ಧರ್ಮಾರ್ಥವಾಗಿ ದೀಕ್ಷೆಯ ಮಾಡಬೇಕಲ್ಲದೆ,
ಆಶಾರ್ಥವಾಗಿ ದೀಕ್ಷೆಯ ಮಾಡಲಾಗದಯ್ಯ.
ಜ್ಞಾನಾರ್ಥವಾಗಿ ಶಾಸ್ತ್ರವನೋದಬೇಕಲ್ಲದೆ,
ವಾದಾರ್ಥವಾಗಿ ಶಾಸ್ತ್ರವನೋದಲಾಗದಯ್ಯ.
ಮೋಕ್ಷಾರ್ಥವಾಗಿ ಶಿವಪೂಜೆಯ ಮಾಡಬೇಕಲ್ಲದೆ,
ಡಂಭಾರ್ಥವಾಗಿ ಶಿವಪೂಜೆಯ ಮಾಡಲಾಗದಯ್ಯ.
ಅದೆಂತೆಂದೊಡೆ :
``ಆಶಾರ್ಥಂ ದೀಯತೇ ದೀಕ್ಷಾ ದಂಭಾರ್ಥಂ ಪೂಜ್ಯತೇ ಶಿವಃ |
ವಾದಾರ್ಥಂ ಪಠ್ಯತೇ ವಿದ್ಯಾ ಮೋಕ್ಷೋ ನಾಸ್ತಿ ವರಾನನೇ ||
ಧರ್ಮಾರ್ಥಂ ದೀಯತೇ ದೀಕ್ಷಾ ಮೋಕ್ಷಾರ್ಥಂ ಪೂಜ್ಯತೇ ಶಿವಃ |
ಜ್ಞಾನರ್ಥಂ ಪಠ್ಯತೇ ವಿದ್ಯಾ ಮೋಕ್ಷಸಿದ್ಧಿರ್ವರಾನನೇ ||''
ಎಂದುದಾಗಿ, ಇಂತಪ್ಪ ಖ್ಯಾತಿ ಕೀರ್ತಿಯ, ಕಡೆಗೆ ನೂಂಕಿ
ನೀತಿಯ ನಿಜವನು ಅಂಗೀಕರಿಸಿ ಶಿವನನೊಲಿಸುವ ಭಾವವನರಿಯದೆ
ಸಂತೆಯ ಪಸಾರದಂತೆ ಸರ್ವರು ಮೆಚ್ಚಲೆಂದು ಹಾರೈಸಿ
ಹರಹಿಕೊಂಡು ಮಾಡುವ ಡಂಭಕನ ಪೂಜೆ
ಶಂಭುವಿಂಗೆ ಮುಟ್ಟಲರಿಯದು ನೋಡಾ ಅಖಂಡೇಶ್ವರಾ.