ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಾರನೇತಕವ್ವಾ ನಮ್ಮನೆಯಾತ ? ತೋರನೇತಕವ್ವಾ ತನ್ನ ದಿವ್ಯರೂಪವ ? ಬೀರನೇತಕವ್ವಾ ಅತಿಸ್ನೇಹವ ? ಇನ್ನೆಂತು ಸೈರಿಸುವೆನವ್ವಾ. ಹೇಗೆ ತಾಳುವೆನವ್ವಾ. ತನು ತಾಪಗೊಳ್ಳುತ್ತಿದೆ, ಮನ ತಲ್ಲಣವಾಗುತ್ತಿದೆ. ಅಖಂಡೇಶ್ವರನೆಂಬ ನಲ್ಲನ ತೋರಿಸಿ ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ.
--------------
ಷಣ್ಮುಖಸ್ವಾಮಿ
ಬಚ್ಚಬರಿಯ ಬಯಲೊಳಗೊಂದು ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು. ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ. ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ. ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ. ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ. ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ. ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ. ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ. ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾದ್ಥಿಷ್ಠಾನಚಕ್ರ. ಆ ಸ್ವಾದ್ಥಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ. ಆ ಆಧಾರಚಕ್ರಕ್ಕೆ ಚತುರ್ದಳ. ಆ ಚತುರ್ದಳದಲ್ಲಿ ಚತುರಕ್ಷರಂಗಳು. ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ. ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ. ಅದರಿಂದ ಮೇಲೆ ಸ್ವಾದ್ಥಿಷ್ಠಾನಚಕ್ರವಿರ್ಪುದು. ಆ ಚಕ್ರಕ್ಕೆ ಷಡುದಳ. ಆ ಷಡುದಳಂಗಳಲ್ಲಿ ಷಡಕ್ಷರಂಗಳು. ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ. ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ. ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು. ಆ ಚಕ್ರಕ್ಕೆ ದಶದಳ. ಆ ದಶದಳಂಗಳಲ್ಲಿ ದಶಾಕ್ಷರಂಗಳು. ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ. ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ. ಅದರಿಂದ ಮೇಲೆ ಅನಾಹತಚಕ್ರವಿರ್ಪುದು. ಆ ಚಕ್ರಕ್ಕೆ ದ್ವಾದಶದಳ. ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು. ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ. ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ. ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು. ಆ ಚಕ್ರಕ್ಕೆ ಷೋಡಶದಳ. ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು. ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ. ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ. ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು. ಆ ಚಕ್ರಕ್ಕೆ ದ್ವಿದಳ. ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು. ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ. ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ. ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು. ಆ ಚಕ್ರಕ್ಕೆ ಸಹಸ್ರದಳ. ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು. ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ. ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ. ಅದರಿಂದ ಮೇಲೆ ಶಿಖಾಚಕ್ರವಿರ್ಪುದು. ಆ ಚಕ್ರಕ್ಕೆ ತ್ರಿದಳ. ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು. ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ. ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ. ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು. ಆ ಚಕ್ರಕ್ಕೆ ಏಕದಳ. ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು ವಾಚಾತೀತವೆನಿಸುವ ನಿರಂಜನಪ್ರಣವ. ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ. ಇಂತೀ ತರುವಾಯದಿಂದೆ ಆಧಾರ ಸ್ವಾದ್ಥಿಷ್ಠಾನದಲ್ಲಿ ಲಯ, ಆ ಸ್ವಾದ್ಥಿಷ್ಠಾನ ಮಣಿಪೂರಕದಲ್ಲಿ ಲಯ. ಆ ಮಣಿಪೂರಕ ಅನಾಹತದಲ್ಲಿ ಲಯ. ಆ ಅನಾಹತ ವಿಶುದ್ಧಿಯಲ್ಲಿ ಲಯ. ಆ ವಿಶುದ್ಧಿ ಆಜ್ಞೆಯಲ್ಲಿ ಲಯ. ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ. ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ. ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ. ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ. ಆ ಅಣುಚಕ್ರ ನಿರವಯಲಲ್ಲಿ ಲಯ. ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು.
--------------
ಷಣ್ಮುಖಸ್ವಾಮಿ
ಬಣ್ಣವಿಲ್ಲದ ಪಕ್ಷಿ ಕಣ್ಣಿನ ಕೊನೆಯಲ್ಲಿ ಸಣ್ಣಗೂಡನಿಕ್ಕಿ ಸುಳಿವುದ ಕಂಡೆ. ಬಣ್ಣ ಮೂವತ್ತಾರ ನುಂಗಿತ್ತ ಕಂಡೆ. ಬಯಲ ಸೀಮೆಯ ವಾಸವಾಗಿರ್ಪ ಪಕ್ಷಿ ಹೆಣ್ಣೋ ಗಂಡೋ ಎಂದು ಕುರುಹವಿಡಿವ ಅಣ್ಣಗಳನಾರನೂ ಕಾಣೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಳಿಕ ನಿಯಮದ ಲಕ್ಷಣವೆಂತೆಂದೊಡೆ : ಸಕಲ ವಿಷಯಂಗಳಲ್ಲಿ ಉದಾಸೀನತ್ವವು. ಶಿವಾಗಮೋಕ್ತಂಗಳಲ್ಲಿ ವಿಶ್ವಾಸವು. ಸತ್‍ಕೃತ್ಯದಲ್ಲಿ ಎರಕತೆಯು. ದೇಹಶೋಷಣರೂಪವಾದ ತಪವು. ನಾನಾರು ಮೋಕ್ಷವೆಂತಪ್ಪುದು ಎಂಬಾಲೋಚನೆಯು. ಭಸ್ಮನಿಷ್ಠಾದಿ ವ್ರತವು, ಶಿವಲಿಂಗಾರ್ಚನೆಯು. ಪ್ರಣವ ಪಂಚಾಕ್ಷರಾದಿ ಮಂತ್ರಜಪವು. ಲೋಕವಿರುದ್ಧ ವೇದವಿರುದ್ಧವಾದ ಮಾರ್ಗಂಗಳಲ್ಲಿ ಮನವೆರಗದಿಹುದು. ಯೋಗಶಾಸ್ತ್ರಂಗಳ ಕೇಳುವುದು. ಸತ್‍ಪಾತ್ರದಾನಯುಕ್ತವಾಗಿಹುದು ನಿಯಮಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಳಿಕೀ ಪ್ರಕಾರಮಾದ ಹಠಯೋಗರೂಪಮಪ್ಪ ಅಷ್ಟಾಂಗಗಳಂ ನಿರಾಲಸ್ಯದಿಂ ಎಡೆಬಿಡುವಿಲ್ಲದೆ ಮಾಡಿದಾತಂಗೆ ಆಗುವ ಸಿದ್ಧಿಪ್ರಕಾರಗಳೆಂತೆನೆ : ಮೊದಲನೆಯ ವರ್ಷದಲ್ಲಿ ನಿರೋಗಿಯಾಗಿ ಸಕಲಜನ ಪ್ರೀತನಾಗುವನು. ಎರಡನೆಯ ವರ್ಷದಲ್ಲಿ ಸುಸಂಸ್ಕøತ ಭಾಷೆಯಿಂದ ಕವಿತ್ವವಂ ಮಾಡುವನು. ಮೂರನೆಯ ವರ್ಷದಲ್ಲಿ ಸರ್ಪಾದಿ ದುಷ್ಟಪ್ರಾಣಿಗಳಿಂದೆ ಬಾಧಿಸಿಕೊಳ್ಳುತಿರನು. ನಾಲ್ಕನೆಯ ವರ್ಷದಲ್ಲಿ ಹಸಿವು ತೃಷೆ ವಿಷಯ ನಿದ್ರೆ ಶೋಕ ಮೋಹಾದಿಗಳಂ ಬಿಡುವನು. ಐದನೆಯ ವರ್ಷದಲ್ಲಿ ದೂರಶ್ರವಣ ವಾಕ್ಸಿದ್ಧಿ ಪರಕಾಯಪ್ರವೇಶಾಧಿಕವುಳ್ಳಾತನಹನು. ಆರನೆಯ ವರ್ಷದಲ್ಲಿ ವಜ್ರಾದ್ಯಾಯುಧಗಳಿಂದೆ ಭೇದಿಸಲ್ಪಡದಾತನಾಗಿ, ಶೀಘ್ರಗಾಮಿಯಾಗಿ ದೂರದರ್ಶನವುಳ್ಳಾತನಾಗುವನು. ಏಳನೆಯ ವರ್ಷದಲ್ಲಿ ಖೇಚರಗಾಮಿಯಾಗುವನು. ಎಂಟನೆಯ ವರ್ಷದಲ್ಲಿ ಅಣಿಮಾದಿ ಅಷ್ಟಮಹದೈಶ್ವರ್ಯಸಂಪನ್ನನಾಹನು. ಒಂಬತ್ತನೆಯ ವರ್ಷದಲ್ಲಿ ಸ್ವೇಚ್ಛಾಗಮನಿಯಾಗಿ ವಜ್ರಶರೀರಿಯಾಹನು. ಹತ್ತನೆಯ ವರ್ಷದಲ್ಲಿ ಮನೋಯೋಗಿಯಾಗಿ ಇಚ್ಛಾವಿಷಯಂಗಳ ಪಡೆಯುವನು. ಹನ್ನೊಂದನೆಯ ವರ್ಷದಲ್ಲಿ ಸಕಲ ಲೋಕಂಗಳಿಗೆ ಆಜ್ಞಾಕರ್ತೃವಾಹನು. ಹನ್ನೆರಡನೆಯ ವರ್ಷದಲ್ಲಿ ಶಿವನ ಸಮಾನವಾಗಿ ಸೃಷ್ಟಿಸ್ಥಿತಿಲಯಂಗಳಂ ಮಾಡುತಿರ್ಪುದೇ ಹಠಯೋಗಸಿದ್ಧಿ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು ಚಿದ್‍ಬಯಲೆಂಬ ಶಿಶು ಹುಟ್ಟಿತ್ತು. ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು, ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು. ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು. ಆ ಜೋಗುಳದ ಉಲುಹು ಅಡಗಿದೊಡನೆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು. ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು. ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಬೀಜದೊಳಗೆ ಅಂಕುರವಿರ್ಪುದು. ಅಂಕುರದೊಳಗೆ ಬೀಜವಿರ್ಪುದು. ಅಂಕುರ ಬೀಜವೆಂದು ಹೆಸರು ಎರಡಾದಡೇನು ? ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ ಬಸವಣ್ಣನೆ ಶಿವನು, ಶಿವನೆ ಬಸವಣ್ಣನು. ಬಸವಣ್ಣ ಶಿವನೆಂಬ ಹೆಸರೆರಡಾದಡೇನು ? ಅಖಂಡವಸ್ತು ಒಂದೇ ಆದಕಾರಣ, ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ ದೇವರದೇವಾ.
--------------
ಷಣ್ಮುಖಸ್ವಾಮಿ
ಬುದ್ಧಿಗೂಡದು ನಿದ್ರೆಬಾರದು ಎನಗೆ, ಸುದ್ದಿ ಹೇಳಿರೆ ಆತಗೆ. ಸದ್ದಿಲ್ಲದೆ ಎದ್ದು ಹೋದನು ನೋಡಿರೆ, ಮುದ್ದಿಸಿ ಮುನಿಸು ತಿಳುಪಿ ಇದ್ದಲ್ಲಿಗೆ ಕರೆದು ತನ್ನಿರೆ ಅಖಂಡೇಶ್ವರನೆಂಬ ಶಿವನ.
--------------
ಷಣ್ಮುಖಸ್ವಾಮಿ
ಬಾರಯ್ಯ ಬಾರಯ್ಯ ಭಕ್ತದೇಹಿಕದೇವನೆ. ಬಾರಯ್ಯ ಬಾರಯ್ಯ ಭಕ್ತವತ್ಸಲನೆ. ಬಾರಯ್ಯ ಬಾರಯ್ಯ ಭಕ್ತಜನಪ್ರಿಯನೆ. ಬಾರಯ್ಯ ಬಾರಯ್ಯ ಭಕ್ತಜನಬಂಧುವೆ. ಬಾರಯ್ಯ ಬಾರಯ್ಯ ಭಕ್ತಜನ ಮನೋವಲ್ಲಭನೆ. ಬಾರಯ್ಯ ಬಾರಯ್ಯ ಅಖಂಡೇಶ್ವರಾ ನೀ ಎನ್ನ ಪರಮ ಹೃದಯಮಂದಿರಕ್ಕೆ.
--------------
ಷಣ್ಮುಖಸ್ವಾಮಿ
ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು ಬಹಿರ್ಗತವಾದಂತೆ, ಮುಗಿಲಮರೆಯಲ್ಲಿ ಅಡಗಿರ್ದ ಕ್ಷಣಿತವು ಸ್ಫುರಿಸಿದಂತೆ, ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನವು ತನ್ನ ಲೀಲೆಯಿಂದೆ ತಾನೇ ಉದಯವಾಗಲು ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಹುಕ್ರಿಯೆಯ ನಟಿಸದೆ, ಬಹುಶಾಸ್ತ್ರಕ್ಕೆ ಮುಖವಾಗದೆ, ಬಹುವ್ಯಾಪಾರದಲ್ಲಿ ತೊಳಲದೆ, ಬಹುಭಾಷಾವಂತನಾಗದೆ, ಹುಸಿ ಕಳವು ಪರದಾರ ಹಿಂಸೆಗೆ ಚಿತ್ತವೆಳಸದೆ, ಸುಖದುಃಖಕ್ಕೆ ಚಿಂತಿಸದೆ ನಿಂದೆಸ್ತುತಿಗಳಿಗೆ ಹಿಗ್ಗಿಕುಗ್ಗದೆ, ಹಿಂದುಮುಂದನೆಣಿಸದೆ, ಹಿರಿಯತನಕ್ಕೆ ಹೋಗದೆ, ಶಿವಜ್ಞಾನಸಂಪನ್ನನಾಗಿ, ಶಿವಮಂತ್ರಸುಯಿಧಾನಿಯಾಗಿ, ಶಿವಧ್ಯಾನಪರಾಯಣನಾಗಿ, ಏಕಾಂತವಾಸಿಯಾಗಿ, ಭಿಕ್ಷಾಹಾರಿಯಾಗಿ, ಅಂಗ ಮನದಾಸೆಯು ಹಿಂದುಳಿದು, ಲಿಂಗದ ನೆನಹು ಮುಂದುಕೊಂಡು, ಶಿವನಾಣತಿಯಿಂದೆ ಬಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿ, ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ ಸರ್ವಾಂಗದಲ್ಲಿ ಭರಿತವಾಗಿ, ಕರ್ಪುರವು ಉರಿಯನಪ್ಪಿ ನಿರ್ವಯಲಾದಂತೆ, ತನುವು ಇಷ್ಟಲಿಂಗವನಪ್ಪಿ ಮನವು ಪ್ರಾಣಲಿಂಗವನಪ್ಪಿ ಭಾವವು ಅಖಂಡ ಬಯಲಬ್ರಹ್ಮವನಪ್ಪಿ ತಾನು ತಾನಾದ ಮಹಾಘನ ಪರಮ ವಿರಕ್ತನ ಶ್ರೀಪಾದಪದ್ಮಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಣ್ಣದಚರ್ಮದ ಹೆಣ್ಣಿನಂಗಸಂಗದಕೂಟಸುಖ ಸವಿಯೆಂದು ಮನವೆಳಸುವ ಕಣ್ಣುಗೆಟ್ಟಣ್ಣಗಳು ನೀವು ಕೇಳಿರೋ ! ಶುನಿ ಎಲುವ ಕಡಿವಲ್ಲಿ ತನ್ನ ಬಾಯ ಲೋಳೆ ತನಗೆ ಸವಿದಟ್ಟುತಿಪ್ಪುದಲ್ಲದೆ, ಆ ಎಲುವಿನೊಳಗೇನು ಸಾರಸವಿಯುಂಟೆ ? ತನ್ನ ಊಧ್ರ್ವಬಿಂದು ಮಾಯಾವಶದಿಂದೆ ಅಧೋಗತಿಗಿಳಿದು ಮೂತ್ರನಾಳ ತಗುಲಿ ಕಿಂಚಿತ್‍ಸುಖ ಉಂಟಾಗುತಿಪ್ಪುದಲ್ಲದೆ ಆ ಹೆಣ್ಣಿನಿಂದೇನು ಸುಖವುಂಟೆ ? ಎಡ್ಡ ಪ್ರಾಣಿಗಳಿರಾ ! ಇಂತೀ ದೃಷ್ಟವ ತಿಳಿದು ಭೇದಿಸಿ ಕಾಣಲರಿಯದೆ ಹೇಸಿಕೆಯ ಕಿಸುಕುಳದ ಕೀವುತುಂಬಿ ಒಸರುವ ಹಸಿಯತೊಗಲಿನ ಹಳೆಯಗಾಯದಲ್ಲಿ ವಿಷಯಾತುರದಿಂದೆ ಬಿದ್ದು ಮತಿಮಸುಳಿಸಿ ಮುಂದುಗಾಣದೆ ಮುಳುಗಾಡುತಿಪ್ಪುದು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಸವನ ನಾಮವು ಕಾಮಧೇನು ಕಾಣಿರೊ. ಬಸವನ ನಾಮವು ಕಲ್ಪವೃಕ್ಷ ಕಾಣಿರೊ. ಬಸವನ ನಾಮವು ಚಿಂತಾಮಣಿ ಕಾಣಿರೊ. ಬಸವನ ನಾಮವು ಪರುಷದಖಣಿ ಕಾಣಿರೊ. ಬಸವನ ನಾಮವು ಸಂಜೀವನಮೂಲಿಕೆ ಕಾಣಿರೊ. ಇಂತಪ್ಪ ಬಸವನಾಮಾಮೃತವು ಎನ್ನ ಜಿಹ್ವೆಯತುಂಬಿ ಹೊರಸೂಸಿ ಮನವ ತುಂಬಿತ್ತು. ಆ ಮನವತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು. ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ ಸರ್ವಾಂಗದ ರೋಮಕುಳಿಗಳನೆಲ್ಲ ವೇಧಿಸಿತ್ತಾಗಿ ನಾನು ಬಸವಾಕ್ಷರವೆಂಬ ಹಡಗವೇರಿ ಬಸವ ಬಸವ ಬಸವಾ ಎಂದು ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬೀಜದಿಂದ ಹುಟ್ಟಿದ ವೃಕ್ಷವು ಬೀಜವ ಹೋಲುವಂತೆ, ತಾಯಿಯಿಂದ ಹುಟ್ಟಿದ ಮಕ್ಕಳು ತಾಯಿಯ ಹೋಲುವಂತೆ, ಧಾನ್ಯಗಳಿಂದ ಬೆಳೆದ ಬೆಳಸು ಧಾನ್ಯಂಗಳ ಹೋಲುವಂತೆ, ಗುರುವಿನಿಂದ ಹುಟ್ಟಿದ ಶಿಷ್ಯನು ಗುರುರೂಪವಲ್ಲದೆ ಬೇರೊಂದು ರೂಪವಲ್ಲವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಾಯೊಳಗೆ ಬಾಯನಿಕ್ಕಿ ಎದೆಗೆ ಎದೆಯ ತರ್ಕೈಸಿ ಮೈಗೆ ಮೈಯ ಹೊಂದಿಸಿ ಕೂಡಿದ ಅಖಂಡೇಶ್ವರನ ಸುಖವು ಜೇನುಸಕ್ಕರೆ ಸವಿದಂತಾಯಿತ್ತು ನೋಡಿರವ್ವಾ.
--------------
ಷಣ್ಮುಖಸ್ವಾಮಿ
ಬಾಳೆಯ ಎಲೆಯ ಮೇಲೆ ತುಪ್ಪವ ತೊಡೆದಂತೆ ಒಪ್ಪವಿಟ್ಟು ವಚನವ ನುಡಿದೆನಲ್ಲದೆ, ನಡೆಯಲ್ಲಿ ಒಪ್ಪವಿಟ್ಟು ನಡೆಯಲಿಲ್ಲವಯ್ಯ ನಾನು. ನುಡಿಹೀನ, ನಡೆತಪ್ಪುಗ, ಜಡದೇಹಿ ಕಡುಪಾತಕಂಗೆ, ಒಡೆಯ ಅಖಂಡೇಶ್ವರಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲವಯ್ಯ ಎನಗೆ.
--------------
ಷಣ್ಮುಖಸ್ವಾಮಿ
ಬಾರಯ್ಯ ಬಾರಯ್ಯ ಗಂಡನೆ, ಎನ್ನ ಘ್ರಾಣವೆಂಬ ಭಾಜನದಲ್ಲಿ ಸುಗಂಧಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ಜಿಹ್ವೆಯೆಂಬ ಭಾಜನದಲ್ಲಿ ಸುರುಚಿಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ನೇತ್ರವೆಂಬ ಭಾಜನದಲ್ಲಿ ಸುರೂಪುಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ತ್ವಕ್ಕೆಂಬ ಭಾಜನದಲ್ಲಿ ಸುಸ್ಪರ್ಶನಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ಶ್ರೋತ್ರವೆಂಬ ಭಾಜನದಲ್ಲಿ ಸುಶಬ್ದಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ಮನವೆಂಬ ಭಾಜನದಲ್ಲಿ ನೆನಹೆಂಬ ಸುಯಿಧಾನವ ಗಡಣಿಸಿ ಉಣಲಿಕ್ಕುವೆನಯ್ಯಾ ನಿಮಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಾರಯ್ಯ ಬಾರಯ್ಯ ಗಂಡನೆ, ಇನ್ನೇತಕೆ ನಾಚುವೆ ನಾನು ಸರಿಮಿಂಡಿಯಾದ ಬಳಿಕ. ಇನ್ನೇತಕೆ ದಿನಕಾಲ ಹೋಗಲಾಡುವೆ, ತುಂಬಿದ ಜವ್ವನ ಸಡಿಲಿಹೋಗುತ್ತಿದೆ. ಸುರತಸಂಭ್ರಮದ ಚುಂಬನಂಗಳಿಂದ ಕೂಡಿ ಪರಿಣಾಮಗೊಳ್ಳಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ ಆವಜಾತಿಯಲ್ಲಿ ಹುಟ್ಟಿದಾತನಾದಡಾಗಲಿ, ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ ಆಚಾರಕ್ರಿಯಾಸಂಪನ್ನನಾದ ಮಹಾತ್ಮನೇ ಮೂರುಲೋಕಕ್ಕಧಿಕ ನೋಡಾ ! ಅದೆಂತೆಂದೊಡೆ : ``ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರೋ ವಾಪ್ಯಂತ್ಯಜೋýಪಿ ವಾ | ಶಿವಭಕ್ತಃ ಸದಾ ಪೂಜ್ಯಃ ಸರ್ವಾವಸ್ಥಾಂ ಗತೋýಪಿ ವಾ ||'' ಎಂದುದಾಗಿ, ಇಂತಪ್ಪ ಪರಮ ಶಿವಭಕ್ತನು ಶರಣ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬೇಕೆಂಬನಲ್ಲವಯ್ಯ ನಿಮ್ಮ ಶರಣ. ಬೇಡೆಂಬನಲ್ಲವಯ್ಯ ನಿಮ್ಮ ಶರಣ. ಲೋಕದ ನಡೆಯಂತೆ ನಡೆಯನಯ್ಯ ನಿಮ್ಮ ಶರಣ. ಕಾಕುನುಡಿ ಸಟೆ ಕುಟಿಲ ಕುಹಕ ವ್ಯಾಪಾರವ ಹೊದ್ದನಯ್ಯ ನಿಮ್ಮ ಶರಣ. ಏಕಲಿಂಗನಿಷಾ*ಪರನಾಗಿ ಆವಾವ ಪ್ರಪಂಚವನರಿಯನಯ್ಯ ನಿಮ್ಮ ಶರಣ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಸವಣ್ಣನೆ ಗುರುವೆನಗೆ, ಬಸವಣ್ಣನೆ ಲಿಂಗವೆನಗೆ, ಬಸವಣ್ಣನೆ ಜಂಗಮವೆನಗೆ, ಬಸವಣ್ಣನೆ ಪಾದೋದಕವೆನಗೆ, ಬಸವಣ್ಣನೆ ಪ್ರಸಾದವೆನಗೆ, ಬಸವಣ್ಣನೆ ವಿಭೂತಿಯೆನಗೆ, ಬಸವಣ್ಣನೆ ರುದ್ರಾಕ್ಷಿಯೆನಗೆ, ಬಸವಣ್ಣನೆ ಮೂಲಮಂತ್ರವೆನಗೆ, ಬಸವಣ್ಣನೆ ಅಷ್ಟಾವರಣವೆನಗೆ, ಬಸವಣ್ಣನೆ ಪಂಚಾಚಾರವೆನಗೆ, ಬಸವಣ್ಣನೆ ಷಟ್‍ಸ್ಥಲಬ್ರಹ್ಮವೆನಗೆ, ಬಸವಣ್ಣನೆ ಸರ್ವಾಚಾರಸಂಪತ್ತಾದನಾಗಿ ಬಸವಣ್ಣನ ಹಾಸಿಕೊಂಡು, ಬಸವಣ್ಣನ ಹೊದ್ದುಕೊಂಡು, ಬಸವಣ್ಣನ ಸುತ್ತಿಕೊಂಡು, ಬಸವಣ್ಣನ ಧರಿಸಿಕೊಂಡು, ಬಸವಣ್ಣನ ಚಿದ್‍ಗರ್ಭದೊಳಗೆ ಕುಳ್ಳಿರ್ದು ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಂಧನಕ್ಕೊಳಗಾದ ಹುಲಿಗೆ ಬಲಾತ್ಕಾರ ಉಂಟೆ ಅಯ್ಯ ? ಸಂಸಾರದಂದುಗದಲ್ಲಿ ತೊಳಲುವ ಜೀವನಿಗೆ ಮುಂದೆ ಮುಕ್ತಿಯನರಸುವ ಜ್ಞಾನ ಉಂಟೆ ಅಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಬಯಲು ಬಯಲು ಬೆರೆದಲ್ಲಿ ಮೇರೆಯುಂಟೆ ಅಯ್ಯಾ ? ಕ್ಷೀರ ಕ್ಷೀರವ ಕೂಡಿದಲ್ಲಿ ಪದರುಂಟೆ ಅಯ್ಯಾ ? ಉರಿಕರ್ಪುರಸಂಯೋಗ ನಿಷ್ಪತ್ತಿಯಾದಲ್ಲಿ ಮರಳಿ ರೂಪಿಸಿ ಹಿಡಿಯಲುಂಟೆ ಅಯ್ಯಾ ? ನಿಮ್ಮೊಳೊಡವೆರೆದ ನಿಜೈಕ್ಯನ ಕುರುಹ ಮರಳಿ ತೋರಲುಂಟೆ ಅಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಬ್ರಾಹ್ಮಣನ ದರ್ಶನ ಪಾಪದ ಪುಂಜ ನೋಡಾ. ಬ್ರಾಹ್ಮಣನಿಗೆ ಕೊಟ್ಟದಾನ ಅಪಾತ್ರ ದೋಷದಾರಿದ್ರ್ಯತೆ ನೋಡಾ. ಶಿವಭಕ್ತಿಯಿಲ್ಲದ ಬ್ರಾಹ್ಮಣನಿಗೆ ವಂದನೆಯ ಮಾಡಿದರೆ ಮುಂದೆ ಶುನಿಶೂಕರ ಬಸಿರಲ್ಲಿ ಬಪ್ಪುದು ತಪ್ಪದು ನೋಡಾ. ಅಂದೆಂತೆಂದೊಡೆ : ``ಶಿವಭಕ್ತಿವಿಹೀನಸ್ಯ ಬ್ರಾಹ್ಮಣಸ್ಯ ತು ದರ್ಶನಮ್ | ಕೃತ್ವಾ ತು ಮಾನವೋ ಯಾತಿ ಕೀಟಜನ್ಮ ಪದೇ ಪದೇ ||'' ಎಂದುದಾಗಿ, ಇಂತಪ್ಪ ಹರಿಕುಲದ ಹಾರುವರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬ್ರಹ್ಮ ದೇವನಾದಡೆ ಹಮ್ಮಿನಿಂದ ಹೋದ ತಲೆಯ ಗಮ್ಮನೆ ಪಡೆಯಲರಿಯನೇತಕೊ ? ವಿಷ್ಣು ದೇವನಾದಡೆ ಸುಟ್ಟು ಹೋದ ಮನ್ಮಥನ ಪ್ರಾಣವ ನೆಟ್ಟನೆ ಕೊಡಲರಿಯನೇತಕೊ ? ಇದನರಿಯದೆ, ಹುಟ್ಟಿಸುವಾತ ಬ್ರಹ್ಮ ರಕ್ಷಿಸುವಾತ ವಿಷ್ಣುವೆಂದು ನುಡಿವ, ಭ್ರಷ್ಟ ವಿಪ್ರರೆಂಬ ಹೊಲೆಮನದ ಹಾರುವರ ಮೆಟ್ಟಿ ಮೆಟ್ಟಿ ತುಳಿತುಳಿದು ಹೊಟ್ಟೆ ಹರಿಯಲೊದೆಯೆಂದಾತ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ