ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯಕ್ಕೆ ಕರ್ಮ ಗುರುವಾಗಬೇಕು, ಉಭಯ ವೇಧಿಸಿ ನಿಂದಲ್ಲಿ ಸ್ವಾನುಭಾವ ಸನ್ನದ್ಧನಾಗಿ ಗುರುವಾಗಬೇಕು. ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು, ಅದೆ ವಸ್ತು ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಕಾದ ಕಬ್ಬುನವ ಕಾಯದ ಕಬ್ಬುನದಲ್ಲಿ ಹಿಡಿದು, ಅಡಿಯಲ್ಲಿಯೂ ತಾನಾಗಿ, ಮೇಲೆತ್ತಿ ಹೊಡೆವುದೂ ತಾನಾಗಿ, ಹಿಡಿವುದೂ ತಾನಾಗಿ, ಮೂರರ ಭೇದದಿಂದ ತನ್ನಂಗಕ್ಕೆ ತಾನಂಜಿ, ಅವರ ಚಿತ್ತದ ಬಿನ್ನಾಣಕ್ಕೆ ಬಂದ ತೆರ, ಲಿಂಗಮಯ. ಸರ್ವಾಂಗದಲ್ಲಿ ನಿಂದು, ಚಿತ್ತದ ಗೊತ್ತಿಗೆ ಸಿಕ್ಕಿ, ಅವರಿಚ್ಚೆಯಲ್ಲಿ ತನ್ಮಯನಾದೆಯಲ್ಲಾ, ಸದಾಶಿವಮೂರ್ತಿಲಿಂಗವೆ ತಾನು ತಾನಾದ ಕಾರಣ.
--------------
ಅರಿವಿನ ಮಾರಿತಂದೆ
ಕಂಚುಕೆಖಚಿತ ಆಭರಣ ವಿಲಾಸಿತಂಗಳಿಂದ ಸತಿ ಪತಿಯ ಮುಂದೆ ಬಂದು ನಿಂದಿರೆ, ಕಂಗಳು ತುಂಬಿ ನೋಡಿ ಮನಸಿಜ ಮುಯ್ಯಾಂತಂತೆ ಕೂಟದ ಉಚಿತಕ್ಕೆ ತೊಟ್ಟ ತೊಡಿಗೆ ಹೊರಗಾಗಿ ಉಭಯವು ನಿರ್ವಾಣವಾಯಿತ್ತು. ಮಾಡುವ ಕ್ರೀಭಾವ ಹೊರಗಳ ವರ್ತನಶುದ್ಧ ಹೊರಗೆ ನಿಂದಿತ್ತು. ಕೂಡಿಕೊಂಬ ವಸ್ತು, ಕೂಡುವ ಚಿತ್ತ, ಉಭಯ ಕಲೆಯಿಲ್ಲದಿರಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕಾಯವಿದ್ದಲ್ಲಿಯೇ ಸಕಲಕರ್ಮಂಗಳ ಮಾಡು, ಜೀವವಿದ್ದಲ್ಲಿಯೇ ಅಳಿವ ಉಳಿವನರಿ. ಉಭಯವು ಕೂಡಿದಲ್ಲಿ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಸದಮಲಾಂಗನಾಗಿ ಒಡಗೂಡು, ಸದಾಶಿವಮೂರ್ತಿಲಿಂಗವನರಿ.
--------------
ಅರಿವಿನ ಮಾರಿತಂದೆ
ಕುರಿಯೊಡೆಯ ಹಲಬರ ನಡುವೆ ನಿಂದಿರೆ ತನ್ನ ಒಡೆಯನನರಿವಂತೆ, ಸಕಲೇಂದ್ರಿಯ ಬಹುದುಃಖದಲ್ಲಿದ್ದಡೂ ತತ್ಕಾಲಕ್ಕೆ ಅರ್ಚನೆ ನೇಮ ಕೃತ್ಯ ತಪ್ಪದೆ ಮಾಡಬೇಕು. ಇದು ನಿಶ್ಚಯದ ಇರವು, ಸದಾಶಿವಮೂರ್ತಿ ಲಿಂಗವನರಿವುದಕ್ಕೆ ಕಟ್ಟಿದ ಗೊತ್ತು.
--------------
ಅರಿವಿನ ಮಾರಿತಂದೆ
ಕನ್ನಡಿಯಲ್ಲಿ ಕಪ್ಪು ಹುಟ್ಟಿದಾಗ ಕಪ್ಪ ಕಳೆದಲ್ಲದೆ ಒಪ್ಪವ ಕಾಣಬಾರದು. ತನ್ನ ಭಾವಶುದ್ಧಕ್ಕೆ ದರ್ಪಣದ ಒಪ್ಪವನರಸಬೇಕು. ಎನ್ನಯ ಮನದ ಕಪಟಕ್ಕೆ ನಿಮ್ಮಯ ಚಿತ್ತಶುದ್ಧವನರಸಬೇಕು. ನಿಮ್ಮಯ ನಿರ್ಮಲ ಎನ್ನಯ ಮಲದೇಹವ ತೊಳೆಯಬೇಕು ಎಂಬುದಕ್ಕೆ ಅರಿವಿನ ಮಾರನ ಬಿನ್ನಹ, ಸದಾಶಿವಮೂರ್ತಿಲಿಂಗಕ್ಕೆ ತೆರಹಿಲ್ಲದ ಭಾವ.
--------------
ಅರಿವಿನ ಮಾರಿತಂದೆ
ಕೋಡುಗದ ಚೇಷ್ಟೆ ಉಡುಗಿ, ಹಾವಿನ ಹಲ್ಲು ಮುರಿದು, ಆಡಿಸುವ ಜೋಗಿಯ ನಾಮ ನಷ್ಟವಾಗಿ, ಸದಾಶಿವಮೂರ್ತಿಯ ಲಿಂಗದ ಇರವು ನಿರಾಳವಾಯಿತ್ತು.
--------------
ಅರಿವಿನ ಮಾರಿತಂದೆ
ಕಾಮನ ಅಂಬಿನ ಕಣೆಯಲ್ಲಿ ಮೂವರು ಬಾಲೆಯರು ಹುಟ್ಟಿದ ವಿವರ : ಹಿಳಿಕಿನಲ್ಲಿ ತಾಯಿ ಹುಟ್ಟಿದಳು, ಮಧ್ಯದಲ್ಲಿ ಮಗಳು ಹುಟ್ಟಿದಳು, ಮೊನೆಯಲ್ಲಿ ಮೊಮ್ಮಗಳು ಹುಟ್ಟಿ ಹೆತ್ತಾಯ ತಿಂದು ತಾಯಿಗೆ ಎಸರನೆತ್ತುತೈದಾಳೆ. ಅವಳ ಕೊಲುವ ಧೀರರ ಇನ್ನಾರನು ಕಾಣೆ. ಎನಗೆ ಗಂಡ ಎಮ್ಮವ್ವೆಯ ಮಗನೆಂದು ಸಂದಣಿಗೊಳುತ್ತವಳೆ. ನಾವೆಲ್ಲರೂ ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ಕಾಲವನರಿತು ನೇಮವ ಮಾಡಲಿಲ್ಲ, ಉಚಿತವನರಿತು ಕೃತ್ಯವ ಮಾಡಲಿಲ್ಲ, ಮನ ನೆನೆದಂತೆ ತನು ಆಡಲಿಲ್ಲ, ಆ ನೆನಹೆ ಘನಲಿಂಗಮೂರ್ತಿ[ಯ ಕುರುಹು]. ಆ ಕುರುಹು ಅರಿವಿನಲ್ಲಿ ನಿಂದಿತ್ತು, ಆ ಅರಿವೇ ಕುರುಹಾಗಿ ಬೆಳಗುತ್ತದೆ, ಸದಾಶಿವಮೂರ್ತಿನಿಷ್ಕಲಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಕರೆವ ಪಶುವಿಂಗೆ ತೃಣ ದವಸ ಎಯ್ದಾದಲ್ಲಿ ಹಾಲ ವೆಗ್ಗಳವ ಕಾಬಂತೆ, ಕ್ರೀಶುದ್ಧತೆಯಾಗಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ ಇದ್ದಲ್ಲಿಯೆ ವಸ್ತುವಿನ ಹೆಚ್ಚುಗೆಯ ಒದಗು, ಅನಿತ್ಯವ ನೀಗಿ ನಿಂದ ಬೆಳಗು, ಸದಾಶಿವಮೂರ್ತಿಲಿಂಗದ ಸಂಗದ ಸಂತೋಷದ ಇರವು.
--------------
ಅರಿವಿನ ಮಾರಿತಂದೆ
ಕಾಯವಿದ್ದು ಕಾಬುದು ವಿಜ್ಞಾನ, ಜೀವವಿದ್ದು ಕಾಬುದು ಸುಜ್ಞಾನ, ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ, ಇಂತೀ ಮೂರು ಮುಖವ ಏಕವ ಮಾಡಿ ಬೇರೊಂದು ಕಾಬುದು ಪರಮಪ್ರಕಾಶಜ್ಞಾನ. ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ ಸಂದೇಹವ ಹರಿದ ಸಂದಿನಲ್ಲಿ ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕಾಳೋಗರನ ಹೆಡೆಯ ಮೇಲೆ ಮಧ್ಯದಲ್ಲಿ ಒಂದು ಕೋಳು ಸಿಕ್ಕದ ಹೆಣ್ಣು ಕಾಲು ಮೇಲಾಗಿ ತಲೆ ಕೆಳಕಾಗಿ ಅಳುವರನೆಲ್ಲರ ಕಾಲ ಸಂದಿಯಲ್ಲಿರಿಸಿ, ಭಾಳಾಂಬಕನ ಲೀಲೆಯ ಹೊತ್ತು ಆಡುವರನೆಲ್ಲರ ತನ್ನ ಶುಕ್ಲದ ಪದರದಲ್ಲಿ ಬೈಚಿಟ್ಟೈದಾಳೆ. ಆ ಹೊರೆಯ ಹರಿದಲ್ಲದಾಗದು, ಸದಾಶಿವಮೂರ್ತಿಲಿಂಗಕ್ಕೆ.
--------------
ಅರಿವಿನ ಮಾರಿತಂದೆ
ಕಲ್ಲ ಗಿರಿಯ ಹುಲ್ಲಿನ ಮೊನೆಯಲ್ಲಿ ಕುಕ್ಕಿ ಹುಲ್ಲೆಯ ಮರಿ ಹುಲಿ ಒಂದಾಗಿ ಚಲ್ಲವಾಡುತ್ತಿದ್ದಿತ್ತು. ಬಲ್ಲವನ ಬಲುಹ ಏನೂ ಇಲ್ಲದವ ಮುರಿದ. ಈ ಸೊಲ್ಲಿನ ವಿವರವ ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗದಲ್ಲಿಗೆ.
--------------
ಅರಿವಿನ ಮಾರಿತಂದೆ