ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಬ್ಬರು ನಡೆದಾಚರಣೆಯಲ್ಲಿ ನಡೆಯರು. ಒಬ್ಬರು ಹಿಡಿದ ಶೀಲವ ಹಿಡಿಯರು. ಒಬ್ಬರು ನುಡಿದ ಭಾಷೆಯ ನುಡಿಯರು. ಅದೇನು ಕಾರಣವೆಂದೊಡೆ : ತಮ್ಮ ಲಿಂಗಮಚ್ಚಿ ನಡೆವರು. ತಮ್ಮ ಲಿಂಗಮಚ್ಚಿ ಹಿಡಿವರು. ತಮ್ಮ ಲಿಂಗಮಚ್ಚಿ ನುಡಿವರು. ಇದು ಕಾರಣ. ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು.
--------------
ಷಣ್ಮುಖಸ್ವಾಮಿ
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಳಗೆ ಕೂಡಿ ಹೊರಗೆ ಮರೆದಿರ್ಪೆನಯ್ಯಾ. ಹೊರಗೆ ಕೂಡಿ ಒಳಗೆ ಮರೆದಿರ್ಪೆನಯ್ಯಾ. ಒಳಹೊರಗೆಂಬ ಸಂದು ಸಂಶಯವನಳಿದು ತೆರಹಿಲ್ಲದೆ ನಿಮ್ಮೊಳಗೆ ಏನೇನು ಅರಿಯದಂತಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಳಗೆಂಬುದನರಿಯೆ, ಹೊರಗೆಂಬುದನರಿಯೆ, ಸ್ವಾನುಭಾವ ಜ್ಞಾನಾಮೃತವನುಂಡು ಏನೇನು ಅರಿಯದಂತಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಮ್ಮೆ ಜ್ಞಾನಿಯೆನಿಸಿ ಮತ್ತೊಮ್ಮೆ ಅಜ್ಞಾನಿಯೆನಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ ? ಒಮ್ಮೆ ಸಂತೋಷದಲ್ಲಿರಿಸಿ ಮತ್ತೊಮ್ಮೆ ಚಿಂತೆಯಲ್ಲಿರಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ ? ಮರ್ಕಟನಂತೆ ಎನ್ನ ಮನವ ವ್ಯಾಕುಲದಲ್ಲಿ ಹುಚ್ಚುಗೊಳಿಸಿ ಎನ್ನನೇತಕೆ ಕಾಡುವೆ ಹೇಳಯ್ಯಾ ? ನಿಮಗೆ ಹೊತ್ತು ಹೋಗದೆ, ಮತ್ತೊಂದು ವ್ಯಾಪಾರವಿಲ್ಲದೆ ಎನ್ನ ಕೂಡೆ ಹದರು ಚದುರಿನಿಂದೆ ವೇಳೆಯವ ಕಳೆವರೆ ಹೇಳಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಂಬತ್ತುನಾಳದೊಳಗೆ ತುಂಬಿಸೂಸುವ ಮನಪವನಂಗಳ ಒಂದೇ ಮಾರ್ಗದಲ್ಲಿ ನಡೆಸಿ, ಶಂಕಿನಿನಾಳವನಡರಿ, ಪಶ್ಚಿಮದ್ವಾರವ ಪೊಕ್ಕು, ಆ ಬ್ರಹ್ಮರಂಧ್ರವ ನುಸುಳಿ, ಶಿಖಾಗ್ರಂಥಿಯನೊಡೆದು ಆ ನಿರಂಜನಪೀಠವ ಮೆಟ್ಟಿ, ಮಹಾಬೆಳಗಿನ ಪ್ರಭಾಪುಂಜದಿಂದೆ ರಂಜಿಸುವ ನಿರಂಜನಸಮಾಧಿಯೊಳಗೆ ನಿರಂತರ ಬೆಳಗುತಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಳಗೆ ಲಿಂಗದ ಕೂಟದಲ್ಲಿ ಮನವಡಗಿರಬೇಕು. ಹೊರಗೆ ಜಂಗಮದ ಮಾಟದಲ್ಲಿ ತನುವಿಡಿದಿರಬೇಕು. ಈ ಉಭಯವ ಒಂದರೊಳಗೊಂದು ಛೇದಿಸಿಕೊಂಡು ತಾನಳಿದು ಮಾಡುವ ಭಕ್ತನ ಕೂಡಿಕೊಂಡಿರ್ಪನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಮ್ಮೆ ಜ್ಞಾನಿಯೆನಿಸಿ, ಒಮ್ಮೆ ಅಜ್ಞಾನಿಯೆನಿಸಿ, ಒಮ್ಮೆ ವಿಕಲನೆನಿಸಿ, ಒಮ್ಮೆ ನಿಃಕಲನೆನಿಸಿ, ಒಮ್ಮೆ ಭ್ರಾಂತನೆನಿಸಿ, ಒಮ್ಮೆ ನಿಭ್ರಾಂತನೆನಿಸಿ, ನಾನಾ ತೆರದಿಂದೆ ಎನ್ನ ಹುಸಿದಿಟವ ಮಾಡಿಕಾಡದಿರಯ್ಯ. ನೀವು ದಯಾನಿಧಿ ಎಂದು ನಂಬಿದೆನಯ್ಯ. ನಿಮ್ಮ ಕರುಣಕಟಾಕ್ಷದಿಂದೆ ನೋಡಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಮ್ಮೆ ನೀ ದೇವನಾದಲ್ಲಿ ನಾ ಭಕ್ತನಾಗಿರ್ಪೆನು. ಮತ್ತೊಮ್ಮೆ ನಾ ದೇವನಾದಲ್ಲಿ ನೀವು ಭಕ್ತರಾಗಿರ್ಪಿರಿ. ಅದೆಂತೆಂದೊಡೆ : ಎನ್ನ ತನು ಮನ ಪ್ರಾಣೇಂದ್ರಿಯಂಗಳು ನಿಮಗರ್ಪಿತವಾದವು. ನಿಮ್ಮ ಮಹಾಪ್ರಸಾದವೆನ್ನೊಳಗಾಯಿತ್ತಾಗಿ ಅಖಂಡೇಶ್ವರಾ, ನೀವೇ ಪದಾರ್ಥ ನಾನೇ ಪ್ರಸಾದವಯ್ಯಾ.
--------------
ಷಣ್ಮುಖಸ್ವಾಮಿ
ಒಳಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ. ಹೊರಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ. ಒಳಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ. ಹೊರಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ. ಒಳಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ. ಹೊರಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ. ನೀವು ಭಕ್ತ್ಯನುಕಂಪಿತರಾದ ಕಾರಣ ಎನ್ನ ಭಾವವು ಎಲ್ಲಿ ನಿಂದಿಹುದು ಅಲ್ಲಿ ನಿಮ್ಮ ನಿಲವೆ ತುಂಬಿರ್ಪುದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ