ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿಯೆಂಬುದು ಅಪ್ರಮಾಣು ನೋಡಾ. ಭಕ್ತನಾದಡೆ ಸರ್ವಗುಣಸಂಪನ್ನನಾಗಿ ಕರ್ತೃ ಕಾಮಿಸಿದಲ್ಲಿ ಕಾಣದಂತಿರಬೇಕು. ಕರ್ತೃ ಕ್ರೋದ್ಥಿಸಿದಲ್ಲಿ ಎನ್ನ ನಲ್ಲ ಪರಾದ್ಥೀನವೆಂದಂತಿರಬೇಕು. ಕರ್ತೃ ಲೋಬ್ಥಿಸಿದಲ್ಲಿ ತನ್ನ ಬೈಕೆಯ ತಾನೊಯ್ದನೆಂದರಿಯದಿರಬೇಕು. ಹೀಗಲ್ಲದೆ, ಇವ ತಾಳಲರಿಯದೆ ಮಾಡುವ ಮಾಟ ಆತ ಭಕ್ತನಲ್ಲ, ದಾತೃಸಂಬಂದ್ಥಿ. ಇದು ಕಾರಣ ಸದ್ಯೋಜಾತಲಿಂಗವನರಿದು ಮುಟ್ಟಬೇಕು.
--------------
ಅವಸರದ ರೇಕಣ್ಣ
ಭಕ್ತಸ್ಥಲ ಘಟರೂಪು, ಮಾಹೇಶ್ವರಸ್ಥಲ ಆತ್ಮರೂಪು, ಪ್ರಸಾದಿಸ್ಥಲ ಜ್ಞಾನರೂಪು, ಇಂತೀ ತ್ರಿವಿಧಸ್ಥಲ ಭಕ್ತಿರೂಪು. ಪ್ರಾಣಲಿಂಗಿಸ್ಥಲ ಜ್ಞಾತೃರೂಪು, ಶರಣಸ್ಥಲ ಜ್ಞೇಯರೂಪು, ಐಕ್ಯಸ್ಥಲ ಸರ್ವಮಯಜ್ಞಾನರೂಪು. ಇಂತೀ ತ್ರಿವಿಧಸ್ಥಲ ಏಕವಾಗಿ ನಿಂದುದು ಕರ್ತೃಸ್ವರೂಪು. ಇಂತೀ ಷಟ್ಸ್ಥಲ ಉಭಯವಾಗಿ ಕಾಯದಲ್ಲಿ ಆತ್ಮ ಘಟಿಸಿಪ್ಪಂತೆ, ಆತ್ಮನ ಚೇತನದಿಂದ ಘಟ ಅನುಭವಿಸುವಂತೆ, ಇಂತೀ ದ್ವಂದ್ವವೊಂದಾಗಿ ನಿಂದರಿದಲ್ಲಿ ಷಟ್ಸ್ಥಲ ಆರೋಪ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ, ಮಾಹೇಶ್ವರಸ್ಥಲಕ್ಕೆ ಅಪರಾಧವಂ ಮಾಡದೆ ನಿಂದೆಗೆ ಒಡಲಲ್ಲದೆ ಅನುಸರಣೆಯ ಕಂಡು ಕೇಳಿ ತಾಳದೆ, ಪ್ರಸಾದಿಸ್ಥಲಕ್ಕೆ ಶುದ್ಧ-ಸಿದ್ಧ-ಪ್ರಸಿದ್ಧ-ಪ್ರಸನ್ನವೆಂಬುದನರಿಯದೆ ಮಲಿನ ಅಮಲಿನವೆಂಬುದ ಕಾಣದೆ ಚಿಕಿತ್ಸೆ ಜಿಗುಪ್ಸೆಯೆಂಬುದ ಭಾವಕಿಲ್ಲದೆ, ಪ್ರಾಣಲಿಂಗಿಸ್ಥಲಕ್ಕೆ ಅರ್ಪಿತ ಅನರ್ಪಿತಂಗಳನರಿದು ರಸವನೀಂಟಿದ ಘಟದಂತೆ ಅಸಿಯ ಮೊನೆಗೆ ಬಂದು ನಿಲುವಂತೆ, ಶರಣಸ್ಥಲಕ್ಕೆ ತೊಟ್ಟುಬಿಟ್ಟ ಫಳ ಮರುತ ಸಂಚಾರಿಸಿದಲ್ಲಿಯೆ ಶಾಖೆಯ ಬಿಡುವಂತೆ ಸ್ತುತಿನಿಂದೆಗಳಲ್ಲಿ ರಾಗವಿರಾಗನಾಗಿ, ಐಕ್ಯಸ್ಥಲಕ್ಕೆ ಉರಿಕೊಂಡ ಕರ್ಪುರದಂತೆ ಭ್ರಮರ ಅನುಭವಿಸಿದ ಗಂಧದಂತೆ ಭೂಸ್ಥಾಪಿತದಂತೆ, ಅನಲಕಾಷ*ಪಾಷಾಣದಂತೆ ದೃಷ್ಟವ ಕಾಬನ್ನಕ್ಕ ಷಟ್‍ಸ್ಥಲಸಂಬಂಧ. ಇಂತೀ ಸ್ಥಲಂಗಳನಾರೋಪಿಸಿದಲ್ಲಿ ಸದ್ಯೋಜಾತಲಿಂಗವು ಸಂಬಂಧನಪ್ಪನು.
--------------
ಅವಸರದ ರೇಕಣ್ಣ
ಭೂಪುಡಿ ಅಪ್ಪುವ ಕೂಡಿದಲ್ಲಿ ಮೃತ್ಪಿಂಡವಾದಂತೆ, ಅಪ್ಪು ಆರಲಿಕ್ಕೆ ಮೃತ್ಪಿಂಡವ ಒಡೆದಲ್ಲಿ ಅಪ್ಪು ಎಲ್ಲಿ ಅಡಗಿತ್ತೆಂಬುದನರಿದಲ್ಲಿ ಪಿಂಡಜ್ಞಾನಸಂಬಂಧಿ. ಈ ಸಂಪುಟದಿಂದ ಆತ್ಮಘಟದ ಸಂಜ್ಞೆ. ಈ ಸಂಚದಿಂದ ಸದ್ಯೋಜಾತಲಿಂಗದಲ್ಲಿ ಮುಂಚಬೇಕು.
--------------
ಅವಸರದ ರೇಕಣ್ಣ
ಭಕ್ತಸ್ಥಲ ಪೃಥ್ವಿರೂಪೆಂದಲ್ಲಿ ಸರ್ವಮಯ ಅಧೀನನಾಗಿರಬೇಕು. ಮಾಹೇಶ್ವರಸ್ಥಲ ಅಪ್ಪುರೂಪೆಂದಲ್ಲಿ ಚರಸ್ಥಾವರಾದಿಕಂಗಳಲ್ಲಿ ಸರ್ವಸಾರಮಯನಾಗಿರಬೇಕು ಪ್ರಸಾದಿಸ್ಥಲ ಅಗ್ನಿರೂಪಾದಲ್ಲಿ ತಾನೆನ್ನದೆ ಸೋಂಕಿದುದೆಲ್ಲ ದಗ್ಧಸ್ವರೂಪವಾಗಿರಬೇಕು. ಪ್ರಾಣಲಿಂಗಿಸ್ಥಲ ವಾಯುವಂತಾಗಬೇಕೆಂಬಲ್ಲಿ ಸುಗುಣ ದುರ್ಗುಣ ರೋಚಕ ಅರೋಚಕವಿಲ್ಲದೆ ಆವಾವ ರೂಪಿನಲ್ಲಿಯೂ ಸಂಚರಿಸಲಿಕ್ಕೆ ಪರಿಪೂರ್ಣವಾಗಿಪ್ಪ ತೆರದಂತೆ. ಶರಣಸ್ಥಲ ಆಕಾಶದಂತೆ ಆಗಬೇಕೆಂದಲ್ಲಿ ಕುಶಬ್ದ ಸುಶಬ್ದಂಗಳೆಂಬಲ್ಲಿ ಭಿನ್ನಭಾವವಿಲ್ಲದೆ ಉಭಯ ಧೂಮ್ನಂಗಳ ಕವಳೀಕರಿಸಿಕೊಂಡು ಭಾವರಹಿತವಾಗಿಪ್ಪುದು. ಐಕ್ಯಸ್ಥಲ ಮಹದಾಕಾಶದಂತೆ ಆಗಬೇಕೆಂಬಲ್ಲಿ ಬೆಳಗಿನ ಕಳೆ ಆವರಣದಲ್ಲಿ ಅಳಿದಂತೆ ಕುಂಭದ ವೆಜ್ಜದಲ್ಲಿ ನೀರು ಇಂಗಲಿಕ್ಕೆ ತನ್ನ ಬಿಂಬ ಅಲ್ಲಿಯೆ ಹಿಂಗಿದಂತೆ ಸ್ವಪ್ನದಲ್ಲಿ ದೃಷ್ಟವ ಕಂಡು ಎಚ್ಚತ್ತಲ್ಲಿ ಅದೃಶ್ಯವಾದಂತೆ ವಾಯು ಬೆಳಗಕೊಂಡು ಎಯ್ದೆ ವಾಯುವಿನ ಅಂಗದಲ್ಲಿಯೆ ನಿಶ್ಚಯವಾದಂತೆ, ಇದು ಷಟ್‍ಸ್ಥಲನಿರ್ವಾಹ, ಸದ್ಯೋಜಾತ ಲಿಂಗಕ್ಕೆ ಏಕೀಕರಕೂಟ.
--------------
ಅವಸರದ ರೇಕಣ್ಣ
ಭಕ್ತಸ್ಥಲ ಪೃಥ್ವಿಯಂತೆಂದಲ್ಲಿ, ಮಾಹೇಶ್ವರಸ್ಥಲ ಅಪ್ಪುವಿನಂತೆಂದಲ್ಲಿ, ಪ್ರಸಾದಿಸ್ಥಲ ಅಗ್ನಿಯಂತೆಂದಲ್ಲಿ, ಪ್ರಾಣಲಿಂಗಿಸ್ಥಲ ವಾಯುವಿನಂತೆಂದಲ್ಲಿ, ಶರಣಸ್ಥಲ ಆಕಾಶ ಆವರಣದಂತೆಂದಲ್ಲಿ, ಐಕ್ಯಸ್ಥಲ ಮಹದಾಕಾಶದ ಮಹಾಬೆಳಗಿನ ಕಳೆಯ ಒಳಕೊಂಡಿಪ್ಪುದೆಂದಲ್ಲಿ, ಇಂತೀ ಷಟ್ಸ್ಥಲಕ್ಕೆ ಒಂದ ನೆಮ್ಮಿ ಒಂದನತಿಗಳೆದೆಹೆನೆಂದಡೆ, ಸಂಶಯಕ್ಕೆ ಸಂಬಂಧ, ಅದು ಸದ್ಯೋಜಾತಲಿಂಗಕ್ಕೆ ಅಸಂಬಂಧವಾಗಿಹುದು.
--------------
ಅವಸರದ ರೇಕಣ್ಣ
ಭಕ್ತಂಗೆ ಗುರುಲಿಂಗಜಂಗಮದಲ್ಲಿ ಗುಣದೋಷಂಗಳನರಸದಿಪ್ಪುದು. ಮಹೇಶ್ವರಂಗೆ ಆಚಾರಕ್ಕೆ ಅಣುಮಾತ್ರದಲ್ಲಿ ತಪ್ಪದೆ ಕ್ಷಣಮಾತ್ರದಲ್ಲಿ ಸೈರಿಸದಿಪ್ಪುದು. ಪ್ರಸಾದಿಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಸಾದವನರಿದಿಪ್ಪುದು. ಪ್ರಾಣಲಿಂಗಿಗೆ ಅರ್ಪಿತ ಅವಧಾನಂಗಳಲ್ಲಿ, ಸುಗುಣ ದುರ್ಗಣ ಗಂಧಂಗಳಲ್ಲಿ ಮಧುರ ಖಾರ ಲವಣ ಕಹಿ ಮೃದು ಕಠಿಣಂಗಳಲ್ಲಿ ನಿರೀಕ್ಷಣೆಯಿಂದ ಸೋಂಕುವಲ್ಲಿಯ ಸ್ಪರ್ಶನದಲ್ಲಿಯೆ ಅರಿದರ್ಪಿತ ಮುಂತಾಗಿ ಸ್ವಾದಿಸಬೇಕು. ಶರಣನಾದಡೆ ಭೇದಭಾವವಿಲ್ಲದೆ ವಂದನೆ ನಿಂದನೆ ಉಭಯವೆನ್ನದೆ ಸುಖದುಃಖಂಗಳ ಸರಿಗಂಡು ರಾಗವಿರಾಗನಾಗಿಪ್ಪುದು. ಐಕ್ಯನಾದಡೆ ಚಿನ್ನದೊಳಗಡಗಿದ ಬಣ್ಣದಂತೆ, ಸರ್ವವಾದ್ಯದಲ್ಲಿ ಅಡಗಿದ ನಾದದಂತೆ, ಮಂಜಿನ ರಂಜನೆ ಬಿಸಿಲ ಅಂಗದಲ್ಲಿ ಅಡಗಿದಂತೆ. ಸದ್ಯೋಜಾತಲಿಂಗವು ಕ್ರೀಯಲ್ಲಿಪ್ಪ ಭೇದ.
--------------
ಅವಸರದ ರೇಕಣ್ಣ
ಭಕ್ತಂಗೆ ಭಕ್ತಿಸ್ಥಲ, ವಿರಕ್ತಂಗೆ ಬಿಡುಗಡೆ, ಈ ಉಭಯ ಕೂಡಿ ಏಕವಾದಲ್ಲಿ ಪರಿಪೂರ್ಣತ್ವ. ಇಷ್ಟಲ್ಲದೆ ಕೀಳ ನೆನೆದು ಮೇಲೆ ನೋಡಲಿಲ್ಲ. ಮೇಲೆ ನಿಂದು ಕೀಳ ನೆನೆಯಲಿಲ್ಲ. ಅದು ಉರಿಯ ಬಾಣದಂತೆ, ಮರೀಚಿಕಾ ಜಲದಂತೆ, ಸುರಚಾಪದಂತೆ, ಬುದ್ಬುದ ಮಣಿಯಂತೆ ತೋರಿ ತೋರಿದಲ್ಲಿ ನಾಮನಷ್ಟವಾಗಿ ಸ್ಥಲಗ್ರಹಿತನ ಭಾವ ಸದ್ಯೋಜಾತಲಿಂಗದ ಕೂಟ.
--------------
ಅವಸರದ ರೇಕಣ್ಣ