ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಾರ್ಚನೆಯಿಂದ ಜಂಗಮಾರ್ಚನೆಯದ್ಥಿಕ ನೋಡಾ. ಅದೆಂತೆಂದೊಡೆ : ಆದಿಯಲ್ಲಿ ಲಿಂಗಾರ್ಚನೆಯಮಾಡಿದ ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು. ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು, ಜಂಗಮಾರ್ಚನೆ ಪ್ರಳಯಾತೀತವೆಂದರಿದು ಜಂಗಮವೇ ಪ್ರಾಣವೆಂದು ನಂಬಿ, ಅನಂತಕೋಟಿ ಪ್ರಳಯಂಗಳ ಮೀರಿ, ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ, ಜಂಗಮಪ್ರೇಮಿಗಳಾರನೂ ಕಾಣೆನಯ್ಯ. ಲಿಂಗಪೂಜಕರನಂತರುಂಟು ಜಗದೊಳಗೆ, ಜಂಗಮಪೂಜಕರಾರನೂ ಕಾಣೆನಯ್ಯ. ಲಿಂಗಪ್ರಾಣಿಗಳನಂತರುಂಟು ಜಗದೊಳಗೆ, ಜಂಗಮಪ್ರಾಣಿಗಳಾರನೂ ಕಾಣೆನಯ್ಯ. ಲಿಂಗದ ಬಾಯಿ ಜಂಗಮವೆಂದರಿದು ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಾಂಗಸಾಮರಸ್ಯವನರಿಯದೆ ಖಂಡಿತ ಬುದ್ಧಿಯಿಂದೆ ಲಿಂಗವ ಬೇರಿಟ್ಟುಕೊಂಡು ಸಕಲಭೋಗೋಪಭೋಗವನು ಅರ್ಪಿಸಿದೆವೆಂಬ ಭಂಗಗೇಡಿಗಳ ಮಾತ ಕೇಳಲಾಗದು. ಅದೆಂತೆಂದೊಡೆ : ಆ ಲಿಂಗಕ್ಕೆ ಶರಣನಂಗದ ಮಜ್ಜನಸುಖವಲ್ಲದೆ ಬೇರೆ ಮಜ್ಜನಸುಖವುಂಟೆ ? ಆ ಲಿಂಗಕ್ಕೆ ಶರಣನ ಲಲಾಟದ ಶ್ರೀವಿಭೂತಿ ಗಂಧಾಕ್ಷತೆಯ ಶೃಂಗಾರವಲ್ಲದೆ ಬೇರೆ ಶೃಂಗಾರವುಂಟೆ ? ಆ ಲಿಂಗಕ್ಕೆ ಶರಣನ ಕರ್ಣದಲ್ಲಿಯ ಪಂಚಮಹಾವಾದ್ಯದ ಕೇಳಿಕೆಯಲ್ಲದೆ ಬೇರೆ ಕೇಳಿಕೆಯುಂಟೆ ? ಆ ಲಿಂಗಕ್ಕೆ ಶರಣನ ಜಿಹ್ವೆಯಲ್ಲಿಯ ಷಡುರಸಾನ್ನದ ನೈವೇದ್ಯವಲ್ಲದೆ ಬೇರೆ ನೈವೇದ್ಯವುಂಟೆ ? ಆ ಲಿಂಗಕ್ಕೆ ಶರಣನ ಕಂಗಳಲ್ಲಿಯ ನಾನಾ ವಿಚಿತ್ರರೂಪಿನ ವಿನೋದವಲ್ಲದೆ ಬೇರೆ ವಿನೋದವುಂಟೆ ? ಆ ಲಿಂಗಕ್ಕೆ ಶರಣನ ತ್ವಕ್ಕಿನಲ್ಲಿಯ ವಸ್ತ್ರಾಭರಣದ ಅಲಂಕಾರವಲ್ಲದೆ ಬೇರೆ ಅಲಂಕಾರವುಂಟೆ ? ಆ ಲಿಂಗಕ್ಕೆ ಶರಣನ ಘ್ರಾಣದಲ್ಲಿಯ ಸುಗಂಧ ಪರಿಮಳವರ್ಪಿತವಲ್ಲದೆ ಬೇರೆ ಅರ್ಪಿತವುಂಟೆ ? ಆ ಲಿಂಗಕ್ಕೆ ಶರಣನ ಪರಮ ಹೃದಯಕಮಲವೆ ನಿಜವಾಸವಲ್ಲದೆ ಬೇರೆ ನಿಜವಾಸವುಂಟೆ ? ಇಂತೀ ಶರಣಸನ್ನಿಹಿತಲಿಂಗ, ಲಿಂಗಸನ್ನಿಹಿತ ಶರಣನೆಂಬುದನರಿಯದೆ ಅನಂತಕಾಲ ಲಿಂಗವ ಧರಿಸಿಕೊಂಡು ಲಿಂಗಾಂಗಿಯೆನಿಸಿಕೊಂಡಡೇನು ? ಅದು ಪಶುವಿನ ತೊಡೆಯಲ್ಲಿ ಬರೆದ ಮುದ್ರೆಯಂತೆ ಕಂಡೆಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಪ್ರೇಮವುಳ್ಳವಂಗೆ ಭವಬಂಧನವಿಲ್ಲ ; ಜಂಗಮಪ್ರೇಮವುಳ್ಳವಂಗೆ ಸಂಸಾರದ ತೊಡಕಿಲ್ಲ. ಪ್ರಸಾದಪ್ರೇಮವುಳ್ಳವಂಗೆ ಇಹಪರದ ಎಡೆಯಾಟವಿಲ್ಲ. ತಾನಿಲ್ಲದೆ ಮಾಡುವ ಭಕ್ತಂಗೆ ಆವಾವ ಫಲಪದದ ಹಂಗಿಲ್ಲವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗ ಛಿನ್ನ ಭಿನ್ನವಾದಡೆ ಸ್ಥೂಲಸೂಕ್ಷ್ಮವನರಿಯಬೇಕು. ಸ್ಥೂಲವಾವುದು ಸೂಕ್ಷ್ಮವಾವುದು ಎಂದಡೆ : ಲಿಂಗದ ಶಕ್ತಿಪೀಠದಲ್ಲಿ ಅಕ್ಕಿಯ ತೂಕ ಮೇಣವನೊತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ ಮತ್ತಂ, ಲಿಂಗದ ಕಟಿಯಲ್ಲಿ ಅರ್ಧ ಅಕ್ಕಿಯ ತೂಕ ಮೇಣವನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ವರ್ತುಳ ಗೋಮುಖದಲ್ಲಿ ಅರ್ಧ ಅಕ್ಕಿಯ ಸರಿಭಾಗವ ಮಾಡಿದಲ್ಲಿ ಗಿರ್ದವೆನಿಸಿತ್ತು. ಆ ಗಿರ್ದ ಅಕ್ಕಿಯ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ನಾಳ ಗೋಳಕದಲ್ಲಿ ಎಳ್ಳಿನ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೊರಗಾದಡೆ ಸೂಕ್ಷ್ಮ. ಮತ್ತಂ, ಲಿಂಗದ ಮಸ್ತಕದಿಂದೆ ಕೆಳಗಣ ಪೀಠಪರಿಯಂತರವಾಗಿ ಕೂದಲು ಮುಳುಗುವಷ್ಟು ಸೀಳಿದಡೆ ಸ್ಥೂಲ, ಆ ಕೂದಲು ಹೆಚ್ಚಾದಡೆ ಸೂಕ್ಷ್ಮ. ಈ ಉಭಯಾರ್ಥವ ತಿಳಿದು ಸೂಕ್ಷ್ಮವಾದಡೆ ಮುನ್ನಿನಂತೆ ಧರಿಸಿಕೊಳ್ಳಬೇಕು. ಸ್ಥೂಲವಾದಡೆ ಆ ಲಿಂಗದಲ್ಲಿ ಐಕ್ಯವಾಗಬೇಕು. ಅದೆಂತೆಂದೊಡೆ: ``ವ್ರೀಹಿ ವ್ರೀಹ್ಯರ್ಧ ವಿಚ್ಛಿನ್ನಂ ಕೇಶಗ್ರಾಹ್ಯಂ ಪ್ರಮಾದತಃ | ಪೀಠಾದಿ ಲಿಂಗಪರ್ಯಂತಂ ತ್ಯಜೇತ್ ಪ್ರಾಣಾನ್ ನಗಾತ್ಮಜೇ ||'' ಮತ್ತಂ; ``ತಂಡುಲಾರ್ಧಂ ಪೀಠಮಧ್ಯಂ ತದರ್ಧಂ ವೃತ್ತಗೋಮುಖಂ | ತಿಲಮಾತ್ರ ಯೋನಿಲಿಂಗಂ ತದಾಧಿಕ್ಯಂ ತ್ಯಜೇದಸೂನ್ ||'' ಎಂದುದಾಗಿ, ಇಂತಪ್ಪ ಲಿಂಗೈಕ್ಯರಾದ ಮಹಾಶರಣರು ಮೂರುಲೋಕಕ್ಕೆ ಅಧಿಕರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಪೂಜಕನಾದಡೆ ಜಂಗಮವನರ್ಚಿಸಬೇಕು. ಲಿಂಗನಿಷಾ*ಪರನಾದಡೆ ಜಂಗಮದಲ್ಲಿ ವಿಶ್ವಾಸವನಿಡಬೇಕು. ಲಿಂಗವ ಪೂಜಿಸಿ ಜಂಗಮವ ಮರೆತಡೆ ಶಿರವಿಲ್ಲದ ದೇಹದಂತೆ ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗ ಜಂಗಮಕ್ಕೆ ಮಾಡಿದ ಭಕ್ತಿ ಮನಕೆ ಮನವೇ ಸಾಕ್ಷಿಯಾಗಿರಬೇಕಲ್ಲದೆ, ಇದಿರಿಟ್ಟು ನುಡಿಯಲಾಗದು. ಅದೇನು ಕಾರಣವೆಂದರೆ : ಬಡವಂಗೆ ಭಾಗ್ಯ ದೊರೆಕೊಂಡಂತಿರಬೇಕಲ್ಲದೆ, ಎನ್ನ ಪದಾರ್ಥವ ನಾನು ಮಾಡಿದೆನು ಅವರು ಕೈಕೊಂಡರೆಂದು ತನ್ನ ಖ್ಯಾತಿ ಭಕ್ತಿಯನು ಮನ ಹಿಗ್ಗಿ ಅನ್ಯರೊಡನೆ ಹೇಳಿಕೊಂಡರೆ ಶಿವನೊಪ್ಪಿಕೊಳ್ಳನು, ಪುರಾತನರು ಮೆಚ್ಚರು. ಅಂತಪ್ಪ ಖ್ಯಾತಿಭಕ್ತನ ಡಂಭಕದ ಭಕ್ತಿಯೆಂತಾಯಿತ್ತೆಂದರೆ, ಹಾವಸಗಲ್ಲ ಮೆಟ್ಟಿ ಜಾರಿ ಬಿದ್ದು ಕೊಡನೊಡೆದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಘ್ರಾಣದಲ್ಲಿ ಲಿಂಗಕ್ಕೆ ಲಿಂಗಗಂಧವನರ್ಪಿಸಿ, ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗಜಿಹ್ವೆಯಲ್ಲಿ ಲಿಂಗಕ್ಕೆ ಲಿಂಗರುಚಿಯನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗನೇತ್ರದಲ್ಲಿ ಲಿಂಗಕ್ಕೆ ಲಿಂಗರೂಪನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗತ್ವಕ್ಕಿನಲ್ಲಿ ಲಿಂಗಕ್ಕೆ ಲಿಂಗಸ್ಪರ್ಶವನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗಶ್ರೋತ್ರದಲ್ಲಿ ಲಿಂಗಕ್ಕೆ ಲಿಂಗಶಬ್ದವನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗಹೃದಯದಲ್ಲಿ ಲಿಂಗಕ್ಕೆ ಲಿಂಗತೃಪ್ತಿಯನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಇಂತೀ ಒಳಹೊರಗೆ ತೆರಹಿಲ್ಲದೆ ಲಿಂಗಕ್ಕೆ ಲಿಂಗವನರ್ಪಿಸಿ, ಲಿಂಗಪ್ರಸಾದವ ಗ್ರಹಿಸಿ, ಘನಲಿಂಗವಾಗಿರ್ಪ ಮಹಾಪ್ರಸಾದಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗದೊಡನೆ ಸಹಭೋಜನ ಮಾಡುವ ಲಿಂಗವಂತರೆಲ್ಲ ನೀವು ಕೇಳಿರೊ ! ನಿಮ್ಮ ತನು ಸಂಸಾರವಿಷಯಪ್ರಪಂಚಿನಲ್ಲಿ ಮುಳುಗಿರ್ಪುದು. ನಿಮ್ಮ ಮನ ಮಾಯಾ ಮಲತ್ರಯಂಗಳಲ್ಲಿ ಸುತ್ತಿರ್ಪುದು. ನಿಮ್ಮ ಜೀವ ಭವಭವದಲ್ಲಿ ತೊಳಲುತಿರ್ಪುದು. ನೀವಿಂತು ಮಲಮಾಯಾಸ್ವರೂಪರಾಗಿರ್ದು ಭಯವಿಲ್ಲದೆ ಅಮಲಲಿಂಗದೊಡನೆ ಸಹಭೋಜನವ ಮಾಡಿದಡೆ ಅಘೋರ ನರಕದಲ್ಲಿಕ್ಕದೆ ಮಾಣ್ಬನೆ ನಮ್ಮ ಅಖಂಡೇಶ್ವರನು ?
--------------
ಷಣ್ಮುಖಸ್ವಾಮಿ
ಲಿಂಗವನರಿಯದ ಅಂಗವಿಕಾರಿಗೇತಕೋ ಶಿವಪ್ರಸಾದ ? ಜಂಗಮವನರಿಯದ ಭಂಗಗೇಡಿಗೇತಕೋ ಶಿವಪ್ರಸಾದ ? ಜ್ಞಾನವನರಿಯದ ಅಜ್ಞಾನಿಗೇತಕೋ ಶಿವಪ್ರಸಾದ ? ನೀತಿಯನರಿಯದ ಆತ್ಮಸುಖಿಗೇತಕೋ ಶಿವಪ್ರಸಾದ ? ಆಚಾರವನರಿಯದ ಅನಾಚಾರಿಗೇತಕೋ ಶಿವಪ್ರಸಾದ ಅಖಂಡೇಶ್ವರಾ?
--------------
ಷಣ್ಮುಖಸ್ವಾಮಿ
ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ, ಲಿಂಗದಲ್ಲಿ ಮನವಡಗಿರ್ದ, ಲಿಂಗಾನುಭಾವಿಗಳ ಸಂಗದಲ್ಲಿರಿಸಿ ಸಲಹಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗದ ನಡೆಯಂತೆ ನಡೆವನಲ್ಲದೆ, ಲೋಕದ ನಡೆಯಂತೆ ನಡೆವನಲ್ಲ ನೋಡಾ ನಿಮ್ಮ ಶರಣ. ಲಿಂಗದ ನುಡಿಯಂತೆ ನುಡಿವನಲ್ಲದೆ, ಲೋಕದ ನುಡಿಯಂತೆ ನುಡಿವನಲ್ಲ ನೋಡಾ ನಿಮ್ಮ ಶರಣ. ಲಿಂಗದ ಮಚ್ಚಿನಲ್ಲಿ ಸುಳಿವನಲ್ಲದೆ, ಲೋಕದ ಮಚ್ಚಿನಲ್ಲಿ ಸುಳಿವನಲ್ಲ ನೋಡಾ ನಿಮ್ಮ ಶರಣ. ಲಿಂಗದ ವ್ಯವಹಾರದಲ್ಲಿರುತ್ತಿಹನಲ್ಲದೆ, ಲೋಕದ ವ್ಯವಹಾರದಲ್ಲಿರುತ್ತಿಹನಲ್ಲ ನೋಡಾ ನಿಮ್ಮ ಶರಣ. ಇಂತಪ್ಪ ಲಿಂಗಾಂಗಸಂಗಸಮರಸವನರಿದ ಶಿವಶರಣನ ಶಿವನೆನಬೇಕಲ್ಲದೆ, ಲೋಕದವರೆಂದು ನುಡಿವ ಸೂತಕದೇಹಿಗಳಿಗೆ ಪಾತಕ ತಪ್ಪದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಾರ್ಚನೆಯ ಮಾಡಿದ ಬಳಿಕ ಜಂಗಮಾರ್ಚನೆಯ ಮಾಡಲೇಬೇಕು. ಜಂಗಮದ ಪಾದೋದಕ ಪ್ರಸಾದವ ಕೊಳ್ಳಲೇಬೇಕು. ನಿಚ್ಚ ನಿಚ್ಚ ಲಿಂಗದರ್ಚನೆಯ ಮಾಡಿ ನಿಚ್ಚ ನಿಚ್ಚ ಜಂಗಮದರ್ಚನೆ ಪಾದೋದಕ ಪ್ರಸಾದವಿಲ್ಲದ ಬಳಿಕ ಆ ಲಿಂಗಾರ್ಚನೆ ಎಂತಾಯಿತ್ತೆಂದಡೆ, ಮೂಗಕೊಯ್ದ ಮೋರೆಯಂತೆ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ