ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುಂಡಲಿಯ ಬಾಗಿಲಲ್ಲಿ ಕೆಂಡವ ಪುಟಮಾಡಿ, ಉದ್ದಂಡವಿಕಾರದ ಉಪಟಳವನುರುಹಿ, ತಂಡತಂಡದ ನೆಲೆಗಳ ದಾಟಿ ದಂಡನಾಳವ ಪೊಕ್ಕು ಮಂಡಲತ್ರಯದ ಮೇಲೆ ಚಂಡ ರವಿಕೋಟಿಪ್ರಭೆಯಿಂದೆ ಬೆಳಗುವ ಅಖಂಡಮೂರ್ತಿಯ ಕಂಡು ಕೂಡಬಲ್ಲಾತನೆ ಪ್ರಚಂಡ ಪ್ರಾಣಲಿಂಗಿಯೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಲಲ್ಲಿ ಕಣ್ಣು ಮೂಡಿತ್ತ ಕಂಡೆ. ನೆತ್ತಿಯ ಕುಂಭವನೊಡೆದು ಸುಧೆ ಸರ್ವಾಂಗದಲ್ಲಿ ತುಂಬಿತ್ತ ಕಂಡೆ. ಕತ್ತಲೆ ಬೆಳಗಾಯಿತ್ತ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಲನೆಂಬ ಜಾಲಗಾರನು ಕರ್ಮವೆಂಬ ಬಲೆಯ ಬೀಸಿ, ಸಂಸಾರಶರದ್ಥಿಯಲ್ಲಿರ್ಪ ಸಕಲಪ್ರಾಣಿಗಳೆಂಬ ಮೀನುಗಳ ಹಿಡಿದು ಕೊಲ್ಲುತಿದ್ದಾನೆ. ಕಾಮನೆಂಬ ಬೇಂಟೆಗಾರನು ಕಂಗಳ ತೋಹಿನಲ್ಲಿ ನಿಂದು, ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ ಸಕಲಪ್ರಾಣಿಗಳ ಕೆಡಹಿಕೊಂಡು ಕೊಲ್ಲುತಿದ್ದಾನೆ. ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ ಹಿಪ್ಪೆಯ ಮಾಡಿ ಉಃಫೆಂದು ಊದುತಿದ್ದಾಳೆ. ಇಂತೀ ತ್ರಿವಿಧಮುಖದಲ್ಲಿ ಕಾಡುವ ನಿಮ್ಮ ಮಾಯೆಯ ಗೆಲುವಡೆ ಆರಳವಲ್ಲವಯ್ಯಾ ಅಖಂಡೇಶ್ವರಾ, ನೀವು ಕರುಣಿಸದನ್ನಕ್ಕ.
--------------
ಷಣ್ಮುಖಸ್ವಾಮಿ
ಕಾಮದ ಕಳವಳದಲ್ಲಿ ಕಂಗೆಡುವನಲ್ಲ ಶರಣ. ಜೀವನುಪಾದ್ಥಿಕೆಯ ಹೊದ್ದವನಲ್ಲ ಶರಣ. ಭಾವದ ಭ್ರಮೆಯಲ್ಲಿ ಸುಳಿವನಲ್ಲ ಶರಣ. ಮನದ ಮರವೆಯಲ್ಲಿ ಮಗ್ನನಲ್ಲ ಶರಣ. ಕರಣಂಗಳ ಕತ್ತಲೆಯಲ್ಲಿ ಸುತ್ತಿ ಬೀಳುವನಲ್ಲ ಶರಣ. ಇಂದ್ರಿಯಂಗಳ ವಿಕಾರದಲ್ಲಿ ಹರಿದಾಡುವನಲ್ಲ ಶರಣ. ಪರತರಲಿಂಗದ ಬೆಳಗಿನೊಳಗೆ ಬೆರೆದು ತೆರಹಿಲ್ಲದೆ ಬೆಳಗುವ ಪರಮಗಂಬ್ಥೀರ ಶರಣನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಷ್ಠದಲ್ಲಿ ಬೊಂಬೆಯ ಮಾಡಿ, ಪಟ್ಟುನೂಲ ಸೂತ್ರವ ಹೂಡಿ, ತೆರೆಯ ಮರೆಯಲ್ಲಿ ನಿಂದು, ಸೂತ್ರಿಕನು ಕುಣಿಸಿದಡೆ ಕುಣಿಯುತಿರ್ಪುದಲ್ಲದೆ ಆ ಅಚೇತನ ಬೊಂಬೆ ತನ್ನ ತಾನೆ ಕುಣಿವುದೆ ಅಯ್ಯಾ ? ಎನ್ನ ತನುವೆಂಬ ಅಚೇತನ ಬೊಂಬೆಗೆ ಪ್ರಾಣವಾಯುವೆಂಬ ಜೀವಸೂತ್ರವ ಹೂಡಿ ಮನವೆಂಬ ತೆರೆಯ ಮರೆಯಲ್ಲಿ ನಿಂದು ನೀನಾಡಿಸಿದಡೆ ನಾನಾಡುತಿರ್ಪೆನಲ್ಲದೆ ಎನಗೆ ಬೇರೆ ಸ್ವತಂತ್ರವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕಾಯದೊಳಗಣ ಮನಸ್ಸು ಕಂಗೆಟ್ಟು ಹೊರಬಿದ್ದು ಕರಣೇಂದ್ರಿಯಂಗಳನೆ ಕೂಡಿ, ಆಯಾಸಂಗೊಂಡು ಧಾವತಿಯಿಂದೆ ಸಾಯುತಿರ್ಪುದು ನೋಡಾ ಜಗವೆಲ್ಲ. ಆ ಕಾಯದ ಕಳವಳ ಹಿಂಗಿ ಮನವು ಮಹಾಘನದಲ್ಲಿ ಅಡಗಲು, ಸಾವು ತಪ್ಪಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೇಳು ಕೇಳಯ್ಯ ಪ್ರಾಣನಾಥನೆ, ಎನ್ನ ಪ್ರಾಣಪೂಜೆಯ ಬಗೆಯ ಬಣ್ಣಿಸುತಿರ್ಪೆನು ಅವಧರಿಸಯ್ಯಾ ಸ್ವಾಮಿ. ಎನ್ನ ಕಾಯವೆ ಕೈಲಾಸವಯ್ಯ ನಿಮಗೆ. ಎನ್ನ ಮನವೆ ಶೃಂಗಾರಮಂಟಪವಯ್ಯ ನಿಮಗೆ. ಎನ್ನ ಭಾವವೆ ಶೂನ್ಯಸಿಂಹಾಸನವಯ್ಯಾ ನಿಮಗೆ. ಎನ್ನ ಪರಮಾನಂದವೆ ಮಜ್ಜನವಯ್ಯಾ ನಿಮಗೆ. ಎನ್ನ ಪರಮಶಾಂತಿಯೆ ಗಂಧವಯ್ಯಾ ನಿಮಗೆ. ಎನ್ನ ನಿರಹಂಕಾರವೆ ಅಕ್ಷತೆಯಯ್ಯಾ ನಿಮಗೆ. ಎನ್ನ ಅವಿರಳವೆ ಪುಷ್ಪದ ಮಾಲೆಯಯ್ಯಾ ನಿಮಗೆ. ಎನ್ನ ಸ್ವಾನುಭಾವವೆ ಧೂಪವಯ್ಯಾ ನಿಮಗೆ. ಎನ್ನ ದಿವ್ಯಜ್ಞಾನವೆ ದೀಪದ ಗಡಣವಯ್ಯಾ ನಿಮಗೆ. ಎನ್ನ ಸುಚರಿತ್ರವೆ ಸರ್ವವಸ್ತ್ರವಯ್ಯಾ ನಿಮಗೆ. ಎನ್ನ ಸುವಿವೇಕವೆ ಸಕಲಾಭರಣವಯ್ಯಾ ನಿಮಗೆ. ಎನ್ನ ಆತ್ಮವೆ ಪರಮಾಮೃತದ ನೈವೇದ್ಯವಯ್ಯಾ ನಿಮಗೆ. ಎನ್ನ ಪರಿಣಾಮವೆ ಹಸ್ತೋದಕವಯ್ಯಾ ನಿಮಗೆ. ಎನ್ನ ಸದ್ಭಕ್ತಿರಾಗರಸವೆ ತಾಂಬೂಲವಯ್ಯಾ ನಿಮಗೆ. ಎನ್ನ ನಿರ್ಮಲವೆ ದರ್ಪಣವಯ್ಯಾ ನಿಮಗೆ. ಎನ್ನ ಸತ್ಯವೆ ಘಂಟೆಯಯ್ಯಾ ನಿಮಗೆ. ಎನ್ನ ಸದಾನಂದವೆ ಶಂಖವಾದ್ಯವಯ್ಯಾ ನಿಮಗೆ. ಎನ್ನ ಸಮತೆಯೆ ಚಾಮರವಯ್ಯಾ ನಿಮಗೆ. ಎನ್ನ ಕ್ಷಮೆಯೆ ಆಲವಟ್ಟವಯ್ಯಾ ನಿಮಗೆ. ಎನ್ನ ಸುಮನವೆ ವಾಹನವಯ್ಯಾ ನಿಮಗೆ. ಎನ್ನ ಸುಬುದ್ಧಿಯೆ ಜಗಜಂಪನವಯ್ಯಾ ನಿಮಗೆ. ಎನ್ನ ಸುಚಿತ್ತವೆ ನಂದಿಧ್ವಜವಯ್ಯಾ ನಿಮಗೆ. ಎನ್ನ ಸುಜ್ಞಾನವೆ ಶೃಂಗಾರದ ಪಲ್ಲಕ್ಕಿಯಯ್ಯಾ ನಿಮಗೆ. ಎನ್ನ ನುಡಿಗಡಣವೆ ಮಂಗಳಸ್ತೋತ್ರವಯ್ಯಾ ನಿಮಗೆ. ಎನ್ನ ಸುಳುಹಿನ ಸಂಚಾರವೆ ಪ್ರದಕ್ಷಿಣೆಯಯ್ಯಾ ನಿಮಗೆ. ಎನ್ನ ಮಂತ್ರೋಚ್ಚರಣವೆ ನಮಸ್ಕಾರವಯ್ಯಾ ನಿಮಗೆ. ಎನ್ನ ಸಕಲಕರಣಂಗಳಿಂದೆ ಮಾಡುವ ಸೇವೆಯೆ ನಾನಾ ತೆರದ ಉಪಚಾರವಯ್ಯಾ ನಿಮಗೆ. ಇಂತೀ ಪ್ರಾಣಪೂಜೆಯ ನಿರಂತರ ತೆರಹಿಲ್ಲದೆ ನಿಮಗಳವಡಿಸಿ ನಾ ನಿಮ್ಮೊಳಡಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯಜೀವದ ಕೀಲವನರಿದು ಜನನ ಮರಣಂಗಳಾಯಾಸವಳಿದು ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ : ಪಂಚಭೂತಂಗಳ ಪೂರ್ವಾಶ್ರಯವನಳಿದು ಪಂಚಕರಣಂಗಳ ಹಂಚುಹರಿಮಾಡಿ, ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ, ದಶವಾಯುಗಳ ಹಸಗೆಡಿಸಿ ಕರಣಚತುಷ್ಟಯಂಗಳ ಕಾಲಮುರಿದು ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು ಹತ್ತುನಾಡಿಗಳ ವ್ಯಕ್ತೀಕರಿಸಿ ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ ಅಂತರಂಗದ ಅಷ್ಟಮದಂಗಳ ಸಂತರಿಸಿ, ಬಹಿರಂಗದ ಅಷ್ಟಮಂದಗಳ ಬಾಯಟೊಣೆದು, ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ ಷಡೂರ್ಮೆ ಷಡ್‍ವರ್ಗಂಗಳ ಕೆಡೆಮೆಟ್ಟಿ ಷಡ್‍ಭ್ರಮೆ ಷಡ್‍ಭಾವವಿಕಾರಂಗಳ ಗಂಟಸಡಲಿಸಿ, ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ ಅಂಗಚತುಷ್ಟಯಂಗಳ ಶೃಂಗಾರವಳಿದು ಗುಣತ್ರಯಂಗಳ ಗೂಡಮುಚ್ಚಿ ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ ತಾಪತ್ರಯಂಗಳ ತಲ್ಣಣಗೊಳಿಸಿ ತನುತ್ರಯಂಗಳ ತರಹರಮಾಡಿ ಜೀವತ್ರಯಂಗಳ ಜೀರ್ಣೀಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ, ಅವಸ್ಥಾತ್ರಯಂಗಳ ಅವಗುಣವಳಿದು, ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ , ದುರ್ಭಾವತ್ರಯಂಗಳ ದೂರಮಾಡಿ, ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ, ಪಂಚಾಗ್ನಿಗಳ ಸಂಚಲವನತಿಗಳೆದು, ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷಿ*ಕಭಾವಂಬುಗೊಂಡು, ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು, ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು ಷಡಾಧಾರಚಕ್ರಂಗಳಲ್ಲಿ ಷಡ್‍ವಿಧ ಲಿಂಗವಾಗಿ ನೆಲೆಗೊಂಬುದು. ಆ ಷಡ್‍ವಿಧ ಲಿಂಗಕ್ಕೆ ಷಡಿಂದ್ರಿಯಗಳನೆ ಷಡ್‍ವಿಧಮುಖಂಗಳೆನಿಸಿ, ಆ ಷಡ್‍ವಿಧ ಮುಖಂಗಳಿಗೆ ಷಡ್‍ವಿಧವಿಷಯಂಗಳನೆ ಷಡ್‍ವಿಧ ದ್ರವ್ಯಪದಾರ್ಥವೆನಿಸಿ, ಆ ಪದಾರ್ಥಂಗಳು ಷಡ್‍ವಿಧಲಿಂಗಕ್ಕೆ ಷಡ್‍ವಿಧ ಭಕ್ತಿಯಿಂದೆ ಸಮರ್ಪಿತವಾಗಲು, ಅಂಗವೆಂಬ ಕುರುಹು ಅಡಗಿ ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ ತೊಳಗಿ ಬೆಳಗುತ್ತಿರ್ಪುದು. ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ ಚಿದಂಗವೆ ಚಿತ್‍ಪಿಂಡವೆನಿಸಿತ್ತು. ಇಂತಪ್ಪ ಅತಿಸೂಕ್ಷ್ಮವಾದ ಚಿತ್‍ಪಿಂಡದ ವಿಸ್ತಾರವನು ಚಿದ್‍ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು, ಆ ಚಿದ್‍ಬ್ರಹ್ಮಾಂಡದ ಅತಿಬಾಹುಲ್ಯವನು ಆ ಚಿತ್‍ಪಿಂಡದಲ್ಲಿ ವೇಧಿಸಿ ಕಂಡು, `ಪಿಂಡಬ್ರಹ್ಮಾಂಡಯೋರೈಕ್ಯಂ' ಎಂಬ ಶ್ರುತಿ ಪ್ರಮಾಣದಿಂದ ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು, ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ, ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ, ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ, ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ, ಆ ಮಹಾಜ್ಞಾನವನು ಪರಾತ್ಪರವಾದ ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ, ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ. ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ. ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ. ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ. ಭವಬಂಧನಂಗಳು ಇಲ್ಲವಾಗಿ, ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು. ಇದು ಕಾರಣ, ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ ನಿರ್ದೇಹಿಯಾದ ಕಾರಣ ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೋಳಿ ಕೂಗುವುದು ಬೆಳಗಿನ ವೇಳೆಯನರಿದು. ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು. ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೇಳು ಕೇಳಯ್ಯಾ ಕರುಣಿ, ನೀವು ಎನ್ನ ಮತ್ರ್ಯಲೋಕಕ್ಕೆ ಕಳುಹಿದಿರಾಗಿ, ನಾನು ಮರವೆಯ ತನುವ ತಾಳಿ ಅರುಹ ಮರೆತು, ಧರಣಿಯ ವ್ಯಾಪಾರದಲ್ಲಿ ದಿಕ್ಕುಗೆಟ್ಟೆನಯ್ಯಾ. ಭಕ್ತದೇಹಿಕದೇವನೆಂಬ ಶ್ರುತಿಯ ಮರೆಯಲಾಗದಯ್ಯಾ. ನಿನ್ನ ಕಂದನೆಂದು ಎನ್ನ ಕರವಿಡಿದು ತಲೆದಡಹಿ ಪೂರ್ಣಜ್ಞಾನದ ಕಣ್ಣುದೆರೆಸಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೇಳಿ, ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ. ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ, ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ, ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ. ಅದೆಂತೆನಲು : ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ, ಉಭಯಸ್ಥಲ, ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ, ಈ ಹದಿನೈದು ಭಕ್ತಸ್ಥಲಂಗಳು. ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ, ಈ ಒಂಬತ್ತು ಆಚಾರಲಿಂಗಸ್ಥಲಂಗಳು. ಇಂತೀ ಉಭಯ ಸ್ಥಲವು ಕೂಡಿ 24 ಸ್ಥಲಂಗಳಾಗಿ, ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು. ಮಹೇಶ್ವರಸ್ಥಲ, ಲಿಂಗನಿಷಾ*ಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ, ಈ ಒಂಬತ್ತು ಮಹೇಶ್ವರಸ್ಥಲಂಗಳು. ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ, ಈ ಒಂಬತ್ತು ಗುರುಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 18 ಸ್ಥಲಂಗಳಾಗಿ, ಸ್ವಾಧಿಷಾ*ನಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ, ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ, ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ, ಈ ಏಳು ಪ್ರಸಾದಿಸ್ಥಲಂಗಳು. ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶ್ರೂಷಾಸ್ಥಲ, ಸೇವ್ಯಸ್ಥಲ, ಈ ಒಂಬತ್ತು ಶಿವಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 16 ಸ್ಥಲಂಗಳಾಗಿ, ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ, ಶಿವಯೋಗಸಮಾಧಿಸ್ಥಲ,ಲಿಂಗನಿಜಸ್ಥಲ, ಅಂಗಲಿಂಗಸ್ಥಲ, ಈ ಐದು ಪ್ರಾಣಲಿಂಗಿಸ್ಥಲಂಗಳು, ಜೀವಾತ್ಮಸ್ಥಲ,ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೇಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ, ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಈ ಹನ್ನೆರಡು ಜಂಗಮಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 17 ಸ್ಥಲಂಗಳಾಗಿ, ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು. ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೇಶಸ್ಥಲ, ಶೀಲಸಂಪಾದನಾಸ್ಥಲ, ಈ ನಾಲ್ಕು ಶರಣಸ್ಥಲಂಗಳು. ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು. ಐಕ್ಯಸ್ಥಲ, ಸರ್ವಾಚಾರಸಂಪತ್ತಿಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ, ಈ ನಾಲ್ಕು ಐಕ್ಯಸ್ಥಲಂಗಳು. ಕೊಂಡುದು ಪ್ರಸಾದಿಸ್ಥಲ, ನಿಂದುದೋಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ, ಸ್ವಯಪರಜ್ಞಾನಸ್ಥಲ, ಭಾವಾಭಾವನಷ್ಟಸ್ಥಲ, ಜ್ಞಾನಶೂನ್ಯಸ್ಥಲ, ಈ ಒಂಬತ್ತು ಮಹಾಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು. ಇಂತೀ 101 ಸ್ಥಲಕುಳಂಗಳು ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ, ಆ ಆರು ಚಕ್ರಂಗಳನು ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ, ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ ಗುರುಲಿಂಗಜಂಗಮವ ಕುಳ್ಳಿರಿಸಿ, ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ, ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ಆ ಗುರುಲಿಂಗಜಂಗಮವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ ಮಹಾಶರಣರ ಪರಮಗುರು ಬಸವರಾಜದೇವರ ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕ್ರಿಯಾದೀಕ್ಷೆಯಿಂದೆ ಇಷ್ಟಲಿಂಗದಲ್ಲಿ ಎನ್ನ ತನುವ ಸಂಯೋಗವ ಮಾಡಿದನಯ್ಯಾ ಶ್ರೀಗುರುವು. ಮಂತ್ರದೀಕ್ಷೆಯಿಂದೆ ಪ್ರಾಣಲಿಂಗದಲ್ಲಿ ಎನ್ನ ಮನವ ಸಂಯೋಗವ ಮಾಡಿದನಯ್ಯ ಶ್ರೀಗುರುವು. ವೇಧಾದೀಕ್ಷೆಯಿಂದೆ ಭಾವಲಿಂಗದಲ್ಲಿ ಎನ್ನ ಜೀವನ ಸಂಯೋಗವ ಮಾಡಿದನಯ್ಯ ಶ್ರೀಗುರುವು. ಇಂತೀ ತ್ರಿವಿಧಲಿಂಗದ ಪ್ರಸನ್ನಪ್ರಸಾದದಲ್ಲಿ ಎನ್ನ ಪ್ರಾಣವ ಸಂಯೋಗವ ಮಾಡಿದ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಮವುಳ್ಳಂಗೆ ಲಿಂಗದಪ್ರೇಮವಿನ್ನೆಲ್ಲಿಯದೊ ? ಕ್ರೋಧವುಳ್ಳವಂಗೆ ಜಂಗಮದಪ್ರೇಮವಿನ್ನೆಲ್ಲಿಯದೊ ? ಮದಮತ್ಸರವುಳ್ಳವಂಗೆ ಪ್ರಸಾದದಪ್ರೇಮವಿನ್ನೆಲ್ಲಿಯದೊ ? ಇಂತೀ ಗುಣವರತಲ್ಲದೆ ಸಹಜಭಕ್ತಿ ನೆಲೆಗೊಳ್ಳದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಷ*ದಲ್ಲಿ ಅಗ್ನಿ ಉಂಟೆಂದಡೆ, ಆ ಕಾಷ*ದ ರೂಪ ಸುಡಲರಿಯದು ನೋಡಾ ! ದೇಹಮಧ್ಯದಲ್ಲಿ ಪರವಸ್ತು ಉಂಟೆಂದಡೆ, ಹರಿಯದು ನೋಡಾ ಆ ದೇಹದ ಜಡಭಾವ ! ಅದೆಂತೆಂದೊಡೆ : ಕಾಷ*ದ ಮಧ್ಯದಲ್ಲಿ ಅಡಗಿರ್ದ ಮಂದಾಗ್ನಿ ಮಥನದಿಂದೆ ಬಹಿಷ್ಕರಿಸಿ ಆ ಕಾಷ*ವ ಸುಡುವಂತೆ, ದೇಹದ ಮಧ್ಯದಲ್ಲಿ ಅಡಗಿರ್ದ ಪರವಸ್ತುವನು ಶ್ರೀಗುರುಸ್ವಾಮಿ ತನ್ನ ಕ್ರಿಯಾಶಕ್ತಿಯ ಮಥನದಿಂದೆ ಬಹಿಷ್ಕರಿಸಿ ಬಹಿರಂಗದ ಮೇಲೆ ಇಷ್ಟಲಿಂಗವಾಗಿ ಧರಿಸಲು, ಆ ಲಿಂಗದ ಸತ್‍ಕ್ರಿಯಾ ಪೂಜೆಯಿಂದೆ ಸ್ಥೂಲಾಂಗದ ಕಾಷ*ಗುಣಧರ್ಮಂಗಳೆಲ್ಲ ನಷ್ಟವಾಗಿ ಆ ಲಿಂಗದ ಚಿತ್ಕಳೆಯು ಸರ್ವಾಂಗಕ್ಕೆ ವೇಧಿಸಿ ಅಂತರಂಗ ಬಹಿರಂಗವೊಂದಾಗಿ ಆತ್ಮನ ಅಹಂಮಮತೆ ಕೆಟ್ಟು, ಶಿಖಿಕರ್ಪುರ ಸಂಯೋಗದಂತೆ ಪರತತ್ವವನೊಡಗೂಡಿದ ಮಹಾತ್ಮನ ಕಾಯ ನಿರವಯಲಪ್ಪುದಲ್ಲದೆ ಬರಿಯ ಒಣ ವಾಗದ್ವೈತದಿಂದೆ ಅಹಂ ಬ್ರಹ್ಮವೆಂದು ನುಡಿದು ದೇಹ ಪ್ರಾಣಂಗಳ ಪ್ರಕೃತಿವರ್ತನೆಯಲ್ಲಿ ನಡೆದು ನಿತ್ಯರಾದೇವೆಂಬುವರೆಲ್ಲ ಭವಾಂಬುಧಿಯಲ್ಲಿ ಬಿದ್ದು ಮುಳುಗುತ್ತೇಳುತ್ತ ತಡಿಯ ಸೇರಲರಿಯದೆ ಕೆಟ್ಟುಹೋದರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಿಸುಕುಳದ ಕೀವುರಕ್ತದ, ಒಸೆದು ತುಂಬಿದ ಮಲಮೂತ್ರದ ರಂಜನ ಮುಸುಕಿದ ಮಾಂಸ ಅಸ್ಥಿಗಳ ಸುತ್ತಿನ ಹಸನಾದ ಚರ್ಮದ ಹೊದಿಕೆಯ ಹುಸಿಯ ತನುವ ಮೆಚ್ಚಿ, ಪಶುಪತಿ, ನಿಮ್ಮ ನಾನು ಮರೆದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯಕಲ್ಪಿತಕ್ಕೆ ದೂರನು ನೋಡಾ ಲಿಂಗೈಕ್ಯನು. ಕರ್ಮವಿರಹಿತನು ನೋಡಾ ಲಿಂಗೈಕ್ಯನು. ಸೋಲುಗೆಲ್ಲಕ್ಕೆ ಹೋರುವನಲ್ಲ ನೋಡಾ ಲಿಂಗೈಕ್ಯನು. ಶೀಲ ವ್ರತ ನೇಮದ ಸೀಮೆಯ ಮೆಟ್ಟಿ ನಡೆವನಲ್ಲ ನೋಡಾ ಲಿಂಗೈಕ್ಯನು. ಅಖಂಡೇಶ್ವರಾ, ನಿಮ್ಮ ನಿಜಲಿಂಗೈಕ್ಯನ ಘನವ ನೀವೇ ಬಲ್ಲಿರಿ.
--------------
ಷಣ್ಮುಖಸ್ವಾಮಿ
ಕೇಳಿರೇ ಕೇಳಿರವ್ವಾ ಕೆಳದಿಯರೆಲ್ಲ. ಮನಕ್ಕೆ ಮನೋಹರವಾದ, ಕಂಗಳಿಗೆ ಮಂಗಳವಾದ, ಶೃಂಗಾರದ ಸೊಬಗಿನ ನಲ್ಲ ಬಂದು ಎನ್ನ ತನ್ನೊಳಗೆ ಮಾಡಿಕೊಂಡ ಒಂದು ವಿಪರೀತವ ಹೇಳುವೆ ಚಿತ್ತವೊಲಿದು ಲಾಲಿಸಿರವ್ವಾ. ಎನ್ನ ತನುವಿನೊಳಗೆ ತನ್ನ ತನುವನಿಟ್ಟು ಮಹಾತನುವಮಾಡಿದ. ಎನ್ನ ಮನದೊಳಗೆ ತನ್ನ ಮನವನಿಟ್ಟು ಘನಮನವಮಾಡಿದ. ಎನ್ನ ಪ್ರಾಣದೊಳಗೆ ತನ್ನ ಪ್ರಾಣವನಿಟ್ಟು ಚಿತ್‍ಪ್ರಾಣವಮಾಡಿದ. ಎನ್ನ ಜೀವದೊಳಗೆ ತನ್ನ ಜೀವವನಿಟ್ಟು ಸಂಜೀವನವಮಾಡಿದ. ಎನ್ನ ಭಾವದೊಳಗೆ ತನ್ನ ಭಾವವನಿಟ್ಟು ಸದ್ಭಾವವಮಾಡಿದ. ಎನ್ನ ಕರಣಂಗಳೊಳಗೆ ತನ್ನ ಕರಣಂಗಳನಿಟ್ಟು ಚಿತ್‍ಕರಣಂಗಳಮಾಡಿದ. ಎನ್ನ ಇಂದ್ರಿಯಂಗಳೊಳಗೆ ತನ್ನ ಇಂದ್ರಿಯಂಗಳನಿಟ್ಟು ಚಿದಿಂದ್ರಿಯಂಗಳಮಾಡಿದ. ಎನ್ನ ವಿಷಯಂಗಳೊಳಗೆ ತನ್ನ ವಿಷಯಂಗಳನಿಟ್ಟು ನಿರ್ವಿಷಯಂಗಳ ಮಾಡಿದನಾಗಿ, ಅಖಂಡೇಶ್ವರನೆಂಬ ನಲ್ಲನೊಳಗೆ ಕರ್ಪುರವೆಣ್ಣು ಉರಿಪುರುಷನನಪ್ಪಿ ರೂಪಳಿದಂತಾದೆನು ಕೇಳಿರವ್ವಾ.
--------------
ಷಣ್ಮುಖಸ್ವಾಮಿ
ಕುರುಹು ಉಂಟೇ ಮರುಳೆ ಲಿಂಗಕ್ಕೆ ? ತೆರಹು ಉಂಟೇ ಮರುಳೆ ಲಿಂಗಕ್ಕೆ ? ಎಲ್ಲೆಡೆಯೊಳು ಪರಿಪೂರ್ಣವಾದ ಪರಾತ್‍ಪರಲಿಂಗದ ನಿಲವನರಿಯದೆ ಹುಸಿಯನೆ ಕಲ್ಪಿಸಿ, ಹುಸಿಯನೆ ಪೂಜಿಸಿ, ಹುಸಿಯ ಫಲಪದವನುಂಡು ಹುಸಿಯಾಗಿ ಹೋದವರ ಕಂಡು ನಸುನಗುತಿಪ್ಪನಯ್ಯ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಕರ್ಮಸಾದಾಖ್ಯಸ್ವರೂಪವಾದ ಆಚಾರಲಿಂಗದಲ್ಲಿ ನಕಾರಮಂತ್ರಸ್ವರೂಪವಾದ ಘ್ರಾಣೇಂದ್ರಿಯ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಕರ್ತೃಸಾದಾಖ್ಯಸ್ವರೂಪವಾದ ಗುರುಲಿಂಗದಲ್ಲಿ ಮಕಾರಮಂತ್ರಸ್ವರೂಪವಾದ ಜಿಹ್ವೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮೂರ್ತಿಸಾದಾಖ್ಯಸ್ವರೂಪವಾದ ಶಿವಲಿಂಗದಲ್ಲಿ ಶಿಕಾರಮಂತ್ರಸ್ವರೂಪವಾದ ನೇತ್ರೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಅಮೂರ್ತಿಸಾದಾಖ್ಯಸ್ವರೂಪವಾದ ಜಂಗಮಲಿಂಗದಲ್ಲಿ ವಕಾರಮಂತ್ರಸ್ವರೂಪವಾದ ತ್ವಗಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಶಿವಸಾದಾಖ್ಯಸ್ವರೂಪವಾದ ಪ್ರಸಾದಲಿಂಗದಲ್ಲಿ ಯಕಾರಮಂತ್ರಸ್ವರೂಪವಾದ ಶ್ರವಣೇಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಮಹಾಸಾದಾಖ್ಯಸ್ವರೂಪವಾದ ಮಹಾಲಿಂಗದಲ್ಲಿ ಓಂಕಾರಮಂತ್ರಸ್ವರೂಪವಾದ ಹೃದಿಂದ್ರಿಯಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಿ. ಇಂತೀ ಷಡ್ವಿಧಲಿಂಗದಲ್ಲಿ ಷಡಿಂದ್ರಿಯಂಗಳ ಸಂಯೋಗಮಾಡಿ, ಆ ಷಡ್ವಿಧ ಲಿಂಗಂಗಳೊಂದಾದ ಮಹಾಘನವೆ ತಾನಾಗಿ ಸುಳಿಯಬಲ್ಲಾತನೆ ಪ್ರಾಣಲಿಂಗಸಂಬಂಧಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕನ್ನಡಿಯ ನೋಡುವಲ್ಲಿ ಪ್ರತಿರೂಪು ಕಾಣುತಿರ್ಪುದು. ಆ ನೋಟವನುಳಿದಲ್ಲಿ ಆ ಪ್ರತಿರೂಪು ನಿಜರೂಪಿನಲ್ಲಿ ಅಡಗುವಂತೆ ಅನುಪಮಬ್ರಹ್ಮದಲ್ಲಿ ನೆನಹುದೋರಿ ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದುವು. ಆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳು ಆ ಮೂಲ ಚಿತ್‍ಸ್ವರೂಪನಾದ ಶರಣಂಗೆ ದೇಹ ಪ್ರಾಣಾತ್ಮಂಗಳಾಗಿ ಲಿಂಗಕ್ಕೆ ಪದಾರ್ಥಂಗಳಾಗಿರ್ಪವು. ಆ ಪದಾರ್ಥಂಗಳು ಲಿಂಗಮುಖಕ್ಕೆ ಸಮವೇಧಿಸಿ ಆ ಚಿತ್ತು ಚಿತ್‍ಘನವ ಬೆರೆಯಲೊಡನೆ ಮುನ್ನಿನಂತೆ ಏಕವಾಯಿತ್ತಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೇಳಿ ಕೇಳಿರವ್ವಾ ನಮ್ಮ ಮನೆಯಾತನ ಒಂದು ಬೆಡಗು ಬಿನ್ನಾಣವ. ಎನ್ನ ಕಟ್ಟಿದ ಮುಡಿಯ ಸಡಿಲಿಸಿದ. ಎನ್ನ ಉಟ್ಟುದ ಸೆಳೆದುಕೊಂಡ. ಎನ್ನ ತೊಟ್ಟುದ ಬಿಡಿಸಿದ. ಎನ್ನ ಲಜ್ಜೆನಾಚಿಕೆಯ ತೊರೆಸಿದ. ಎನ್ನ ಮೌನದಲ್ಲಿರಿಸಿ ಎನ್ನ ಕರವಿಡಿದು ಕರೆದುಕೊಂಡು, ತಾನುಂಬ ಪರಿಯಾಣದಲ್ಲಿ ಎನ್ನ ಕೂಡಿಸಿಕೊಂಡು ಉಂಡನು ಕೇಳಿರವ್ವಾ ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಕಾಯವೇ ಕೈಲಾಸವಾಗಿ, ಮನವೇ ಮಹಾಲಿಂಗವಾಗಿ, ಭಾವವೇ ಅವಿರಳಪುಷ್ಪದ ಪೂಜೆಯಾಗಿ, ಅಖಂಡ ಪರಿಪೂರ್ಣಜ್ಞಾನದ ಬೆಳಗಿನೊಳಗೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಲಿಲ್ಲದೆ ನಡೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಕೈಯಿಲ್ಲದೆ ಮುಟ್ಟಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಕಣ್ಣಿಲ್ಲದೆ ನೋಡಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಕಿವಿ ಇಲ್ಲದೆ ಕೇಳಬಲ್ಲಡೆ ಶಿವಯೋಗಿಯೆಂಬೆನಯ್ಯಾ. ನಾಲಿಗೆ ಇಲ್ಲದೆ ಸವಿಯಬಲ್ಲಡೆ ಶಿವಯೋಗಿಯೆಂಬೆನಯ್ಯಾ. ನಾಸಿಕವಿಲ್ಲದೆ ವಾಸಿಸಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಮನವಿಲ್ಲದೆ ನೆನೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ. ತಾನಿಲ್ಲದೆ ಕೂಡಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಇಂತೀ ಭೇದವನರಿಯದೆ ವೇಷವ ಧರಿಸಿ ತಿರುಗುವರೆಲ್ಲರು ಭವರೋಗಿಗಳೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಲ್ಪತರು ಕಾಡಮರನಾಗಬಲ್ಲುದೇನಯ್ಯಾ ? ಕಾಮಧೇನು ಕಾಡಪಶುವಾಗಬಲ್ಲುದೇನಯ್ಯಾ ? ಸಿಂಹದಮರಿ ಸೀಳ್‍ನಾಯಿಯಾಗಬಲ್ಲುದೇನಯ್ಯಾ ? ಪರಮ ಶ್ರೀಗುರುವಿನ ಕರಕಮಲದಲ್ಲಿ ಉದಯವಾದ ಮಹಾಶರಣರು ಮರಳಿ ನರರಾಗಬಲ್ಲರೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕಾರ್ಯವಿಲ್ಲದ ಪ್ರಸಾದ, ಕಾರಣವಿಲ್ಲದ ಪ್ರಸಾದ, ಭಾವವಿಲ್ಲದ ಪ್ರಸಾದ, ಬಯಕ್ಕೆಯಿಲ್ಲದ ಪ್ರಸಾದ, ಸೀಮೆಯಿಲ್ಲದ ಪ್ರಸಾದ, ನಿಸ್ಸೀಮೆಯಿಲ್ಲದ ಪ್ರಸಾದ, ಅಖಂಡೇಶ್ವರನೆಂಬ ಮಹಾಘನಪ್ರಸಾದದೊಳಗೆ ನಾನೆತ್ತ ಹೋದೆನೆಂದರಿಯೆ.
--------------
ಷಣ್ಮುಖಸ್ವಾಮಿ

ಇನ್ನಷ್ಟು ...