ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘುಲ್ಲುಘುಲ್ಲೆಂದಡೆ ನಲ್ಲ ಬರುತಾನೆಂದು ಎಲ್ಲ ಹಾದಿಯ ಮೆಟ್ಟಿ ನೋಡುತಿರ್ದೆನವ್ವಾ. ನಲ್ಲನ ಸೊಲ್ಲನಾಲಿಸಿ ಕೇಳುತಿರ್ದೆನವ್ವಾ. ಅಖಂಡೇಶ್ವರನೆಂಬ ನಲ್ಲನ ಕಂಡರೆ ಮಹಾಸಂತೋಷವು, ಕಾಣದಿರ್ದರೆ ಕಡುದುಃಖ ಕೇಳಿರವ್ವಾ ಎನಗೆ.
--------------
ಷಣ್ಮುಖಸ್ವಾಮಿ
ಘನಮಹಾಲಿಂಗಕ್ಕೆ ಮನವೆ ಪೀಠವಾಗಿ, ತನುವೆ ಶಿವಾಲಯವಾಗಿ, ನೆನವೆ ಪೂಜೆಯಾಗಿ, ಧ್ಯಾನವೆ ತೃಪ್ತಿಯಾಗಿ, ಅಂಬುದ್ಥಿಯೊಳಗೆ ಮುಳುಗಿದ ಪೂರ್ಣಕುಂಭದಂತೆ, ನಿಮ್ಮ ಅವಿರಳ ದಿವ್ಯ ಮಹಾಬೆಳಗಿನೊಳಗೆ ಮುಳುಗಿ, ನಾನು ನೀನೆಂಬುಭಯದ ಕುರುಹ ಮರೆದು ಏನೇನೂ ಅರಿಯದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಘ್ರಾಣೇಂದ್ರಿಯವಿಷಯದಿಂದೆ ಭ್ರಮರ ಕೆಡುವುದು ಸಂಪಿಗೆಯ ಪುಷ್ಪದಲ್ಲಿ. ರಸನೇಂದ್ರಿಯವಿಷಯದಿಂದೆ ಮತ್ಸ್ಯಕೆಡುವುದು ಜಾಲಗಾರನ ಬಲೆಯಲ್ಲಿ. ನಯನೇಂದ್ರಿಯವಿಷಯದಿಂದೆ ಪತಂಗ ಕೆಡುವುದು ದೀಪದ ಜ್ವಾಲೆಯಲ್ಲಿ ತ್ವಗೀಂದ್ರಯವಿಷಯದಿಂದ ಗಜ ಕೆಡುವುದು ರಾಜನ ಕೃತಕದಲ್ಲಿ. ಶ್ರವಣೇಂದ್ರಿಯವಿಷಯದಿಂದೆ ಎರಳೆ ಕೆಡುವುದು ಬೇಟೆಗಾರನ ಸರಳಿನಲ್ಲಿ. ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ ಬಂಧನಕ್ಕೊಳಗಾದವು. ಇಂತಪ್ಪ ಪಂಚೇಂದ್ರಿಯವಿಷಯವ್ಯಾಪಾರದಲ್ಲಿ ಲಂಪಟರಾದ ಮನುಜರು ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಘನಕ್ಕೆ ಘನವಾದ ಮಹಾಘನವಸ್ತುವಿನಲ್ಲಿ ಮನವಡಗಿದ ಮಹಾಮಹಿಮಂಗೆ ಮರಳಿ ನೆನೆಯಬೇಕೆಂಬುದಿಲ್ಲ. ನೆನೆದು ಧ್ಯಾನಿಸಬೇಕೆಂಬುದಿಲ್ಲ. ಧ್ಯಾನಿಸಿ ಕಾಣಬೇಕೆಂಬುದಿಲ್ಲ. ಕಂಡು ಕೂಡಬೇಕೆಂಬುದಿಲ್ಲ. ಅಖಂಡೇಶ್ವರಾ, ನಿಮ್ಮನೊಡಗೂಡಿದ ಶರಣಂಗೆ ಏನೆಂದೆನಲಿಲ್ಲ.
--------------
ಷಣ್ಮುಖಸ್ವಾಮಿ
ಘನಲಿಂಗದೇವರು ಘನಲಿಂಗದೇವರೆಂದು ನುಡಿದುಕೊಂಬ ಬಿನುಗು ಹೊಲೆಯರನೇನೆಂಬೆನಯ್ಯಾ ! ಹೊಟ್ಟೆಯಕಿಚ್ಚಿಗೆ ಒಟ್ಟಿದ ಬಣವೆಯ ಸುಟ್ಟಾತ ಘನಲಿಂಗದೇವರೆ ? ಕೊಟ್ಟಾತ ಒಳಗು, ಕೊಡದಾತ ಹೊರಗೆಂದು ಕಟ್ಟಿದಲಿಂಗವ ಮೆಟ್ಟಿ ಮೆಟ್ಟಿ ಹರಿವಾತ ಘನಲಿಂಗದೇವರೆ ? ಒಡೆಯನ ವೇಷವ ಧರಿಸಿ ಒಡಲ ಕಿಚ್ಚಿಗೆ ತುಡುಗನಾಯಂತೆ ಕಡಿದು ಕನ್ನವನಿಕ್ಕುವಾತ ಘನಲಿಂಗದೇವರೆ ? ಅಹುದಾದುದನಲ್ಲಮಾಡಿ ಅಲ್ಲವಾದುದ ಅಹುದುಮಾಡಿ ಅಧರ್ಮ ಅನ್ಯಾಯದಲ್ಲಿ ಹೊಡೆದಾಡಿ ಹೊಲಬುದಪ್ಪಿ ಮಡಿದುಹೋಗುವ ಬಾಯಬಡಕ ಭ್ರಷ್ಟಮಾದಿಗರ ಘನಲಿಂಗದೇವರೆಂದಡೆ ಅಘೋರನರಕ ತಪ್ಪದಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಘನಗಂಭೀರ ಮಹಾಘನ ಬೆಳಗಿನೊಳಗೆ ನಾನೆಂಬುದನರಿಯದಿರ್ದೆನಯ್ಯಾ. ನೀನೆಂಬುದನರಿಯದಿರ್ದೆನಯ್ಯಾ. ಏನೇನೂ ಅರಿಯದೆ ಮೌನದಿಂದೆ ಮರೆದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಘನತರದಿಷ್ಟಲಿಂಗದಲ್ಲಿ ಅನಿಮಿಷದೃಷ್ಟಿ ಬಲಿದು, ಮನ ಕರಗಿ, ತನು ಉಬ್ಬಿ, ಹೃದಯಕಮಲ ಪಸರಿಸಿ, ಸವಾರ್ಂಗವು ಗುಡಿಗಟ್ಟಿ ಕಂಗಳಲ್ಲಿ ಪರಿಣಾಮಜಲ ಉಕ್ಕಿ ಹೊರಸೂಸುತ್ತ , ಪರಮಕಾಷೆ*ಯಂತೆ ಚಿತ್ರದ ರೂಹಿನಂತೆ ಪರಬ್ರಹ್ಮಲಿಂಗದಲ್ಲಿ ಬೆರೆದು ಪರವಶಗೊಂಡಿರ್ಪ ಮಹಾಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ