ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತ ನಿರ್ಮಲವಾದಾತ್ಮನು ಭಕ್ತಿಯಿಂದೆ ಸತ್ಯಶರಣರಲ್ಲಿ ತತ್ವಾನುಭಾವವ ಬೆಸಗೊಂಡರೆ ನಿತ್ಯ ಶಿವಪದ ಘಟಿಸುವುದಕ್ಕೆ ತಡವಿಲ್ಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಚತುರ್ವೇದಿಗಳಾದ ಶತಕೋಟಿ ಬ್ರಾಹ್ಮಣರಿಗೆ ನಿತ್ಯ ಭೋಜನ ಮಾಡಿಸಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ ! ಸಪ್ತಕೋಟಿ ಕೆರೆಯ ಕಟ್ಟಿಸಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ ! ಅಶ್ವಯಜ್ಞಂಗಳ ಸಹಸ್ರಕೋಟಿ ಮಾಡಿದ ಫಲವು, ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ ! ಅದೆಂತೆಂದೊಡೆ : ``ಶತಕೋಟಿ ವೇದವಿಪ್ರಾಣಾಂ ತಟಾಕ ಸಪ್ತಕೋಟಿನಾಮ್ | ವಾಜಿಕೋಟಿ ಸಹಸ್ರಾಣಾಮೇಕಭಿಕ್ಷಾ ಸಮರ್ಪಣಮ್||'' ಎಂದುದಾಗಿ, ನಮ್ಮ ಅಖಂಡೇಶ್ವರಸ್ವರೂಪವಾದ ನಿಜಜಂಗಮಕ್ಕೆ ನೀಡಿದ ಫಲಕ್ಕೆ ಇನ್ನಾವ ಫಲವು ಸರಿಯಿಲ್ಲ ನೋಡಿರೊ !
--------------
ಷಣ್ಮುಖಸ್ವಾಮಿ
ಚಿತ್ತದೊಲ್ಲಭನ ಕಾಣದೆ ಚಿಂತೆಗೊಂಡಿತ್ತು ನೋಡಾ ಎನ್ನ ಮನವು. ಹೊತ್ತಿನ ಗೊತ್ತಿಗೆ ಬಾರದಿರ್ದಡೆ ಹೊತ್ತು ಹೋಗದು ಕೇಳಿರೆ. ಕರ್ತೃ ಅಖಂಡೇಶ್ವರನು ಬಾರದಿರ್ದಡೆ ಕತ್ತಲೆಯ ಕಳೆಯಲಾರೆನವ್ವಾ.
--------------
ಷಣ್ಮುಖಸ್ವಾಮಿ
ಚಂದ್ರಶಿಲೆಯ ಮಂಟಪದೊಳಗೆ ಇಂದುಧರನ ಪೂಜೆಯ ವಿಸ್ತಾರವ ನೋಡಾ ! ಬಂದು ನೆರೆದಿರ್ಪರು ಸಕಲ ಗಣಂಗಳು. ಚಂದ್ರಜ್ಯೋತಿಯ ಸಾಲುಸಾಲಿನ ಸೊಬಗು ನೋಡಾ ! ಅಲ್ಲಿ ಚಂದಚಂದದ ದುಂದುಭಿನಾದ ಮೊಳಗುತಿರ್ಪುವು. ಇದರಂದವನೇನ ಹೇಳುವೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಚಂದ್ರಸೂರ್ಯರೆನಿಸುವ ವಾಮದಕ್ಷಿಣ ನೇತ್ರಂಗಳಮಧ್ಯದಲ್ಲಿ ತಾರಕಂಗಳಾಗಿರ್ದ ಊಧ್ರ್ವಮುಖವಪ್ಪುದರಿಂದೆ ಚಲಿಸದೆ ಜಪಿಸುತಿರ್ಪ ಜೀವಚೈತನ್ಯಸೂತ್ರಕ್ಕೆ ಮುಖ್ಯವಾದ ಪರಮಸೂಕ್ಷ್ಮದ್ವಾರಗಳಿಂ ಕೂಡಿದ ನೀಲಬಿಂದುಗಳೆರಡನು ಶ್ರೀಗುರೂಪದೇಶದಿಂದೆ ಲೇಸಾಗಿ ತಿಳಿದು ಆ ತಾರಕಬ್ರಹ್ಮವನಭ್ಯಾಸಂಗೈವಾತನೆ ರಾಜಯೋಗಿ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಚಂದ್ರಸಾಲೆಯಲ್ಲಿ ಬಂದು ನಿಂದವನಾರೆಂದು ನೋಡಹೋದಡೆ. ಅಲ್ಲಿ ಹೊಂದಿ ಎನ್ನ ನೆರೆದನವ್ವಾ. ಆತನ ಸೌಂದರ್ಯ ಕೋಟಿಕಂದರ್ಪರಂತಿರ್ದುದವ್ವಾ. ಆತನಂಗದ ಬೆಳಗು ಅನಂತಕೋಟಿ ಸೂರ್ಯರ ಪ್ರಭೆಯಂತಿರ್ದುದವ್ವಾ. ಅಖಂಡೇಶ್ವರನೆಂಬ ನಲ್ಲನ ಅಂಗಶೃಂಗಾರದ ಬೆಳಗ ನೋಡಲಮ್ಮದೆ ಕಂಗಳ ಮುಚ್ಚಿ ನೆರೆದೆನವ್ವಾ.
--------------
ಷಣ್ಮುಖಸ್ವಾಮಿ
ಚರಣದೊಳಗೆ ಚರಣವಿಟ್ಟು ನಡೆವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಕರದೊಳಗೆ ಕರವನಿಟ್ಟು ಮುಟ್ಟುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಘ್ರಾಣದೊಳಗೆ ಘ್ರಾಣವನಿಟ್ಟು ವಾಸಿಸುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಜಿಹ್ವೆಯೊಳಗೆ ಜಿಹ್ವೆಯನಿಟ್ಟು ರುಚಿಸುವ ಭೇದವು ನಿಮ್ಮ ಶರಣರಿಗಲ್ಲದ ಉಳಿದವರಿಗಳವಡದು ನೋಡಾ. ಕಂಗಳೊಳಗೆ ಕಂಗಳನಿಟ್ಟು ನೋಡುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಕಿವಿಯೊಳಗೆ ಕಿವಿಯನಿಟ್ಟು ಕೇಳುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಮನದೊಳಗೆ ಮನವನಿಟ್ಟು ನೆನೆವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಭಾವದೊಳಗೆ ಭಾವವನಿಟ್ಟು ಸುಳಿವ ಭೇದವು ನಿಮ್ಮ ಶರಣ ಸಂಗನಬಸವಣ್ಣ ಪ್ರಭುವಿನ ಸಂತತಿಗಳಿಗಲ್ಲದೆ ಉಳಿದವರಿಗಳವಡದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಚತುರ್ಭೂತಂಗಳನೊಳಕೊಂಡು ನೀಲಲೋಹಿತಾದಿ ವರ್ಣಂಗಳಿಲ್ಲದಿಹುದೆ ಭೂತಾಕಾಶವೆನಿಸುವುದು. ಅದನೊಳಗೊಂಡುದು ನೀಲವರ್ಣಮಾದ ಸ್ಥೂಲಾಕಾಶವೆನಿಸುವುದು. ಅದನೊಳಗೊಂಡುದು ಅರುಣವರ್ಣಮಾದ ಮಹದಾಕಾಶವೆನಿಸುವುದು. ಅದನೊಳಗೊಂಡುದು ಶ್ವೇತವರ್ಣಮಾದ ತತ್ತ್ವಾಕಾಶವೆನಿಸುವುದು. ಈ ಚತುರ್ವಿಧದಾಕಾಶವನೊಳಗೊಂಡುದು ಕೋಟಿಸೂರ್ಯಪ್ರಕಾಶಮಾದ ಬಿಂದ್ವಾಕಾಶವೆನಿಸುವುದಾಗಿ, ಕಣ್ಣಮುಂದಣ ಬಯಲಿನೊಳಗೆ ಕ್ರಮದಿಂದಾಯಾಯ ಆಕಾಶಂಗಳನು ಕಾಣ್ಬುದೆ ಮಧ್ಯಲಕ್ಷ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ