ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ, ಶ್ರೀಮಹಾದೇವನ ನೆನೆವಾತನದ್ಥಿಕ ನೋಡಾ. ಆತನಿಂದದ್ಥಿಕ ಕಂಗಳು ತುಂಬಿ ನೋಡುವಾತ. ಆತನಿಂದದ್ಥಿಕ ಕೈಮುಟ್ಟಿ ಪೂಜಿಸುವಾತ. ಅದೆಂತೆಂದಡೆ, ಶಿವಧರ್ಮೇ- ``ಲಿಂಗಸ್ಯ ದರ್ಶನಂ ಪುಣ್ಯಂ ದರ್ಶನಾತ್ ಸ್ಪರ್ಶನಂ ಶುಭಂ | ಶಿವಲಿಂಗಂ ಮಹಾಪುಣ್ಯಂ ಸರ್ವದೇವ ನಮಸ್ಕøತಂ | ಯಃ ಸ್ಪøಶೇದಪಿ ಪಾಣಿಭ್ಯಾಂ ನ ಸ ಪಾಪೈಃ ಪರಿಲಿಪ್ಯತೇ ||'' ಎಂದುದಾಗಿ, ಅಂತಪ್ಪ ಶಿವಲಿಂಗವನು ಹೆರೆಹಿಂಗದೆ ಅಂಗದ ಮೇಲೆ ನಿರಂತರ ಧರಿಸಿಕೊಂಡಿಪ್ಪಾತನೆ ಎಲ್ಲರಿಂದದ್ಥಿಕ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆನೆಗಳೆಂಟನು ಒಂದು ಮೌನದ ಚಿಕ್ಕಾಡು ನುಂಗಿತ್ತು. ಕಾನನದೆರಳೆಯ ಕಪ್ಪೆ ನುಂಗಿತ್ತು. ಮಾನಿನಿಯ ಮಸ್ತಕದಲ್ಲಿ ಭಾನುಶತಕೋಟಿ ತೇಜದ ಕಳೆ ಮೊಳೆದೋರಿತ್ತು. ಇದೇನು ಸೋಜಿಗ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಆತನ ದಿವ್ಯರೂಪು ನೋಡಿ ಎನ್ನ ಕಂಗಳು ದಣಿಯವು. ಆತನ ಲಲ್ಲೆವಾತ ಕೇಳಿ ಎನ್ನ ಕಿವಿಗಳು ದಣಿಯವು. ಆತನ ಜಿಹ್ವೆಯ ಚುಂಬಿಸಿ ಎನ್ನ ಬಾಯಿ ದಣಿಯದು. ಆತನ ಸರ್ವಾಂಗವನಪ್ಪಿ ಎನ್ನ ತನು ದಣಿಯದು. ಆ ಅಖಂಡೇಶ್ವರ ಕೂಡಿ ಒಳಪೊಕ್ಕು ಪರಿಣಾಮ ಸೂರೆಗೊಂಡು ಎನ್ನ ಮನ ದಣಿಯದು ನೋಡಿರವ್ವಾ.
--------------
ಷಣ್ಮುಖಸ್ವಾಮಿ
ಆತ್ಮವೆ ಅಂಗವಾದ ಐಕ್ಯಂಗೆ ಸದ್‍ಭಾವನೆ ಹಸ್ತ. ಆ ಹಸ್ತಕ್ಕೆ ಚಿಚ್ಛಕ್ತಿ , ಆ ಶಕ್ತಿಗೆ ಮಹಾಲಿಂಗ, ಆ ಲಿಂಗಕ್ಕೆ ಹೃದಯೇಂದ್ರಿಯವೆ ಮುಖ, ಆ ಮುಖಕ್ಕೆ ಸುತೃಪ್ತಿ ಪದಾರ್ಥ; ಆ ಪದಾರ್ಥವನು ಹೃದಯದಲ್ಲಿಹ ಮಹಾಲಿಂಗಕ್ಕೆ ಸಮರಸಭಕ್ತಿಯಿಂದರ್ಪಿಸಿ, ಆ ಪದಾರ್ಥವನು ಹೃದಯಲ್ಲಿಹ ಮಹಾಲಿಂಗಕ್ಕೆ ಸಮರಸ ಭಕ್ತಿಯಿಂದರ್ಪಿಸಿ ಆ ಸುತೃಪ್ತಿಪ್ರಸಾದವನು ಪಡೆದು ಸುಖಿಸುವಾತನೆ ಐಕ್ಯನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆವನೊಬ್ಬನು ಉಪಪಾತಕ ಮಹಾಪಾತಕಂಗಳ ಮಾಡಿ, ಶ್ರೀ ರುದ್ರಾಕ್ಷಿಯ ನಾಮೋಚ್ಚರಣೆಯ ಮಾಡಿದಡೆ ಆ ಪಾತಕಂಗಳು ಪರಿಹಾರವಾಗಿ ಹತ್ತುಸಾವಿರ ಗೋದಾನದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ಸ್ವರೂಪವನು ಕಂಗಳು ತುಂಬಿ ನೋಡಿದಡೆ ಶತಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ಮುಟ್ಟಿ ಮುಟ್ಟಿ ಪೂಜಿಸಿದಡೆ ಸಹಸ್ರಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ತತ್ ಸ್ಥಾನಂಗಳಲ್ಲಿ ಭಕ್ತಿಯಿಂದೆ ಧರಿಸಿದಡೆ ಲಕ್ಷಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಆ ರುದ್ರಾಕ್ಷಿಯ ಮಣಿಗಳಿಂದೆ ಜಪವ ಮಾಡಿದಡೆ ಅನಂತಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ. ಅದೆಂತೆಂದೊಡೆ : ``ಸಪ್ತಕೋಟಿಶತಂ ಪುಣ್ಯಂ ಲಭತೇ ಧಾರಣಾತ್ ನರಃ | ಲಕ್ಷಕೋಟಿಸಹಸ್ರಾಣಿ ಲಕ್ಷಕೋಟಿಶತಾನಿ ಚ | ತಜ್ಜಪಾತ್ ಲಭತೇ ಪುಣ್ಯಂ ನಾತ್ರ ಕಾರ್ಯವಿಚಾರಣಾ ||' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯ ಧರಿಸಿದ ಫಲಕ್ಕೆ ಇನ್ನಾವ ಫಲವು ಸರಿಯಿಲ್ಲವೆಂದು ಸಕಲಾಗಮಂಗಳು ಸಾರುತಿಪ್ಪವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಪ್ರಸಾದ, ಅನಾದಿಪ್ರಸಾದ, ವೇದಕ್ಕೆ ನಿಲುಕದ ಅಭೇದ್ಯಪ್ರಸಾದ ! ಅಖಂಡೇಶ್ವರನ ಅವಿರಳಪ್ರಸಾದ ಎನಗೆ ಸಾಧ್ಯವಾಯಿತ್ತು ನೋಡಾ !
--------------
ಷಣ್ಮುಖಸ್ವಾಮಿ
ಆಧಾರದಲ್ಲಿ ಗುರುಸಂಬಂಧವು. ಸ್ವಾಧಿಷಾ*ನದಲ್ಲಿ ಲಿಂಗಸಂಬಂಧವು. ಮಣಿಪೂರಕದಲ್ಲಿ ಜಂಗಮಸಂಬಂಧವು. ಅನಾಹತದಲ್ಲಿ ಪಾದೋದಕಸಂಬಂಧವು. ವಿಶುದ್ಧಿಯಲ್ಲಿ ಪ್ರಸಾದಸಂಬಂಧವು. ಆಜ್ಞೇಯದಲ್ಲಿ ಅರುಹುಸಂಬಂಧವು. ಈ ಅರುಹುವಿಡಿದು ಗುರುವ ಕಂಡು, ಲಿಂಗವ ನೋಡಿ, ಜಂಗಮವ ಕೂಡಿ, ಪಾದೋದಕ ಪ್ರಸಾದದ ಘನವ ಕಾಂಬುದೆ ಅಂತರಂಗವೆನಿಸುವುದು. ಈ ಅಂತರಂಗದ ವಸ್ತುವು ಭಕ್ತಹಿತಾರ್ಥವಾಗಿ ಬಹಿರಂಗಕ್ಕೆ ಬಂದಲ್ಲಿ, ಗುರುಭಕ್ತಿ, ಲಿಂಗಪೂಜೆ, ಜಂಗಮಾರಾಧನೆ, ಪಾದೋದಕಪ್ರಸಾದ ಸೇವನೆಯ ಪ್ರೇಮವುಳ್ಳಡೆ ಬಹಿರಂಗವೆನಿಸುವುದು. ಇಂತೀ ಅಂತರಂಗ ಬಹಿರಂಗದ ಮಾಟಕೂಟವ ಬಿಡದಿರ್ಪ ಪರಮಪ್ರಸಾದಿಗಳ ಒಳಹೊರಗೆ ಭರಿತನಾಗಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಆಚಾರ ವಿಚಾರವೆಂದರಿಯರು. ಅಂತರಂಗ ಬಹಿರಂಗವೆಂದರಿಯರು. ಸತ್‍ಕ್ರಿಯೆ ಸಮ್ಯಕ್‍ಜ್ಞಾನವೆಂದರಿಯರು. ಕಾಯಜೀವದ ಕರ್ಮಕತ್ತಲೆಯಲ್ಲಿ ಬಿದ್ದು ಕರಣಮಥನ ಕರ್ಕಶದಿಂದೆ ಹೊಡೆದಾಡಿ ಹೊತ್ತುಗಳೆದು ಹೊಲಬುದಪ್ಪಿ ಸತ್ತುಹೋಗುವ ವ್ಯರ್ಥಜೀವಿಗಳ ಭಕ್ತಮಾಹೇಶ್ವರರೆಂದಡೆ ಭವ ಹಿಂಗದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು, ಶೂನ್ಯವಿಲ್ಲದ ಬಯಲು, ನಿಃಶೂನ್ಯವಿಲ್ಲದ ಬಯಲು, ಸುರಾಳವಿಲ್ಲದ ಬಯಲು, ನಿರಾಳವಿಲ್ಲದ ಬಯಲು, ಸಾವಯವಿಲ್ಲದ ಬಯಲು, ನಿರಾವಯವಿಲ್ಲದ ಬಯಲು, ಅಖಂಡೇಶ್ವರನೆಂಬ ಬಯಲಿನ ಬಯಲು ಮಹಾಘನ ಬಚ್ಚಬರಿಯ ಬಯಲೊಳಗೆ ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು.
--------------
ಷಣ್ಮುಖಸ್ವಾಮಿ
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಬ್ರಹ್ಮಂಗೆ ಬ್ರಹ್ಮಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ವಿಷ್ಣುವಿಂಗೆ ವಿಷ್ಣುಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ದೇವತೆಗಳಿಗೆ ದೇವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿ ಸ್ನಾನವ ಮಾಡಿದ ಋಷಿಗಳಿಗೆ ಋಷಿಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಗಂಧರ್ವರುಗಳಿಗೆ ಗಂಧರ್ವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ರುದ್ರಗಣರಿಗೆ ರುದ್ರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಯಕ್ಷರಿಗೆ ಯಕ್ಷಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಕಿನ್ನರರಿಗೆ ಕಿನ್ನರಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಅಮರಗಣರಿಗೆ ಅಮರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಪಿತೃಗಣರಿಗೆ ಪಿತೃಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಭೂತಗಣರಿಗೆ ಭೂತಗಣಪದವಾಯಿತ್ತು. ಅದೆಂತೆಂದೊಡೆ : ``ಬ್ರಹ್ಮವಿಷ್ಣ್ವಾದಿದೇವಾ ಋಷಯೋ ಗಂಧರ್ವಾ ಯಕ್ಷಕಿನ್ನರಾಃ | ಮರುದ್‍ಗಣಾಃ ಪಿತೃಗಣಾಃ ಸರ್ವೇ ಭೂತಗಣಾ ಅಪಿ | ನಿತ್ಯಂ ಚ ಸರ್ವಯತ್ನೇನ ಭಸ್ಮಸ್ನಾನಂ ಪ್ರವರ್ತತೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಮಹತ್ವವ ಕಂಡು ಕೇಳಿ ನಂಬಲರಿಯದೆ ಗರ್ವದಿಂದೆ ಮುಂದುಗೆಟ್ಟ ಮರುಳಮಾನವರಿಗೆ ಭವರಾಟಾಳದಲ್ಲಿ ಸತ್ತು ಸತ್ತು ಹುಟ್ಟಿ ಹುಟ್ಟಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆಕಾಶದಲ್ಲಿ ತೋರಿದ ಇಂದ್ರಧನು ಅಡಗುವುದಕ್ಕೆ ಆಕಾಶವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಗಾಳಿಯಲ್ಲಿ ತೋರಿದ ಸುಳಿಗಾಳಿ ಅಡಗುವುದಕ್ಕೆ ಆ ಗಾಳಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಅಗ್ನಿಯಿಂದ ತೋರಿದ ಕಿಡಿಗಳು ಅಡಗುವುದಕ್ಕೆ ಆ ಅಗ್ನಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಸಮುದ್ರದಲ್ಲಿ ತೋರಿದ ನೊರೆತೆರೆ ತುಂತುರ್ವನಿ ಅಡಗುವುದಕ್ಕೆ ಆ ಸಮುದ್ರವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಆದಿ ಅನಾದಿಯಿಂದತ್ತತ್ತಲಾದ ಮಹಾಘನವಸ್ತುವಿನಲ್ಲಿ ರೂಪಿಸಿ ತೋರಿದ ನಿಜೈಕ್ಯನಡಗುವುದಕ್ಕೆ ಆ ಪರವಸ್ತುವೆ ಆಶ್ರಯವಲ್ಲದೆ, ಬೇರೆ ಆಶ್ರಯವುಂಟೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆತನ ಆಳಾಪದಿಂದೆ ಹಗಲಾದುದನರಿಯೆನವ್ವಾ ! ಆತನ ಆಳಾಪದಿಂದೆ ಇರುಳಾದುದನರಿಯೆನವ್ವಾ ! ಅಖಂಡೇಶ್ವರನೆಂಬ ಪ್ರಾಣದೊಲ್ಲಭನ ಕೂಡಬೇಕೆಂಬ ಭ್ರಾಂತಿಯಿಂದೆ ಹೋದುದ ಬಂದುದನರಿಯೆನವ್ವಾ !
--------------
ಷಣ್ಮುಖಸ್ವಾಮಿ
ಆವ ಕಾರ್ಯಕ್ಕಾದಡೂ ಶ್ರೀ ವಿಭೂತಿಯೇ ಬೇಕು. ಆವ ಕ್ರಿಯೆಗಾದಡೂ ಶ್ರೀ ವಿಭೂತಿಯೇ ಬೇಕು. ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ವೇದವನೋದಿದಡೇನು ? ಆತನೋದಿದ ವೇದಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ಯಜ್ಞಂಗಳ ಮಾಡಿದಡೇನು ? ಆತ ಮಾಡಿದ ಯಜ್ಞಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀವಿಭೂತಿಯ ದಾನಂಗಳ ಮಾಡಿದಡೇನು ? ಆತ ಮಾಡಿದ ದಾನಂಗಳು ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ತಪವ ಮಾಡಿದಡೇನು ? ಆತ ಮಾಡಿದ ತಪ ವ್ಯರ್ಥ ಕಾಣಿರೋ ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ನಿತ್ಯ ನೇಮ ವ್ರತ ಉಪವಾಸಂಗಳಂ ಮಾಡಿದಡೇನು ? ಆತ ಮಾಡಿದ ನಿತ್ಯ ನೇಮ ವ್ರತ ಉಪವಾಸಂಗಳು ವ್ಯರ್ಥ ಕಾಣಿರೋ ! ಅದೆಂತೆಂದೊಡೆ :ಬೋಧಾಯನ ಸ್ಮೃತೌ- ``ವೃಥಾ ವೇದಾ ವೃಥಾ ಯಜ್ಞಾ ವೃಥಾ ದಾನಂ ವೃಥಾ ತಪಃ | ವೃಥಾ ವ್ರತೋಪವಾಸೌ ತು ತ್ರಿಪುಂಡ್ರಂ ಯೋ ನ ಧಾರಯೇತ್ ||'' ಎಂದುದಾಗಿ, ಸಕಲಕ್ಕೆ ಶ್ರೀ ವಿಭೂತಿಯೇ ಆಧಾರವಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆಲಸ್ಯವೇತಕೋ ಲಿಂಗಪೂಜೆಮಾಡುವುದಕ್ಕೆ ? ಆಲಸ್ಯವೇತಕೋ ಜಂಗಮವನರ್ಚಿಸುವುದಕ್ಕೆ ? ಆಲಸ್ಯವೇತಕೋ ನಮ್ಮ ಅಖಂಡೇಶ್ವರಲಿಂಗವನೋಲಿಸುವುದಕ್ಕೆ ?
--------------
ಷಣ್ಮುಖಸ್ವಾಮಿ
ಆಕಾಶಮಂಡಲದೊಳಗೆ ಲೋಕೇಶನ ಪಟ್ಟಣವಿರ್ಪುದು ನೋಡಾ. ಆ ಪಟ್ಟಣಕ್ಕೆ ನಾಲ್ಕು ಬಾಗಿಲು, ಎಂಟು ಬೀದಿ, ಹದಿನಾರು ಚದುರಂಗದ ಚಾವಡಿ, ಮೂವತ್ತೆರಡು ಕೇರಿ. ಕೇರಿಗಳೊಳಗೆ ಪರಿಕಾರರ ಕಟ್ಟಳೆ ನೋಡಾ ! ಆಕಾಶಮಂಡಲವನಡರಿ, ಲೋಕೇಶನ ಕಂಡಾತಂಗಲ್ಲದೆ ಆ ಪಟ್ಟಣವು ಆರಿಗೂ ಸಾಧ್ಯವಿಲ್ಲ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆರೂ ಸಾಧಿಸಬಾರದ ವಸ್ತುವ ಸಾಧಿಸಿ ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ಭೇದಿಸಬಾರದ ವಸ್ತುವ ಭೇದಿಸಿ ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ನೋಡಬಾರದ ವಸ್ತುವ ನೋಡೆಂದು ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ಹಾಡಬಾರದ ವಸ್ತುವ ಹಾಡೆಂದು ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ಕೂಡಬಾರದ ವಸ್ತುವ ಕೂಡೆಂದು ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಬೆಳಗುವ ಪರಬ್ರಹ್ಮವ ಎನ್ನ ಕಂಗಳು ತುಂಬಿ ನೋಡಿ, ಕೈಮುಟ್ಟಿ ಪೂಜಿಸಿ, ಜಿಹ್ವೆತುಂಬಿ ಕೊಂಡಾಡಿ, ಮನತುಂಬಿ ಅಪ್ಪಿ, ಅಗಲದೆ ಇಪ್ಪೆನಯ್ಯ ನಿಮ್ಮ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ ; ಅನಾದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ ; ಆದಿಯನಾದಿಯಿಂದತ್ತಲು ನೀನೇ ದೇವನು ನಾನೇ ಭಕ್ತನಾಗಿ ನಿಮ್ಮೊಳಗೆ ಅಡಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಯಾಧಾರವಿಲ್ಲದ ಮುನ್ನ, ನಾದಬಿಂದುಕಳೆಗಳಿಲ್ಲದ ಮುನ್ನ, ಭೇದಾಭೇದ ಬ್ರಹ್ಮಾಂಡಕೋಟಿಗಳಿಲ್ಲದ ಮುನ್ನ, ಬಸವನೆಂಬ ಬೀಜದ ಮಧ್ಯದಲ್ಲಿ ಲಿಂಗವೆಂಬ ಅಂಕುರ ಉದಯವಾಯಿತ್ತು. ಆ ಲಿಂಗಾಂಕುರವೆ ಸಕಲತತ್ವ ತೋರಿಕೆಯೆಂಬ ಶಾಖೆ ಪರ್ಣಂಗಳು ಪಸರಿಸಿ, ವೃಕ್ಷ ಪಲ್ಲವಿಸಿತ್ತು, ಇಂತಪ್ಪ ಚಿದ್‍ಬ್ರಹ್ಮವೃಕ್ಷವೆಂಬ ಪರಮಗುರು ಸಂಗನಬಸವಣ್ಣನ ಶ್ರೀಪಾದಕಮಲದಲ್ಲಿ ಭ್ರಮರನಾಗಿರಿಸಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಮಯ ಗುರು, ಅನಾದಿಮಯ ಗುರು, ವೇದಮಯ ಗುರು, ನಾದಮಯ ಗುರು, ಅಭೇದ್ಯಮಯ ಗುರು, ಸಾಧುಸಜ್ಜನ ಸದ್‍ಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆವನೊಬ್ಬನ ಹೃದಯದಲ್ಲಿ `ಓಂ ನಮಃ ಶಿವಾಯ' ಎಂಬ ಮಂತ್ರವು ನಿಶ್ಚಲವಾಗಿರಲು ಆತಂಗೆ ಸಕಲಮಂತ್ರಂಗಳ ಸಕಲತಂತ್ರಂಗಳ ಹಂಗಿಲ್ಲ : ಆತಂಗೆ ಸಕಲಶಾಸ್ತ್ರಂಗಳ ಸಕಲವಿದ್ಯಂಗಳ ಅಭ್ಯಸಿಸಬೇಕೆಂಬ ಭ್ರಾಮಕವಿಲ್ಲ. ಆತನಿರ್ದಲ್ಲಿ ಸಕಲಭುವನ ಸಕಲತತ್ತ್ವಂಗಳಿರ್ಪುವು. ಆತ ನಿರಾವರಣ ನಿರುಪಮ ನಿರಾಲಂಬ ನಿಜಮುಕ್ತನು ನೋಡಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಆಸೆವಿಡಿದು ಹಲವು ದೇಶಕ್ಕೆ ಹರಿದಾಡಿದೆನಲ್ಲದೆ ನಿರಾಶೆವಿಡಿದು ನಿಜವಿರಕ್ತನಾಗಿ ಚರಿಸಲಿಲ್ಲವಯ್ಯ ನಾನು. ವೇಷಾಡಂಬರದಲ್ಲಿ ಅಧಿಕನೆನಿಸಿ ಲೌಕಿಕ ಮೆಚ್ಚಿ ನಡೆದೆನಲ್ಲದೆ ಭಾಷೆಯಲ್ಲಿ ಅಧಿಕನೆನಿಸಿ ಲಿಂಗಮೆಚ್ಚಿ ನಡೆಯಲಿಲ್ಲವಯ್ಯ ನಾನು. ಮಾತಿನಲ್ಲಿ ವಿರಕ್ತನೆಂದು ಠಕ್ಕುತನದ ಕೀಳುಗಾರಿಕೆಯ ಸುಳ್ಳನೇ ನುಡಿದೆನಲ್ಲದೆ ಮನದಲ್ಲಿ ಸರ್ವಸಂಗ ಪರಿತ್ಯಾಗಿಯಾದ ಪರಮ ವಿರಕ್ತನಲ್ಲವಯ್ಯ ನಾನು. ಇಂತಪ್ಪ ಹುಸಿಹುಂಡ ಹುಸಿಡಂಭಕ ದುರ್ಮತಿ ಬರುಕಾಯನಿಗೆ ಅಖಂಡೇಶ್ವರ ಎಂತು ಮೆಚ್ಚುವನು ಎನಗೆ?
--------------
ಷಣ್ಮುಖಸ್ವಾಮಿ
ಆದಿಯ ಭಕ್ತ ಅನಾದಿಯ ಜಂಗಮ ಮಧ್ಯದಲ್ಲಿ ಹುಟ್ಟಿದ ಪದಾರ್ಥ ಈ ಮೂರು ಬೀಜವೃಕ್ಷಫಲದ ಹಾಗೆ ಒಂದೆಯೆಂದು ಕಾಂಬ ಮಹಾಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ