ನೆಂತೊ? ಅವು ವಾಯುಮಯ ಆಧಾರವಾಗಿ ತೋರುತ್ತಿಹ ನೆಮ್ಮುಗೆಯ ಇರವು. ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು, ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು. ಹೀಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ ಉಭಯದ ಅಬ್ಥಿಸಂದ್ಥಿಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಸು ಆಲಯವ ಹಲವ ಕಟ್ಟಿಸಿದಂತೆ, ಶರೀರದಲ್ಲಿ ಆತ್ಮನು ಹಲವು ನೆಲೆವುಂಟೆಂದು ತಿರುಗುತ್ತಿಹ ಭೇದವಾವುದು ಹೇಳಿರಯ್ಯಾ? ಆ ಘಟದೊಳಗಳ ಭೇದ: ಅಸು ಹಿಂಗಿದಾಗ ಘಟವಡಗಿತ್ತು, ಅರಸಿಲ್ಲದಾಗ ಆಲಯ ದೆಸೆಗೆಟ್ಟಿತ್ತು. ಅಳಿವುದೊಂದು, ಉಳಿದಿಹಲ್ಲಿ ಕಾಬುದೊಂದೆ ಭೇದ, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ಅಂಬು ಅಂಬುಜದು[ಭ]ಯ[ದ] ಸಂಗದಲ್ಲಿ ನಿಃಸಂಗ ಬೆಳಗು ತೋರುತ್ತಿದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು. ಅದೆಂತೆಂದಡೆ: ಸತಿಪುರುಷರಿಗೆ ಸಂಯೋಗವಲ್ಲದೆ, ಅಂಗಹೀನಂಗೆ ಹಿಂಗದ ನವರಸವುಂಟೆ ಅಯ್ಯಾ? ಇಂತೀ ಲಿಂಗಬಾಹ್ಯಂಗೆ ವಿಭೂತಿಯ ಪಟ್ಟವೆಂದು ಕಟ್ಟಿದ ಗುರು ಕುಂಭೀಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ಅಪ್ಪು ಚಿಪ್ಪಿನಲ್ಲಿ ನಿಂದು [ಚಿಪ್ಪ]ವ ಬೆರಸದಂತೆ, ಮೃತ್ತಿಕೆ ತೇಜದಲ್ಲಿ ಬೆಂದು ಪೃಥ್ವಿಯ ಕೂಡದಂತೆ, ಹಾಗಿರಬೇಕು ಭಕ್ತವಿರಕ್ತನ ಭೇದ, ಇಷ್ಟ ಪ್ರಾಣದಿರವು. ಇದು ನಿಶ್ಚಯ ಲಿಂಗಾಂಗ. ಕಾಯ ಭಕ್ತ, ಪ್ರಾಣ ಜಂಗಮವಾದ ಸ್ವಾನುಭಾವಸಿದ್ಧಿ. ಈ ತೆರ ತಾನೆ ಸದಾಶಿವಮೂರ್ತಿಲಿಂಗವು.
--------------
ಅರಿವಿನ ಮಾರಿತಂದೆ
ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ? ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ? ಮರೆವುದು ಅರಿವುದು ಎರಡುಳ್ಳನ್ನಕ್ಕ, ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಅಪ್ಪು ಆಧಾರವಾಗಿ, ಕಮಠ ಶೇಷ ನೆಮ್ಮುಗೆಯಿಂದ ಪೃಥ್ವಿ ಆ[ಧೇಯ]ವಾಗಿ ನಿಂದು ತೋರುವಂತೆ, ವಸ್ತುವಿನ ಹಾಹೆಯಿಂದ ಕಾಯ ನಿಂದು ತೋರುತ್ತಿಹುದೇ ದೃಷ್ಟ. ಒಂದಕ್ಕೊಂದು ನೆಮ್ಮಿ ಕಾಣುವ ಅರಿವಿಂಗೆ ಕುರುಹು ಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅರಿವ ಮರೆದ ಪೂಜೆ ಸ್ಥಾವರಲಿಂಗಕ್ಕೆ ಸರಿ ಅರಿಯದೆ ಮರೆಯದೆ ಕರಿಗೊಂಡ ನೆನಹು, ಅದು ಪರಿಪೂರ್ಣ ಪ್ರಾಣಲಿಂಗ ಸಂಬಂಧ. ಇಂತಿವರಲ್ಲಿ ಭೇದಂಗಳನರಿತು ಪರತತ್ವ ಕೊಡುವ ಪರಮಗುರುವಾಗಬೇಕು, ಸದಾಶಿವಮೂರ್ತಿಲಿಂಗವು ತಾನಾಗಬೇಕು.
--------------
ಅರಿವಿನ ಮಾರಿತಂದೆ
ಅಗ್ನಿ ಅಂಗವಾಗಿ, ವಾಯು ಪ್ರಾಣವಾಗಿ, ಉಭಯ ಸಂಗದಂತಿರಬೇಕು, ಅಂಗಲಿಂಗ ಪ್ರಾಣಯೋಗ ಸಂಬಂಧ. ಅಗ್ನಿ ಮರೆದರೆ ವಾಯುವೆಚ್ಚರಿಕೆಯ ಮಾಡುವಂತೆ, ಅಗ್ನಿ ಮುಟ್ಟಿದ ಕಾಷ್ಟದೊಳಗಾದ ದ್ರವ್ಯಂಗಳು,ಹಿಂದಳ ನಾಮವುಂಟೆ? ವಸ್ತುಲೇಪವಾದ ಅಂಗಪ್ರಾಣ ಬೇರೊಂದಿದಿರಿಡಲಿಲ್ಲ. ಅಂಗಭಾವ ನಿಶ್ಚಯವಾಯಿತ್ತು, ಸದಾಶಿವಮೂರ್ತಿಲಿಂಗದಲ್ಲಿ ಲೀಯವಾಗಲಿಕ್ಕೆ.
--------------
ಅರಿವಿನ ಮಾರಿತಂದೆ
ಅರುಣಕಿರಣ ಮಂದಿರದ ಕಂಡಿಯಲ್ಲಿ ತೋರುತ್ತದೆ, ಆ ಘಟದಲ್ಲಿ ಎಡೆಯಾಡುವ ``ಅಣೋರಣೀಯಾನ್ ಎಂಬಂತೆ, ಅಂಗಮಧ್ಯದ ಚಿತ್ತದ ದ್ವಾರದಲ್ಲಿ ಅರಿದಡೆ ತಾಕುವ ಜ್ಞಾನ. ``ಅಣೋರಣಿಯಾನ್ ಎಂಬುದರಿದ ತನ್ನಯ ಅರಿವು ನಿಂದ ಘಟದಲ್ಲಿ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು, ಮರೆವಾಗ ಆ ತನುವಿನಲ್ಲಿದ್ದೆ ಮರೆಯಿತ್ತು. ಅರಿವು ಮರವೆ ಎರಡಾಯಿತ್ತು, ಉಭಯವ ತಾಳಿದ ಘಟವೊಂದಾಯಿತ್ತು, ಇಂತೀ ಭೇದ. ವಿಷಬೇರಿನಂತೆ ಸಂಚಾರಕ್ಕೆ ಒಳಗಾದುದು ವಿಷಮಯವಾಯಿತ್ತು. ಗೌಪ್ಯಕೊಳಗಾದುದು ಅಮೃತಮಯವಾಯಿತ್ತು . ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ, ಸಂಚಾರ ನಿಲೆ ಆತ್ಮ ನಿರ್ಮುಕ್ತವಾದಲ್ಲಿಯೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಅಂಗದ ಆಪ್ಯಾಯನವ ಆತ್ಮನರಿವಂತೆ, ಆತ್ಮನ ಸುಖದುಃಖವ ಅಂಗ ತಾಳುವಂತೆ, ಅಂಗಕ್ಕೂ ಆತ್ಮಕ್ಕೂ ಅನ್ಯಭಿನ್ನವಿಲ್ಲ. ಪೂಜಿಸುವ ಭಕ್ತ, ಪೂಜಿಸಿಕೊಂಬ ವಸ್ತು ಉಭಯವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಅಕ್ಷಿಯ ಮಧ್ಯದ ಕಾಳಿಕೆಯ ನಟ್ಟನಡುವಳ ಸೂತ್ರ[ದೋ]ರುವ ಚಿನ್ನ ಉಡುಗಿದ ಮತ್ತೆ ಅಕ್ಷಿಯ ತೆರಪು ಎಷ್ಟಾದಡೇನು? ಆ ತೆರದಂತೆ, ¯õ್ಞಕಿಕದಲ್ಲಿ ಮಾಡುವ ವರ್ತಕ ವಸ್ತುವನರಿಯದ ಜ್ಞಾನ ಧನಕನಕ ವಾಜಿವಾಹನಂಗಳಿಂದ ಲೇಪನ ಅಂಬರ ತಸ್ಯಾಂತರ ನಿಳಯಂಗಳಿಂದ ಕೀರ್ತಿಭೂಷಣಕ್ಕೆ ಮಾಡಿದಡೇನು? ಇದನಳಿದು ಅದನರಿತು ಉಭಯ ತನ್ಮಯ ನಷ್ಟವಾಗಿ ಅದರ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅನಲ ನಂದಿದ್ದಲ್ಲಿ ವಾಯು ಸಂಗವಲ್ಲದೆ, ದೀಪದ ಅಂಗಕ್ಕೆ ಬಂದು ನಿಂದಲ್ಲಿ ವಾಯುಸಂಗ ನಾಸ್ತಿಯಾಗಿರಬೇಕು. ಹಿಡಿವಲ್ಲಿ ಆ ಭೇದ, ಒಡಗೂಡುವಲ್ಲಿ ಈ ಭೇದ. ಇಂತೀ ತೊಡಿಗೆಯನರಿಯಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅರಿದು ಮಾಡುವುದು ಗುರುಭಕ್ತಿ, ಅರಿದು ಮಾಡುವುದು ಲಿಂಗಭಕ್ತಿ, ಅರಿದು ಮಾಡುವುದು ಜಂಗಮಭಕ್ತಿ. ಅರಿಕೆಯಿಂದ ಕಾಬುದು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ, ನಿಜಸ್ವರೂಪ ನಿಃಕಲ[ವಸ್ತು ಜಗಲೀ]ಲಾಭಾವಿಯಾಗಿ ತ್ರಿಗುಣಾತ್ಮಕವಾದ ಭೇದಪೂರ್ವಕ ಮುಂತಾದ ಷಡ್ದರ್ಶನದಲ್ಲಿ ವಿವರಂಗಳಿಗೆ, ಶೈವ ವೈಷ್ಣವ ಉಭಯಂಗಳಲ್ಲಿ ಶೈ[ವರಾರು], ವೈಷ್ಣವರಾರು, ಇಂತೀ ಉಭಯರಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು, ಉಭಯನಾಮ ಕುಲಲಯ[ವಹಲ್ಲಿ] ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ ಶರೀರದಹನ ಮುಖವೆಲ್ಲವೂ ರುದ್ರತತ್ವಾಧೀನವಾಗಿಹುದು. ಶರೀರ ಮುಖ ಸಮಾನಧಿ ಆಧೀನಫವಾಗಿಹುದೆಲ್ಲವೂ ವಿಷ್ಣುಪಕ್ಷವಾಗಿಹುದು. ಇಂತೀ ಉಭಯಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು. ಇಂತೀ ಉಭಯವ ಮರೆತಲ್ಲಿ ಉತ್ತ[ರಕಕ್ಷೆಯಾಗಿ]ಹುದು. ಇಂತೀ ಭೇದಂಗಳರಿತು ಹೊರಗಾಗಿ ನಿಂದಲ್ಲಿ, ಸದಾಶಿವಮೂರ್ತಿಲಿಂಗದರಿವು ಒಳಗಾಯಿತ್ತಾಗಿಹುದು.
--------------
ಅರಿವಿನ ಮಾರಿತಂದೆ
ಅಜ ಕೊಂಡ ಗ್ರಾಸದ ಮಲವ ಕುಕ್ಷಿಯಲ್ಲಿ ಹೊಕ್ಕು ಉರುಳಿಸಿದವರುಂಟೆ ಅಯ್ಯಾ? ಚೂರ್ಣಶಿಲೆಗೆ ಶ್ವೇತವ ಹೂಸಿದವರುಂಟೆ ಅಯ್ಯಾ? ಮುಳ್ಳಿಗೆ ಮೊನೆಯ, ಎಳ್ಳಿಗೆ ಎಣ್ಣೆಯ ತಂದಿರಿಸಿದವರುಂಟೆ ಅಯ್ಯಾರಿ ಅವು ತಮ್ಮ ಗೋತ್ರದ ವರ್ತನದ ಇರವು. ಇವಕ್ಕಿಂದವು ಕಡೆಯೆ? ಗುರುವಾದಡೆ ಗುರುಸ್ಥಲಕ್ಕೆ ತಪ್ಪದಂತಿರಬೇಕು. ಜಂಗಮವಾದಡೆ ತನ್ನಯ ಇರವು ಇದಿರಿನ ಇಂಗಿತವನರಿದು, ಅಂಬುಜಪತ್ರದಲ್ಲಿದ್ದ ಬಿಂದುವಿನಂತೆ ಅಲೇಪವಾಗಿರಬೇಕು. ಭಕ್ತನಾಗಿದ್ದಲ್ಲಿ ಉಭಯದ ಮಾರ್ಗವ, ಗುರುವಿನ ಚೊಕ್ಕೆಯವ, ಆ ಜಂಗಮದ ಅಪೇಕ್ಷೆಯ ಇದಿರಿಟ್ಟು ಕಾಣಿಸಿಕೊಂಡು, ಅವ ತಾನರಿಯದಂತಿರಬೇಕು. ಅದು ಭಕ್ತಿಮಾರ್ಗಕ್ಕೆ ತಲೆದೋರದ ಇರವು. ಆ ಗುಣ ಸದ್ಗತಿಯ ಸಾಧನ, ಸದಾಶಿವಮೂರ್ತಿಲಿಂಗದ ಅರಿಕೆ ತಾನೆ.
--------------
ಅರಿವಿನ ಮಾರಿತಂದೆ