ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಗವನೊಳಕೊಂಡ ಲಿಂಗವು ಸೊಗಸಿಂದೆ ಎನ್ನ ಕರಸ್ಥಲಕ್ಕೆ ಬಂದಿರಲು, ಕಂಡು ಹಗರಣವಾಯಿತ್ತೆನಗೆ. ಗುರುಲಿಂಗಜಂಗಮಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ. ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ ! ಆಹಾ ಅಖಂಡೇಶ್ವರಾ, ನಿಮ್ಮ ಘನವ ಕಂಡು ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ.
--------------
ಷಣ್ಮುಖಸ್ವಾಮಿ
ಜಗದೊಳಹೊರಗೆಲ್ಲ ತೆರಹಿಲ್ಲದೆ ಸಂಭ್ರಮಿಸಿ ತುಂಬಿಕೊಂಡಿರ್ಪ ಪರವಸ್ತುವ ಆಹ್ವಾನಿಸಿ ಕರೆದು ವಿಸರ್ಜಿಸಿ ಬಿಡುವುದಕ್ಕೆ ಇಂಬುಂಟೇನೋ ಮರುಳೆ ? ಇಂತೀ ಅಖಂಡ ಪರಿಪೂರ್ಣವಾದ ಪರಬ್ರಹ್ಮದ ನಿಲವನರಿಯದೆ ಖಂಡಿತಬುದ್ಧಿಯಿಂದ ಕಲ್ಪಿಸಿ ಪೂಜಿಸಿ ಕರ್ಮದ ಬಲೆಯಲ್ಲಿ ಸಿಲ್ಕಿ ಕಾಲಂಗೆ ಗುರಿಯಾಗಿ ಹೋದವರ ಕಂಡು ಬೆರಗಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜ್ಞಾನದಿಂದಾದಡಾಗಲಿ ಅಜ್ಞಾನದಿಂದಾದಡಾಗಲಿ, ಬ್ಥೀತಿಯಿಂದಾದಡಾಗಲಿ ನಿಬ್ರ್ಥೀತಿಯಿಂದಾದಡಾಗಲಿ, ಸದ್ಭಾವದಿಂದಾದಡಾಗಲಿ ದುರ್ಭಾವದಿಂದಾದಡಾಗಲಿ, ಆವ ಪರಿಯಿಂದಾದಡಾಗಲಿ ಪರಮಶಿವಲಿಂಗದರ್ಶನಮಾತ್ರದಿಂದ ಜಾತಿಸ್ಮರತ್ವ ಮಹದೈಶ್ವರ್ಯ ಪರಮಾಯುಷ್ಯ ಶುದ್ಧವಿದ್ಯಂಗಳು ಸಮ್ಯಕ್‍ಜ್ಞಾನ ಸಕಲಸಂಪತ್ತುಗಳು ದೊರೆಕೊಂಬುವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು ಆ ಜಗದ ಸ್ವರೂಪನೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಕೋಗಿಲೆಯ ತತ್ತಿಯನೊಡೆದು ಕಾಗೆ ಮರಿಯಮಾಡಿ ಸಲಹಿದಡೇನು ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ ? ಲೋಕದ ಮಧ್ಯದಲ್ಲಿ ಅನಾದಿಶರಣನು ಲೋಕೋಪಕಾರಕ್ಕಾಗಿ ಜನಿಸಿದಡೇನು ತನ್ನ ಮುನ್ನಿನ ಶಿವತತ್ವವನೆ ಬೆರೆವನಲ್ಲದೆ ಮರಳಿ ಲೋಕವ ಬೆರೆಯನು ನೋಡಾ, ನಿಮ್ಮನರಿದ ಶಿವಜ್ಞಾನಿಶರಣನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮಕ್ಕೆ ನೀಡಿದ ತೃಪ್ತಿ ಜಗಕೆಲ್ಲ ತೃಪ್ತಿಯಾಯಿತ್ತು ಕಾಣಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಹರಿ ಸುರ ಬ್ರಹ್ಮಾದಿಗಳಿಗೆಲ್ಲ ತೃಪ್ತಿಯಾಯಿತ್ತು ಕಾಣಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಸ್ವರ್ಗ ಮತ್ರ್ಯ ಪಾತಾಳ ಸಚರಾಚರಂಗಳಿಗೆಲ್ಲ ತೃಪ್ತಿಯಾಯಿತ್ತು ನೋಡಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಸಾಕ್ಷಾತ್ಪರಬ್ರಹ್ಮ ಪರಶಿವಂಗೆ ತೃಪ್ತಿಯಾಯಿತ್ತು ನೋಡಿರೋ ! ಅದೆಂತೆಂದೊಡೆ : ``ಸುರತೃಪ್ತಂ ಬುಧಸ್ತೋಮಂ ಮಮ ತೃಪ್ತಂತು ವೈಷ್ಣವಮ್ | ಜಂಗಮಂತು ಜಗತ್ ತೃಪ್ತಂ ಶಿವತೃಪ್ತಂ ತು ಪದ್ಮಿನಿ ||'' ಎಂದುದಾಗಿ, ಇಂತಪ್ಪ ಜಂಗಮ ತೃಪ್ತಿಯಾದಡೆ ನಮ್ಮ ಅಖಂಡೇಶ್ವರಲಿಂಗ ತೃಪ್ತಿಯಾಯಿತ್ತು ನೋಡಿರೋ !
--------------
ಷಣ್ಮುಖಸ್ವಾಮಿ
ಜಂಗಮದ ಪಾದತೀರ್ಥವು ಭವರೋಗವೈದ್ಯವಯ್ಯಾ. ಜಂಗಮದ ಪಾದತೀರ್ಥವು ಶಿವಸಾಯುಜ್ಯವಯ್ಯಾ. ಜಂಗಮದ ಪಾದತೀರ್ಥವು ಜೀವನ್ಮುಕ್ತಿಯಯ್ಯಾ. ಜಂಗಮದ ಪಾದತೀರ್ಥವು ಆದ್ಥಿ ವ್ಯಾದ್ಥಿ ವಿಪತ್ತು ರೋಗರುಜಿನಂಗಳ ಶೋದ್ಥಿಸಿ ಕಿತ್ತು ಬಿಸುಟುವುದಯ್ಯಾ. ಜಂಗಮದ ಪಾದತೀರ್ಥವು ಅಂಗದ ಅವಗುಣವ ಕಳೆವುದಯ್ಯಾ. ಜಂಗಮದ ಪಾದತೀರ್ಥವು ಲಿಂಗಕ್ಕೆ ಕಳೆಯನಿಪ್ಪುದಯ್ಯಾ. ಇಂತಪ್ಪ ಜಂಗಮದ ಪಾದತೀರ್ಥಕ್ಕೆ ಭಕ್ತನಾದಡೂ ಆಗಲಿ ಮಹೇಶ್ವರನಾದಡೂ ಆಗಲಿ ಆರಾದಡೇನು ಅಡಿಯಿಟ್ಟು ನಡೆದು ಬಂದು ಭಯಭಕ್ತಿಯಿಂದೆ ಅಡ್ಡಬಿದ್ದು, ಜಂಗಮದ ಪಾದತೀರ್ಥವನು ಶುದ್ಧ ಸಾವಧಾನದಿಂದೆ ತನ್ನ ಲಿಂಗಕ್ಕೆ ಅರ್ಪಿಸಿ, ಅಂಗಕ್ಕೆ ಕೊಳ್ಳಬಲ್ಲಡೆ, ಆ ಮಹಾತ್ಮನೆ ಆದಿಪುರಾತನನೆಂಬೆ; ಅಭೇದ್ಯ ಭೇದಕನೆಂಬೆ. ಹೀಗಲ್ಲದೆ ಭಕ್ತಿಹೀನನಾಗಿ, ಯುಕ್ತಿಶೂನ್ಯನಾಗಿ, ಗರ್ವದ ಪರ್ವತವನೇರಿ ಹೆಮ್ಮೆ ಹಿರಿತನವು ಮುಂದುಗೊಂಡು ಆ ಜಂಗಮದ ಪಾದತೀರ್ಥವನು ಕಾಲಿಲ್ಲದ ಹೆಳವನಂತೆ ತಾನಿದ್ದಲ್ಲಿಗೆ ತರಿಸಿಕೊಂಡು ಅವಿಶ್ವಾಸದಿಂದೆ ಕೊಂಬ ಜೀವಗಳ್ಳರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮವ ಕಂಡು ವಂದನೆಯ ಮಾಡಿದರೆ ಮುಂದೆ ಭಕ್ತಿ ಮುಕ್ತಿ ಪುಣ್ಯದ ಫಲವು ದೊರೆಕೊಂಬುದು ನೋಡಾ ! ಜಂಗಮವ ಕಂಡು ನಿಂದೆಯ ಮಾಡಿದರೆ ಮುಂದೆ ಬಂಧನಕ್ಕೊಳಗಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮವೇ ಜಗದೀಶನೆಂದು ನಂಬದವನ ಜನ್ಮವ ಸುಡುಸುಡು ! ಜಂಗಮವೇ ಜಗಭರಿತನೆಂದು ನಂಬದವನ ಜನ್ಮ ವ್ಯರ್ಥಜನ್ಮ ! ಜಂಗಮವೇ ಶಿವನೆಂದು ನಂಬದವನ ಮನೆ ಸುಡುಗಾಡು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮವೇ ಜಗದ್ಭರಿತನು ನೋಡಾ. ಜಂಗಮವೇ ಜಗದೀಶ್ವರನು ನೋಡಾ. ಜನನನಾಶ ಮರಣ ವಿರಹಿತನಾದ ಒಬ್ಬ ಪರಮಜಂಗಮನ ದರ್ಶನವ ಮಾಡಿದರೆ ಒಂದು ಕೋಟಿ ಲಿಂಗಂಗಳ ದರ್ಶನವಾದಂತೆ ನೋಡಾ. ಆ ಜಂಗಮದ ಚರಣಕಮಲದ ಮೇಲೆ ಲಲಾಟವನ್ನಿಟ್ಟು ಶರಣುಮಾಡಿದರೆ ಶತಕೋಟಿ ದೋಷ ಪರಿಹಾರ ನೋಡಾ. ಅದೆಂತೆಂದೊಡೆ : ``ಪ್ರಭಾತೇ ಜಂಗಮೇ ದೃಷ್ಟೇ ಕೋಟಿಲಿಂಗಸ್ಯ ದರ್ಶನಮ್ | ಲಲಾಟೇ ಚರಣಮಧ್ಯೇತು ಕೋಟಿಕರ್ಮ ವಿನಶ್ಯತಿ ||'' ಎಂದುದಾಗಿ, ಇಂತಪ್ಪ ಪರತರ ಪರಂಜ್ಯೋತಿ ಜಂಗಮವು ನೀನೇ ಅಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಾತಿ ಧರ್ಮ ನೀತಿಯ ಬಿಟ್ಟು ವಿಜಾತಿಗಳ ಎಂಜಲುತಿಂಬ ಪಾಪಕರ್ಮಿಗಳಾದಡಾಗಲಿ, ಸರ್ವಪಾಪವ ಬಿಟ್ಟಾತನಾದಡಾಗಲಿ, ರುದ್ರಾಕ್ಷಿಮಾಲೆಯ ಕೊರಳಲ್ಲಿ ಧರಿಸಿದರೆ ಪರಮಪವಿತ್ರನೆನಿಸಿ ಹರನ ಕೈಲಾಸದಲ್ಲಿಪ್ಪನು ನೋಡಾ. ಅದೆಂತೆಂದೊಡೆ :ಸ್ಕಂದಪುರಾಣೇ- ``ರುದ್ರಾಕ್ಷಮಾಲಿಕಾಂ ಕಂಠೇ ಧಾರಯೇತ್ ಭಕ್ತಿವರ್ಧಿತಃ | ಪಾಪಕರ್ಮಾಪಿ ಯೋ ಮರ್ತ್ಯೋ ರುದ್ರಲೋಕೇ ಮಹೀಯತೇ || ಸೋಚ್ಛಿಷ್ಟೋ ವಾಪಿ ಕರ್ಮಸ್ಥೋ ಯುಕ್ತೋ ವಾ ಸರ್ವಪಾತಕೈ ಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯು ನೀನೆ ಅಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜೀವದೊಡೆಯನನಗಲಿ ಜೀವಿಸಲಾರೆನವ್ವಾ. ನಿಮಿಷ ನಿಮಿಷಾರ್ಧವಾದಡೂ ಬಾಳಲಾರೆನವ್ವಾ. ಹೇಳಲಿನ್ನೇನ ? ಸಾವು ಬಂದಿತ್ತವ್ವಾ. ಕಂಡಡೆ ಹೇಳಿರವ್ವಾ. ನಮ್ಮ ತಂಗಿಯ ಭಾವನ ಕರೆದು ತೋರಿರವ್ವಾ ಅಖಂಡೇಶ್ವರನೆಂಬ ನಲ್ಲನ.
--------------
ಷಣ್ಮುಖಸ್ವಾಮಿ
ಜಂಗಮದ ದರ್ಶನ ಸ್ಪರ್ಶನದಿಂದೆ ಎನ್ನ ತನುಶುದ್ಧವಾಯಿತ್ತು. ಜಂಗಮದ ಪಾದೋದಕ ಪ್ರಸಾದದಿಂದೆ ಎನ್ನ ಪ್ರಾಣ ಶುದ್ಧವಾಯಿತ್ತು. ಜಂಗಮದ ಜ್ಞಾನಾನುಭಾವದಿಂದೆ ಎನ್ನ ಮನ ಶುದ್ಧವಾಯಿತ್ತು. ಜಂಗಮವೇ ಎನ್ನ ಪ್ರಾಣವೆಂದರಿದೆನಾಗಿ ಅಖಂಡೇಶ್ವರಾ, ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
--------------
ಷಣ್ಮುಖಸ್ವಾಮಿ
ಜಗವಾಗಬಲ್ಲ ನೋಡಿರೊ ನಮ್ಮ ಶಿವನು. ಜಗವಾಗಲರಿಯದೆ ಇರಬಲ್ಲ ನೋಡಿರೊ ನಮ್ಮ ಶಿವನು. ಅನಂತಕೋಟಿ ಬ್ರಹ್ಮಾಂಡಗಳ ನಿಮಿಷಮಾತ್ರದಲ್ಲಿ ಪುಟ್ಟಿಸಬಲ್ಲ ನೋಡಿರೊ ನಮ್ಮ ಶಿವನು. ಆ ಬ್ರಹ್ಮಾಂಡಗಳ ನಿಮಿಷ ಮಾತ್ರದಲ್ಲಿ ಕೆಡಿಸಬಲ್ಲ ನೋಡಿರೊ ನಮ್ಮ ಶಿವನು. ಇಂತಪ್ಪ ಶ್ರೀ ಮಹಾದೇವನ ಘನವನರಿಯದೆ ಬರಿದೆ ದೇವರು ಉಂಟೆಂದು ಬೊಗಳುವ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮ ಜಂಗಮವೆಂದು ನುಡಿಯುತಿರ್ಪರೆಲ್ಲರು, ಜಂಗಮದ ಘನವನಾರು ಅರಿಯರಲ್ಲ. ಜಂಗಮವೆಂದಡೆ ನಿರ್ನಾಮ ನಿರ್ದೇಹಿ ; ಜಂಗಮವೆಂದಡೆ ನಿರ್ಜಡ ನಿರಾವರಣ ; ಜಂಗಮವೆಂದಡೆ ನಿಃಸೀಮ ನಿರ್ಜಾತ ; ಜಂಗಮವೆಂದಡೆ ನಿರುಪಮ ನಿರ್ಭೇದ್ಯ ; ಜಂಗಮವೆಂದಡೆ ನಿರಾಳ ನಿರಾಲಂಬ ; ಜಂಗಮವೆಂದಡೆ ನಿರಂಜನ ನಿರ್ವಯಲು. ಇಂತಪ್ಪ ಸಚ್ಚಿದಾನಂದ ನಿತ್ಯಪರಿಪೂರ್ಣ ಜಂಗಮದ ಪರಮಪ್ರಸಾದವ ಕೊಂಡು ಎನ್ನ ಪ್ರಾಣದ ತೊಡಕ ಹರಿದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಾತಿಪೂರ್ವಾಶ್ರಯವ ಕಳೆದು, ಸೂತಕ ಪಾತಕಂಗಳನಳಿದು, ಅಂಗತ್ರಯಗಳಲ್ಲಿ ಮುಸುಕಿದ ಅಜ್ಞಾನ ತಾಮಸವ ಜರಿದು, ಲಿಂಗತ್ರಯಂಗಳ ಸಂಗಸಮರಸವನರಿದ ಶರಣಂಗೆ ಉತ್ಪತ್ತಿ-ಸ್ಥಿತಿ-ಲಯಂಗಲಿಲ್ಲ ನೋಡಾ ! ಅದೇನು ಕಾರಣವೆಂದೊಡೆ : ಇಷ್ಟಲಿಂಗದಲ್ಲಿ ಉತ್ಪತ್ತಿ, ಪ್ರಾಣಲಿಂಗದಲ್ಲಿ ರಕ್ಷಣೆ, ಭಾವಲಿಂಗದಲ್ಲಿ ಬಯಲನೈದಿದ ಮಹಾಶರಣಂಗೆ ಹುಟ್ಟುಹೊಂದುಗಳು ನಷ್ಟವಾದುವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜೀವಭಾವದಿಂದೆ ಜೀವನ ತಿಂದು ಜೀವಿಸಿ ಜನನ ಮರಣಂಗಳಿಂದೆ ದುಃಖಬಡುತಿರ್ಪುವು ನೋಡಾ ಸಕಲಪ್ರಾಣಿಗಳು. ಅದೆಂತೆಂದೊಡೆ : ``ಪೃಥ್ವಿಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ | ಆತ್ಮ ಜೀವಸಮಾಯುಕ್ತಃ ಜೀವಃ ಜೀವೇನ ಭಕ್ಷ್ಯತೇ ||'' ಎಂದುದಾಗಿ, ಇಂತಪ್ಪ ಜೀವಮಯವಾದ ಪದಾರ್ಥವನು ಶುದ್ಧಸಂಸ್ಕಾರವ ಮಾಡಿ, ಲಿಂಗಜಂಗಮದ ಮುಖದಲ್ಲಿ ಸಮರ್ಪಿಸಿ, ಲಿಂಗಜಂಗಮದ ಮುಖದಲ್ಲಿ ಒದಗಿದ ಪರಮಪ್ರಸಾದವನು ಭೋಗಿಸುವ ಸದ್‍ಭಕ್ತಂಗೆ ಜನನಮರಣಂಗಳು ದೂರವಾಗಿರ್ಪುವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜನನವಿಲ್ಲದ ಶರಣ, ಮರಣವಿಲ್ಲದ ಶರಣ, ಕಾಲನ ಬಾಧೆಗೆ ಹೊರಗಾದ ಶರಣ, ಕರ್ಮವಿರಹಿತ ಶರಣ, ಮಾಯಾಮೋಹದ ಬೇರ ಕೊರೆದ ಶರಣ, ಭವಜಾಲವ ಹರಿದ ಶರಣ, ಅಖಂಡೇಶ್ವರಾ, ನಿಮ್ಮ ಶರಣನ ಮಹಿಮೆಯ ನೀವೇ ಬಲ್ಲಿರಲ್ಲದೆ ಉಳಿದ ಕೀಟಕಪ್ರಾಣಿಗಳೆತ್ತ ಬಲ್ಲರಯ್ಯಾ.
--------------
ಷಣ್ಮುಖಸ್ವಾಮಿ