ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ, ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ, ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ, ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ, ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ, ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು, ಕಡಿವ ಜಂತುಜಂಗುಳಿಯ ಬಾಧೆ, ಸುಡುವ ಜಠರಾಗ್ನಿಯ ಬಾಧೆ, ಎಡದಲ್ಲಿ ಮೂತ್ರದ ತಡಿಕೆಯ ಬಾಧೆ, ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ, ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು, ಆ ಮೇಲೆ ಜಾತಿಸ್ಮರತ್ವ ಉದಯವಾಗಿ, ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ, ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ, ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು, ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು, ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು, ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ, ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ, ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ, ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ, ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ, ಕಾಮವಿಕಾರ ತಲೆಗೇರಿ ವಿಷಯಾತುರನಾಗಿ, ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ, ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ, ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ, ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು, ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು, ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಡಾಭರಣರು ಘನವೆಂಬೆನೆ ? ಅಂಡಾಭರಣರು ಘನವಲ್ಲ. ರುಂಡಾಭರಣರು ಘನವೆಂಬೆನೆ ? ರುಂಡಾಭರಣರು ಘನವಲ್ಲ. ಗಂಗಾಧರರು ಘನವೆಂಬೆನೆ ? ಗಂಗಾಧರರು ಘನವಲ್ಲ. ಗೌರೀವಲ್ಲಭರು ಘನವೆಂಬೆನೆ ? ಗೌರೀವಲ್ಲಭರು ಘನವಲ್ಲ. ಚಂದ್ರಶೇಖರರು ಘನವೆಂಬೆನೆ ? ಚಂದ್ರಶೇಖರರು ಘನವಲ್ಲ. ನಂದಿವಾಹನರು ಘನವೆಂಬೆನೆ ? ನಂದಿವಾಹನರು ಘನವಲ್ಲ. ತ್ರಿಯಂಬಕರು ಘನವೆಂಬೆನೆ ? ತ್ರಿಯಂಬಕರು ಘನವಲ್ಲ. ತ್ರಿಪುರವೈರಿ ಘನವೆಂಬೆನೆ ? ತ್ರಿಪುರವೈರಿ ಘನವಲ್ಲ. ಪಂಚಮುಖರು ಘನವೆಂಬೆನೆ ? ಪಂಚಮುಖರು ಘನವಲ್ಲ. ಫಣಿಕುಂಡಲರು ಘನವೆಂಬೆನೆ ? ಫಣಿಕುಂಡಲರು ಘನವಲ್ಲ. ಶೂಲಪಾಣಿಗಳು ಘನವೆಂಬೆನೆ ? ಶೂಲಪಾಣಿಗಳು ಘನವಲ್ಲ. ನೀಲಲೋಹಿತರು ಘನವೆಂಬೆನೆ ? ನೀಲಲೋಹಿತರು ಘನವಲ್ಲ. ಅದೇನು ಕಾರಣವೆಂದೊಡೆ, ಇಂತಿವರಾದಿಯಾಗಿ ಅನಂತಕೋಟಿ ರುದ್ರಗಣಂಗಳು ಶರಣನ ಸರ್ವಾಂಗದಲ್ಲಿ ಅಡಗಿಹರಾಗಿ ಅಖಂಡೇಶ್ವರಾ, ನಿಮ್ಮ ಶರಣ ಘನಕ್ಕೆ ಘನವೆಂಬೆನಯ್ಯಾ.
--------------
ಷಣ್ಮುಖಸ್ವಾಮಿ
ಅಂಜನಗಿರಿಯಲ್ಲಿ ಅರ್ಕನ ಉದಯವ ಕಂಡೆ. ಸಂಜೆಯ ಮಬ್ಬು ಅಂಜಿ ಓಡಿದುದ ಕಂಡೆ. ಕುಂಜರನ ಮರಿಗಳ ಕೋಳಿ ನುಂಗಿದುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು. ಆ ಪಂಚಮಹಾಪಾತಕರ ಮುಖವ ನೋಡಲಾಗದು. ಅದೆಂತೆಂದೊಡೆ : ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ. ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ, ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ ! ಅಷ್ಟಾವರಣ ಪಂಚಾಚಾರವು ಅಂದೊಂದು ಪರಿ ಇಂದೊಂದು ಪರಿಯೇ ? ಷಟ್‍ಸ್ಥಲ ಸ್ವಾನುಭಾವವು ಅಂದೊಂದು ಪರಿ ಇಂದೊಂದು ಪರಿಯೇ ? ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ ಅಂದೊಂದು ಪರಿ ಇಂದೊಂದು ಪರಿಯೇ ? ನಡೆನುಡಿ ಸಿದ್ಧಾಂತವಾದ ಶರಣರ ಘನವು ಅಂದೊಂದು ಪರಿ ಇಂದೊಂದು ಪರಿಯೇ ? ಇಂತೀ ವಿಚಾರವನರಿಯದೆ ಪರಸಮಯವನಾದಡೂ ಆಗಲಿ, ಶಿವಸಮಯವನಾದಡೂ ಆಗಲಿ, ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಂಬರದೇಶದ ಕುಂಭ ಕೋಣೆಯೊಳಗೆ ಜಂಬುಲಿಂಗಪೂಜೆಯ ಸಂಭ್ರಮವ ನೋಡಾ ! ಅಂಬುಜಮುಖಿಯರು ಆರತಿಯನೆತ್ತಿ ಶಂಭು ಶಿವಶಿವ ಹರಹರ ಎನುತಿರ್ಪರು ನೋಡಾ ! ತುಂಬಿದ ಹುಣ್ಣಿಮೆಯ ಬೆಳದಿಂಗಳು ಒಂಬತ್ತು ಬಾಗಿಲಲ್ಲಿ ತುಂಬಿ ಹೊರಸೂಸುತಿರ್ಪುದು ನೋಡಾ ! ಈ ಸಂಭ್ರಮವನೇನ ಹೇಳುವೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು ಪ್ರಾಣಕ್ಕೆ ಪ್ರಾಣಲಿಂಗದ ಸಮ್ಯಕ್‍ಜ್ಞಾನಾಚಾರವ ಸಂಬಂದ್ಥಿಸಿ, ಅಂಗಲಿಂಗವೆಂಬ ಬ್ಥಿನ್ನಭಾವವಳಿದು ಒಳಹೊರಗೆಲ್ಲ ಅಖಂಡಜ್ಞಾನ ಸತ್‍ಕ್ರಿಯಾಚಾರಮಯವಾದ ಶರಣಂಗೆ ವಾರ ತಿಥಿ ಲಗ್ನ ವಿಘ್ನಂಗಳಿಲ್ಲ, ಶುಭಾಶುಭಂಗಳಿಲ್ಲ, ಸ್ತುತಿನಿಂದೆಗಳಿಲ್ಲ, ಪೂಜ್ಯಾಪೂಜ್ಯಂಗಳಿಲ್ಲವಾಗಿ, ಅಖಂಡೇಶ್ವರಾ, ನಿಮ್ಮ ಶರಣ ಎಂತಿರ್ದಂತೆ ಸಹಜಬ್ರಹ್ಮವೆ ಆಗಿರ್ಪನು.
--------------
ಷಣ್ಮುಖಸ್ವಾಮಿ
ಅಂಗವಿಕಾರಿಗೇಕೊ ಲಿಂಗದೊಡನೆ ಏಕಭಾಜನ ? ಆತ್ಮಸುಖಿಗೇಕೊ ಲಿಂಗದೊಡನೆ ಏಕಭಾಜನ ? ಹುಸಿ ಡಂಭಕಗೇಕೊ ಲಿಂಗದೊಡನೆ ಏಕಭಾಜನ ? ಜಾರಚೋರಂಗೇಕೊ ಲಿಂಗದೊಡನೆ ಏಕಭಾಜನ ? ನಮ್ಮ ಅಖಂಡೇಶ್ವರನ ನಿಜವನರಿಯದವರಿಗೇಕೊ ಪರಮ ಶಿವಲಿಂಗದೊಡನೆ ಏಕಭಾಜನ ?
--------------
ಷಣ್ಮುಖಸ್ವಾಮಿ
ಅಂಗಕ್ಕೆ ಆಚಾರವೆ ಚೆಲುವು. ಮನಕ್ಕೆ ಮಹಾನುಭಾವವೆ ಚೆಲುವು. ಆತ್ಮಂಗೆ ಅರುಹೆ ಚೆಲುವು. ಅಖಂಡೇಶ್ವರನೆಂಬ ನಿಜವಿಂಬುಗೊಂಡವಂಗೆ ಶರಣರ ಸಂಗವೆ ಚೆಲುವು.
--------------
ಷಣ್ಮುಖಸ್ವಾಮಿ
ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ ಗುರುವಿಂಗೆ ತನುವ ಸವೆಸಿದಡೆ ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ ಶ್ರೀಗುರುದೇವನು ನೆಲೆಗೊಂಬನು ನೋಡಾ. ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ ಲಿಂಗಕ್ಕೆ ಮನವ ಸವೆಸಿದಡೆ ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ ಪರಶಿವಲಿಂಗವು ನೆಲೆಗೊಂಬುದು ನೋಡಾ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ ಜಂಗಮಕ್ಕೆ ಧನವ ಸವೆಸಿದಡೆ ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ ಮಹಾಘನ ಜಂಗಮವು ನೆಲೆಗೊಂಬುದು ನೋಡಾ. ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಜನದ ಬಲದಿಂದೆ ನೆಲದ ಮರೆಯ ದ್ರವ್ಯವ ಕಾಣುವಂತೆ, ಎನ್ನ ಚಿತ್ತಿನ ಮಧ್ಯದಲ್ಲಿ ನಿತ್ಯ ಶಿವಜ್ಞಾನಾಂಜನವು ಪ್ರಜ್ವಲಿಸಲಾಗಿ, ತತ್ವಾತತ್ತ್ವಂಗಳು ವ್ಯಕ್ತವಾದವು. ಅಖಂಡೇಶ್ವರನೆಂಬ ಪರವಸ್ತುವು ಹೂಳಿರ್ದ ಗೊತ್ತು ಕಾಣಬಂದಿತ್ತು.
--------------
ಷಣ್ಮುಖಸ್ವಾಮಿ
ಅಂಧಕಂಗೆ ಕಣ್ಣು ಬಂದಂತೆ, ಹೆಳವಂಗೆ ಕಾಲು ಬಂದಂತೆ, ಬಂಜೆಗೆ ಮಗನಾದಂತೆ, ನಿರ್ಧನಿಕಂಗೆ ನಿಧಾನವು ಸೇರಿದಂತೆ, ಮರಣವುಳ್ಳವಂಗೆ ಮರುಜೇವಣಿಗೆ ದೊರೆಕೊಂಡಂತೆ, ಅಖಂಡೇಶ್ವರಾ, ನೀವೆನ್ನ ಕರಸ್ಥಲಕ್ಕೆ ಬಂದ ಫಲವು ಇಂತುಟಯ್ಯ.
--------------
ಷಣ್ಮುಖಸ್ವಾಮಿ
ಅಂಬರದೊಳಗಣ ಅಮೃತದ ಕೊಣನುಕ್ಕಿ ಕುಂಭಿನಿಯ ಮೇಲೆ ಸೂಸಲು, ಅಲ್ಲಿದ್ದ ಸಕಲ ಜನವೆಲ್ಲ ಅಮೃತವ ಕಂಡು ದಣಿಯಲುಂಡು, ಅನಿತ್ಯದ ಭೋಗವ ಮರೆದು ಮರ್ತ್ಯದ ಹಂಗು ಹರಿದು ನಿತ್ಯಮುಕ್ತರಾಗಿರ್ದರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ, ಬಹಿರಂಗದಲ್ಲಿ ಕಂಥೆ ಕರ್ಪರ ದಂಡ ಕಮಂಡಲು ಭಸ್ಮದಗುಂಡಿಗೆ ಎಂಬ ಪಂಚಮುದ್ರೆಗಳ ಧರಿಸಿ, ಧರೆಯ ಮಂಡಲದೊಳಗೆ ಚರಿಸುವ ಅಣ್ಣಗಳ ಕಂಡು ಬೆರಗಾದೆನಯ್ಯಾ. ಅದೇನು ಕಾರಣವೆಂದೊಡೆ : ಪುರಜನರ ಮೆಚ್ಚಿಸುವೆನೆಂದು ಜಾತಿಕಾರನು ಓತು ವೇಷವ ಧರಿಸಿ ಒಡಲ ಹೊರೆವಂತೆ, ಕೊಡುಕೊಂಬುವ ಭಕ್ತನ ಮೆಚ್ಚಿಸುವೆನೆಂದು ಮೃಡನ ವೇಷವ ಧರಿಸಿ, ಒಡಲ ಕಕ್ಕುಲತೆಗೆ ತಿರುಗುವ ಕಡುಪಾತಕ ಜಡಜೀವಿಗಳ ಮುಖವ ನೋಡಲಾಗದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಜನಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಮಂಜುಗವಿಸಿ ಹೊರಗಾದನು ನೋಡಾ ಪರಶಿವನು. ಘುಟಿಕಾಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಸಟೆಯ ತೋರಿಸಿ ಹೊರಗಾದನು ನೋಡಾ ಪರಶಿವನು. ಯಂತ್ರ ಮಂತ್ರ ತಂತ್ರ ಸಿದ್ಧಿ ವಾದ ವಶ್ಯವ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಗಾಢ ಕತ್ತಲೆಗವಿಸಿ ಹೊರಗಾದನು ನೋಡಾ ಪರಶಿವನು. ಭಕ್ತಿಸಿದ್ಧಿಯ ಸಾಧಿಸುವ ಅಣ್ಣಗಳ ಮನಕ್ಕೆ ಮುಕ್ತಿಯ ಬೆಳಗನೇ ತೋರಿ ಒಳಗಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನೆಂಬ ಪರಶಿವನು.
--------------
ಷಣ್ಮುಖಸ್ವಾಮಿ