ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ, ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ. ಮನದ ವಿಕಾರದ ಮರವೆಯಲ್ಲಿ ಸಿಲ್ಕಿ, ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ. ಈ ತನುಮನದ ವಿಕಾರವ ಮಾಣಿಸಿ, ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿಲ್ಲದೆ ಮಾಡಿ, ಧನವಿಲ್ಲದೆ ಮನವಿಲ್ಲದೆ ಕೂಡಬಲ್ಲಾತನೆ ಮಹಾಭಕ್ತನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿನ ಕೊನೆಯಲ್ಲಿ ನೇತ್ರದ ಅನುವ ಕಂಡೆನಯ್ಯಾ ಆ ನೇತ್ರದ ಕೊನೆಯಲ್ಲಿ ಮನದ ಸುಳುಹು ಕಂಡೆನಯ್ಯಾ. ಆ ಮನದ ಕೊನೆಯಲ್ಲಿ ಘನಮಹಾಶಿವನ ಕಂಡೆನಯ್ಯಾ. ಆ ಶಿವನೊಳಗೆ ಅನಂತಕೋಟಿಬ್ರಹ್ಮಾಂಡಗಳಡಗಿರ್ಪುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಾಮಸಗುಣಂಗಳಲ್ಲಿ ಬಿದ್ದು, ತ್ವರಿತದ ವಿಷಯದಲ್ಲಿ ಹರಿದಾಡಿ, ಭವಜಾಲದಲ್ಲಿ ಸತ್ತು ಹುಟ್ಟುವಾತ ಗುರುಸ್ಥಲಕ್ಕೆ ಸಲ್ಲ, ಚರಸ್ಥಲಕ್ಕೆ ಸಲ್ಲ, ಪರಸ್ಥಲಕ್ಕೆ ಸಲ್ಲ. ಗುರುಸ್ಥಲವೆಂದಡೆ ಘನಲಿಂಗಸ್ಥಲವು. ಚರಸ್ಥಲವೆಂದಡೆ ಅತೀತಸ್ಥಲವು. ಪರಸ್ಥಲವೆಂದಡೆ ವಿರಕ್ತಿಸ್ಥಲವು. ಇಂತೀ ತ್ರಿವಿಧಸ್ಥಲದ ನಿರ್ಣಯವ ಬಲ್ಲಾತನೆ ಗುರುಸ್ಥಲಕ್ಕೆ ಯೋಗ್ಯನೆಂಬೆನು ; ಚರಸ್ಥಲಕ್ಕೆ ಯೋಗ್ಯನೆಂಬೆನು ; ಪರಸ್ಥಲಕ್ಕೆ ಯೋಗ್ಯನೆಂಬೆನು. ಇಂತೀ ತ್ರಿವಿಧನಿರ್ಣಯವನರಿಯದೆ ತ್ರಿವಿಧಮಲದಲ್ಲಿ ಭಂಗಿತರಾದವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ ನಿಮ್ಮ ಧರ್ಮ.
--------------
ಷಣ್ಮುಖಸ್ವಾಮಿ
ತನುವಿನ ಕೈಯಲ್ಲಿರ್ದ ಘನಲಿಂಗವನು ಮನೋಮಂಟಪದಲ್ಲಿ ಕುಳ್ಳಿರಿಸಿ ನೆನಹಿನ ಪರಿಣಾಮವ ಕೊಡಬಲ್ಲಾತನೆ ಶರಣನು. ಮತ್ತಾ ಲಿಂಗವನು ಕರ್ಣಮಂಟಪದಲ್ಲಿ ಕುಳ್ಳಿರಿಸಿ ಶಬ್ದ ಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಘ್ರಾಣಮಂಟಪದಲ್ಲಿ ಕುಳ್ಳಿರಿಸಿ ಗಂಧಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಜಿಹ್ವಾಮಂಟಪದಲ್ಲಿ ಕುಳ್ಳಿರಿಸಿ ರುಚಿಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಸರ್ವಾಂಗಮಂಟಪದಲ್ಲಿ ಕುಳ್ಳಿರಿಸಿ ಸರ್ವಪರಿಣಾಮವನು ಕೊಡಬಲ್ಲಾತನೆ ಶರಣನು. ಅಲ್ಲದೆ ಉಳಿದ ಅಂಗವಿಕಾರ ಆತ್ಮಸುಖಿಗಳೆಲ್ಲ ಭವದ ಕುರಿಗಳಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವ ಗುರುವಿಂಗೆ ಕೊಟ್ಟು ಗುರುಭಕ್ತನಾಗಬೇಕು. ಮನವ ಲಿಂಗಕ್ಕೆ ಕೊಟ್ಟು ಲಿಂಗಭಕ್ತನಾಗಬೇಕು. ಧನವ ಜಂಗಮಕ್ಕೆ ಕೊಟ್ಟು ಜಂಗಮಭಕ್ತನಾಗಬೇಕು. ಇಂತೀ ತ್ರಿವಿಧಭಕ್ತಿಯ ವರ್ಮವನರಿಯದವರ ಮೆಚ್ಚ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ತಂದೆ ಕೇಳಯ್ಯಾ ಲಿಂಗವೆ. ನಾನು ಹಿಂದಣ ಕರ್ಮವಾಸನೆಯಿಂದೆ ಹುಟ್ಟಿದೆನೋ ? ನಿನ್ನ ಚಿದಂಶಿಕನಾಗಿ ಹುಟ್ಟಿದೆನೋ ? ಎನಗೆ ಈ ಉಭಯದ ಕೀಲ ತಿಳಿಯಬಾರದು. ನೀನೊಲಿದು ಕರುಣಿಸಯ್ಯಾ ಶಿವನೆ. ಎನ್ನ ಮನದ ಸಂಕಲ್ಪದ ಅನುಮಾನವ ಪರಿಹರಿಸಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿಹ ಪರಿಯಂತರ ನಿಮ್ಮ ಪೂಜಿಸಿದೆನಯ್ಯಾ. ಮನವಿಹ ಪರಿಯಂತರ ನಿಮ್ಮ ನೆನೆದೆನಯ್ಯಾ. ಭಾವವಿಹ ಪರಿಯಂತರ ನಿಮ್ಮ ಬಯಸಿದೆನಯ್ಯಾ. ಇಂತಿವೆಲ್ಲವು ನಿಮ್ಮಲ್ಲಿ ಸಯವಾದ ಬಳಿಕ ಗಜಭುಕ್ತಕಪಿತ್ಥದಂತಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತ್ರಿಕೂಟವೆಂಬ ಭ್ರೂಮಧ್ಯಸ್ಥಾನದಲ್ಲಿ ನಿರಂತರ ಬೆಳಗುವ ಪರಂಜ್ಯೋತಿಯೊಳ್ ಮನವು ನಿಶ್ಚಲವಾಗಿರ್ಪುದೇ ಅಮನಸ್ಕರಾಜಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿನವಗುಣಂಗಳ ತರಿದೊಟ್ಟಿ, ಮನದ ಮಾಯಾವಿಕಾರದ ಬಾಯ ಟೊಣೆದು, ಕರಣಂಗಳ ಕತ್ತಲೆಯ ಕಡೆಗೊದ್ದು ಎಡಬಲಂಗಳ ತಡಹಿ, ನಡುಮಧ್ಯಮಾರ್ಗವಿಡಿದು ಸುಷುಮ್ನಗಿರಿಯನಡರಿ, ಕಡೆಮೊದಲಿಲ್ಲದೆ ಬೆಳಗಿನೊಳಗಡಗಿ ಬೆಳಗುತಿರ್ದೆನಾಗಿ ನಾನು ಪರಮಶಿವಯೋಗಿಯಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಂದೆ ನೀನೆ ಅಯ್ಯ ಎನಗೆ, ತಾಯಿ ನೀನೆ ಅಯ್ಯ ಎನಗೆ, ಬಂಧು ನೀನೆ ಅಯ್ಯ ಎನಗೆ, ಬಳಗ ನೀನೆ ಅಯ್ಯ ಎನಗೆ, ಗತಿಯು ನೀನೆ ಅಯ್ಯ ಎನಗೆ, ಮತಿಯು ನೀನೆ ಅಯ್ಯ ಎನಗೆ, ಸಕಲ ಚೈತನ್ಯವು ನೀನೆ ಅಯ್ಯ ಎನಗೆ. ಅಖಂಡೇಶ್ವರಾ, ನೀನೆ ದಿಕ್ಕಲ್ಲದೆ ಮತ್ತಾರೂ ಇಲ್ಲವಯ್ಯ ಎನಗೆ.
--------------
ಷಣ್ಮುಖಸ್ವಾಮಿ
ತನು ನಿಮ್ಮದಾದ ಬಳಿಕ ಎನಗೆ ಬೇರೆ ತನುವಿಲ್ಲವಯ್ಯಾ. ಮನ ನಿಮ್ಮದಾನ ಬಳಿಕ ಎನಗೆ ಬೇರೆ ಮನವಿಲ್ಲವಯ್ಯಾ. ಧನ ನಿಮ್ಮದಾದ ಬಳಿಕ ಎನಗೆ ಬೇರೆ ಧನವಿಲ್ಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತ್ರಿಕೂಟಗಿರಿಯಲ್ಲಿ ತ್ರಿಣಯನ ಕುಳ್ಳಿರಿಸಿ ತ್ರಿಕಾಲ ಪೂಜೆಯ ಮಾಡಬಲ್ಲಾತನೆ ತ್ರಿಲೋಕದೊಡೆಯನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ, ಸದ್‍ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ, ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಭಕ್ತಿ, ಸುಗಂಧಪದಾರ್ಥ, ಗಂಧಪ್ರಸಾದ, ನಿವೃತ್ತಿಕಲೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಋಗ್ವೇದ- ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು. ದಂಡಕಾಕೃತಿ, ಮಕಾರಪ್ರಣಮ, ಸಾಧಿಷಾ*ನಚಕ್ರ, ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ, ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ, ನೈಷಿ*ಕಭಕ್ತಿ , ಸುರಸಪದಾರ್ಥ, ರಸಪ್ರಸಾದ, ಪ್ರತಿಷಾ*ಕಲೆ, ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಯುಜುರ್ವೇದ ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು. ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ, ನಿರಹಂಕಾರವೆ ಹಸ್ತ , ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ , ಸಾವಧಾನಭಕ್ತಿ , ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಸಾಮವೇದ- ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು. ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ, ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ , ಜಂಗಮಲಿಂಗ, ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ , ಅನುಭಾವಭಕ್ತಿ , ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ- ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು. ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ, ಸುಜ್ಞಾನವೆ ಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಪರಾಶಕ್ತಿ , ಆನಂದ ಭಕ್ತಿ , ಸುಶಬ್ದಪದಾರ್ಥ, ಶಬ್ದಪ್ರಸಾದ, ಶಾಂತ್ಯತೀತಕಲೆ, ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ, ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ- ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು. ಒಂಕಾರಾಕೃತಿ, ಒಂಕಾರಪ್ರಣಮ, ಆಜ್ಞೇಯಚಕ್ರ, ಐಕ್ಯನೆ ಅಂಗ, ಸದ್‍ಭಾವಹಸ್ತ, ಮಹಾಲಿಂಗ, ಹೃದಯವೆಂಬ ಮುಖ, ಚಿಚ್ಛಕ್ತಿ , ಸಮರಸಭಕ್ತಿ , ಸುತೃಪ್ತಿಪದಾರ್ಥ, ತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ, ಗಾಯತ್ರಿಯೆಂಬ ವೇದ- ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು. ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ, ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನು ಲಿಂಗವಾದ ಶರಣಂಗೆ ತಾಪತ್ರಯಂಗಳಿಲ್ಲ. ಮನ ಲಿಂಗವಾದ ಶರಣಂಗೆ ಮಾಯಾವಾಸನಂಗಳಿಲ್ಲ. ಪ್ರಾಣ ಲಿಂಗವಾದ ಶರಣಂಗೆ ಪ್ರಪಂಚಿನ ಕುರುಹಿಲ್ಲ. ಸರ್ವಾಂಗಲಿಂಗವಾದ ಶರಣಂಗೆ ಗರ್ವ ಅಹಂಕಾರವಿಲ್ಲ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಾ ಒಳ್ಳೆಯವನಾದಡೆ ಸರ್ವರೂ ತನಗೆ ಒಳ್ಳೆಯವರಾಗಿರ್ಪರು. ತಾ ಹೀನನಾದಡೆ ಸರ್ವರೂ ತನಗೆ ಹೀನರಾಗಿರ್ಪರು. ತಾ ಒಳ್ಳೆಯವನಾಗಿ ಸರ್ವರೂ ತನಗೆ ಹೀನರಾದಡೆ ಅದು ತನ್ನ ಪೂರ್ವದ ಕರ್ಮ. ತಾ ಹೀನನಾಗಿ ಸರ್ವರೂ ತನಗೆ ಒಳ್ಳೆಯವರಾದಡೆ ಅದು ತನ್ನ ದೈವದ ಬಲವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವ ನಿಮಗೆ ಸಮರ್ಪಿಸಿಹೆನೆಂದಡೆ ತನುವಿಲ್ಲವಯ್ಯ ಎನಗೆ. ಅದೇನುಕಾರಣವೆಂದೊಡೆ, ನೀವು ಗುರುವಾಗಿ ಬಂದೆನ್ನ ತನುವನೊಳಕೊಂಡಿರ್ಪಿರಾಗಿ. ಮನವ ನಿಮಗರ್ಪಿಸಿಹೆನೆಂದಡೆ ಮನವಿಲ್ಲವಯ್ಯ ಎನಗೆ. ಅದೇನುಕಾರಣವೆಂದೊಡೆ, ನೀವು ಲಿಂಗವಾಗಿ ಬಂದೆನ್ನ ಮನವನೊಳಕೊಂಡಿರ್ಪಿರಾಗಿ. ಧನವ ನಿಮಗರ್ಪಿಸಿಹೆನೆಂದಡೆ ಧನವಿಲ್ಲವಯ್ಯ ಎನಗೆ. ಅದೇನುಕಾರಣವೆಂದೊಡೆ, ನೀವು ಜಂಗಮವಾಗಿ ಬಂದೆನ್ನ ಧನವನೊಳಕೊಂಡಿರ್ಪಿರಾಗಿ. ಅದು ಕಾರಣ ಎನ್ನ ತನುವೆ ಗುರು, ಮನವೇ ಲಿಂಗ, ಧನವೇ ಜಂಗಮವಾಯಿತ್ತಾಗಿ, ಅಖಂಡೇಶ್ವರಾ, ನಾ ನಿಮ್ಮೊಳಡಿಗಿರ್ದೆನಯ್ಯ.
--------------
ಷಣ್ಮುಖಸ್ವಾಮಿ
ತನುವಂಚನೆಯಿಲ್ಲದೆ ಮಾಡುವಾತನೇ ಭಕ್ತ ; ಮನವಂಚನೆಯಿಲ್ಲದೆ ಕೂಡುವಾತನೇ ಭಕ್ತ ; ಧನವಂಚನೆಯಲ್ಲಿದೆ ನೀಡುವಾತನೇ ಸದ್‍ಭಕ್ತ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ, ಆ ಭಾವವೆನಗೆ ತಿಳಿಯದು. ಮನವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ, ಆ ಭಾವವೆನಗೆ ತಿಳಿಯದು. ಧನವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ, ಆ ಭಾವವೆನಗೆ ತಿಳಿಯದು. ಸತಿ ಇದ್ದ ಮನೆಗೆ ಪತಿಯೊಲಿದು ಬರುವಂತೆ ನೀವೇ ಒಲಿದು ಬಂದು ಎನ್ನ ತನು ಮನ ಧನದಲ್ಲಿ ಭರಿತನಾಗಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತೆಂಗಿಗೆ ನೀರನೆರೆದರೆ ಅಂಗೈಯಲ್ಲಿ ಫಲವು ಕಾಣುವಂತೆ ಜಂಗಮಕ್ಕೆ ಅನ್ನ ಉದಕಂಗಳ ನೀಡಿದ ಫಲವು ಮೇರುಪರ್ವತಕ್ಕೆ, ಸಪ್ತಸಮುದ್ರಕ್ಕೆ ಸಮಾನವಹುದು. ಅದಲ್ಲದೆ ಒಂದೊಂದು ಅಗುಳಿಗೆ ಕೋಟ್ಯನುಕೋಟಿ ಯಜ್ಞಂಗಳ ಮಾಡಿದ ಫಲವಹುದು. ಅದೆಂತೆಂದೊಡೆ : ``ಕ್ಷಿಪ್ತಂ ಕ್ಷಿಪ್ತಂ ಮಹಾದೇವಿ ಕೋಟಿಯಜ್ಞಫಲಂ ಭವೇತ್ | ಅಲ್ಪಬೀಜಾತ್ ಮಹಾವೃಕ್ಷೋ ಯಥಾ ಭವತಿ ಪಾರ್ವತೀ ||'' ಮತ್ತಂ, ``ಅನ್ನಂ ವಾ ಜಲಮಾತ್ರಂ ವಾ ಯದ್ ದತ್ತಂ ಲಿಂಗಧಾರಿಣೇ | ತದನ್ನಂ ಮೇರುಸದೃಶಂ ತಜ್ಜಲಂ ಸಾಗರೋಪಮಮ್ ||'' ಎಂದುದಾಗಿ, ಜಂಗಮದಲ್ಲಿ ನಮ್ಮ ಅಖಂಡೇಶ್ವರಲಿಂಗದ ತೃಪ್ತಿ ನೋಡಾ.
--------------
ಷಣ್ಮುಖಸ್ವಾಮಿ
ತೆರಹಿಲ್ಲ ತೆರಹಿಲ್ಲವಯ್ಯಾ ನಡೆನೋಟಕ್ಕೆ. ತೆರೆಹಿಲ್ಲ ತೆರಹಿಲ್ಲವಯ್ಯಾ ನುಡಿಗಡಣಕ್ಕೆ. ತೆರಹಿಲ್ಲ ತೆರಹಿಲ್ಲವಯ್ಯಾ ಮನಜ್ಞಾನಕ್ಕೆ. ತೆರಹಿಲ್ಲ ತೆರಹಿಲ್ಲವಯ್ಯಾ ಭಾವಭಾವಕ್ಕೆ. ಅಖಂಡೇಶ್ವರಾ, ಎಲ್ಲವು ನೀವೆ ಆದಿರಿ. ನಿಮ್ಮೊಳಗೆ ನೀವೆ ಸುಳಿಯುತಿರ್ಪಿರಿ. ನಿಮ್ಮ ನೀವೆ ಅರಿಯುತಿರ್ಪಿರಯ್ಯಾ.
--------------
ಷಣ್ಮುಖಸ್ವಾಮಿ
ತೊತ್ತಿಂಗೆ ಒಡತಿಯ ಬಲವಯ್ಯ. ಬಡವಂಗೆ ಬಲ್ಲಿದನ ಬಲವಯ್ಯ. ಆಳಿಂಗೆ ಅರಸನ ಬಲವಯ್ಯ. ನನಗೆ ನಮ್ಮ ಗುರುಲಿಂಗಜಂಗಮದ ಬಲವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತಾನೇ ಗುರುವಾಗಿ ಗುರುಭಕ್ತಿಯ ಮಾಡುತಿರ್ಪನು. ತಾನೇ ಲಿಂಗವಾಗಿ ಲಿಂಗಪೂಜೆಯ ಮಾಡುತಿರ್ಪನು. ತಾನೇ ಜಂಗಮವಾಗಿ ಜಂಗಮದಾಸೋಹವ ಮಾಡುತಿರ್ಪನು. ತಾನೇ ಪಾದೋದಕ ಪ್ರಸಾದವಾಗಿ ಪಾದೋದಕ ಪ್ರಸಾದವ ಸೇವನೆಯ ಮಾಡುತಿರ್ಪನು. ತಾನೇ ವಿಭೂತಿ ರುದ್ರಾಕ್ಷಿಯಾಗಿ ವಿಭೂತಿ ರುದ್ರಾಕ್ಷಿಯ ಧರಿಸುತಿರ್ಪನು. ತಾನೇ ಮಂತ್ರವಾಗಿ ಶಿವಮಂತ್ರವ ಜಪಿಸುತಿರ್ಪನು. ಇಂತೀ ಅಷ್ಟಾವರಣವೇ ಅಂಗವಾಗಿ, ಅಷ್ಟಾವರಣವೆ ಲಿಂಗವಾಗಿ, ಅಷ್ಟಾವರಣವೇ ಸಂಗವಾಗಿ, ಅಷ್ಟಾವರಣವೇ ಸಮರಸವಾಗಿರ್ಪ ಸದ್‍ಭಕ್ತನು ಸಾಕ್ಷಾತ್ ಪರವಸ್ತುವು ತಾನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿನಲ್ಲಿ ಗುರುಭಕ್ತಿಯಿಂಬುಗೊಂಡು, ಮನದಲ್ಲಿ ಲಿಂಗಭಕ್ತಿಯಿಂಬುಗೊಂಡು, ಆತ್ಮದಲ್ಲಿ ಜಂಗಮಭಕ್ತಿಯಿಂಬುಗೊಂಡು, ಪ್ರಾಣದಲ್ಲಿ ಪ್ರಸಾದಭಕ್ತಿಯಿಂಬುಗೊಂಡು, ಇಂತೀ ಚತುರ್ವಿಧಸ್ಥಾನದಲ್ಲಿ ಚತುರ್ವಿಧಭಕ್ತಿ ನೆಲೆಗೊಂಡ ಮಹಾಭಕ್ತರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿನ ಕೈಯಲ್ಲಿ ಮೂರ್ತಿಗೊಂಡಿರ್ದ ಘನಮಹಾಲಿಂಗದೊಡನೆ ಮನ ಬಂದು ಬೇಟವ ಮಾಡಲು ತನುಮನವೆರಡು ಉರಿನುಂಗಿನ ಕರ್ಪುರದಂತೆ ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...