ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಾಣವು ಲಿಂಗವ ನುಂಗಿತ್ತೋ, ಲಿಂಗವು ಪ್ರಾಣವ ನುಂಗಿತ್ತೋ ಎಂದರಿಯೆನಯ್ಯ. ಭಾವವು ಲಿಂಗದಲ್ಲಿ ತುಂಬಿತ್ತೋ, ಲಿಂಗವು ಭಾವದಲ್ಲಿ ತುಂಬಿತ್ತೋ ಎಂದರಿಯೆನಯ್ಯ. ಮನವು ಲಿಂಗದಲ್ಲಿ ಮುಳುಗಿತ್ತೊ , ಲಿಂಗವು ಮನದಲ್ಲಿ ಮುಳುಗಿತ್ತೋ ಎಂದರಿಯೆನಯ್ಯ. ಅಖಂಡೇಶ್ವರಾ, ನಿಮ್ಮ ಕೂಡುವ ವಿಕಳಾವಸ್ಥೆಯಲ್ಲಿ ಏನೇನೂ ಅರಿಯದಿರ್ದೆನಯ್ಯ.
--------------
ಷಣ್ಮುಖಸ್ವಾಮಿ
ಪಂಚಮಹಾಪಾತಕಂಗಳ ಮಾಡಿದವನಾದಡಾಗಲಿ, ಉಪಪಾತಕಂಗಳ ಕೋಟ್ಯನುಕೋಟಿ ಮಾಡಿದವನಾದಡಾಗಲಿ, ಹತ್ತುಸಾವಿರ ಬ್ರಹ್ಮಹತ್ಯವ ಮಾಡಿದವನಾದಡಾಗಲಿ, ಒಬ್ಬ ಶಿವಭಕ್ತನ ದರ್ಶನವಾದಲ್ಲಿ ಆ ಪಾತಕಂಗಳು ಬೆಂದು ಭಸ್ಮವಾಗಿ ಹೋಗುವವು ನೋಡಾ ! ಅದೆಂತೆಂದೊಡೆ :ಲಿಂಗಪುರಾಣೇ- ``ಉಪಪಾತಕ ಕೋಟೀಶ್ಚ ಬ್ರಹ್ಮಹತ್ಯಾಯುತಾನಿ ಚ | ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ ||'' ಎಂದುದಾಗಿ, ಶಿವಭಕ್ತನೇ ಶಿವನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪರಿಪಾಕವಾದ ಸಕಲಪದಾರ್ಥಂಗಳ ಹಸ್ತಪರುಷದಿಂದೆ ಶುದ್ಧಸಂಸ್ಕಾರವ ಮಾಡಿದಲ್ಲದೆ ಲಿಂಗಕ್ಕೆ ಅರ್ಪಿಸಲಾಗದು. ಅದೇನು ಕಾರಣವೆಂದಡೆ : ಹಸ್ತಪರುಷವಿಲ್ಲದ ಪದಾರ್ಥ ಉಚ್ಛಿಷ್ಟವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಪಂಚಭೂತ ಪ್ರಕೃತ ಜೀವಮಯವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಜೀರ್ಣಗೋಮಾಂಸವೆನಿಸಿತ್ತು. ಹಸ್ತಪರುಷವಿಲ್ಲದ ಪದಾರ್ಥ ಅಶುದ್ಧ ಕಿಲ್ಬಿಷವೆನಿಸಿತ್ತು. ಅದೆಂತೆಂದೊಡೆ : ``ಜಂಗಮಸ್ಯ ಕರಸ್ಪರ್ಶಾತ್ ಸರ್ವದ್ರವ್ಯಂ ಚ ಶುದ್ಧ್ಯತೇ | ಹಸ್ತಸ್ಪರ್ಶಂ ವಿನಾ ಪಾಕಂ ಕಿಲ್ಬಿಷಂ ಪ್ರೋಚ್ಯತೇ ಬುಧೈಃ ||'' ಎಂದುದಾಗಿ, ಇಂತಪ್ಪ ಪದಾರ್ಥದ ಪೂರ್ವಾಶ್ರಯವನು ಶಿವಮಂತ್ರ ಶ್ರೀ ವಿಭೂತಿಯಿಂದೆ ಕಳೆದು, ಶುದ್ಧಸಂಸ್ಕಾರವೆನಿಸಿ ಶಿವನೇತ್ರದಿಂದೆ ನೋಡಿ, ಶಿವಹಸ್ತದಿಂದೆ ಮುಟ್ಟಿ, ಶಿವಲಿಂಗಕ್ಕೆ ಅರ್ಪಿಸಿದಲ್ಲಿ ಶಿವಪ್ರಸಾದವೆನಿಸಿತ್ತು. ಆ ಶಿವಪ್ರಸಾದವನು ಶಿವಲಿಂಗಸನ್ನಿಹಿತನಾಗಿ ಶಿವಜಿಹ್ವೆಯಲ್ಲಿ ಭೋಗಿಸುವಾತನೆ ಶಿವಶರಣನು. ಆತನೆ ಶಿವಪ್ರಸಾದಿ, ಆತನೆ ಶಿವಾನುಭಾವಿ. ಇಂತಪ್ಪ ಭೇದವನರಿಯದೆ ಮಾಡುವ ಮಾಟವೆಲ್ಲವು ಜೀವಗಡಣದೊಳಗಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ, ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ. ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ. ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ, ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ. ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ, ಶಿವನ ಕೂಡುವ ಅವಿರಳಸಮರಸವನಾರೂ ಅರಿಯರಲ್ಲ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪವನವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆ ಹಸ್ತ. ಆ ಹಸ್ತಕ್ಕೆ ಆದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶನಪದಾರ್ಥ; ಆ ಪದಾರ್ಥವನು ತ್ವಕ್ಕಿನಲ್ಲಿಹ ಜಂಗಮಲಿಂಗಕ್ಕೆ ಅನುಭಾವಭಕ್ತಿಯಿಂದರ್ಪಿಸಿ, ಆ ಸುಸ್ಪರ್ಶನ ಪ್ರಸಾದವನು ಪಡೆದು ಸುಖಿಸುವಾತನೆ ಪ್ರಾಣಲಿಂಗಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ. ಪಾದತೀರ್ಥವೆಂದಡೆ ಪರಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಪರಿಪೂರ್ಣ ಮಹಾಜ್ಞಾನವು ತಾನೆ ನೋಡಾ. ಪಾದತೀರ್ಥವೆಂದಡೆ ಪರಾತ್ಪರವಾದ ಪರವಸ್ತುವು ತಾನೆ ನೋಡಾ. ಪಾದತೀರ್ಥವೆಂದಡೆ ನಿತ್ಯನಿರವಯ ನಿರಂಜನಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಮಹಾಘನ ಪರತರ ಪರಂಜ್ಯೋತಿ ತಾನೆ ನೋಡಾ. ಪಾದತೀರ್ಥವೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಾದತೀರ್ಥದ ಘನವ ಕಂಡು ತನುಕರಗಿ ಮನಹಿಗ್ಗಿ ಹೃದಯ ಪಸರಿಸಿ ಅಂತರಂಗದಲ್ಲಿ ವಿಶ್ವಾಸ ತುಂಬಿ, ಬಹಿರಂಗದ ಭಕ್ತಿಯಿಂದೆ ಸಾಷ್ಟಾಂಗ ನಮಸ್ಕರಿಸಿ, ಆ ಮಹಾಘನ ಪರಾತ್ಪರವಾದ ಪಾದತೀರ್ಥವನು ಹದುಳಿಗಚಿತ್ತನಾಗಿ ಹರ್ಷಾನಂದದಿಂ ಸೇವನೆಯಮಾಡಿ ಭವಸಾಗರವ ದಾಂಟಿ, ಕಾಯಜೀವದ ಸಂಸಾರವ ನೀಗಿ, ಪರಮಪವಿತ್ರ ಶಿವಮಯನಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪಶ್ಚಿಮದ ಗಿರಿಯಲ್ಲಿ ಚಿತ್‍ಸೂರ್ಯನುದಯವಾದುದ ಕಂಡೆ. ಸುತ್ತಿ ಮುತ್ತಿದ ಕತ್ತಲೆಯೆಲ್ಲ ಅತ್ತಿತ್ತ ಹರಿದು ಹೋದುದ ಕಂಡೆ. ಹತ್ತು ದಿಕ್ಕಿನ ಒಳಹೊರಗೆಲ್ಲ ಬೆಳಗಿನ ಮೊತ್ತವೇ ತುಂಬಿದುದ ಕಂಡೆ. ಮುಚ್ಚಿದ ಕಮಲಂಗಳೆಲ್ಲ ಬಿಚ್ಚಿ ಅರಳಾಗಿ ಹೊಚ್ಚ ಹೊಸ ಗಂಧ ದೆಸೆದೆಸೆಗೆ ಎಸೆದುದ ಕಂಡೆ. ಇಂತಿದರ ಕುಶಲವ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪುರುಷನಿಲ್ಲದ ಬಳಿಕ ಸ್ತ್ರೀಗೆ ಗರ್ಭವಿನ್ನೆಲ್ಲಿಯದೊ ? ಬೀಜವಿಲ್ಲದ ಬಳಿಕ ವೃಕ್ಷವಿನ್ನೆಲ್ಲಿಯದೊ ? ಹಾಲಿಲ್ಲದ ಬಳಿಕ ತುಪ್ಪವಿನ್ನೆಲ್ಲಿಯದೊ ? ಪರಮ ಶ್ರೀಗುರುವಿನುಪದೇಶವಿಲ್ಲದ ಬಳಿಕ ಲಿಂಗಕ್ಕೆ ಪರಮಶಿವಕಳೆಯಿನ್ನೆಲ್ಲಿಯದೊ ? ಇದು ಕಾರಣ, ಉಪದೇಶವಿಲ್ಲದ ಲಿಂಗ ಜಡಪಾಷಾಣವೆಂದೆನಿಸಿತ್ತು . ಆ ಜಡಪಾಷಾಣವ ಅನಂತಕೋಟಿವರ್ಷ ಪೂಜೆಯ ಮಾಡಿದರು ವ್ಯರ್ಥವಲ್ಲದೆ ಸಾರ್ಥವಿಲ್ಲ ನೋಡಾ ! ಇಂತೀ ಭೇದವನರಿಯದೆ ಮೂಢಮತಿಯಿಂದೆ ಜಡಪಾಷಾಣವ ಪೂಜಿಸಿ ಈಷಣತ್ರಯವೆಂಬ ಸಂಕೋಲೆಯಲ್ಲಿ ಬಂಧನವಡೆದು ಭವದಲ್ಲಿ ಘಾಸಿಯಾಗುವ ಹೇಸಿಮೂಳರ ಕಂಡು ನಾಚಿತ್ತಯ್ಯಾ ಎನ್ನ ಮನವು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪಂಚಮುಖ ದಶಪಂಚನೇತ್ರ ದಶಭುಜ ಎಸೆವ ಕೆಂಜೆಡೆಗಳ ಶಶಿಮೌಳಿ ದಶದಿಗ್ಭರಿತ ಅಗ್ರಗಣ್ಯ ಅಗೋಚರ ವ್ಯಾಘ್ರಚರ್ಮಾಂಬರ ಭರ್ಗೋದೇವನೆನಿಸಿ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನಗಂಧದ ಹಂಗುಹರಿದು, ಆಚಾರಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಘ್ರಾಣವು. ಅಪ್ಪುವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನರುಚಿಯ ಹಂಗುಹರಿದು, ಗುರುಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಜಿಹ್ವೆಯು. ಅಗ್ನಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನರೂಪದ ಹಂಗುಹರಿದು, ಶಿವಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ನೇತ್ರವು. ಪವನವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನಸ್ಪರ್ಶದ ಹಂಗುಹರಿದು, ಜಂಗಮಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಸರ್ವಾಂಗವು. ಆಕಾಶವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನಶಬ್ದದ ಹಂಗುಹರಿದು, ಪ್ರಸಾದಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಕರ್ಣವು. ಆತ್ಮವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನತೃಪ್ತಿಯ ಹಂಗುಹರಿದು, ಮಹಾಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಹೃದಯವು. ಇಂತೀ ಷಡ್ವಿಧ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಷಡ್ವಿಧ ಭಿನ್ನಪದಾರ್ಥದ ಹಂಗುಹರಿದು ಷಡ್ವಿಧ ಇಂದ್ರಿಯಂಗಳು ಷಡ್ವಿಧಲಿಂಗಕ್ಕೆ ಷಡ್ವಿಧ ವದನಂಗಳಾಗಿ ಅಖಂಡೇಶ್ವರಾ, ನಾನೆ ನೀನಾದೆನಯ್ಯಾ.
--------------
ಷಣ್ಮುಖಸ್ವಾಮಿ
ಪರಸ್ತ್ರೀಯರ ಮುಟ್ಟದಿರಬೇಕು. ಪರಧನವನಪಹರಿಸದಿರಬೇಕು. ಪರದೈವವ ಪೂಜಿಸದಿರಬೇಕು. ಪರಹಿಂಸೆಯ ಮಾಡದಿರಬೇಕು. ಪರಲೋಕದ ಫಲಪದವ ಬಯಸದಿರಬೇಕು. ಮನವು ನಿರ್ವಯಲಾಗಿ ಇಷ್ಟಲಿಂಗದಲ್ಲಿ ನಿಷೆ*ಬಲಿದಿರಬೇಕು. ಕಷ್ಟಜನ್ಮಂಗಳ ಕಡೆಗೊಡ್ಡಿರ್ಪಾತನೇ ವೀರಮಾಹೇಶ್ವರನು ನೋಡಾ. ಅದೆಂತೆಂದೊಡೆ : ``ಪರಸ್ತ್ರೀಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ | ಲಿಂಗನಿಷಾ*ನಿಯುಕ್ತಾತ್ಮಾ ಮಾಹೇಶ್ವರಮಹಾಸ್ಥಲಂ ||'' ಎಂದುದಾಗಿ, ಇಂತಪ್ಪ ಪರಮ ಮಾಹೇಶ್ವರನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪರತರ ಪರಮ ಸಮರಸಸ್ವರೂಪವಾದ ತಾರಕಬ್ರಹ್ಮವು ಅಂತರ್ಲಕ್ಷ್ಯವೆಂದು ಬಹಿರ್ಲಕ್ಷ್ಯವೆಂದು ಮಧ್ಯಲಕ್ಷ್ಯವೆಂದು ತ್ರಿವಿಧಮಪ್ಪುದು. ಅದರಲ್ಲಿ ಮೊದಲು ಅಂತರ್ಲಕ್ಷ್ಯವೆಂತೆನೆ : ಮೂಲಾಧಾರದಿಂದೆ ಬ್ರಹ್ಮರಂಧ್ರ ಪರಿಯಂತರಮಾಗಿ ಕೋಟಿಮಿಂಚುಗಳಿಗೆ ಸದೃಶವಾದ ಬಿಂದುವನು ಮನಸ್ಸಿನಿಂದ ಧ್ಯಾನಿಸುವುದು. ಮತ್ತಂ, ಗೋಲಾಟಮಂಡಲವೆನಿಸುವ ಲಲಾಟದುಪರಿಭಾಗದಲ್ಲಿ ಮಿನುಗುತಿರ್ದ ನಕ್ಷತ್ರಾಕಾರವನು ಮನಸ್ಸಿನಿಂದೆ ಸ್ಮರಿಸುವುದು. ಮತ್ತಂ, ಶ್ರವಣಂಗಳೆರಡನು ಬೆರಳಿನಿಂದೆ ಮಿಗಿಲಾಗಿ ಒತ್ತಲಾಗಿ ಕಪಾಲಕುಹರದಲ್ಲಿ ಘಮುಘಮುಧ್ವಾನಸ್ವರೂಪಮಾದ ಪ್ರಣವಘೋಷವನಾಲಿಪುದು. ಮತ್ತಂ, ಲೋಚನಂಗಳ ಮಧ್ಯದ ಕರಿಯ ನಕ್ಷತ್ರರೂಪಮಂ ಲಕ್ಷಿಪುದೇ ಅಂತರ್ಲಕ್ಷ್ಯವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪುರುಷನೆಂದು ಕರೆವುತಿರ್ಪುದು ಜಗದವರೆಲ್ಲ ಎನ್ನ ; ನಾನು ಪುರುಷನಲ್ಲವಯ್ಯಾ. ಅದೆಂತೆಂದೊಡೆ : ಹೊರಗಣ ಸಾಕಾರವೆ ನೀನು, ಒಳಗಣ ನಿರಾಕಾರವೆ ನಾನು. ಹೊರಗಣ ಸಾಕಾರದ ಪುರುಷರೂಪೇ ನೀವಾಗಿ, ಒಳಗಣ ನಿರಾಕಾರ ಸ್ತ್ರೀರೂಪೇ ನಾನಾಗಿ, ನಿಮಗೆ ರಾಣಿವಾಸವಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ. ಅಪ್ಪು ದೇವರೆಂಬೆನೆ ಅಪ್ಪು ದೇವರಲ್ಲ. ಅಗ್ನಿ ದೇವರೆಂಬೆನೆ ಅಗ್ನಿ ದೇವರಲ್ಲ. ವಾಯು ದೇವರೆಂಬೆನೆ ವಾಯು ದೇವರಲ್ಲ. ಆಕಾಶ ದೇವರೆಂಬೆನೆ ಆಕಾಶ ದೇವರಲ್ಲ. ಆತ್ಮ ದೇವರೆಂಬೆನೆ ಆತ್ಮ ದೇವರಲ್ಲ. ಸೂರ್ಯ ದೇವರೆಂಬೆನೆ ಸೂರ್ಯ ದೇವರಲ್ಲ. ಚಂದ್ರ ದೇವರೆಂಬೆನೆ ಚಂದ್ರ ದೇವರಲ್ಲ. ಅದೇನು ಕಾರಣವೆಂದೊಡೆ : ಪೃಥ್ವಿ ಶಿವನ ಸದ್ಯೋಜಾತಮುಖದಲ್ಲಿ ಪುಟ್ಟಿತ್ತು. ಅಪ್ಪು ಶಿವನ ವಾಮದೇವಮುಖದಲ್ಲಿ ಪುಟ್ಟಿತ್ತು. ತೇಜ ಶಿವನ ಅಘೋರಮುಖದಲ್ಲಿ ಪುಟ್ಟಿತ್ತು. ವಾಯು ಶಿವನ ತತ್ಪುರುಷಮುಖದಲ್ಲಿ ಪುಟ್ಟಿತ್ತು. ಆಕಾಶ ಶಿವನ ಈಶಾನ್ಯಮುಖದಲ್ಲಿ ಪುಟ್ಟಿತ್ತು. ಆತ್ಮ ಶಿವನ ಗೋಪ್ಯಮುಖದಲ್ಲಿ ಪುಟ್ಟಿತ್ತು. ಸೂರ್ಯ ಶಿವನ ನಯನದಲ್ಲಿ ಪುಟ್ಟಿತ್ತು. ಚಂದ್ರ ಶಿವನ ಮನಸ್ಸಿನಲ್ಲಿ ಪುಟ್ಟಿತ್ತು. ``ಯತ್ ದೃಷ್ಟಮ್ ತತ್ ನಷ್ಟಮ್'' ಎಂದು, ಇಂತೀ ಅಷ್ಟತನುಗಳಿಗೆ ಹುಟ್ಟು ಹೊಂದು ಉಂಟಾದ ಕಾರಣ ಇವು ಕಲ್ಪಿತವೆಂದು ಕಳೆದು ನೀನೊಬ್ಬನೆ ನಿತ್ಯ ಪರಿಪೂರ್ಣನೆಂದು ತಿಳಿದು ಉಳಿದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿ ಆಕಾಶಮಧ್ಯದಲ್ಲಿ ಉತ್ಪತ್ತಿಯಾದ ಸಕಲ ಪ್ರಾಣಿಗಳ ಶಿವನೆಂದು ಭಾವಿಸಲಾಗದು. ಅದೇನು ಕಾರಣವೆಂದೊಡೆ : ಆ ಸಕಲ ಪ್ರಾಣಿಗಳು ಶಿವನಾದಡೆ ಮದಮತ್ಸರಂಗಳಿಂದೆ ಒಂದನೊಂದು ಕೊಂದು ಕೂಗಿ ತಿಂದು ತೇಗಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಜಾತಿ ವರ್ಣಾಶ್ರಮ ಕುಲಗೋತ್ರ ನಾಮಸೀಮೆ ಬಂದ ಬಟ್ಟೆಗೆ ಬಡಿದಾಡಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಹಮ್ಮು ಬಿಮ್ಮು ಗರ್ವ ಅಹಂಕಾರ ಹೆಮ್ಮೆ ಹಿರಿತನಕೆ ಹೊಡೆದಾಡಿ ಮಡಿದು ಹೋಗಲೇತಕೊ ? ಆ ಸಕಲ ಪ್ರಾಣಿಗಳು ಶಿವನಾದಡೆ ಮಲತ್ರಯಂಗಳ ಬಲೆಯಲ್ಲಿ ಸಿಲ್ಕಿ ಭವಭವಂಗಳಲ್ಲಿ ತೊಳಲಿ ಬಳಲಿ ಬೆಂಡಾಗಲೇತಕೊ ? ಇದು ಕಾರಣ, ಅನಾದಿಸಂಸಿದ್ಧವಾದ ಪರಮ ಜಂಗಮಲಿಂಗವೇ ಶಿವನಲ್ಲದೆ ಭವಭವಂಗಳಲ್ಲಿ ಸತ್ತು ಹುಟ್ಟುವ ಸಕಲ ಪ್ರಾಣಿಗಳ ಶಿವನೆಂದಡೆ ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಸಾದಿಯಾದಡೆ ಚೇಳಿಯಕ್ಕನಂತಿರಬೇಕು. ಪ್ರಸಾದಿಯಾದಡೆ ಮಾದಾರ ಚೆನ್ನಯ್ಯನಂತಿರಬೇಕು. ಪ್ರಸಾದಿಯಾದಡೆ ಬೇಡರ ಕಣ್ಣಪ್ಪನಂತಿರಬೇಕು. ಪ್ರಸಾದಿಯಾದಡೆ ಬಿಬ್ಬಿ ಬಾಚಯ್ಯಗಳಂತಿರಬೇಕು. ಪ್ರಸಾದಿಯಾದಡೆ ಡೋಹರ ಕಕ್ಕಯ್ಯನಂತಿರಬೇಕು. ಪ್ರಸಾದಿಯಾದಡೆ ಪರಮಗುರು ಚೆನ್ನಬಸವಣ್ಣನಂತಿರಬೇಕು. ಅಲ್ಲದೆ ಪ್ರಾಣನ ಹಸಿವೆಗೆಂದು ಬಾಯಿಗೆ ಬಂದಂತೆ ತಿಂಬ ಜೀವಗಳ್ಳರಿಗೆಲ್ಲಿಯ ಪ್ರಸಾದವಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಪಂಚಾಕ್ಷರಿಯೆಂದಡೆ ಪರತತ್ವವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಪರವಸ್ತುವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಪರಬ್ರಹ್ಮವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಪರಮೇಶ್ವರನ ನಿಜನಾಮವು ತಾನೆ ನೋಡಾ. ಪಂಚಾಕ್ಷರಿಯೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಂಚಾಕ್ಷರಿಮಂತ್ರವ ಹಗಲಿರುಳೆನ್ನದೆ ಸದಾ ಸನ್ನಿಹಿತನಾಗಿ ಜಪಿಸಿದಾತನು ಅನಂತ ಪಾತಕಂಗಳ ವಿೂರಿ ಪರಮಪದವನೈದುತಿಪ್ಪನು ನೋಡಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಪೃಥ್ವಿಯಾಕಾಶದೊಳಗೆಲ್ಲ ನಿಮ್ಮ ಪ್ರಸಾದದ ಬೆಳಗು ತುಂಬಿರ್ಪುದಯ್ಯಾ. ಸಚರಾಚರದೊಳಗೆಲ್ಲ ನಿಮ್ಮ ಮಹಾಪ್ರಸಾದದ ಬೆಳಗು ತುಂಬಿರ್ಪುದಯ್ಯಾ. ಪಿಂಡಬ್ರಹ್ಮಾಂಡದೊಳಹೊರಗೆಲ್ಲ ನಿಮ್ಮ ಮಹಾಪ್ರಸಾದದ ಬೆಳಗು ತುಂಬಿರ್ಪುದಯ್ಯಾ. ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಸಾದದ ಬೆಳಗೆ ತುಂಬಿರ್ಪುದಾಗಿ, ಇಲ್ಲ ಉಂಟು ಎಂಬುದಕ್ಕೆ ತೆರಹಿಲ್ಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಸಾದಿಯೊಳಗಣ ಭಕ್ತಸ್ಥಲವನಿಂಬುಗೊಂಡರು ಬಸವಣ್ಣನವರು. ಪ್ರಸಾದಿಯೊಳಗಣ ಮಹೇಶ್ವರಸ್ಥಲವನಿಂಬುಗೊಂಡರು ಮಡಿವಾಳಸ್ವಾಮಿಗಳು. ಪ್ರಸಾದಿಯೊಳಗಣ ಪ್ರಸಾದಿಸ್ಥಲವನಿಂಬುಗೊಂಡರು ಚೆನ್ನಬಸವಣ್ಣನವರು. ಪ್ರಸಾದಿಯೊಳಗಣ ಪ್ರಾಣಲಿಂಗಿಸ್ಥಲವನಿಂಬುಗೊಂಡರು ತಂಗಟೂರ ಮಾರಯ್ಯನವರು. ಪ್ರಸಾದಿಯೊಳಗಣ ಶರಣಸ್ಥಲವನಿಂಬುಗೊಂಡರು ಗಜೇಶಮಸಣಯ್ಯನವರು, ಪ್ರಸಾದಿಯೊಳಗಣ ಐಕ್ಯಸ್ಥಲವನಿಂಬುಗೊಂಡರು ಬಿಬ್ಬಿಬಾಚಯ್ಯನವರು. ಇಂತೀ ಪ್ರಸಾದಿ ಷಟ್‍ಸ್ಥಲವನಿಂಬುಗೊಂಡ ಶರಣರ ಪ್ರಸನ್ನವ ಮಾಡಿಕೊಡಯ್ಯಾ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಾಣಲಿಂಗ ಪ್ರಾಣಲಿಂಗವೆಂದು ಪ್ರಾಣಲಿಂಗನ ನುಡಿಗಡಣವ ಕಲಿತು ನುಡಿವರೆಲ್ಲ ಪ್ರಾಣಲಿಂಗದ ನೆಲೆಯನರಿಯರು ; ಪ್ರಾಣಲಿಂಗದ ನಿಲವನರಿಯರು ; ಪ್ರಾಣಲಿಂಗದ ಹೊಲಬನರಿಯರು; ಪ್ರಾಣಲಿಂಗದ ಸ್ಥಲವನರಿಯರು ; ಪ್ರಾಣಲಿಂಗದ ಬೆಳಗನರಿಯರು ; ಪ್ರಾಣಲಿಂಗದ ಕಳೆಯನರಿಯರು ; ಪ್ರಾಣಲಿಂಗದ ಘನವನರಿಯರು ; ಪ್ರಾಣಲಿಂಗದ ಘನವ ಅನಾದಿ ಸಂಸಿದ್ಧವಾದ ನಿಮ್ಮ ಪ್ರಾಣಲಿಂಗಿಯೆ ಬಲ್ಲನಲ್ಲದೆ ಉಳಿದ ಪ್ರಪಂಚದೇಹಿಗಳೆತ್ತ ಬಲ್ಲರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪೃಥ್ವಿ ಅಡಗುವುದಕ್ಕೆ ಅಪ್ಪುವೆ ಆಶ್ರಯವಾಗಿರ್ಪುದು. ಆ ಅಪ್ಪು ಅಡಗುವುದಕ್ಕೆ ಅಗ್ನಿಯೆ ಆಶ್ರಯವಾಗಿರ್ಪುದು. ಆ ಅಗ್ನಿ ಅಡಗುವುದಕ್ಕೆ ವಾಯುವೆ ಆಶ್ರಯವಾಗಿರ್ಪುದು. ಆ ವಾಯು ಅಡಗುವುದಕ್ಕೆ ಆಕಾಶವೆ ಆಶ್ರಯವಾಗಿರ್ಪುದು. ಆ ಆಕಾಶ ಅಡಗುವುದಕ್ಕೆ ಆತ್ಮವೆ ಆಶ್ರಯವಾಗಿರ್ಪುದು. ಆ ಆತ್ಮ ಅಡಗುವುದಕ್ಕೆ ಆದಿಯೆ ಆಶ್ರಯವಾಗಿರ್ಪುದು. ಆ ಆದಿ ಅಡಗುವುದಕ್ಕೆ ಅನಾದಿಯೆ ಆಶ್ರಯವಾಗಿರ್ಪುದು. ಆ ಅನಾದಿ ಅಡಗುವುದಕ್ಕೆ ಶೂನ್ಯವೆ ಆಶ್ರಯವಾಗಿರ್ಪುದು. ಆ ಶೂನ್ಯ ಅಡಗುವುದಕ್ಕೆ ನಿರವಯವೆ ಆಶ್ರಯವಾಗಿರ್ಪುದು. ಆ ನಿರವಯ ಅಡಗುವುದಕ್ಕೆ ನಿಜವೆ ಆಶ್ರಯವಾಗಿರ್ಪುದು. ಆ ನಿಜ ಅಡಗುವುದಕ್ಕೆ ಅಖಂಡೇಶ್ವರಾ, ನಿಮ್ಮ ಶರಣನ ಪರಮ ಹೃದಯಕಮಲವೆ ಆಶ್ರಯವಾಗಿರ್ಪುದಯ್ಯಾ.
--------------
ಷಣ್ಮುಖಸ್ವಾಮಿ
ಪರುಷಲೋಹದಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ಉರಿಯುಂಡ ತೃಣದಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ಕರ್ಪುರದ ಜ್ಯೋತಿಯಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ಕೀಡಿ ಕುಂಡಲಿಯಂತೆ ಮಾಡಿತ್ತೆನ್ನ ಶ್ರೀಗುರುವಿನ ಉಪದೇಶ. ವಾರಿಕಲ್ಲ ಪುತ್ಥಳಿ ಅಪ್ಪುವನೊಡಗೂಡಿದಂತೆ ಮಾಡಿತ್ತೆನ್ನ ಅಖಂಡೇಶ್ವರಾ, ನಿಮ್ಮ ವಚನೋಪದೇಶ.
--------------
ಷಣ್ಮುಖಸ್ವಾಮಿ
ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಬ ಪರಮದ್ರೋಹಿಗಳನೇನೆಂಬೆ ? ಪ್ರಸಾದಿಗೆ ಪರಸ್ತ್ರೀಯರ ಅಪ್ಪುಗೆಯುಂಟೆ ? ಪ್ರಸಾದಿಗೆ ಪರದೈವದ ಪೂಜೆಯುಂಟೆ ? ಪ್ರಸಾದಿಗೆ ಪರದೈವದ ಪ್ರೇಮವುಂಟೆ ? ಪ್ರಸಾದಿಗೆ ಪ್ರಪಂಚಿನ ವ್ಯವಹಾರ ಉಂಟೆ ? ಇಂತೀ ತಥ್ಯಮಿಥ್ಯದ ಹೋರಾಟದಲ್ಲಿದ್ದು ತೊತ್ತಿನೆಂಜಲ ತಿಂಬ ತೊನ್ನ ಹೊಲೆಯರಿಗೆ ಉನ್ನತ ಪ್ರಸಾದವೆಲ್ಲಿಯದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಾಣನಾಯಕನ ಕಾಣದೆ ಕ್ಷೋಣಿಯೊಳಗೆ ಬದುಕಲಾರೆನವ್ವಾ. ಏಣಾಂಕಧರನು ಏಕೆ ಬಾರನೇ ? ಜಾಣೆ ಪ್ರವೀಣೆ ಕರೆದುತೋರೆ ಅಖಂಡೇಶ್ವರನೆಂಬ ನಲ್ಲನ.
--------------
ಷಣ್ಮುಖಸ್ವಾಮಿ
ಪಿಂಡದೊಳಗೊಂದು ಅಖಂಡಜ್ಯೋತಿ ಥಳಥಳಿಸಿ ಬೆಳಗುತಿರ್ಪುದು ನೋಡಾ. ಆ ಅಖಂಡಜ್ಯೋತಿಯನೊಡಗೂಡಿ ಅವಿರಳ ಶಿವಯೋಗಿಯಾದೆನಾಗಿ, ಪಿಂಡದ ಖಂಡಿತವು ಕಡೆಗಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...