ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ : ವಿಷಯವಿಕಾರವ ಸುಟ್ಟಿರಬೇಕು. ಬಯಕೆ ನಿರ್ಬಯಕೆಯಾಗಿರಬೇಕು. ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು. ಅದೆಂತೆಂದೊಡೆ : ``ವಿಕಾರಂ ವಿಷಯಾತ್‍ದೂರಂ ರಕಾರಂ ರಾಗವರ್ಜಿತಂ | ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||'' ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ ! ಆಗಮಂಗಳು ನಿಮ್ಮ ಹೊಗಳಲರಿಯವು ನೋಡಾ ! ಶ್ರುತಿತತಿಗಳು ನಿಮ್ಮ ಸ್ತುತಿಸಲರಿಯವು ನೋಡಾ ! ಶಾಸ್ತ್ರಂಗಳು ನಿಮ್ಮ ಸಾದ್ಥಿಸಲರಿಯವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶ್ರೀಗುರುವು. ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶಿವಲಿಂಗವು. ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಪರಮಜಂಗಮವು. ವಿಶ್ವಾಸನೋಟ ಜಾರಿದಡೆ ಜಾರುವವಯ್ಯಾ ಪಾದೋದಕ ಪ್ರಸಾದಂಗಳು. ಇಂತೀ ಪಂಚವಿಧವು ಪರಬ್ರಹ್ಮವೆಂದು ನಂಬಿದ ಭಕ್ತರ ಹೃದಯದಲ್ಲಿ ಹೆರೆಹಿಂಗದೆ ನಿರಂತರ ನೆಲೆಸಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ವಿರಕ್ತಂಗೆ ಕಾಮಕ್ರೋಧಂಗಳುಂಟೆ ? ವಿರಕ್ತಂಗೆ ಲೋಭಮೋಹಂಗಳುಂಟೆ ? ವಿರಕ್ತಂಗೆ ಮದಮತ್ಸರಂಗಳುಂಟೆ ? ವಿರಕ್ತಂಗೆ ಆಶಾರೋಷಂಗಳುಂಟೆ ? ವಿರಕ್ತಂಗೆ ಕ್ಲೇಶತಾಮಸಂಗಳುಂಟೆ ? ವಿರಕ್ತಂಗೆ ದೇಹಪ್ರಾಣಾಬ್ಥಿಮಾನಂಗಳುಂಟೆ ? ವಿರಕ್ತಂಗೆ ಇಹಪರದ ತೊಡಕುಂಟೆ ? ವಿರಕ್ತಂಗೆ ನಾನು ನನ್ನದೆಂಬ ಪಕ್ಷಪಾತವುಂಟೆ ? ಇಂತೀ ಭೇದವನರಿಯದ ವಿರಕ್ತಂಗೆ ಎಂತು ಮಚ್ಚುವನಯ್ಯಾ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ವೇದವನೋದಿದ ವೇದಜ್ಞಾನಿಗಳು ಸರಿಯಲ್ಲ. ಶಾಸ್ತ್ರವನೋದಿದ ಶಾಸ್ತ್ರಜ್ಞಾನಿಗಳು ಸರಿಯಲ್ಲ. ಆಗಮವನೋದಿದ ಆಗಮಜ್ಞಾನಿಗಳು ಸರಿಯಲ್ಲ. ಆದಿಯನಾದಿಯಿಂದತ್ತತ್ತವಾದ ಮಹಾಘನವಸ್ತುವನೊಡಗೂಡಿದ ಶರಣಂಗೆ ಇವರಾರೂ ಸರಿಯಲ್ಲವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿಶ್ವದೊಳಗೆಲ್ಲ ನೀನೇ ದೇವ ವಿಶ್ವಭರಿತನು ನೀನೇ ದೇವ. ವಿಶ್ವರೂಪನು ನೀನೇ ದೇವ. ವಿಶ್ವಪತಿ ನೀನೇ ದೇವ. ವಿಶ್ವಾತೀತನು ನೀನೇ ದೇವ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿಶ್ವತೋ ಮುಖ ವಿಶ್ವತೋ ಪಾದ ವಿಶ್ವತೋ ಬಾಹು ವಿಶ್ವತೋ ಚಕ್ಷು ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವೇದಂಗಳು ನಿಮ್ಮ ಭೇದಿಸಿ ಕಂಡಿಹೆವೆಂದು ಕಾಣಲರಿಯದೆ ಬಳಲಿಬೆಂಡಾಗಿ ಹೋದುವು. ಶಾಸ್ತ್ರಂಗಳು ನಿಮ್ಮ ಸಾಧಿಸಿ ಕಂಡಿಹೆವೆಂದು ಕಾಣಲರಿಯದೆ ಸಂದೇಹಕ್ಕೊಳಗಾಗಿ ಹೋದುವು. ಆಗಮಂಗಳು ನಿಮ್ಮನರಿದು ಕಂಡಿಹೆವೆಂದು ಕಾಣಲರಿಯದೆ ಮೂಗರಾಗಿ ಹೋದುವು. ಇಂತೀ ವೇದ ಶಾಸ್ತ್ರ ಆಗಮಂಗಳನೋದಿ ನಿಮ್ಮ ಕಂಡಿಹೆನೆಂಬವರೆಲ್ಲ ಇನ್ನೆಂತು ಕಾಂಬುವರಯ್ಯಾ ಅಖಂಡೇಶ್ವರಾ. ?
--------------
ಷಣ್ಮುಖಸ್ವಾಮಿ
ವೇದಂಗಳಿಗಭೇದ್ಯವಾದ ಶಿವನ ಭೇದಿಸಿ ಕಂಡರು ನೋಡಾ ಶರಣರು. ಶಾಸ್ತ್ರಂಗಳಿಗಸಾಧ್ಯವಾದ ಶಿವನ ಸಾಧಿಸಿ ಕಂಡರು ನೋಡಾ ಶರಣರು. ಆಗಮಂಗಳಿಗತಿರಹಸ್ಯವಾದ ಶಿವನ ಅರಿದು ಕಂಡರು ನೋಡಾ ಶರಣರು. ಅಗಮ್ಯ ಅಪ್ರಮಾಣವಾದ ಪರಶಿವನ ಪ್ರಮಾಣಿಸಿ ಕಂಡು ಒಳಪೊಕ್ಕು ಬೆರಸಿದರು ನೋಡಾ ನಮ್ಮ ಅಖಂಡೇಶ್ವರನ ಶರಣರು.
--------------
ಷಣ್ಮುಖಸ್ವಾಮಿ
ವೇದ ಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸಂಗಳ ಓದಿ ಕೇಳಿ ಹೇಳುವಾತ ಜಾಣನೆ ? ಅಲ್ಲಲ್ಲ. ಜಾತಿಗೊಂದು ಮಾತು ಕಲಿತು ಸರ್ವರಿಗೆ ನೀತಿ ಹೇಳುವಾತ ಜಾಣನೇ ? ಅಲ್ಲಲ್ಲ. ಮತ್ತಾರು ಜಾಣರೆಂದಡೆ : ಮತ್ತಮತಿಯೆಂಬ ಕತ್ತಲೆಯ ಕಳೆದು, ತಥ್ಯಮಿಥ್ಯ ರಾಗದ್ವೇಷವನಳಿದು ನಿತ್ಯ ಲಿಂಗದಲ್ಲಿ ಚಿತ್ತವಡಗಿರ್ಪ ಚಿನ್ಮಯಶರಣನೇ ಜಾಣನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿಷಯವೆಂಬ ಕಾಳಗಿಚ್ಚಿನ ಜ್ವಾಲೆಯಲ್ಲಿ ಈರೇಳುಲೋಕವೆಲ್ಲ ಹತವಾಗುತಿರ್ಪುದು ನೋಡಾ ! ಅದೆಂತೆಂದೊಡೆ : ಕುಂಡಲಿಯೆಂಬ ಮಾಯಾಸರ್ಪನು ತನ್ನ ಬಾಲವ ಬ್ರಹ್ಮರಂಧ್ರಕ್ಕೇರಿಸಿ, ನಾಭಿಚಕ್ರವ ಸುತ್ತಿಕೊಂಡು, ಅಧೋಮುಖವಾಗಿ ಇಂದ್ರಿಯವಿಷವ ಕಾರುತಿಪ್ಪುದು ನೋಡಾ ! ಆ ವಿಷದ ನಂಜು ತಲೆಗೇರಿದಲ್ಲಿ ಅಸಿಯಜವ್ವನೆಯರ ಸಂಗಸುಖ ಬಹುಸವಿಯೆಂದು ತಲೆದೂಗುತ್ತಿಪ್ಪುದು ನೋಡಾ ಸಕಲ ಪ್ರಾಣಿಗಳು. ಇದು ಪಶುಪತಿಯುಮಾಡಿದ ಮಾಯದ ವಿಧಿಯೆಂದು ತಿಳಿಯದೆ ಹಸಗೆಟ್ಟುಹೋಯಿತ್ತು ನೋಡಾ ಮೂಜಗವೆಲ್ಲ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿದ್ಯೆಯ ಬಹಳ ಕಲಿತಡೇನು ಭಕ್ತಿಯಲ್ಲಿ ಶುದ್ಧನಲ್ಲದವನು. ಬುದ್ಧಿಯಲ್ಲಿ ವಿಶೇಷವೆನಿಸಿದಡೇನು ಭಕ್ತಿಯಲ್ಲಿ ಬಡವನಾದನು. ಅರ್ಥದಲ್ಲಿ ಅಧಿಕನಾದಡೇನು ಕರ್ತೃಶಿವನ ನೆನೆಯದವನು. ಮದ್ದುಗುಣಿಕೆಯ ತಿಂದ ಮದೋನ್ಮತ್ತರ ಎನ್ನತ್ತ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವೇದ ಶಾಸ್ತ್ರಾಗಮ ಪುರಾಣಂಗಳನೋದಿ ಆದಿಯ ಪಥವ ಸಾಧಿಸಬೇಕೆಂಬ ಭೇದಬುದ್ಧಿಯ ಭ್ರಾಂತಜ್ಞಾನಿಯಲ್ಲ ನೋಡಾ ಲಿಂಗೈಕ್ಯನು. ಷಟ್‍ದರ್ಶನಂಗಳ ಶೋಧಿಸಿ ಕಡುಮುಕ್ತಿಯ ಪಡೆವೆನೆಂಬ ಜಡಮತಿಯವನಲ್ಲ ನೋಡಾ ಲಿಂಗೈಕ್ಯನು. ಕುಟಿಲವ್ಯಾಪಾರದಿಂದೆ ಸಟೆಯನೆ ಸಂಪಾದಿಸಿ ಘಟವ ಹೊರೆವನಲ್ಲ ನೋಡಾ ಲಿಂಗೈಕ್ಯನು. ಕಾಕುಮನದ ಕಳವಳನಡಗಿಸಿ ಲೋಕರಂಜನೆಯನುಡುಗಿಸಿ ಕುರುಹಿಲ್ಲದ ಬ್ರಹ್ಮದಲ್ಲಿ ತೆರಹಿಲ್ಲದಿರ್ಪನು ನೋಡಾ ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು.
--------------
ಷಣ್ಮುಖಸ್ವಾಮಿ