ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಹಿ ಕ್ರೂರಮೃಗಂಗಳೆಲ್ಲಕ್ಕೂ ಬಾಯಿಕಟ್ಟಿಂದ ಕಚ್ಚವು ಫಲಂಗಳ, ಹೊಲದಲ್ಲಿದ್ದಡೂ ಆ ಹೊಲದ ಸೀಮೆಯ ಫಲವನೊಲ್ಲದ ತೆರದಿಂದ ಕಡೆಯೆ ನಿಮ್ಮ ಹೊಲಬಿನ ಹೊಲ ? ಗುರುಭಕ್ತನಾದಡೆ ಗುರು ಆಜ್ಞೆ ತಪ್ಪದೆ ಲಿಂಗಭಕ್ತನಾದಡೆ ಅರ್ಚನೆ, ಪೂಜನೆ, ನಿತ್ಯ ನೇಮ ಕೃತ್ಯಂಗಳು ತಪ್ಪಡೆ, ಜಂಗಮಭಕ್ತನಾದಡೆ ಆಪ್ಯಾಯನದ ಅನುವಿಷಯದ ಡಾವರ ಆಶೆಯ ಪಾಶದ ಪರಿಭ್ರಮಣವನರಿತು ಸುಖಿಯಲ್ಲದೆ, ದುಃಖಿಯಲ್ಲದೆ ಬಂದಂತೆ ಬಾಯಿಗರೆಯದೆ, ಕಂಡುದ ಬೇಡದೆ, ನಿಂದೆಗೆಡೆಗೊಡದೆ ನಿಜಲಿಂಗಾಂಗಿಯನರಿದು ಭಕ್ತಿಗೆ ಊಣಿಯವಿಲ್ಲದೆ ಅವರವರ ಒಪ್ಪಕ್ಕೆ ತಕ್ಕ ಚಿತ್ತವಿದ್ದು ಮಾಡುತ್ತಿಪ್ಪ ಭಕ್ತನ ಬಾಗಿಲೆ ಸದ್ಯೋಜಾತಲಿಂಗವ ಕಾಬುದಕ್ಕೆ ಕಾಹಿಲ್ಲದ ಪಥ.
--------------
ಅವಸರದ ರೇಕಣ್ಣ
ಅಮೃತದ್ರವ್ಯದಲ್ಲಿ ಅಮೃತವಿಶೇಷವ ಮಾಡಲಿಕ್ಕಪ್ಪುದಲ್ಲದೆ ಕಹಿ ಕಟುಕಂಗಳಲ್ಲಿ ಮಧುರಸಾರಕ್ಕೆ ಕ್ರಮಗುಣವುಂಟೆ ? ಇಂತೀ ಭಾವಕ್ರೀ ವರ್ತನಶುದ್ಧವುಳ್ಳವರಲ್ಲಿ ಅಲ್ಲದೆ ವರ್ತನಹೀನರಲ್ಲಿ ಉಂಟೆ ಸ್ವಯಜ್ಞಾನಸಂಬಂಧ ? ಇಂತಿವು ಕುಲವಂಶದಲ್ಲಿ ಅಲ್ಲದೆ ಸತ್ಕುಲ ತದ್ರೂಪಿಲ್ಲ. ಇಂತೀ ಆಚರಣೆ ಆಶ್ರಿತದ ಭೇದ. ಈ ಆತ್ಮನ ಭೇದವನರಿತು ಭೇದಿಸಬೇಕು, ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಅರಿದರಿದು ಕೊಡುವವನು ತಾನೆ ಲಿಂಗವೊ ತಾನೆ ಲಿಂಗವ[ಲ್ಲವೋ!] ಬೇರೆ ಲಿಂಗಕ್ಕೆರವಿಲ್ಲ. ಲಿಂಗದಂಗ ತಾನಾಗಿ, ಲಿಂಗಕ್ಕೆ ಲಿಂಗವನೆ ಅರ್ಪಿಸಿ, ಸದ್ಯೋಜಾತಲಿಂಗದಲ್ಲಿ ಜಾತತ್ವವಳಿದು ಅಜಾತನಾದ.
--------------
ಅವಸರದ ರೇಕಣ್ಣ
ಅರಿದೆನೆಂಬುದೆ ಅಜ್ಞಾನ, ಮರೆದೆನೆಂಬುದೆ ದಿವ್ಯಜ್ಞಾನ. ಅರಿದೆ ಮರೆದೆನೆಂಬುದ ಹರಿದಾಗಲೆ ಉಪಮಾಪಾತಕ. ಆ ಪಾತಕದ ಫಲಂಗಳಲ್ಲಿ ಜ್ಞಾಸಜ್ಞರುಗಳ ನೋಡಿ, ನಾ ನಾಶವಾದೆ ಸದ್ಯೋಜಾತಲಿಂಗ ವಿನಾಶವಾಯಿತ್ತು.
--------------
ಅವಸರದ ರೇಕಣ್ಣ
ಅಗ್ನಿಯಂತೆ ಬಾಲವೃದ್ಧತ್ವದಂತೆ ಅಪ್ಪುದಲ್ಲ ಸುರತ್ನದ ಕಳೆ. ಅಲ್ಪನದಿಗಳ ಬಾಲವೃದ್ಧತ್ವದಂತಪ್ಪುದಲ್ಲ ಮಹಾರ್ಣವ ಸಿಂಧು. ಆವೇಶದಿಂದ ನಡೆದು, ಆವೇಶದಿಂದ ನುಡಿದು, ಆವೇಶದಲ್ಲಿ ಪೂಜಿಸಿ, ಆವೇಶದಿಂದ ಸರ್ವಜ್ಞಾನಿ ನಾನೆಂದು ಆವೇಶನಿಂದು ಹಿರಣ್ಯದ ವಿಷಕ್ಕೆ ಕೈಯಾಂತು, ದುತ್ತುರದ ಬಿತ್ತ ಮೆದ್ದವನಂತೆ, ಲಹರಿಯ ದ್ರವ್ಯವ ಕೊಂಡವನಂತೆ ಲಹರಿ ತಿಳಿಯೆ ನಾನಲ್ಲ ಎಂಬವನಂತಾಗದೆ, ಸ್ವಯ ನಡೆಯಾಗಿ, ಸ್ವಯ ನುಡಿಯಾಗಿ, ಸ್ವಯಜ್ಞಾನಿ ಸಂಬಂಧಿಯಾಗಿ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಅರಿದೆಹೆನೆಂಬುದು, ಅರುಹಿಸಿಕೊಂಬುದಕ್ಕೆ ಕುರುಹಾವುದು? ಜ್ಞಾತೃವೆ ಅರಿವುದು, ಜ್ಞೇಯವೇ ಅರುಹಿಸಿಕೊಂಬುದು. ಇಂತೀ ಉಭಯದ ಭೇದದ ಮಾತು ತತ್ವಜ್ಞರ ಗೊತ್ತು. ಅಕ್ಷಿಯಿಂದ ನಿರೀಕ್ಷಿಸಿ ನೋಡುವಲ್ಲಿ, ಪ್ರತಿದೃಷ್ಟವ [ನೆ]ಟ್ಟು ನೋಡೆ ಕಾಬುದು ಅಕ್ಷಿಯ ಭೇದವೊರಿ ಇದಿರಿಟ್ಟ ದೃಷ್ಟವ ಭೇದವೊ? ಅಲ್ಲ, ಆ ಘಟದ ವಯಸ್ಸಿನ ಭೇದವೋ? ಇಂತೀ ದೃಷ್ಟಕ್ಕೆ ಏನನಹುದೆಂಬೆ? ಏನನಲ್ಲೆಂಬೆ? ಪ್ರತಿದೃಷ್ಟವಿಲ್ಲಾಯೆಂದಡೆ ದೃಷ್ಟಿಗೆ ಲಕ್ಷಣದಿಂದ ಲಕ್ಷಿಸುತ್ತಿಹುದು. ಇಂತೀ ಉಭಯದಲ್ಲಿ ನಿಂದು ನೋಡುವ ಆತ್ಮನು ಅರಿವುಳ್ಳುದೆಂದಡೆ ಪೂರ್ವಾಂಗವ ಘಟಿಸಿದಲ್ಲಿ ಯೌವನವಾಗಿ, ಉತ್ತರಾಂಗ ಘಟಿಸಿದಲ್ಲಿ ಶಿಥಿಲವಾಗಿ ಘಟದ ಮರೆಯಿದ್ದು ಪಲ್ಲಟಿಸುವ ಆತ್ಮನ ಹುಸಿಯೆಂದಡೆ ದೃಷ್ಟನಿಗ್ರಹ, ದಿಟವೆಂದಡೆ ಕಪಟ ಸ್ವರೂಪ. ಇಂತೀ ದ್ವಯದ ಭೇದಂಗಳ ತಿಳಿದು, ಇಷ್ಟತನುವಿನ ಅಭೀಷ್ಟವನರಿತು, ಆ ಅಭೀಷ್ಟದಲ್ಲಿ ದೃಷ್ಟವಾದ ವಸ್ತುವ ಕಂಡು, ಇ¥ಶ್ರುತಕ್ಕೆ ಶ್ರುತದಿಂದ, ದೃಷ್ಟಕ್ಕೆ ದೃಷ್ಟದಿಂದ, ಅನುಮಾನಕ್ಕೆ ಅನುಮಾನದಿಂದ- ಇಂತೀ ಗುಣಂಗಳ ವಿವರಂಗಳ ವೇಧಿಸಿ ಭೇದಿಸಿ ಇಷ್ಟವಸ್ತುವಿನಲ್ಲಿ ಲೇಪವಾದುದ ಕಂಡು, ವಸ್ತು ಇಷ್ಟವ ಕಬಳೀಕರಿಸಿ ವೃಕ್ಷದೊಳಗಣ ಬೀಜ ಬೀಜದೊಳಗಣ ವೃಕ್ಷ ಇಂತೀ ಉಭಯದ ಸಾಕಾರಕ್ಕೂ ಅಂಕುರ ನಷ್ಟವಾದಲ್ಲಿ ಇಂದಿಗಾಹ ವೃಕ್ಷ ಮುಂದಣಕ್ಕೆ ಬೀಜ. ಉಭಯವಡಗಿದಲ್ಲಿ ಅಂಡದ ಪಿಂಡ, ಪಿಂಡದ ಜ್ಞಾನ, ಇಂತಿವು ಉಳಿದ ಉಳುಮೆಯನರಿದು ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಅಂಡ ಪಿಂಡವಾಗಿ, ಪಿಂಡಾಂಡವನೊಳಕೊಂಡು ವಿಚ್ಚಿನ್ನವಾದ ಭೇದವ ತಿಳಿದು, ತ್ರಿಗುಣಭೇದದಲ್ಲಿ ಪಂಚಭೂತಿಕದಲ್ಲಿ ಪಂಚವಿಂಶತಿತತ್ವಂಗಳಲ್ಲಿ, ಏಕೋತ್ತರಶತಸ್ಥಲ ಮುಂತಾದ ಭೇದಂಗಳ ತಿಳಿದು, ಆವಾವ ಸ್ಥಲಕ್ಕೂ ಸ್ಥಲನಿರ್ವಾಹವ ಕಂಡು, ಬಹುಜನಂಗಳು ಒಂದೆ ಗ್ರಾಮದ ಬಾಗಿಲಲ್ಲಿ ಬಂದು ತಮ್ಮ ತಮ್ಮ ನಿಳಯಕ್ಕೆ ಸಂದು ಗ್ರಾಮದ ಸುಖ-ದುಃಖವ ಅನುಭವಿಸುವಂತೆ, ಇಂತೀ ಪಿಂಡಸ್ಥಲವನ್ನಾಚರಿಸಿ ಆತ್ಮ ವೃಥಾ ಹೋಹುದಕ್ಕೆ ಮೊದಲೆ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಅಮೃತ ಸ್ವಯಂಭುವೆಂದಡೂ ಎಂಬವರೆನ್ನಲಿ, ನಾನೆನ್ನೆ. ಅದೆಂತೆಂದಡೆ: ಅದು ಪಾಕಪ್ರಯತ್ನದಿಂದ ಮಾಡುವ ಕ್ರಮಂಗಳಿಂದ ಮಧುರರಸವಿಶೇಷವಾಯಿತು. ಅಂಡಪಿಂಡಗಳಲ್ಲಿ ಜ್ಞಾನವಿದ್ದಿತ್ತೆಂದಡೆ, ಜ್ಞಾನ ಸ್ವಯಂಭುವೆಂದು ಎಂಬವರೆನ್ನಲಿ, ನಾನೆನ್ನೆ. ಅದೆಂತೆಂದಡೆ, ನಾನಾ ವ್ಯಾಪಾರಕ್ಕೆ ತೊಳಲಿ ಬಳಲುವುದಾಗಿ. ಇಂತೀ ಪರಿಭ್ರಮಣ ನಿಂದು ಸ್ವಸ್ಥವಸ್ತು ಭಾವದಲ್ಲಿ ನಿಶ್ಚಯವಾದಲ್ಲಿ, ಜ್ಞಾನ ಸ್ವಯಂಭುವೆಂಬೆ. ಇಂತೀ ಅಂಗಕ್ರೀಯಲ್ಲಿ ಶುದ್ಧವಾಗಿ, ಆತ್ಮನರಿವಲ್ಲಿ ಪ್ರಸಿದ್ಧಪ್ರಸನ್ನವಾಗಿ ಸದ್ಯೋಜಾತಲಿಂಗದಲ್ಲಿ ಎರಡಳಿದ ಕೂಟ.
--------------
ಅವಸರದ ರೇಕಣ್ಣ