ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೀವು ನಿಮ್ಮ ಸ್ವಲೀಲೆಯಿಂದೆ ಜಗದಲೀಲಾ ವೈಭವಂಗಳ ನಟಿಸಬೇಕೆಂದು ನಿಮ್ಮಲ್ಲಿ ನೆನಹುದೋರಲು, ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗವೇ ಪಂಚಮುಖವನೈದಿಹ ಸದಾಶಿವನೆಂದೆನಿಸಿತ್ತು. ಆ ಸದಾಶಿವನಿಂದೆ ಬ್ರಹ್ಮ-ವಿಷ್ಣು-ರುದ್ರರೆಂಬ ತ್ರೈಮೂರ್ತಿಗಳುದಿಸಿದರು. ಆ ತ್ರೈಮೂರ್ತಿಗಳಿಂದೆ ಸ್ವರ್ಗ-ಮತ್ರ್ಯ-ಪಾತಾಳಂಗಳೆಂಬ ತ್ರೈಲೋಕಂಗಳು ಜನಿಸಿದವು. ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣುಗಂಡು ನಾಮ ರೂಪ ಕ್ರಿಯಾದಿ ಸಕಲ ವಿಸ್ತಾರವಾಯಿತ್ತು. ಇಂತಿವೆಲ್ಲವೂ ನಿಮ್ಮ ನೆನಹುಮಾತ್ರದಿಂದಾದವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾಸಿಕಾಗ್ರದಿಂ ಮುಂದೆ ನಾಲ್ಕಂಗುಲಪ್ರಮಾಣದಲ್ಲಿ ನೀಲವರ್ಣಮಾದಾಕಾಶವನು, ಆರಂಗುಲದಲ್ಲಿ ಧೂಮವರ್ಣಮಾದ ವಾಯುವನು, ಎಂಟಂಗುಲದಲ್ಲಿ ರಕ್ತವರ್ಣಮಾದ ಅಗ್ನಿಯನು, ಹತ್ತಂಗುಲದಲ್ಲಿ ತೆರೆಗಳ ವರ್ಣಮಾದ ಅಪ್ಪುವನು, ಹನ್ನೆರಡಂಗುಲದಲ್ಲಿ ಹೊಂಬಣ್ಣಮಾದ ಪೃಥ್ವಿಯನು ಲಕ್ಷಿಪುದೆ ಬಹಿರ್ಲಕ್ಷ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೆನಹಿಗೆಬಾರದ ವಸ್ತುವ ನೆನವಪರಿ ಇನ್ನೆಂತೋ ! ಭಾವಕ್ಕೆಬಾರದ ವಸ್ತುವ ಭಾವಿಸುವಪರಿ ಇನ್ನೆಂತೋ ! ನೆನೆಯದೆ ಭಾವಿಸದೆ ಎನ್ನೊಳಗೆ ಬಯಲುರೂಪವಾಗಿ ತೋರಿದನು ನೋಡಾ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ನಡೆವ ಕಾಲದಲ್ಲಿ ನಿಮ್ಮ ಕೂಡೆ ನಡೆವೆನಯ್ಯಾ. ನುಡಿವ ಕಾಲದಲ್ಲಿ ನಿಮ್ಮ ಕೂಡೆ ನುಡಿವೆನಯ್ಯಾ. ಹಿಡಿವ ಕಾಲದಲ್ಲಿ ನಿಮ್ಮ ಕೂಡೆ ಹಿಡಿವೆನಯ್ಯಾ. ಬಿಡುವ ಕಾಲದಲ್ಲಿ ನಿಮ್ಮ ಕೂಡೆ ಬಿಡುವೆನಯ್ಯಾ. ನೋಡುವ ಕಾಲದಲ್ಲಿ ನಿಮ್ಮ ಕೂಡೆ ನೋಡುವೆನಯ್ಯಾ. ಕೇಳುವ ಕಾಲದಲ್ಲಿ ನಿಮ್ಮ ಕೂಡೆ ಕೇಳುವೆನಯ್ಯಾ. ಸೋಂಕುವ ಕಾಲದಲ್ಲಿ ನಿಮ್ಮ ಕೂಡೆ ಸೋಂಕುವೆನಯ್ಯಾ. ವಾಸಿಸುವ ಕಾಲದಲ್ಲಿ ನಿಮ್ಮ ಕೂಡೆ ವಾಸಿಸುವೆನಯ್ಯಾ. ರುಚಿಸುವ ಕಾಲದಲ್ಲಿ ನಿಮ್ಮ ಕೂಡೆ ರುಚಿಸುವೆನಯ್ಯಾ. ನೆನೆವ ಕಾಲದಲ್ಲಿ ನಿಮ್ಮ ಕೂಡೆ ನೆನೆವೆನಯ್ಯಾ. ಮರೆವ ಕಾಲದಲ್ಲಿ ನಿಮ್ಮ ಕೂಡೆ ಮರೆವೆನಯ್ಯಾ. ಅರಿವ ಕಾಲದಲ್ಲಿ ನಿಮ್ಮ ಕೂಡೆ ಅರಿವೆನಯ್ಯಾ. ಇನಮಂಡಲಕಿರಣದಂತೆ ಸಕಲ ತೋರಿಕೆಯ ತೋರುವ ಕಾಲದಲ್ಲಿ ನಿಮ್ಮ ಕೂಡೆ ತೋರುವೆನಾಗಿ, ಅಖಂಡೇಶ್ವರಾ, ನಿಮ್ಮಲ್ಲಿ ಎನಗೆ ಸಹಭೋಜನವು ಸಮನಿಸಿತ್ತು ನೋಡಾ.
--------------
ಷಣ್ಮುಖಸ್ವಾಮಿ
ನಿತ್ಯ ಗುರುಲಿಂಗಜಂಗಮಕ್ಕೆ ಪೂಜೆಯ ಮಾಡಿ ನಿತ್ಯ ಮುಕ್ತಿಯ ಪಡೆಯಲರಿಯದೆ, ಮತ್ತತನದಿಂದೆ ಅನಿತ್ಯ ಫಲಭೋಗವ ಪಡೆದು ಮರ್ತ್ಯದ ಭವಜಾಲದಲ್ಲಿ ಸುತ್ತಿ ಸುತ್ತಿ ಸುಳಿದು ತೊಳಲಿ ಬಳಲುವ ವ್ಯರ್ಥರ ನೋಡಿ ನಗುತಿರ್ದನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ನೇತ್ರದ ಸೂತ್ರದಲ್ಲಿ ಸಕಲ ವಿಸ್ತಾರದ ರೂಪಿರ್ಪುದನಾರೂ ಅರಿಯರಲ್ಲ ! ಅದೆಂತೆಂದೊಡೆ :``ನೇತ್ರದೇವೋ ನ ಚ ಪರಃ'' ಎಂಬ ಶ್ರುತಿ ಸಾಕ್ಷಿಯಾಗಿ ನೇತ್ರವೆ ಶಿವನೆಂದರಿದು, ಆ ಶಿವನಿರ್ದಲ್ಲಿಯೆ ಕೈಲಾಸ ಮೇರು ಮಂದರವಿರ್ಪುವು. ಆ ಶಿವನಿರ್ದಲ್ಲಿಯೆ ಸಕಲಪ್ರಮಥಗಣಂಗಳಿರ್ಪರು. ಆ ಶಿವನಿರ್ದಲ್ಲಿಯೆ ಸಕಲತೀರ್ಥಕ್ಷೇತ್ರಂಗಳಿರ್ಪುವು. ಆ ಶಿವನಿರ್ದಲ್ಲಿಯೆ ಸಕಲವೇದವೇದಾಂತಗಳಿರ್ಪುವು. ಆ ಶಿವನಿರ್ದಲ್ಲಿಯೆ ಸಕಲ ಸಚರಾಚರಂಗಳಿರ್ಪುವು. ಇಂತೀ ಸಕಲವಿಸ್ತಾರವನೊಳಕೊಂಡ ನೇತ್ರದ ನಿಲವು ನೀನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾನಾದೇಶವ ತಿರುಗಿದಡಿಲ್ಲ. ನಾನಾ ವ್ಯಾಪಾರವ ಮಾಡಿದಡಿಲ್ಲ. ಏನು ಮಾಡಿದಡೇನು ಹುರುಳಿಲ್ಲ. ಅಖಂಡೇಶ್ವರಾ, ನೀವು ದಯೆ ಹುಟ್ಟಿ ಒಲಿದು ನೋಡಿ ಕರುಣಿಸಿ ಸಲಹದನ್ನಕ್ಕರ ಉಳಿದುದೆಲ್ಲ ವ್ಯರ್ಥ ನೋಡಾ.
--------------
ಷಣ್ಮುಖಸ್ವಾಮಿ
ನುಡಿಯಲ್ಲಿ ಕರ್ಕಶವಿಲ್ಲದೆ ನಡೆಯಲ್ಲಿ ಬೀಸರವಾಗದೆ, ಹಿಡಿದ ಭಕ್ತಿಯ ಕಡೆತನಕ ಬಿಡದೆ, ಬಡತನ ಎಡರು ಕಂಟಕ ಬಂದಲ್ಲಿ ಚಿಂತೆಯಿಂದ ಕಾಂತಿಗುಂದದೆ ಅಡಿಗಡಿಗೆ ಶಿವನೆಂಬ ನುಡಿಯ ಮರೆಯದೆ ಇರ್ಪ ಸದ್ಭಕ್ತಂಗೆ ಬೇಡಿದ ಪದವ ಕೊಡುವ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ನುಡಿಯಲ್ಲಿ ಎರಡು ನುಡಿಯನು; ನಡೆಯಲ್ಲಿ ಎರಡು ನಡೆಯನು; ನುಡಿಯಂತೆ ನಡೆ ವಿಸ್ತರಿಸುವ; ನಡೆಯಂತೆ ನುಡಿ ವಿಸ್ತರಿಸುವ ; ಹಿಡಿವನು ಗುರುಲಿಂಗಜಂಗಮ ದಾಸೋಹವ. ಬಿಡುವನು ಹೊನ್ನು ಹೆಣ್ಣು ಮಣ್ಣೆಂಬ ತ್ರಿಮಲದಾಸೆಯ. ಇಂತಪ್ಪ ವೀರಮಾಹೇಶ್ವರನನೇನೆಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೋಡು ನೋಡಯ್ಯಾ ಗಂಡನೆ, ಎನ್ನ ಕಂಗಳುಪ್ಪರಿಗೆಯ ಮೇಲೆ ಕುಳ್ಳಿರ್ದು ಸಕಲ ವಿಚಿತ್ರವ. ಆಡು ಆಡಯ್ಯಾ ಗಂಡನೆ, ಎನ್ನ ಮನದ ಕೊನೆಯಲ್ಲಿ ಮಹಾಜ್ಞಾನದುಯ್ಯಾಲೆಯ ಕಟ್ಟಿ. ಮನಬಂದ ಪರಿಯಲ್ಲಿ ಕೂಡು ಕೂಡಯ್ಯಾ ಗಂಡನೆ ಎನ್ನ ಸತ್ಕಲೆಗಳಿಂದ ಸವಿದೋರಿಸಿ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾನಿಹ ಪರಿಯಂತರ ನೀನುಂಟು ; ನೀನಿಹ ಪರಿಯಂತರ ನಾನುಂಟು. ನಾನು ನೀನೆಂಬುಭಯದ ಸಂದು ಹೂಳಿದ ಬಳಿಕ, ಇನ್ನೇನುಂಟು ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ನೀನೊಲಿದಡೆ ಜಗವೆಲ್ಲ ಕೊಂಡಾಡುತಿರ್ಪುದು ನೋಡಾ ; ನೀನೊಲಿಯದಿರ್ದಡೆ ಜಗವೆಲ್ಲ ಹೊತ್ತುಗಲ್ಲ ಹೊತ್ತಿರ್ಪುದು ನೋಡಾ. ನೀನೊಲಿದಡೆ ವೈರಿಗಳೆಲ್ಲ ಸಖರಪ್ಪರು ನೋಡಾ ; ನೀನೊಲಿಯದಿರ್ದಡೆ ಸಖರೆಲ್ಲ ವೈರಿಗಳಾಹರು ನೋಡಾ. ನೀನೊಲಿದಡೆ ಬಾರದ ಪದಾರ್ಥ ಬಪ್ಪುದು ನೋಡಾ; ನೀನೋಲಿಯದಿರ್ದಡೆ ಬರ್ಪುದು ಬಾರದೆ ಹೋಹುದು ನೋಡಾ. ಇದು ಕಾರಣ, ನಿಮ್ಮ ಒಲುಮೆಯಿಂದ ಘನವು ಆವುದು ಇಲ್ಲ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೈಷಿ*ಕಭಾವ ನಂಬುಗೆ ಇಲ್ಲದ ಬಳಿಕ, ಎಷ್ಟು ಓದಿದಡೇನು ? ಎಷ್ಟು ಕೇಳಿದಡೇನು ? ಎಷ್ಟು ಪೂಜೆಯ ಮಾಡಿದಡೇನು ? ಅದು ನಷ್ಟವಲ್ಲದೆ ದೃಷ್ಟಕ್ಕೆ ಸಂಧಾನವಲ್ಲ ನೋಡಾ. ಇದು ಕಾರಣ, ನೈಷೆ* ಬಲಿದು ಭಾವತುಂಬಿ ನಂಬುಗೆ ಇಂಬುಗೊಂಡು ಮಾಡುವುದೆ ದೇವರಪೂಜೆ. ಅದೇ ನಮ್ಮ ಅಖಂಡೇಶ್ವರಲಿಂಗದ ಒಲುಮೆ.
--------------
ಷಣ್ಮುಖಸ್ವಾಮಿ
ನಲ್ಲನ ಕಾಣದೆ ತಲ್ಲಣಗೊಳತಿರ್ಪುದು ನೋಡಾ ಎನ್ನ ಮನವು. ಜಾಗ್ರಾವಸ್ಥೆಯಲ್ಲಿ ನಲ್ಲನ ಚಿಂತೆಯಿಂದ ಸುಳಿವುತಿರ್ದೆನವ್ವಾ. ಸ್ವಪ್ನಾವಸ್ಥೆಯಲ್ಲಿ ನಲ್ಲನ ಚಿಂತೆಯಿಂದೆ ಕಳವಳಿಸುತಿರ್ದೆನವ್ವಾ. ಸುಷುಪ್ತಾವಸ್ಥೆಯಲ್ಲಿ ನಲ್ಲನ ಚಿಂತೆಯಿಂದೆ ಮೈಮರೆದಿರ್ದೆನವ್ವಾ. ಸರ್ವಾವಸ್ಥೆಯಲ್ಲಿ ಅಖಂಡೇಶ್ವರನೆಂಬ ನಲ್ಲನ ಕೂಡಬೇಕೆಂಬ ಭ್ರಾಂತಿಯಿಂದೆ ಬಡವಾಗುತಿರ್ದೆನವ್ವಾ.
--------------
ಷಣ್ಮುಖಸ್ವಾಮಿ
ನಂಜು ಅಮೃತವಾದುದ ಕಂಡೆ. ಮಂಜೂರ ಸುಟ್ಟುದ ಕಂಡೆ. ಮಂಜಿನ ಮನೆ ಕರಗಿ ಕುರುಹಿಲ್ಲದೆ ನಿಷ್ಪತ್ತಿಯಾದುದ ಕಂಡೆ. ಬಂಜೆಯ ಬಸುರಲ್ಲಿ ನಂಜುಗೊರಳನೆಂಬ ಶಿಶುಹುಟ್ಟಿ ಅಂಜದೆ, ಅರುವತ್ತಾರು ಕೋಟಿ ದೈತ್ಯರ ಕೊಂದುದ ಕಂಡೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೀರ ಮಂಟಪದೊಳಗೊಂದು ನಿರಾಳ ಕಮಲವಿರ್ಪುದ ಕಂಡೆ. ಆ ಕಮಲಮಧ್ಯದೊಳಗೊಂದು ನಿರಾಲಂಬ ಕೋಶವಿರ್ಪುದ ಕಂಡೆ. ಆ ಕೋಶಮಧ್ಯದೊಳಗೊಂದು ನಿರುಪಮ ಮಾಣಿಕ್ಯದ ಸಿಂಹಾಸನವ ಕಂಡೆ. ಆ ಸಿಂಹಾಸನದ ಮೇಲೆ ಮೂರ್ತಿಗೊಂಡು ಬೆಳಗುವ ನಮ್ಮ ಅಖಂಡೇಶ್ವರನೆಂಬ ನಿರವಯ ಪರಬ್ರಹ್ಮವ ಕಂಡು ಪರಮಸುಖಿಯಾಗಿರ್ದೆನು.
--------------
ಷಣ್ಮುಖಸ್ವಾಮಿ
ನೈಷೆ*ಯೆಂಬುದು ತನುವಿನ ಪ್ರಕೃತಿಯ ಕೆಡಿಸುವುದು. ನೈಷ್ಟೆಯೆಂಬುದು ಮನದ ಮಾಯವನಳಿವುದು. ನೈಷೆ*ಯೆಂಬುದು ಜ್ಞಾನದ ಬಟ್ಟೆಯ ತೋರುವುದು. ನೈಷೆ*ಯೆಂಬುದು ಅಖಂಡೇಶ್ವರಲಿಂಗವನೊಲಿಸುವುದು.
--------------
ಷಣ್ಮುಖಸ್ವಾಮಿ
ನೈಷೆ*ನೆಲೆಗೊಳ್ಳಬೇಕು ಗುರುಭಕ್ತಿಯ ಮಾಡುವಲ್ಲಿ. ನೈಷೆ*ನೆಲೆಗೊಳ್ಳಬೇಕು ಲಿಂಗಪೂಜೆಯ ಮಾಡುವಲ್ಲಿ. ನೃಷೆ*ನೆಲೆಗೊಳ್ಳಬೇಕು ಜಂಗಮವನರ್ಚಿಸುವಲ್ಲಿ, ನೈಷೆ*ನೆಲೆಗೊಳ್ಳಬೇಕು ಪಾದೋದಕ ಪ್ರಸಾದವ ಕೊಂಬುವಲ್ಲಿ. ನೈಷೆ*ನೆಲೆಗೊಳ್ಳಬೇಕು ನಮ್ಮ ಅಖಂಡೇಶ್ವರಲಿಂಗವನೊಲಿಸುವಲ್ಲಿ.
--------------
ಷಣ್ಮುಖಸ್ವಾಮಿ
ನಿಮ್ಮ ಸ್ವಲೀಲೆಯಿಂದೆ ಹಲವು ನಾಮರೂಪುಕ್ರಿಯೆಯಿಂದೆ ಸಾಕಾರವೆನಿಸಿ ನೀವು ಆಚಾರಲಿಂಗವಾದಲ್ಲಿ , ನಾನು ಭಕ್ತನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ಗುರುಲಿಂಗವಾದಲ್ಲಿ , ನಾನು ಮಹೇಶ್ವರನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ಶಿವಲಿಂಗವಾದಲ್ಲಿ , ನಾನು ಪ್ರಸಾದಿಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ಜಂಗಮಲಿಂಗವಾದಲ್ಲಿ , ನಾನು ಪ್ರಾಣಲಿಂಗಿಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ಪ್ರಸಾದಲಿಂಗವಾದಲ್ಲಿ , ನಾನು ಶರಣನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ಮಹಾಲಿಂಗವಾದಲ್ಲಿ , ನಾನು ಐಕ್ಯನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ನಿಷ್ಕಲಲಿಂಗವಾದಲ್ಲಿ , ನಾನು ಮೂಲಜ್ಞಾನಚಿತ್ತೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ಶೂನ್ಯಲಿಂಗವಾದಲ್ಲಿ , ನಾನು ಮಹಾಜ್ಞಾನಶಕ್ತಿಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ. ನೀವು ನಿರಂಜನಲಿಂಗವಾದಲ್ಲಿ , ನಾನು ಅಖಂಡ ಪರಿಪೂರ್ಣಮಹಾಕಳೆಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ . ನೀವು ಆವಾವ ರೂಪುಧರಿಸಿದಲ್ಲಿ ನಾನು ಆಯಾಯ ರೂಪಿಂಗೆ ತಕ್ಕಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ. ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ. ನೀನೊಲಿದಡೆ ಕೊರಡೆಲ್ಲ ಕಲ್ಪವೃಕ್ಷವಯ್ಯ. ನೀನೊಲಿದಡೆ ಬರಡೆಲ್ಲ ಕಾಮಧೇನುವಯ್ಯ. ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾದಬಿಂದುಕಳಾತೀತವಾದ ಪರವಸ್ತುವೆ ಮಹಾಂತು ನೋಡಾ. ಶ್ರುತಿತತಿಗಸಾಧ್ಯವಾದ ಪರವಸ್ತುವೆ ಮಹಾಂತು ನೋಡಾ. ಆದಿ ಮಧ್ಯಾಂತವಿಲ್ಲದ ಪರವಸ್ತುವೆ ಮಹಾಂತು ನೋಡಾ. ಉಪಮಾತೀತ ವಾಙ್ಮನಕ್ಕಗೋಚರವಾದ ಪರವಸ್ತುವೆ ಮಹಾಂತು ನೋಡಾ. ಇಂತಪ್ಪ ಮಹಾಂತಿನ ಅತೀತ ಘನಮಹಾಜಂಗಮದ ಶ್ರೀಪಾದವ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನುಡಿಯಲಾಗದು ನುಡಿಯಲಾಗದು ನಯನುಡಿಯಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ದಯಗುಣವಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ಭಯಭಕ್ತಿಯಿಲ್ಲದವರೊಡನೆ. ನುಡಿಯಲಾಗದು ನುಡಿಯಲಾಗದು ಸ್ವಯಜ್ಞಾನವಿಲ್ಲದವರೊಡನೆ ಶಿವಾನುಭಾವವ ! ಅದೇನು ಕಾರಣವೆಂದೊಡೆ : ತನ್ನ ಅರುಹಿಂಗೆ ಹಾನಿ, ಮಹಾ ಪರಿಣಾಮ ಕೆಡುವುದು. ಇದು ಕಾರಣ ಕಡುಪಾತಕ ಜಡಜೀವಿಗಳೊಡನೆ ಲಕ್ಷಕ್ಕೊಮ್ಮೆ ಕೋಟಿಗೊಂದುವೇಳೆಯಾದಡೂ ನುಡಿಯಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೋಡಿರೆ ನೋಡಿರೆ ಒಂದು ವಿಚಿತ್ರವ. ಶಿಷ್ಯನೆಂಬ ಹೆಂಡತಿಯ ಶ್ರೀಗುರುವೆಂಬ ಗಂಡನು ಹಸ್ತಮಸ್ತಕಸಂಯೋಗವೆಂಬ ಕೂಟವ ಕೂಡಲು, ಜಿಹ್ವೆಯೆಂಬ ಮೇಢ್ರದಲ್ಲಿ ಷಡಕ್ಷರಮಂತ್ರವೆಂಬ ವೀರ್ಯವು ಚಲನೆಯಾಗಿ, ಆ ಶಿಷ್ಯನೆಂಬ ಹೆಂಡತಿಯ ಕರ್ಣವೆಂಬ ಗರ್ಭಪ್ರವೇಶವಾಗಲು, ಮನ ಬಸುರಾಗಿ, ಕಂಗಳೆಂಬ ಯೋನಿಯಲ್ಲಿ ಲಿಂಗವೆಂಬ ಮಗನ ಹಡೆದು, ಅಂಗೈಯೆಂಬ ತೊಟ್ಟಿಲಲ್ಲಿಕ್ಕಿ ಮಂಗಳಸ್ತೋತ್ರವೆಂಬ ಜೋಗುಳವ ಹಾಡಿ, ಅಖಂಡೇಶ್ವರನೆಂಬ ಹೆಸರಿಟ್ಟರು ನೋಡಾ ! ಇದು ಕಾರಣ, ನೀವೀಗವೆನಗೆ ಮಗನಾದಿರಿ, ನಾ ನಿಮಗೆ ತಾಯಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಲ್ಲನ ಕೂಡಿದ ಸುಖವೆಲ್ಲವ ಮೆಲ್ಲನೆ ಉಸುರುವೆ ಕೇಳಿರವ್ವಾ. ಏಳು ನೆಲೆಯ ಮಣಿಮಾಡದ ಮಾಣಿಕ್ಯಮಂಟಪದುಪ್ಪರಿಗೆಯ ಮೇಲೆ ಚಪ್ಪರ ಮಂಚವ ಹಾಸಿ, ಒಪ್ಪುವ ಊಟವ ನೀಡಿ, ಕರ್ಪೂರವೀಳ್ಯವ ಕೊಟ್ಟು, ಲಜ್ಜೆಗೆಟ್ಟು ನಾಚಿಕೆಯ ತೊರೆದು, ತನು ಜಜ್ಜರಿತವಾಗಿ, ತೆಕ್ಕೆ ಚುಂಬನಾದಿಗಳಿಂದ ಅಮರ್ದಪ್ಪಿ ಅಸ್ಥಿಗಳು ನುಗ್ಗುನುರಿಯಾಗಿ ಮನದ ಪರಿಣಾಮ ಹೊರಹೊಮ್ಮಿ ಪರಮಾನಂದ ಮಹಾಪರಿಣಾಮದ ಸುಗ್ಗಿಯೊಳಗೆ ಪರವಶಗೊಂಡಿರ್ದೆನು ಅಖಂಡೇಶ್ವರನೆಂಬ ನಲ್ಲನ ಕೂಡಿ.
--------------
ಷಣ್ಮುಖಸ್ವಾಮಿ
ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು ಎನ್ನ ಕೈವಿಡಿದು ತಲೆದಡಹಿ ವರದಭಯಹಸ್ತವ ಕೊಟ್ಟು ಮತ್ರ್ಯಲೋಕಕ್ಕೆ ಎನ್ನ ಕಳುಹಿದಿರಾಗಿ, ನೀನೇ ಕರ್ತನು ನಾನೇ ಭೃತ್ಯನು ; ನೀನೇ ಒಡೆಯನು ನಾನೇ ಬಂಟನು ; ನೀನೇ ಆಳ್ದನು ನಾನೇ ಆಳು ; ನೀನೇ ದೇವನು ನಾನೇ ಭಕ್ತನಾಗಿ, ನೀನು ಮಾಡೆಂದ ಮಣಿಹವ ಮಾಡುತಿರ್ಪೆನು ; ನೀನು ಬೇಡೆಂದ ಮಣಿಹವ ಬಿಡುತಿರ್ಪೆನು; ನೀನು ಹೇಳಿದ ತೊತ್ತು ಸೇವೆಯ ಮಾಡುತಿಪ್ಪೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...