ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ರೀಗುರುವಿನಿಂದದ್ಥಿಕರು ಆವ ಲೋಕದೊಳಗಿಲ್ಲವಯ್ಯಾ. ಶ್ರೀಗುರುವಿನಂತೆ ಪರೋಪಕಾರಿಗಳ ಮತ್ತಾರನೂ ಕಾಣೆನಯ್ಯಾ. ಅದೆಂತೆಂದೊಡೆ : ಎನ್ನ ಕಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕಿವಿಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ನಾಸಿಕ ನಾಲಗೆಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕರಚರಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ತನುಮನಪ್ರಾಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಸಕಲಕರಣೇಂದ್ರಿಯಂಗಳ ಭಕ್ತರ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಇಂತಿವು ಮೊದಲಾಗಿ ಎನ್ನ ಸರ್ವ ಅವಯವಂಗಳನೆಲ್ಲ ಸದ್ಭಕ್ತರ ಮಾಡಿ ಲಿಂಗಾರ್ಪಿತಕ್ಕೆ ಅನುಗೊಳಿಸಿದ ಶ್ರೀಗುರುವಿನ ಮಹಾಘನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀಗುರುವೇ ತಂದೆ ತಾಯಿಗಳಲ್ಲದೆ, ಬೇರೆ ಮತ್ತೆ ತಂದೆತಾಯಿಗಳಿಲ್ಲವಯ್ಯ ಎನಗೆ. ಶಿವಶರಣರೇ ಬಂಧುಬಳಗವಲ್ಲದೆ, ಬೇರೆ ಮತ್ತೆ ಬಂಧುಬಳಗವಿಲ್ಲವಯ್ಯ ಎನಗೆ. ಶಿವಕುಲವೆ ಮಹಾಕುಲವಲ್ಲದೆ, ಬೇರೆ ಮತ್ತೆ ಕುಲವಿಲ್ಲವಯ್ಯ ಎನಗೆ. ಅಖಂಡೇಶ್ವರಾ, ನೀವೆನ್ನ ಕುಲದೈವ ಮನೆ ದೈವವಲ್ಲದೆ ಬೇರೆ ಮತ್ತೆ ಕುಲದೈವ ಮನೆದೈವ ಇಲ್ಲವಯ್ಯ ಎನಗೆ.
--------------
ಷಣ್ಮುಖಸ್ವಾಮಿ
ಶಿವಭಕ್ತನೆನಿಸುವಾತಂಗೆ ಆವುದು ಚಿಹ್ನವೆಂದೊಡೆ : ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಿಂದಿರುವುದು, ಲಿಂಗಜಂಗಮ ಒಂದೆಯೆಂದು ಕಾಂಬುದು. ವಿಭೂತಿ ರುದ್ರಾಕ್ಷಿ ಲಿಂಗಧಾರಣ ಮುಂತಾದ ಶಿವಲಾಂಛನವನುಳ್ಳ ಶಿವಶರಣರಲ್ಲಿ ಅತಿಭಕ್ತಿಯಾಗಿರ್ಪಾತನೇ ಸದ್‍ಭಕ್ತ ನೋಡಾ ! ಅದೆಂತೆಂದೊಡೆ : ``ಸಾದಾಚಾರಃ ಶಿವೇ ಭಕ್ತಿರ್ಲಿಂಗೇ ಜಂಗಮ ಏಕದ್ಥೀಃ| ಲಾಂಛನೇ ಶರಣೇ ಭಕ್ತಿಃ ಭಕ್ತಸ್ಥಲಮನುತ್ತಮಮ್ ||'' ಎಂದುದಾಗಿ, ಇಂತಪ್ಪ ಸಹಜ ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವನ ಕೂಡಿರ್ಪ ಶರಣರ ಶೀಲವನೇನೆಂಬೆನಯ್ಯಾ ! ನೀರು ನೀರ, ಕ್ಷೀರವು ಕ್ಷೀರ ಬೆರೆದಂತೆ. ತನುಮನಧನಂಗಳು ಗುರುಲಿಂಗಜಂಗಮದಲ್ಲಿ ಭರಿತವಾದ ಮಹಾಶರಣರ ನೀವೇ ಬಲ್ಲಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಪ್ರಸಾದವನಾರೋಗಣೆಯ ಮಾಡುವಲ್ಲಿ ಕರಣಂಗಳು ಕಡೆಗೆ ತುಳುಕದಿರಬೇಕು. ಚಿತ್ತವು ಅತ್ತಿತ್ತ ಹರಿಯದಿರಬೇಕು. ಶಿವಧ್ಯಾನಪರಾಯಣನಾಗಿರಬೇಕು. ಶಿವಪ್ರಸಾದದಲ್ಲಿ ಮನವು ಮಗ್ನವಾಗಿರಬೇಕು. ಪ್ರಸಾದವೆ ಪರಬ್ರಹ್ಮವೆಂಬ ಭಾವ ಬಲಿದಿರಬೇಕು. ತುತ್ತುತುತ್ತಿಗೆ ಶಿವಮಂತ್ರವ ಉಚ್ಚರಿಸುತಿರಬೇಕು. ಶಿವಪ್ರಸಾದದ ಘನವ ಕಂಡು ಮನವು ಹಿಗ್ಗಿ ಪರಮಪರಿಣಾಮದೊಳಗೋಲಾಡುತಿರಬೇಕು. ಇಂತೀ ಭೇದವನರಿಯಬಲ್ಲಾತನೆ ಅಚ್ಚಪ್ರಸಾದಿಯಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶರಣನಿರ್ದಲ್ಲಿ ಸಕಲರ್ತಿರ್ಥಕ್ಷೇತ್ರಂಗಳಿರ್ಪವು. ಶರಣನಿರ್ದಲ್ಲಿ ಕೈಲಾಸ ಮೇರು ಮಂದರ ಕುಲಶೈಲಂಗಳಿರ್ಪವು. ಶರಣನಿರ್ದಲ್ಲಿ ಈರೇಳುಭುವನ ಹದಿನಾಲ್ಕು ಲೋಕಂಗಳಿರ್ಪವು. ನಮ್ಮ ಅಖಂಡೇಶ್ವರನ ಶರಣನಿರ್ದಲ್ಲಿ ಅನಂತಕೋಟಿ ಬ್ರಹ್ಮಾಂಡಗಳಿರ್ಪವು ನೋಡಾ.
--------------
ಷಣ್ಮುಖಸ್ವಾಮಿ
ಶರಣನಾದಡೆ ಮುರಿದ ಬಂಗಾರವ ಬೆಳಗಾರದಲ್ಲಿ ಬೆಚ್ಚಂತಿರಬೇಕು ಲಿಂಗದಲ್ಲಿ, ಶರಣನಾದಡೆ ಶುಭ್ರವಸ್ತ್ರಕ್ಕೆ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ. ಶರಣನಾದಡೆ ಕರಕುಕಟ್ಟಿರದ ಲೋಹದ ಪುತ್ಥಳಿಯಂತಿರಬೇಕು ಲಿಂಗದಲ್ಲಿ. ಇಂತೀ ಸಮರಸಭಾವವನರಿಯದೆ ಹುಸಿಹುಂಡನಂತೆ ವೇಷವ ಧರಿಸಿ ಗ್ರಾಸಕ್ಕೆ ತಿರುಗುವ ವೇಷಗಳ್ಳರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಶಿವಾ, ನೀವೆನ್ನ ನಡೆಯೊಳಗೆ ನಡೆರೂಪವಾಗಿರ್ದು ನಡೆಪರುಷವ ಕರುಣಿಸಯ್ಯ ದೇವ. ಎನ್ನ ನುಡಿಯೊಳಗೆ ನುಡಿರೂಪಾಗಿರ್ದು ನುಡಿಪರುಷವ ಕರುಣಿಸಯ್ಯ ದೇವ. ಎನ್ನ ನೋಟದೊಳಗೆ ನೋಟರೂಪಾಗಿರ್ದು ನೋಟಪರುಷವ ಕರುಣಿಸಯ್ಯ ದೇವ. ಎನ್ನ ಹಸ್ತದೊಳಗೆ ಹಸ್ತರೂಪಾಗಿರ್ದು ಹಸ್ತಪರುಷವ ಕರುಣಿಸಯ್ಯ ದೇವ. ಎನ್ನ ಮನದೊಳಗೆ ಮನರೂಪಾಗಿರ್ದು ಮನಪರುಷವ ಕರುಣಿಸಯ್ಯ ದೇವ. ಎನ್ನ ಭಾವದೊಳಗೆ ಭಾವರೂಪಾಗಿರ್ದು ಭಾವಪರುಷವ ಕರುಣಿಸಯ್ಯ ದೇವಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶುದ್ಧಪದ್ಮಾಸನದಲ್ಲಿ ಕುಳ್ಳಿರ್ದು ಊಧ್ರ್ವಲೋಚನನಾಗಿ, ಉಲಿವ ಕರಣಂಗಳನೆಲ್ಲ ಉನ್ಮನಿಯ ಸ್ಥಾನದಲ್ಲಡಗಿಸಿ, ಮನವನೊಮ್ಮನವ ಮಾಡಿ ಅನಾಹತಕರ್ಣದಲ್ಲಿ ಲಾಲಿಸಲು, ಸಹಸ್ರದಳಕಮಲಮಧ್ಯದಲ್ಲಿ ಉದ್ಘೋಷಿಸುತ್ತಿರ್ಪುದು ಸುನಾದಬ್ರಹ್ಮವು. ಅಂತಪ್ಪ ಸುನಾದಬ್ರಹ್ಮದಲ್ಲಿ ಮನವಡಗಿ ಮೈಯ್ಮರೆದಿರ್ಪಾತನೆ ಘನಲಿಂಗಯೋಗಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶರಣರ ಸಂಗದಿಂದೆ ತನು ಶುದ್ಧವಪ್ಪುದು ನೋಡರೆ. ಶರಣರ ಸಂಗದಿಂದೆ ಮನ ನಿರ್ಮಲವಪ್ಪುದು ನೋಡಿರೆ. ಶರಣರ ಸಂಗದಿಂದೆ ಸಕಲೇಂದ್ರಿಯಂಗಳು ಲಿಂಗಮುಖವಪ್ಪುವು ನೋಡರೆ. ನಮ್ಮ ಅಖಂಡೇಶ್ವರನ ಶರಣರ ಸಂಗದಿಂದೆ ಮುಂದೆ ಸತ್ಪಥವು ದೊರೆಕೊಂಬುದು ತಪ್ಪದು ನೋಡಿರೆ.
--------------
ಷಣ್ಮುಖಸ್ವಾಮಿ
ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು ! ಶಿವಶರಣರ ಮಹಿಮೆಯನು, ಶಿವಶರಣರ ಚಾರಿತ್ರವನು, ಶಿವನೇ ಬಲ್ಲನಲ್ಲದೆ ಉಳಿದವರದನೆಂತು ತಿಳಿವರಯ್ಯಾ ? ಹೊರಗಣ ಕ್ರಿಯೆಯು ಹಲವು ಪ್ರಕಾರವಾದಡೂ ಒಳಗೆ ನೀರು ನೀರ ಕೂಡಿದಂತೆ, ಕ್ಷೀರ ಕ್ಷೀರವ ಬೆರೆದಂತೆ, ಮಾರುತಾಂಬರ ಸಂಯೋಗವಾದಂತೆ, ಶಿಖಿಕರ್ಪುರದ ನಿಷ್ಪತ್ತಿಯಂತೆ, ಸಚ್ಚಿದಾನಂದಪರಬ್ರಹ್ಮವ ಕೂಡಿ ಬಿಚ್ಚಿ ಬೇರಾಗದಿರ್ಪ ಭವರಹಿತ ಶರಣರೆ ಕೇವಲಜ್ಞಾನಸ್ವರೂಪರು, ಜೀವನ್ಮುಕ್ತರು. ಅವರೇ ನಿಮ್ಮ ಶರಣರು, ಅವರೇ ಮಹಾಜ್ಞಾನಘನವ ನುಂಗಿದ ಮಹಾಂತರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಶಿವಾ ಎಂದು ಶಿವನ ಕೊಂಡಾಡುತ್ತ ಶ್ರೀ ವಿಭೂತಿಯ ಧರಿಸಿ, ಶ್ರೀ ಮಹಾದೇವನ ಪೂಜಿಸುವಾತನ ಕಾಯವೇ ಕೈಲಾಸ. ಆತನ ನಡೆಯೇ ಪಾವನ, ಆತನ ನುಡಿಯೇ ಆಗಮ. ಆತನ ದರುಶನ ಸ್ಪರುಶನವೇ ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು ನೋಡಾ ! ಆ ಮಹಾತ್ಮನಿಂದಧಿಕರು ಮೂಲೋಕದೊಳಗಿಲ್ಲ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀ ವಿಭೂತಿಯ ಘನಮಹಿಮೆಯ ಹೇಳುವಡೆ ಬ್ರಹ್ಮಂಗಸದಳ, ವಿಷ್ಣುವಿಂಗಸಾಧ್ಯ, ರುದ್ರಂಗಗೋಚರ ನೋಡಾ! ಅದೆಂತೆಂದೊಡೆ :ಮತ್ಸ್ಯಪುರಾಣ `` ಬ್ರಹ್ಮಣಾ ವಿಷ್ಣುನಾ ಚಾಪಿ ರುದ್ರೇಣ ಚ ಮುನೀಶ್ವರೈ ಃ | ಭಸ್ಮಧಾರಣಮಹಾತ್ಮ್ಯಂ ನ ಶಕ್ಯಂ ಪರಿಭಾಷಿತಮ್ || '' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯೆಂಬ ಪರತರ ಪರಂಜ್ಯೋತಿಸ್ವರೂಪು ನೀವಾದಿರಾಗಿ ಅಖಂಡೇಶ್ವರಾ, ಎನಗೆ ಶ್ರೀ ವಿಭೂತಿಯ ಸರ್ವಸಿದ್ಧಿಯಯ್ಯಾ.
--------------
ಷಣ್ಮುಖಸ್ವಾಮಿ
ಶಿವಭಕ್ತಿ ಶಿವಜ್ಞಾನ ಶಿವನಲ್ಲಿ ವಿಶ್ವಾಸವಮಾಡಿದ ಲಿಂಗಾಂಗಸಂಬಂಧವನುಳ್ಳ ಸದ್ಭಕ್ತಮಹೇಶ್ವರರು ಇದ್ದ ಠಾವೆಲ್ಲ ಶಿವಕ್ಷೇತ್ರ, ಅವರು ಸುಳಿದ ಸುಳಿವೆಲ್ಲ ಜಗತ್ಪಾವನ, ಅವರು ನಿಮಿಷ ನಿಮಿಷಾರ್ಧ ಕುಳಿತ ನೆಲವೆಲ್ಲ ಶಿವನ ಕೈಲಾಸ ನೋಡಾ ! ಅದೆಂತೆಂದೊಡೆ :ಸ್ಕಂದಪುರಾಣೇ- ``ಯತ್ರ ತಿಷ*ತಿ ಲಿಂಗಾಂಗಸಂಬಂಧೀಶಪರಾಯಣಃ | ನಿಮಿಷಂ ನಿಮಿಷಾರ್ಧಂ ವಾ ತತ್ ಶಿವಕ್ಷೇತ್ರಮುಚ್ಯತೇ ||'' ಮತ್ತಂ, ``ಪಾದಾಗ್ರರೇಣವೋ ಯತ್ರ ಪತಂತಿ ಶಿವಯೋಗಿನಾಮ್ | ತದೇವ ಸದನಂ ಪುಣ್ಯಂ ಪಾವನಂ ಶಿವಮಂದಿರಮ್ ||'' ಎಂದುದಾಗಿ, ಇಂತಪ್ಪ ಸದ್ಭಕ್ತ ಮಹೇಶ್ವರರ ಘನವ ನಾನೇನೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಮಂತ್ರವೆನಗೆ ಕಾಮಧೇನುವಯ್ಯ. ಶಿವಮಂತ್ರವೆನಗೆ ಕಲ್ಪವೃಕ್ಷವಯ್ಯ. ಶಿವಮಂತ್ರವೆನಗೆ ಚಿಂತಾಮಣಿಯಯ್ಯ. ಶಿವಮಂತ್ರವೆನಗೆ ಪರುಷದ ಖಣಿಯಯ್ಯ. ಶಿವಮಂತ್ರವೆನಗೆ ಮನಃಪ್ರಾಣಮೂಲಿಕೆಯಯ್ಯ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಶೈವಸಿದ್ಧಾಂತಿಗಳೆಂಬ ಅಬದ್ಧ ಭವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ಸಾಂಗೋಪಾಂಗ ಶುದ್ಧಶರೀರಿಯಾಗಿ ಉನ್ನತಾಸನ ಗದ್ದುಗೆಯಲ್ಲಿ ಕುಳಿತು ಕಣ್ಣುಮುಚ್ಚಿ ಅಂತರಂಗದಲ್ಲಿ ಪರಮಾತ್ಮನ ಕಳೆಯ ಧ್ಯಾನಿಸಿ ಮನಸ್ಸಿನಲ್ಲಿ ಕಟ್ಟಿ ದೃಷ್ಟಿಗೆ ತಂದು, ಆ ದೃಷ್ಟಿಯಿಂದ ಪುಷ್ಪದಲ್ಲಿ ತುಂಬಿ ಮೃತ್ತಿಕೆ ಪಾಷಾಣಾದಿ ನಾನಾ ತರಹದ ಲಿಂಗಾಕಾರದ ಮೂರ್ತಿಯ ಸ್ಥಾಪಿಸಿ, ದೇವರೆಂದು ಭಾವಿಸಿ, ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಾದಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನೆ ಮಾಡಿ, ಆ ಪೂಜಾಂತ್ಯದಲ್ಲಿ ಎನ್ನ ಮಲಿನ ದೇಹದಲ್ಲಿ ನೀನು ನಿರ್ಮಲವಾದ ವಸ್ತುವು ಇರಬೇಡ ಹೋಗೆಂದು ತನ್ನ ದೇವರ ಬಾವಿ ಕೆರೆ ಹಳ್ಳ ಕೊಳ್ಳಾದಿ ಸ್ಥಾನಂಗಳಲ್ಲಿ ಹಾಕಿ ಬಿಡುವ ಶಿವದ್ರೋಹಿಗಳಿಗೆ ಕುಂಭೀಪಾತಕ ನಾಯಕ ನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಶಿವಾ, ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ. ಎನಗೆ ಭಕ್ತಿ ಬೇಡ, ಎನಗೆ ಜ್ಞಾನ ಬೇಡ, ಎನಗೆ ವೈರಾಗ್ಯ ಬೇಡ, ಎನಗೆ ವಿರತಿಯು ಬೇಡ, ನಿಮ್ಮ ಶರಣರು ಉಟ್ಟ ಮೈಲಿಗೆಯ ಬಟ್ಟೆ ಉಗುಳಿದ ತಾಂಬೂಲ, ಒಕ್ಕು ಮಿಕ್ಕ ಪ್ರಸಾದವನೆ ಕರುಣಿಸಿ, ಅವರ ಪಡುಗ ಪಾದರಕ್ಷೆಯನೆ ಹಿಡಿವುದಕ್ಕೆ ಯೋಗ್ಯನ ಮಾಡಿ, ಅವರ ಕಡೆಯ ಬಾಗಿಲನೆ ಕಾಯುವಂತೆ ಮಾಡಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀಗುರುವಿನ ಕರಗರ್ಭದಲ್ಲಿ ಉದಯವಾದ ಶರಣಸತಿ ನಾನು. ಶ್ರೀಗುರುವಿನ ಹೃದಯಗರ್ಭದಲ್ಲಿ ಉದಯವಾದ ಲಿಂಗಪತಿಗೆ ಎನ್ನ ಮದುವೆಯ ಮಾಡುವ ಕಾಲದಲ್ಲಿ ಸಹಸ್ರದಳಕಮಲವೆಂಬ ಸಾವಿರಕಂಬದ ಮಂಟಪವ ರಚಿಸಿ, ಆ ಮಂಟಪದ ಮಧ್ಯದಲ್ಲಿ ಪಂಚಪಾತ್ರವೆಂಬ ಪಂಚಮುದ್ರೆಯ ರಂಗವಲ್ಲಿಯ ತುಂಬಿ, ಆ ಪಂಚಮುದ್ರೆಯಲ್ಲಿ ಪಂಚಪ್ರಣವೆಂಬ ಪಂಚಕಲಶವ ಹೂಡಿ, ಆ ಪಂಚಕಲಶಂಗಳಿಗೆ ಸ್ವಾನುಭಾವಜ್ಞಾನವೆಂಬ ಸುರಗಿಯ ಸುತ್ತಿ, ಆ ಮಧ್ಯದಲ್ಲಿ ಎನಗೆ ಶೃಂಗಾರವ ಮಾಡಿದರೆಂತೆನಲು, ಸರ್ವಾಚಾರಸಂಪತ್ತೆಂಬ ಸೀರೆಯನುಡಿಸಿ, ಸುಜ್ಞಾನವೆಂಬ ಕುಪ್ಪಸವ ತೊಡಿಸಿ, ಸದ್ಭಕ್ತಿಯೆಂಬ ಬಳೆಯನಿಡಿಸಿ, ಏಕಭಾವದ ನಿಷೆ*ಯೆಂಬ ತಾಳಿಯ ಕಟ್ಟಿ, ನಿಜಮುಕ್ತಿಯೆಂಬ ಮೂಗುತಿಯನಿಟ್ಟು ಶಿವಮಂತ್ರವೆಂಬ ಕರ್ಣಾಭರಣವ ಧರಿಸಿ, ಸತ್ಕ್ರಿಯೆಯೆಂಬ ಪಾದಾಭರಣವ ಧರಿಸಿ, ಪರಮೇಶ್ವರನ ಚಿತ್‍ಪ್ರಕಾಶವೆಂಬ ಚಿದ್‍ವಿಭೂತಿಯನೆ ತಂದು, ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಿ, ಸತಿಸಂಗವಗಲಬೇಡವೆಂದು ಎನ್ನ ಪತಿಯ ಸೆರಗ ತಂದು ಎನ್ನ ಸೆರಗಿಗೆ ಕೂಡಿಸಿ, ಷಟ್‍ಸ್ಥಲಬ್ರಹ್ಮಗಂಟನಿಕ್ಕಿ, ಪತಿಭಕ್ತಿಯಗಲದಿರೆಂದು ಎನ್ನ ಮುಂಗೈಯಲ್ಲಿ ಸಕಲಗಣಂಗಳ ಸಾಕ್ಷಿಯಾಗಿ ಬಿರುದಿನ ವೀರಕಂಕಣವ ಕಟ್ಟಿ, ಜಂಗಮದ ಪಾದತೀರ್ಥ ಪ್ರಸಾದವೆಂಬ ಭೂಮವನುಣಿಸಿ, ಮದುವೆಯ ಮಾಡಿದರಂದು. ಇಂದು ಎನಗೆ ಯೌವನವಾಯಿತ್ತು. ಏಳುನೆಲೆಯ ಮೇಲುಪ್ಪರಿಗೆಯ ಮೇಲೆ ಲೀಲೆಯಿಂದ ಕೂಡಿ ಸುಖಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶರಣನ ಚರಣದಲ್ಲಿ ನಡೆಪರುಷ. ಶರಣನ ಕರದಲ್ಲಿ ಹಸ್ತಪರುಷ. ಶರಣನ ಜಿಹ್ವೆಯಲ್ಲಿ ರುಚಿಪರುಷ. ಶರಣನ ನೇತ್ರದಲ್ಲಿ ನೋಟಪರುಷ. ನಮ್ಮ ಅಖಂಡೇಶ್ವರನ ಶರಣನ ಮನದಲ್ಲಿ ಭಾವಪರುಷವಿರ್ಪುದು ನೋಡಿರೊ.
--------------
ಷಣ್ಮುಖಸ್ವಾಮಿ
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಗುರುವಿನಲ್ಲಿ. ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಲಿಂಗದಲ್ಲಿ. ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಜಂಗಮದಲ್ಲಿ. ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಪಾದೋದಕ ಪ್ರಸಾದಂಗಳಲ್ಲಿ. ಇಂತಿವರಲ್ಲಿ ಶುದ್ಧ ಸುಯಿಧಾನ ಭಯ ವಿಶ್ವಾಸವಿಲ್ಲದವರು ಸಲ್ಲರಯ್ಯಾ ನಿಮ್ಮ ನಿಜಪದಕ್ಕೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಿವಶಿವಾ ಎನ್ನಿರೋ ! ಶಿವನ ಧ್ಯಾನಕ್ಕೆ ತನ್ನಿರೊ ! ಶಿವನು ಕೈಲಾಸ ಮೇರು ಮಂದಿರದಲ್ಲಿಲ್ಲ ನೋಡಿರೊ ! ಶಿವನು ಭಕ್ತಿಗೆ ಸೋತು ನಿಮ್ಮೊಳಗಿಪ್ಪನು ಕಾಣಿರೋ ! ಅದೆಂತೆಂದೊಡೆ :ಶಿವನ ವಾಕ್ಯ - ``ನಾಹಂ ವಸಾಮಿ ಕೈಲಾಸೇ ನ ಮೇರೌ ನ ಚ ಮಂದರೇ | ಮದ್‍ಭಕ್ತಾ ಯತ್ರ ತಿಷ*ಂತಿ ತತ್ರ ತಿಷಾ*ಮಿ ಪಾರ್ವತಿ ||'' ಎಂದುದಾಗಿ, ಆಲಸ್ಯವಿಲ್ಲದೆ ಒಲಿಸಿರೋ ನಮ್ಮ ಅಖಂಡೇಶ್ವರನೆಂಬ ಪರಶಿವನ.
--------------
ಷಣ್ಮುಖಸ್ವಾಮಿ
ಶಿವಶಿವಾ ಎಂದು ಶಿವನ ಕೊಂಡಾಡಿ ಭವಪಾಶವ ಹರಿದೆನಯ್ಯ. ಹರಹರಾ ಎಂದು ಹರನ ಕೊಂಡಾಡಿ ಹರಗಣತಿಂತಿಣಿಯೊಳಗೆ ನಿಂದೆನಯ್ಯ. ಇದು ಕಾರಣ ಹರಾಯ ಶಿವಾಯ ಶ್ರೀ ಮಹಾದೇವಾಯ ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶರಣ ಗಮನಿಯಾದಡೆ ಕಿರಿದೆಂಬರು, ಶರಣ ನಿರ್ಗಮನಿಯಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ. ಶರಣ ಆಶ್ರಮವಂತನಾದಡೆ ಕಿರಿದೆಂಬರು, ಶರಣ ನಿರಾಶ್ರಮವಂತನಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ ಶರಣ ಸರ್ವವ್ಯಾಪಾರಿಯಾದಡೆ ಕಿರಿದೆಂಬರು, ಶರಣ ನಿವ್ರ್ಯಾಪಾರಿಯಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ. ಶರಣ ಸಕಲಭೋಗೋಪಭೋಗಿಯಾದಡೆ ಕಿರಿದೆಂಬರು, ಶರಣ ನಿರ್ಭೋಗಿಯಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ. ಹುರಿದ ಬೀಜ ಮರಳಿ ಹುಟ್ಟಬಲ್ಲುದೆ ? ಬೆಂದ ನುಲಿ ಮರಳಿ ಕಟ್ಟುವಡೆವುದೆ ? ಹುಟ್ಟುಗೆಟ್ಟ ಶರಣ ಸಟೆಯ ದೇಹವ ಧರಿಸಿ ಸಾಕಾರವೆನಿಸಿ ಲೋಕದೊಳಡಗಿರ್ದಡೇನು ಲೋಕದಂತಾತನೆ ? ಅಲ್ಲಲ್ಲ. ಆತನ ಪರಿ ಬೇರೆ ಕಾಣಿರೊ ಅದೆಂತೆಂದೊಡೆ : ಬಿರಿಸಿನೊಳಗಣ ಮದ್ದು ಅಗ್ನಿಯ ಸೋಂಕಿ ಅಗ್ನಿಯ ಸ್ವರೂಪವಾಗಿ ತೋರುವಂತೆ, ಆ ಶರಣನ ತನುಮನಭಾವ ಸರ್ವಕರಣೇಂದ್ರಿಯಗಳೆಲ್ಲ ಲಿಂಗವನಪ್ಪಿ ಲಿಂಗಮಯವಾಗಿ ತೋರುತಿರ್ಪವಾಗಿ, ಆತ ಆವಾವ ಕ್ರಿಯೆಯಲ್ಲಿರ್ದಡೇನು, ಆವಾವ ಆಚಾರದಲ್ಲಿರ್ದಡೇನು, ಆವಾವ ಭೋಗದಲ್ಲಿರ್ದಡೇನು, ಕುಂದು ಕೊರತೆಯಿಲ್ಲ, ಹಿಂದೆ ಶಂಕೆಯಿಲ್ಲ, ಮುಂದೆ ಜನ್ಮವಿಲ್ಲ. ಆ ಶರಣನು ಎಂತಿರ್ದಂತೆ ಸಹಜಪರಬ್ರಹ್ಮವೆ ಆಗಿರ್ಪನು ನೋಡಿರೊ ನಮ್ಮ ಅಖಂಡೇಶ್ವರಲಿಂಗದಲ್ಲಿ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...