ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಮಂಜಿನ ಉದಕ ವಾಯುಸಂಚಾರ ಮೋಡವಿಲ್ಲದೆ ಕರೆವಂತೆ ಮನಪ್ರಕೃತಿ ಸಂಚಾರ ಹಿಂಗಿ ಕಲೆದೋರದ ಕುರುಹಿನಲ್ಲಿ ಸಲೆ ನಿಂದು ಉಭಯವಳಿದು ಉಳುಮೆ ತಲೆದೋರಿ ಕಲೆ ಅಳಿದು ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು? ವರ್ತನ ಶುದ್ದವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವುದು? ತ್ರಿಕರಣ ಶುದ್ಧವಿಲ್ಲದ ಮಾಟ ದ್ರವ್ಯದ ಕೇಡು, ಭಕ್ತಿಗೆ ಹಾನಿ. ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು, ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ಮಾತಿನ ಮಾಲೆಯ ಕಲಿತು ಹೋರುವಾತ ಗುರುವಲ್ಲ; ಘಾತಕತನದಿಂದ ಮಾಡುವಾತ ಶಿಷ್ಯನಲ್ಲ. ಅಂಗದ ತಿಮಿರವ ಆತ್ಮನರಿದು ಕರದಲ್ಲಿ ಪರಿಹರಿಸುವಂತೆ, ಆರಿಂದ ಬಂದಡೂ ಉಭಯದ ಕೇಡು. ಗುರುಶಿಷ್ಯ ಶುದ್ಧತೆಯಾಗಿಲ್ಲದೆ ಸದಾಶಿವಮೂರ್ತಿಲಿಂಗವನರಿಯಬಾರದು.
--------------
ಅರಿವಿನ ಮಾರಿತಂದೆ
ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು, ಕಲ್ಲಿನೊಳಗೆ ಕಾಂತಿ ಹುಟ್ಟಿ [ಕಲ್ಲ] ಬಿಟ್ಟಂತಿರಬೇಕು, ಕ್ರೀ ಭಾವದಲ್ಲಿ ಅರಿವು ನೆಲೆಗೊಂಡು. ಸಾಳಿಸಸಿಯ ತುದಿಯಲ್ಲಿ ತುಷ ಮೇಲುಗಳೆದು ನಿಂದಂತೆ, ಕ್ರೀ ನಿಂದು ಅರಿವು ತಲೆದೋರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಮಾಡುವ ಭಕ್ತನ ವಿವರ: ತ್ರಾಸಿನ ನಾಲಗೆಯಂತೆ ಹೆಚ್ಚು ಕುಂದನೊಳಕೊಳ್ಳದೆ, ಗುರುಲಿಂಗಜಂಗಮ ತ್ರಿವಿಧಮುಖವು ಒಂದೆಯೆಂದು ಪ್ರಮಾಳಿಸಿ, ಮಾಡುವ ದ್ರವ್ಯ ಕೇಡಿಲ್ಲದಂತೆ ಮಾಡುವುದು ಸದ್ಭಕ್ತಿಸ್ಥಲ. ಹೀಗಲ್ಲದೆ ಗುರುವಿನ ಆಢ್ಯಕ್ಕಂಜಿ, ಜಂಗಮದ ಸಮೂಹದ ವೆಗ್ಗಳವ ಕಂಡು ಅಂಜಿ ಮಾಡಿದಡೆ, ಭಕ್ತಿಗೂಣೆಯ, ದ್ರವ್ಯದ ಕೇಡು, ಸತ್ಯಕ್ಕೆ ಹೊರಗು ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ಮಠದಲ್ಲಿ ತೋರುವ ಜ್ಯೋತಿ ಅಂಗ ಚಿಕ್ಕಿತ್ತಾಗಿ, ಬೆಳಗು ಪರಿಪೂರ್ಣವಾಗಿ ನಿಳಯವ ತುಂಬಿದಂತೆ ಘಟದೊಳಗಳ ಸ್ವಯಂಜ್ಯೋತಿ ಸರ್ವಾಂಗ ಪರಿಪೂರ್ಣವಾಗಿ ಬೆಳಗುತ್ತಿಹ ಅರಿವಾತ್ಮನ ಭೇದವ ಅರಿತಲ್ಲಿಯೆ ಸದಾಶಿವಮೂರ್ತಿಲಿಂಗ ನೆಲೆಗೊಂಡುದು.
--------------
ಅರಿವಿನ ಮಾರಿತಂದೆ
ಮೂಲದ ಜ್ವಾಲೆಯೆತ್ತಿ, ಕಮಲವ ತಾಳಿ, ಮೇಲೊಂದು ಕೊಡನಿಪ್ಪುದು. ಆ ಕೊಡನುಕ್ಕಿ ಅಮೃತವನುಣ್ಣಬೇಕೆಂಬ ಯೋಗಿಗಳು ಕೇಳಿರೋ, ಅದು ಶರೀರದ ಮಾತಲ್ಲ. ಮೂಲದ ದ್ವಾರವೆಂಬುದು ಬಂದ ಬಟ್ಟೆ, ಕೊಡನೆಂಬುದು ಶರೀರ, ಆ ಶರೀರವನುಂಟು ಮಾಡದೆ ಮೇಲಿಪ್ಪ ರಂಧ್ರಪದವನೊದೆದು ಭಾವಕ್ಕೆ ಬಾರದ ಪರಿಯಲ್ಲಿ ನಿಂದುದು ಅಮೃತಸೇವನೆ. ಆ ಭಾವದಲ್ಲಿ ಅರಿದು ನಿಂದು ತನ್ನಯ ಕುರುಹಿನ ಸುಖವ ವೇಧಿಸಿ ಪರಿಭ್ರಮಣಕ್ಕೆ ಸಿಕ್ಕದೆ ನಿಂದ ನಿಜವು ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಮಣಿಯ ವೆಜ್ಜದಲ್ಲಿ ಎಯ್ದುವ ರಜ್ಜು, ಮೊನೆ ಮಣಿದಲ್ಲಿ ನಿಂದಿತ್ತು. ಅದರಿರವು ಲಕ್ಷಿಸುವ ಲಕ್ಷ್ಯದಲ್ಲಿ ಅಲಕ್ಷ್ಯಮಯ ಅಭಿಮುಖವಾಗಲಾಗಿಸಿಕ್ಕಿತ್ತು, ಮಾಡುವ ಸತ್ಕ್ರೀ ವಸ್ತುವ ಮುಟ್ಟಲಿಲ್ಲದೆ ಇಂತೀ ಯುಗಳ ನಾಮವಳಿದು ಲಕ್ಷ್ಯಅಲಕ್ಷ್ಯಕ್ಕೆ ಬೆಚ್ಚಂತಿರಬೇಕು. ಬೆಸುಗೆಯ ನಡುವೆ ಬೆಳಗುತ್ತದೆ, ಸದಾಶಿವಮೂರ್ತಿಲಿಂಗ.
--------------
ಅರಿವಿನ ಮಾರಿತಂದೆ
ಮೂರು ಲೋಕವನೆಲ್ಲವ ಗಾಳಿಯಲ್ಲಿ ತೂರಿ ಬಂದ ಗುಂಗುರು ನುಂಗಿತ್ತು. ಮೂರು ಲೋಕದ ರಾಯರು ಕೂಡಿ ಗುಂಗುರ ಕೊಂದಹೆನೆಂದಡೆ, ಆರಿಗೂ ಅಸಾಧ್ಯ. ಆ ಗುಂಗುರ ಬಾಯಲ್ಲಿ ಕತ್ತರಿವಾಣಿ, ಕಾಲಿನಲ್ಲಿ ಕಂಡೆಹ, ಅಂಡೆದಲ್ಲಿ ಕಾಳಕೂಟ, ಪಿಂಡವೆಲ್ಲವೂ ಅಸಿಯ ಬಳಗ. ಅದ ಕೊಂದು ನಿಂದವಗಲ್ಲದೆ ಸದಾಶಿವಮೂರ್ತಿಲಿಂಗದ ಬೆಳಗಿಲ್ಲ.
--------------
ಅರಿವಿನ ಮಾರಿತಂದೆ
ಮರನ ತಾಳೂದಕ್ಕೆ ಪೃಥ್ವಿ ಆಧಾರವಾಗಿ, ಶಾಖೆಯ ತಾಳೂದಕ್ಕೆ ಮರನಾಧಾರವಾಗಿ, ಲತೆಯ ತಾಳೂದಕ್ಕೆ ಶಾಖೆ ಆಧಾರವಾಗಿ, ಲತೆಯ ಬಿಡುಮುಡಿಯಲ್ಲಿ ಕುಸುಮತೋರಿ ಕುಸುಮದ ತೊಟ್ಟಿನಲ್ಲಿ ಕುಸುಮವಳಿದು, ಕಾಯಿ ಬಲಿದು ರಸ ಬಲಿದು ಹಣ್ಣಾದಂತೆ, ತೊಟ್ಟು ಬಿಡುವನ್ನಕ್ಕ ಕಾಯ ಶಿಲೆಯ ಪೂಜೆ, ಆತ್ಮ ಅರಿವಿನ ಪೂಜೆ. ಉಭಯಸ್ಥಲ ನಿರುತವಾಗಿ ಬಿಟ್ಟು ನಿಂದುದು ವಸ್ತುವಿನ ಉಳುಮೆ. ಆ ಉಳುಮೆ ಲೇಪವಾಗಿ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಮಹಾಪರಂಜ್ಯೋತಿಪ್ರಕಾಶವ ಕಂಡನಿಂದವರಲ್ಲಿ ಹೇಳಬಹುದೆ ? ಸ್ವಸ್ತ್ರೀಯ ವಿಷಯಸುಖಕ್ಕಿಂದವು ಕಡೆಯೆ ವಚನಾನುಭಾವ, ಸಮ್ಯಜ್ಞಾನ ತನ್ನ ತಾನರಿದವರಲ್ಲಿ ತಾನರಿದು, ಉಭಯವಲ್ಲದೆ ತ್ರಿವಿಧಭಿನ್ನವಿಲ್ಲದೆ ಇರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಮದ್ದ ಕೂಡಿ ತುಂಬಿದ ನಾಳಿಯಲ್ಲಿದ್ದ ಕಲ್ಲು ಆ ನಾಳಿಯ ಹೊದ್ದದೆ ಹೋದ ಪರಿಯ ನೋಡಾ. ಕಾಯ ಜೀವದ ಭೇದ, ಕಾಯವ ಬಿಟ್ಟು ಜೀವ ಎಯ್ದುವಾಗ ಆತ್ಮನ ಹೊರಡಿಸಿದ ಒಡೆಯನನ? ಸದಾಶಿವಮೂರ್ತಿಲಿಂಗವನೊಡಗೂಡು.
--------------
ಅರಿವಿನ ಮಾರಿತಂದೆ
ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ, ಅದಕ್ಕೆ, ಜಲತ್ಕಾರನೆಂಬ ಗಡಿಗೆ ಇದ್ದಿತ್ತು. ಅದರೊಳಗೆ ಮಧುರ ಮಾಂದಿರ ವಿಮಲ ಜಲತುಂಬಿ. ಒಂದಕ್ಕೊಂದು ಹೊದ್ದದೆ ಕುಂಭವೊಂದರಲ್ಲಿ ನಿಂದ ಭೇದವ ನೋಡಾ. ಆ ಗಡಿಗೆಯ ತೆಗೆವುದಕ್ಕೆ ಮಹದಾಕಾಶವನೇರುವುದಕ್ಕೆ ನೆಲೆಯಿಲ್ಲ. ನೆಲಹಿಂಗೆ ಮೊದಲಿಲ್ಲ, ಕುಂಭಕ್ಕಂಗವಿಲ್ಲ, ಒಳಗಳ ಭೇದವ ವಿವರಿಸಬಾರದು. ಇಂತೀ ಘಟಮಠ ಆಧಾರದಲ್ಲಿ ಪರಿಪೂರ್ಣನಾದೆಯಲ್ಲಾ, ಸದಾಶಿವಮೂರ್ತಿಲಿಂಗವೆ ಅವಿರಳನಾಗಿ.
--------------
ಅರಿವಿನ ಮಾರಿತಂದೆ
ಮೂಳಿಯ ಮೊದಲಿನಲ್ಲಿ ಮೂವರು ಮಕ್ಕಳು ಹುಟ್ಟಿ. ಒಬ್ಬ ಕಾಲಿನಲ್ಲಿ ಬಲ್ಲಿದ, ಒಬ್ಬ ಕೈಯ್ಯಲ್ಲಿ ಬಲ್ಲಿದ, ಒಬ್ಬ ಬಾಯಲ್ಲಿಬಲ್ಲಿದ. ಇಂತೀ ಮೂವರು ಮಕ್ಕಳು ಹೆತ್ತ ತಂದೆಯ ಆಳವಾಡುತ್ತಿರಲಾಗಿ, ಇವರು ಎನಗೆ ಮಕ್ಕಳಲ್ಲಾಯೆಂದು ಹಗೆಯೆಂಬುದನರಿದು, ಹಿರಿಯ ಮಗನ ಕಾಲ ಮುರಿದು, ನಡುವಳ ಮಗನ ಕೈಯ್ಯ ಮುರಿದು, ಕಿರಿಯ ಮಗನ ಬಾಯ ಮುಚ್ಚಿ ಗೋಣ ಮುರಿದು, ಅವರು ಹಿಂಗಿ ನಾ ಬದುಕಿದೆನೆಂದು ತ್ರಿವಿಧದ ಸಂದ ಬಿಟ್ಟು, ಸದಾಶಿವಮೂರ್ತಿಲಿಂಗದಲ್ಲಿಗೆ ಸಂದಿತ್ತು ಚಿತ್ತ.
--------------
ಅರಿವಿನ ಮಾರಿತಂದೆ
ಮುನ್ನವೆ ಮೂರ ಹರಿದು ಗುರುಚರವಾಗಿ ಬಂದಲ್ಲಿ ಇನ್ನು ಮೂರರಾಸೆಯೇಕೆ? ಆವ ಜೀವವು ತಮ್ಮ ಮಲವ ತಾವು ಮುಟ್ಟವಾಗಿ. ಬಿಟ್ಟುದ ಹಿಡಿವ ಮಿಟ್ಟೆಯ ಭಂಡರನೊಪ್ಪ, ಸದಾಶಿವಮೂರ್ತಿಲಿಂಗವು ನಿರ್ಧರವಿಲ್ಲದವರನೊಲ್ಲ.
--------------
ಅರಿವಿನ ಮಾರಿತಂದೆ
ಮಹಾವಿಕಾರ ರಣಮಯವಾದಲ್ಲಿ ಹರಿವ ಶೋಣಿತದಲ್ಲಿ ಒಂದು ನೊಣ ಹುಟ್ಟಿತ್ತು. ಕಾಲೊಂದು, ಅಂಗ ಮೂರು, ಹಾರುವ ರಟ್ಟೆ ಒಂದೆ. ಅದರ ನಾಲಗೆಯಲ್ಲಿ ನಾರಾಯಣ ಹುಟ್ಟಿ, ನೊಣ ಸತ್ತಿತ್ತು. ಬ್ರಹ್ಮನ ಇರವಾಯಿತ್ತು, ವಿಷ್ಣುವಿನ ಲೋಕವಾಯಿತ್ತು. ರುದ್ರನ ಕಪಾಲ ತುಂಬಿ , ಬುದ್ಧಿವಂತರೆಲ್ಲರು ಕಪಾಲದ ಕೂಳನುಂಡು ಬುದ್ಧಿವಂತರಾಗಿರಿ. ಎನಗಾ ಹೊದ್ದಿಗೆ ಬೇಡ, ಸದಾಶಿವಮೂರ್ತಿಲಿಂಗವಿದ್ದಂತೆಯೆ ಸಾಕು.
--------------
ಅರಿವಿನ ಮಾರಿತಂದೆ
ಮುನ್ನ ಬಯಲೆಂಬುದೇನೋ? ತನ್ನಲ್ಲಿ ತಾನಾದವಂಗೆ ಮುಂದು ಹಿಂದೆಂಬುದಿಲ್ಲ. ಸಂಗ ನಿಸ್ಸಂಗವೆಂಬುದು ನಿಂದಲ್ಲಿ, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಮೂಷಕ ಮಾರ್ಜಾಲ ಕೂಡಿ ಭೇಕನ ಕಂಡು ನೀತಿಯ ಕೇಳಿ, ಮೂಷಕನ ನೆರೆದಲ್ಲಿ ಅಳಿಯಿತ್ತು, ಮಾರ್ಜಾಲ ಮನೆಗೆ ಹೋಯಿತ್ತು. ನಾನೀನೆಂಬುದು ನಿಂದಿತ್ತು, ಸದಾಶಿವಮೂರ್ತಿಲಿಂಗವರಿತಲ್ಲಿ.
--------------
ಅರಿವಿನ ಮಾರಿತಂದೆ
ಮತಿಯಿಂದ ಕಾಬುದು ಚಿತ್ತದ ಹಂಗು, ಪೂಜೆಯಿಂದ ಕಾಬುದು ಪುಣ್ಯದ ಹಂಗು. ಉಭಯವನಳಿದು ಕಾಬುದಕ್ಕೆ, ಚಿತ್ತ ನೆಮ್ಮುವುದಕ್ಕೆ ಗೊತ್ತಿಲ್ಲ. ಏನೂ ಎನಬಾರದುದಕ್ಕೆ, ಸದಾಶಿವಮೂರ್ತಿಲಿಂಗವನರಿವುದಕ್ಕೆಠಾವ ಕೇಳಾರಿ
--------------
ಅರಿವಿನ ಮಾರಿತಂದೆ
ಮಹಾಮನೆಯೊಳಗೊಂದು ಮಂದಿರವಾಡ: ಅದರೊಳಗೆ ಹದಿನಾರು ಕೋಣೆ, ಒಂಬತ್ತು ಬಾಗಿಲು ಮುಚ್ಚಿ, ಒಂದು ಬಾಗಿಲು ತೆಗೆದಿಹುದು. ತೆಗೆದ ಬಾಗಿಲಲ್ಲಿ ಮೂರು ಮುಖದ ಸರ್ಪ, ಊಧ್ರ್ವಮುಖವಾಗಿ ತಿರುಗಾಡುತ್ತಿಹುದು. ಮಿಕ್ಕ ಆರು ಬಾಗಿಲಲ್ಲಿ ಮೂರು ಬಾಗಿಲು ಕೀಳಾಗಿ, ಕೀಳಿನೊಳಗೆ ಅಧೋಮುಖದ ಸರ್ಪವುಡುಗಿಹುದು. ಮೇಲಣ ಮೂರು ಬಾಗಿಲು ಊಧ್ರ್ವದ ತ್ರಿಗುಣದ ಸರ್ಪ ಬಾಲ ಮೊದಲು ತಲೆ ಕಡೆಯಾಗಿ ಎದ್ದು ನಿಂದಾಡುತ್ತಿರಲಾಗಿ, ವಿಶ್ವಮಯವೆಂಬ ಆಕಾಶದ ಹದ್ದು ಹೊಯಿದು ಎತ್ತಿತ್ತು, ಅದರೊಳಗೆ ಎರಡು ತಲೆಯ ಮರೆದು, ಒಂದು ತಲೆಯೆಚ್ಚತ್ತು, ಹದ್ದಿನ ಕೊಕ್ಕ ತಪ್ಪಿ, ಕಾಲುಗುರ ಹೆಜ್ಜೆಯ ಘಾಯವ ತಪ್ಪಿ ಗರಿಯ ಅಡುಹ ತೊಲಗಿಸಿ ಹಿಡಿಯಿತ್ತು. ಅಡಿಹೊಟ್ಟೆಯ ನೋಡಿಯೇರಿತ್ತು, ವಿಷ ಹದ್ದಿನ ಅಸುವ ಬಿಡಿಸಿತ್ತು, ಹದ್ದು ಹಾವು ಕೂಡಿ ಘಟಕರ್ಮಕ್ಕೊಳಗಾಯಿತ್ತು. ಕರ್ಮದ ಒಳಗಾದ ಜ್ಞಾನ ಸದಾಶಿವಮೂರ್ತಿಲಿಂಗವ ಮುಟ್ಟಿದುದಿಲ್ಲ.
--------------
ಅರಿವಿನ ಮಾರಿತಂದೆ
ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ, ಮರವೆಯಿಂದ ನಾರಸಿಂಹ ಶರೀರವ ಸೀಳಿಸಿಕೊಂಡ, ಮರವೆಯಿಂದ ರುದ್ರ ಅರ್ಧನಾರೀಶ್ವರನಾದ, ಮರವೆಯಿಂದ ನರಸುರಾದಿಗಳೆಲ್ಲರು ಮರಣಕ್ಕೊಳಗಾದರು. ಇದು ಕಾರಣ, ಅರಿದು ಉತ್ಪತ್ಯಕ್ಕೊಳಗಾಗದೆ, ಅರಿದು ಸ್ಥಿತಿಯ ಸುಖಕ್ಕೆ ಸಿಕ್ಕದೆ, ಅರಿದು ಮರಣಕ್ಕೊಳಗಾಗದೆ, ಅರಿವನರಿವರನರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಮಹಾಧರೆಯಲ್ಲಿ ಮನೆಯ ಕಟ್ಟುವುದಕ್ಕೆ, ಕಾವಿಲ್ಲದ ಕೊಡಲಿಯಲ್ಲಿ, ಹುಟ್ಟದ ಮರನ ತರಿದು, ಎತ್ತಿಲ್ಲ[ದೆ] ಏರಿನಲ್ಲಿ ಹೂಡಿ ತಂದವನಿವನಾರಣ್ಣಾ? ನಾನೆಂಬುದಕ್ಕೆ ಮೊದಲೆ ನಾಮ ನಷ್ಟವಾಯಿತ್ತು. ಸದಾಶಿವಮೂರ್ತಿಲಿಂಗ ಅಲ್ಲಿ ಸತ್ತು ಇಲ್ಲಿ ಹೆಣನಾಯಿತ್ತು.
--------------
ಅರಿವಿನ ಮಾರಿತಂದೆ
ಮಹಾಮಾಯವೆಂಬ ಶಕ್ತಿರೂಪಿನಲ್ಲಿ ತ್ರಿವಿಧಮೂರ್ತಿ ಜನಿಸಿದವು ಎಂಬುದ ತಾನರಿತಲ್ಲಿ, ತಾ ಪಿತನಾಗಿ ತ್ರಿವಿಧಮೂರ್ತಿ ಸುತರಾಗಿ ಬ್ರಹ್ಮನ ಉತ್ಪತ್ಯವ ಕೆಡಿಸಿ, ವಿಷ್ಣುವಿನ ಸ್ಥಿತಿಗೊಳಗಾಗದೆ, ರುದ್ರನ ಲಯದ ಬಾಯಲ್ಲಿ ಸಿಕ್ಕದೆ, ಮೀರಿದ ಘನವಸ್ತು ತಾನೆ, ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಮಾತಿಗೆ ಸಿಕ್ಕೆ, ಅವರ ನೀತಿಯ ಬಲ್ಲೆಯಾಗಿ, ಭಾವಕ್ಕೆ ಸಿಕ್ಕೆ, ಅವರ ಭ್ರಮೆಯ ಬಲ್ಲೆಯಾಗಿ, ಜಿಡ್ಡಿಗೆ ಸಿಕ್ಕೆ, ಅವರ ಬುದ್ಧಿಯ ಬಲ್ಲೆಯಾಗಿ. ಇಂತೀ ಭಾವಂಗಳಲ್ಲಿ ಅಭಾವಿಯಾಗಿ ಅವರು ಮಾಡುವ ಕಳವಿಂಗೆ ಮೈದೋರದೆ. ಮೀರಿ ನಿಂದೆಯಲ್ಲಾ, ಸದಾಶಿವಮೂರ್ತಿಲಿಂಗವಾಗಿ.
--------------
ಅರಿವಿನ ಮಾರಿತಂದೆ

ಇನ್ನಷ್ಟು ...