ಅಥವಾ
(8) (2) (5) (0) (1) (0) (0) (0) (1) (1) (0) (1) (0) (0) ಅಂ (1) ಅಃ (1) (10) (0) (5) (0) (0) (1) (0) (3) (0) (0) (0) (0) (0) (0) (0) (4) (0) (4) (1) (4) (10) (0) (6) (8) (5) (0) (3) (0) (3) (2) (4) (1) (10) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಳಮೇಘನೆಂಬ ಭೂಮಿಯಲ್ಲಿ ಕಾಳರಾತ್ರಿಯೆಂಬ ಏರಿ [ಕಟ್ಟೆ], ಮಂಜಿನ ನೀರು ತೊರೆಗಟ್ಟಿ ಹಾಯ್ದು ತುಂಬಿತ್ತು. ಆ ಕೆರೆಗೆ ತೂಬು ಬಿಸಿಲ ಸಂಭ್ರಮದ ಕಲ್ಲು, ಕಂಜನಾಳದ ನೂಲಿನ ಕಂಬ ಆ ತಲಪಿಂಗೆ. ಅಂದಿನ ಮುಚ್ಚುಳು, ಇಂದಿನ ದ್ವಾರದಲ್ಲಿ ಸೂಸುತ್ತಿರಲಾಗಿ ಸಾಳಿವನ ಬೆಳೆಯಿತ್ತು, ಕೊಯ್ದು ಅರಿಯ ಹಾಕಲಾಗಿ ಒಂದಕ್ಕೆ ಎರಡಾಗಿ ಎರಡಕ್ಕೆ ಮೂರುಗೂಡಿ ಹೊರೆಗಟ್ಟಿತ್ತು. ಹಾಕುವುದಕ್ಕೆ ಕಳನಿಲ್ಲದೆ, ನೆಡುವುದಕ್ಕೆ ಮೇಟಿಯಿಲ್ಲದೆ ಒಕ್ಕುವುದಕ್ಕೆ ಎತ್ತಿಲ್ಲದೆ, ಹೊರೆಯೆತ್ತ ಹೋಯಿತೆಂದರಿಯೆ ನಾ ಹೋದೆ, ಸದ್ಯೋಜಾತಲಿಂಗದಲ್ಲಿಗಾಗಿ.
--------------
ಅವಸರದ ರೇಕಣ್ಣ
ಕೈಲಾಸವೆಂಬುದು ಕ್ರಮಕೂಟ, ಮೋಕ್ಷವೆಂಬುದು ಭವದಾಗರ, ಕಾಯಸಮಾಧಿಯೆಂಬುದು ಪ್ರಪಂಚಿನ ಪುತ್ಥಳಿ. ಕಾಯ ಜೀವ ಕೂಡಿ ಬಯಲಾಗಿ ಇನ್ನಾವಠಾವಿನಲ್ಲಿ ಪೋಗಿ ನಿಲುವುದು? ತನುವಿನ ಗಂಭೀರವೆಂಬುದ ಮರಸಿದೆ, ಸದ್ಗುರುವ ತೋರಿ. ಸದ್ಗುರುವೆಂಬುದ ಮರಸಿದೆ ನಿಜವಸ್ತು ಶಿಲೆಯ ಮರೆಯಲ್ಲಿದ್ದು. ಲಿಂಗವೆಂಬುದ ಕುರುಹಿಟ್ಟು ಲಿಂಗವೆಂಬುದ ಮರಸಿದೆ, ತ್ರಿವಿಧ ಬಟ್ಟೆ ಕೆಡುವುದಕ್ಕೆ. ಜಂಗಮವೆಂಬುದ ತೋರಿ, ಜಂಗಮವೆಂಬುದ ಮರಸಿ ನೀನು ಎಲ್ಲಿ ಅಡಗಿದೆ? ಎಲ್ಲಿ ಉಡುಗಿದೆ? ಎಲ್ಲಿ ಬೆಂದೆರಿ ಎಲ್ಲಿ ಬೇಕರಿಗೊಂಡೆ? ನೀನು ಎಲ್ಲಿ ಹೋದೆ? ಹುಲ್ಲು ಹುಟ್ಟಿದ ಠ್ಞವಿನಲ್ಲಿ ನೀನೆಲ್ಲಿ ಹೋದೆ? ಅಲ್ಲಿ ನಿನ್ನವರೆಲ್ಲರ ಕಾಣದೆ, ಕಲ್ಲು, ಮಣ್ಣು ನೀರಿನಲ್ಲಿ ನೆರೆದಂತೆ ಬದುಕು, ನನಗಿಲ್ಲಿಯೇ ಸಾಕು. ನೀ ಕೊಟ್ಟ ಕುರುಹಿನಲ್ಲಿಯೆ ಬಯಲು ಸದ್ಯೋಜಾತಲಿಂಗವೆಂಬುದು ನಿರಾಲಂಬವಾಯಿತ್ತು.
--------------
ಅವಸರದ ರೇಕಣ್ಣ
ಕ್ರೀಯ ನುಡಿವಲ್ಲಿ ಸ್ಥಲ, ಸ್ಥಲವ ನುಡಿವಲ್ಲಿ ಆಚರಣೆ, ಆಚರಣೆ ಆಧರಿಸಿದಲ್ಲಿ ಜ್ಞಾನ, ಜ್ಞಾನವನಾಧರಸಿದಲ್ಲಿ ದಿವ್ಯಜ್ಞಾನ, ದಿವ್ಯಜ್ಞಾನ ಆಧರಿಸಿ ನಿಂದಲ್ಲಿ ಮಹದೊಡಲು ಅದು, ಮಹಾಮಯ ಲೇಪವಾದಲ್ಲಿ ಅದು ಐಕ್ಯಪದ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಕುಂಭದ ಅಪ್ಪುವಿನ ಸಂಗದಲ್ಲಿ ತಂಡುಲವ ಹಾಕಿ ಅಗ್ನಿಘಟದಿಂದ ಬೇಯಿಸಲಿಕ್ಕಾಗಿ, ಒಂದೊಂದು ತಂಡುಲ ಹಿಂಗಿ ಬೆಂದಿತ್ತೆ? ಆ ಅಪ್ಪು ಬೇರೆ ಬೇರೆ ಸಂಗವ ಮಾಡಿತ್ತೆ? ಆ ಅಗ್ನಿ ತಂಡುಲಕ್ಕೊಂದೊಂದು ಬಾರಿ ಉರಿಯಿತ್ತೆ? ಇಂತೀ ವಿವರಂಗಳ ಭೇದವನರಿತು ಅಂಗದಲ್ಲಿ ಆರು ಸ್ಥಲವನಂಗೀಕರಿಸಿದಲ್ಲಿ ಬೇರೊಂದೊಂದರಲ್ಲಿ ಹಿಂಗಿ ನೋಡಿಹೆನೆಂದಡೆ ಮೂರಕ್ಕಾರು ಆರಕ್ಕೆ ಮೂವತ್ತಾರು ಮತ್ತಿವರೊಳಗಾದ ಗುಣ ನಾಮಾತೀತಕ್ಕೆ ಅತೀತವಾಗಿಪ್ಪುದು. ಇಂತೀ ಸ್ಥಲಂಗಳನಹುದೆಂದೊಪ್ಪದೆ, ಅಲ್ಲಾ ಎಂದು ಬಿಡದೆ, ಅಲ್ಲಿಯ ಸ್ಥಲವಲ್ಲಿಯೆ ಏಕೀಕರಿಸಿ, ಅಲ್ಲಿಯ ಭಾವವ ತೋರಿದಲ್ಲಿಯೆ ಲೇಪಮಾಡಿ, ಹಿಡಿದಡೆ ಹಿಡಿತೆಗೆ ಬಾರದೆ, ಬಿಟ್ಟಡೆ ಹರವರಿಯಲ್ಲಿ ಹರಿಯದೆ, ವಸ್ತುಕದಲ್ಲಿ ವರ್ಣಕ ತೋರಿ ಆ ವರ್ಣಕಕ್ಕೆ ವಸ್ತುಕ ಅಧೀನವಾಗಿಪ್ಪ ಉಭಯಸ್ಥಲವನರಿದಲ್ಲಿ ವಿಶ್ವಸ್ಥಲ ನಾಶವಾಗಿ ಸದ್ಯೋಜಾತಲಿಂಗ ವಿನಾಶನವಾಗಬೇಕು.
--------------
ಅವಸರದ ರೇಕಣ್ಣ
ಕಳ್ಳನ ದೃಷ್ಟವ ದಿವ್ಯದೃಷ್ಟದಿಂದ ಅರಿವಂತೆ, ವಂಚಕನ ಸಂಚವ ಹೆಣ್ಣು ಹೊನ್ನು ಮಣ್ಣು ತೋರಿ ಗನ್ನದಲ್ಲಿ ಅರಿ[ವಂತೆ], ಕಾಣಿಸಿಕೊಂಬ ಆತ್ಮ ಬಿನ್ನಾಣಿಗೆ ಸೋಲದೆ, ಬಿಟ್ಟುದ ಹಿಡಿಯದೆ, ಹಿಡಿದುದು ಬಿಟ್ಟಿಹೆನೆಂಬ ದ್ವೇಷವಿಲ್ಲದೆ, ಅವು ಬಿಡುವಾಗ ತನ್ನಿಚ್ಛೆಗೆ ಪ್ರಮಾಣಲ್ಲ. ತೊಟ್ಟುಬಿಟ್ಟ ಹಣ್ಣ ಇದಿರಿಕ್ಕಿ ಕರ್ಕಶದಲ್ಲಿ ಸಿಕ್ಕಿಸಲಿಕ್ಕೆ ಮತ್ತೆ ಮುನ್ನಿನಂತೆ ಸಹಜದಲ್ಲಿಪ್ಪುದೆ? ವಸ್ತುವ ಮುಟ್ಟಿದ ಚಿತ್ತ ತ್ರಿವಿಧಮಲವ ಲಕ್ಷಿಸಬಲ್ಲುದೆ? ಇದು ವಿರಕ್ತನ ಮುಟ್ಟು, ಸದ್ಯೋಜಾತಲಿಂಗವ ಬಿಚ್ಚಿಹ ಭೇದ.
--------------
ಅವಸರದ ರೇಕಣ್ಣ
ಕಾಯಹೇಯಸ್ಥಲವೆಂದು, ಜೀವಹೇಯಸ್ಥಲವೆಂದು, ಭಾವಹೇಯಸ್ಥಲವೆಂದು, ಇಂತಿವರೊಳಗಾದ ಸರ್ವಹೇಯಸ್ಥಲವೆಂದು ನುಡಿವಾಗ ಜ್ಞಾನವೇತರ ನೆಮ್ಮುಗೆಯಿಂದ ರೂಪಾಯಿತ್ತು? ತೊರೆಯ ಹಾವುದಕ್ಕೆ ಹರುಗೋಲು, ಲಘು ನೆಮ್ಮುಗೆಗಳಲ್ಲಿ ಹಾಯ್ವ ತೆರದಂತೆ. ಅವು ಹೇಯವೆಂಬುದಕ್ಕೆ ತೆರಹಿಲ್ಲ. ಅವು ತೊರೆಯ ತಡಿಯಲ್ಲಿಯ ಲಘು ಹರುಗೋಲು ಉಳಿದ ಮತ್ತೆ ಅಡಿವಜ್ಜೆಗುಂಟೆ ಅವರ ಹಂಗು ? ತಾನರಿದಲ್ಲಿ ಅಹುದಲ್ಲವೆಂದು ಪಡಿಪುಚ್ಚವಿಲ್ಲ. ತಾ ಸದ್ಯೋಜಾತಲಿಂಗದಲ್ಲಿ ನಾಶವಾಗಿ ತನ್ನಲ್ಲಿ ವಸ್ತು ವಿನಾಶವಾದ ಕಾರಣ.
--------------
ಅವಸರದ ರೇಕಣ್ಣ
ಕಡೆಯಾಣಿಗೆ ಒರೆಗಲ್ಲ ಹಿಡಿದು ಪ್ರಮಾಣಿಸಿಹೆನೆನ್ನಬಹುದೆ? ಇಂತೀ ಕಡೆಯಾಣಿಗೆ ಒಳಗಾದುದಕ್ಕಲ್ಲದೆ ಪಡಿಪುಚ್ಚ ಪಾಷಾಣ ಪೂರ್ವದಲ್ಲಿ ಸ್ಥಲ, ಉತ್ತರದಲ್ಲಿ ನಿಃಸ್ಥಲ, ಇಂತೀ ಉಭಯವನರಿವುದು ಮಹಾಸ್ಥಲ. ಸ್ಥಲವೆಂಬ ಇದಿರು ಮಹದೊಳಗಾದಲ್ಲಿ ಸದ್ಯೋಜಾತಲಿಂಗವು ಬಟ್ಟಬಯಲಾಯಿತ್ತೆನಲಿಲ್ಲ.
--------------
ಅವಸರದ ರೇಕಣ್ಣ
ಕೆಡದ ಒಡವೆಗೆ ಕೆಟ್ಟವ ನೋಡಿ ದೃಷ್ಟವ ಕಂಡ. ಕಂಡುದ ಕಾಣದುದ ಒಡಗೂಡಿ ಕೆಡಿಸಿ ಮತ್ತೆ ಅರಸಿ, ಹಿಂಡಿನಲ್ಲಿ ನೋಡಿ, ಹಿಂಡಿನ ಕುರಿ ನುಂಗಿದವೆಂದು ಒಂದೆ ಕೊರಳಿನಲ್ಲಿ ಅಳುತ್ತಿದ್ದ, ಸದ್ಯೋಜಾತಲಿಂಗ ಕೇಳಬೇಕೆಂದು.
--------------
ಅವಸರದ ರೇಕಣ್ಣ
ಕಾಲಲ್ಲಿ ಮೆಟ್ಟದೆ, ಕೈಯಲ್ಲಿ ಹಿಡಿಯದೆ ಮರನನೇರಬೇಕು. ಕಣ್ಣಿನಲ್ಲಿ ನೋಡದೆ, ಬೆರಳಿನಲ್ಲಿ ಹರಿಯದೆ ಬಾಯಲ್ಲಿ ಮೆಲ್ಲದೆ, ಹಣ್ಣಿನ ರಸವ ನುಂಗಬೇಕು, ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಕಾಡೆಮ್ಮೆ ಊರಗೋಣನನೀದು, ಆ ಊರಗೋಣಂಗೆ ಮೂರು ಬಾಯಿ, ಆರು ಕಾಲು, ಕೊಂಬು ಎಂಟು, ಕಿವಿ ಹದಿನಾರು, ನಾಲಗೆ ಇಪ್ಪತ್ತೈದು, ಬಾಲ ಮೂವತ್ತಾರು. ನೂರರ ಬೆಂಬಳಿಯಲ್ಲಿ ನೋಡುವ ಕಣ್ಣು ಒಂದೆಯಾಯಿತ್ತು. ಆ ಒಂದು ಕಣ್ಣು ಇಂಗಲಾಗಿ ಕೋಣಂಗೆ ಗ್ರಾಸವಿಲ್ಲದೆ ಅದು ಅಲ್ಲಿಯೇ ಹೊಂದಿತ್ತು, ಸದ್ಯೋಜಾತಲಿಂಗದಲ್ಲಿ ನಾಮನಷ್ಟವಾಯಿತ್ತು.
--------------
ಅವಸರದ ರೇಕಣ್ಣ