ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಾಷೆಗಳ್ಳಗೇಕೊ ಸಹಭೋಜನ ? ದ್ವೇಷಗುಣಿಗೇಕೊ ಸಹಭೋಜನ ? ವೇಷಧಾರಿಗೇಕೊ ಸಹಭೋಜನ ? ಹುಸಿಹುಂಡಗೇಕೊ ಸಹಭೋಜನ ? ಮೋಸ ಮರವೆಯಿಂದೆ ಈಶನೊಡನೆ ಸಹಭೋಜನ ಮಾಡಿದಡೆ ಭವದಲ್ಲಿ ಘಾಸಿಯಾಗುತಿರ್ಪರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು. ಮಹೇಶ್ವರನಾದಡೆ ಸಕಲಕರ್ಮವು ಕ್ಷಯವಾಗಿರಬೇಕು. ಪ್ರಸಾದಿಯಾದಡೆ ಶಿವಜ್ಞಾನಪರಾಯಣನಾಗಿರಬೇಕು. ಪ್ರಾಣಲಿಂಗಿಯಾದಡೆ ನಿತ್ಯಾನಿತ್ಯವಿಚಾರವನರಿದಿರಬೇಕು. ಶರಣನಾದಡೆ ಗರ್ವ ಅಹಂಕಾರದ ಮೊಳೆಯ ಮುರಿದಿರಬೇಕು. ಐಕ್ಯನಾದಡೆ ಬ್ಥಿನ್ನಭಾವವನಳಿದು ಮಹಾಜ್ಞಾನದೊಳಗೆ ಓಲಾಡಬೇಕು. ಅದೆಂತೆಂದೊಡೆ : ``ಭಕ್ತಿಃ ಕರ್ಮಕ್ಷಯೋ ಬುದ್ಧಿರ್ವಿಚಾರೋ ದರ್ಪಸಂಕ್ಷಯಃ | ಸಮ್ಯಗ್‍ಜ್ಞಾನಮಿತಿ ಪ್ರಾಜ್ಞೆ ೈಃ ಸ್ಥಲಷಟ್ಕಮುದಾಹೃತಮ್ ||'' ಎಂದುದಾಗಿ, ಇಂತಪ್ಪ ಷಟ್‍ಸ್ಥಲವೇದ್ಯರಾದ ಮಹಾಶರಣರ ಒಕ್ಕುಮಿಕ್ಕ ಪ್ರಸಾದವನೇ ಕರುಣಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭವಕ್ಕೆ ಬೀಜವಾದುದು ತನುವೊ ? ಮನವೊ ? ಎಂದು ವಿವರಿಸಿ ನೋಡಲು ಮನವೆ ಕಾರಣವಾಗಿಪ್ಪುದರಿಂದೆ, ಈ ಕೆಟ್ಟಮನದ ಸಂಗದಿಂದೆ ಮತ್ರ್ಯಲೋಕದಲ್ಲಿ ಹುಟ್ಟಿ ತಾಪತ್ರಯಾಗ್ನಿಯಿಂದೆ ಕಂದಿ ಕುಂದಿ ನೊಂದು ಬೆಂದೆನಯ್ಯ. ಈ ಮನದ ಸಂಗದಿಂದೆ ಭವಭವಂಗಳಲ್ಲಿ ತೊಳಲಿ ಬಳಲಿದೆನಯ್ಯ. ಈ ಮನದ ಸಂಗದಿಂದೆ ಅನಂತ ಮರವೆಯ ಚೋಹಂಗಳಲ್ಲಿ ಸೆರೆಸಿಕ್ಕಿದೆನಯ್ಯ. ಈ ಮನದ ಸಂಗವ ಬಿಡಿಸಿ ನಿಮ್ಮ ನೆನಹಿನ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತನಾದಡೆ ಲಿಂಗನಿಷಾ*ಪರನಾಗಿರಬೇಕು. ಭಕ್ತನಾದಡೆ ಜಂಗಮವೆ ಪ್ರಾಣವಾಗಿರಬೇಕು. ಭಕ್ತನಾದಡೆ ಅರ್ಥಪ್ರಾಣಾಭಿಮಾನಂಗಳು ಶಿವನ ಕೂಡಿರಬೇಕು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಾವವಿಲ್ಲದ ಬಯಲಮೂರ್ತಿಯಾದವ ಭಕ್ತ. ಆ ಭಕ್ತನ ಹೃದಯದಲ್ಲಿ ಮೂರ್ತಿಗೊಂಡಾತ ಜಂಗಮ. ಆ ಜಂಗಮದ ಅಂಗೈಯೊಳಿರ್ಪುದು ಲಿಂಗ. ಆ ಲಿಂಗದ ಗರ್ಭದೊಳಗೆ ಸಕಲ ಸ್ಥಲಕುಳಂಗಳಿರ್ಪವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತನ ನಡೆ ಶುದ್ಧ , ಭಕ್ತನ ನುಡಿ ಶುದ್ಧ , ಭಕ್ತನ ತನು ಶುದ್ಧ , ಭಕ್ತನ ಮನ ಶುದ್ಧ , ಭಕ್ತನ ಭಾವ ಶುದ್ಧ , ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ, ನೀ ಒಲಿದ ಸದ್‍ಭಕ್ತನ ಕಾಯವೇ ಕೈಲಾಸವಯ್ಯ.
--------------
ಷಣ್ಮುಖಸ್ವಾಮಿ
ಭಕ್ತಿಗೆ ಮುಖವಾದಾತನೇ ಸದ್‍ಭಕ್ತನು. ಯುಕ್ತಿಗೆ ವಿಚಾರದಲ್ಲಿದ್ದಾತನೇ ಸದ್‍ಭಕ್ತನು. ಮುಕ್ತಿಗೆ ಮುಂದುವರಿದು ನಡೆವಾತನೇ ಸದ್‍ಭಕ್ತನು. ನಮ್ಮ ಅಖಂಡೇಶ್ವರನ ಮಚ್ಚಿಸುವಾತನೇ ಮಹಾ ಸದ್‍ಭಕ್ತನು.
--------------
ಷಣ್ಮುಖಸ್ವಾಮಿ
ಭಕ್ತನಾದಡೆ ನಿರ್ವಂಚಕಭಾವದಿಂದೆ ತ್ರಿವಿಧಕ್ಕೆ ತ್ರಿವಿಧಪದಾರ್ಥವನರ್ಪಿಸಬೇಕು. ಮಹೇಶ್ವರನಾದಡೆ ತ್ರಿವಿಧವ ಬಯಸದಿರಬೇಕು. ಪ್ರಸಾದಿಯಾದಡೆ ಹುಲ್ಲುಕಡ್ಡಿ ದರ್ಪಣ ಮೊದಲಾದ ಸಕಲಪದಾರ್ಥಂಗಳ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳದಿರಬೇಕು. ಪ್ರಾಣಲಿಂಗಿಯಾದಡೆ ಪ್ರಪಂಚ ನಾಸ್ತಿಯಾಗಿರಬೇಕು. ಶರಣನಾದಡೆ ಸಕಲ ಭೋಗೋಪಭೋಗಂಗಳನು ತಾನಿಲ್ಲದೆ ಲಿಂಗಮುಖವನರಿದು ಕೊಡಬೇಕು. ಐಕ್ಯನಾದಡೆ ಸರ್ವವೂ ತನ್ನೊಳಗೆಂದರಿದು ಸರ್ವರೊಳಗೆಲ್ಲ ತನ್ನನೆ ಕಾಣಬೇಕು. ಇಂತೀ ಷಟ್‍ಸ್ಥಲದ ಅನುವನರಿದು ಆಚರಿಸುವ ಮಹಾಶರಣರ ಆಳಿನ ಆಳು ನಾನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಾವವೇ ಬ್ರಹ್ಮವಾದ ಬಳಿಕ ಇನ್ನಾವ ವೇಷವ ತೊಡಲೇತಕೋ ? ತನುವೇ ಲಿಂಗವಾದ ಬಳಿಕ ಆವ ಫಲಪದದ ಹಂಗೇತಕೊ ? ಮನದಲ್ಲಿ ತನಗೆ ತಾನೆ ಸ್ವಾತ್ಮಜ್ಞಾನ ಉದಯವಾದ ಬಳಿಕ ಇನ್ನು ಹಲವು ಶಾಸ್ತ್ರವನೋದಿ ತಿಳಿಯಬೇಕೆಂಬ ಸಂದೇಹವೇತಕೊ ? ಒಳಹೊರಗೆ ಸರ್ವಾಂಗದಲ್ಲಿ ಮಹಾಜ್ಞಾನವೆ ತುಂಬಿದ ಬಳಿಕ ಮುಂದೆ ಮುಕ್ತಿಯ ಪಡೆಯಬೇಕೆಂಬ ಭ್ರಾಮಕವೇತಕೊ ? ಇದು ಸತ್ಯದ ನಡೆಯಲ್ಲ ; ಶರಣರ ಮೆಚ್ಚಲ್ಲ ; ನಮ್ಮ ಅಖಂಡೇಶ್ವರನ ಒಲುಮೆ ಮುನ್ನವೆ ಅಲ್ಲ.
--------------
ಷಣ್ಮುಖಸ್ವಾಮಿ
ಭಯವಿಲ್ಲದ ಪ್ರಸಾದ, ನಿರ್ಭಯವಿಲ್ಲದ ಪ್ರಸಾದ, ಶೂನ್ಯವಿಲ್ಲದ ಪ್ರಸಾದ, ನಿಶ್ಶೂನ್ಯವಿಲ್ಲದ ಪ್ರಸಾದ, ಸುರಾಳವಿಲ್ಲದ ಪ್ರಸಾದ, ನಿರಾಳವಿಲ್ಲದ ಪ್ರಸಾದ, ಅಖಂಡೇಶ್ವರನೆಂಬ ಅನಾದಿಯಿಂದತ್ತತ್ತವಾದ ಅನುಪಮ ಪ್ರಸಾದದೊಳಗೆ ಮುಳುಗಿ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ
ಭಕ್ತನಾಗಬೇಕು ಭವವ ಹರಿದು. ಭಕ್ತನಾಗಬೇಕು ಸಕಲ ಪ್ರಪಂಚವ ಮರೆದು. ಭಕ್ತನಾಗಬೇಕು ಆಶಾಪಾಶವ ಹರಿದು. ಭಕ್ತನಾಗಬೇಕು ನಮ್ಮ ಅಖಂಡೇಶ್ವರನ ದಿವ್ಯಪಾದವ ನಂಬಿ.
--------------
ಷಣ್ಮುಖಸ್ವಾಮಿ
ಭಕ್ತಿಯ ಮರ್ಮವನರಿಯೆ, ಜ್ಞಾನದ ಕುರುಹನರಿಯೆ, ವೈರಾಗ್ಯದ ದೃಢವನರಿಯೆ, ವಿರತಿಯ ಹೊಲಬನರಿಯೆ, ಮುಕ್ತಿಯ ಪಥವನರಿಯೆ, ಭಕ್ತಿ ಜ್ಞಾನ ವೈರಾಗ್ಯ ವಿರತಿಗಳಿಂದೆ ಮುಕ್ತರಾದ ಮಹಾಶರಣರ ತೊತ್ತಿನ ಮಗ ನಾನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಾವವಿಲ್ಲದ ಬಯಲು, ಜೀವವಿಲ್ಲದ ಬಯಲು, ಮನವಿಲ್ಲದ ಬಯಲು, ಮನನವಿಲ್ಲದ ಬಯಲು, ಅಖಂಡೇಶ್ವರನೆಂಬ ಮಹಾಬಯಲೊಳಗೆ ನೆನಹಡಗಿ ನಿಷ್ಪತ್ತಿಯಾಗಿರ್ದೆನು.
--------------
ಷಣ್ಮುಖಸ್ವಾಮಿ
ಭಕ್ತಿಯ ಸ್ಥಳಕುಳವನರಿಯದೆ ಬರಿದೆ ಭಕ್ತರೆನಿಸಿಕೊಂಬ ಮುಕ್ತಿಗೇಡಿಗಳನೇನೆಂಬೆನಯ್ಯ. ಅನಾದಿಪರಶಿವನು ತನ್ನ ಲೀಲೆಯಿಂದೆ ತಾನೆ ಗುರುಲಿಂಗಜಂಗಮವಾಗಿ ಬಂದನೆಂದರಿದು ತನುಮನಧನವ ಸಮರ್ಪಿಸಿ ಘನಮುಕ್ತಿಯ ಪಡೆಯಲರಿಯದೆ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳನೆ ಭುಂಜಿಸಿ, ಸಂಸಾರವಿಷಯರಸವೆಂಬ ನೀರನೆ ಕುಡಿದು, ಮಾಯಾಮೋಹವೆಂಬ ಮದವು ತಲೆಗೇರಿ ಸೊಕ್ಕಿದೆಕ್ಕಲನಂತೆ ತಿರುಗುವ ನರಕಜೀವಿಗಳ ಭಕ್ತರೆನಬಹುದೇ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ