ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಕ್ಕೆ ಆಚಾರವೆ ಚೆಲುವು. ಮನಕ್ಕೆ ಮಹಾನುಭಾವವೆ ಚೆಲುವು. ಆತ್ಮಂಗೆ ಅರುಹೆ ಚೆಲುವು. ಅಖಂಡೇಶ್ವರನೆಂಬ ನಿಜವಿಂಬುಗೊಂಡವಂಗೆ ಶರಣರ ಸಂಗವೆ ಚೆಲುವು.
--------------
ಷಣ್ಮುಖಸ್ವಾಮಿ
ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ ಗುರುವಿಂಗೆ ತನುವ ಸವೆಸಿದಡೆ ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ ಶ್ರೀಗುರುದೇವನು ನೆಲೆಗೊಂಬನು ನೋಡಾ. ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ ಲಿಂಗಕ್ಕೆ ಮನವ ಸವೆಸಿದಡೆ ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ ಪರಶಿವಲಿಂಗವು ನೆಲೆಗೊಂಬುದು ನೋಡಾ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ ಜಂಗಮಕ್ಕೆ ಧನವ ಸವೆಸಿದಡೆ ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ ಮಹಾಘನ ಜಂಗಮವು ನೆಲೆಗೊಂಬುದು ನೋಡಾ. ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರಸನ ಕಾಣದಬಳಿಕ ಹರುಷವಿಲ್ಲವ್ವಾ ಎನಗೆ. ಅರಸು ಅಖಂಡೇಶ್ವರನೆಂಬ ಪರಶಿವನ ಬೆರಸದ ಬಳಿಕ ಸರಸವೆಲ್ಲಿಯದವ್ವಾ ಎನಗೆ ?
--------------
ಷಣ್ಮುಖಸ್ವಾಮಿ
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿದಡೆ ನೀವೆನ್ನ ಕಂಗಳ ಕೊನೆಯಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ, ನಿಮ್ಮನೆನ್ನ ಕಂಗಳ ಕೊನೆಯಲ್ಲಿ ನೋಡಿದಡೆ ನೀವೆನ್ನ ಮನದ ಕೊನೆಯಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ, ನಿಮ್ಮನೆನ್ನ ಮನದ ಕೊನೆಯಲ್ಲಿ ನೋಡಿದಡೆ ನೀವೆನ್ನ ಪಂಚಮುಖದಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ, ನಿಮ್ಮನೆನ್ನ ನೆನಹಿನ ಪಂಚಮುಖದಲ್ಲಿ ನೋಡಿದಡೆ ನೀವೆನ್ನ ನವಚಕ್ರದಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ! ಅಯ್ಯಾ, ನಿಮ್ಮನೆನ್ನ ನವಚಕ್ರದಲ್ಲಿ ನೋಡಿದಡೆ ನೀವೆನ್ನ ಸರ್ವಾಂಗದಲ್ಲಿ ತೋರುತಿರ್ಪಿರಿ : ಇದೇನು ನಿಮ್ಮ ಗಾರುಡವಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಅಹುದೆನಲಮ್ಮೆ, ಅಲ್ಲೆನಲಮ್ಮೆ, ಇಲ್ಲೆನಲಮ್ಮೆ, ಉಂಟೆನಲಮ್ಮೆ, ಬೇಕೆನಲಮ್ಮೆ, ಬೇಡೆನಲಮ್ಮೆ ಅಖಂಡೇಶ್ವರಾ, ನೀವೆಂತಿರ್ದಂತೆ ಸಹಜವಾಗಿರ್ಪೆನಯ್ಯಾ.
--------------
ಷಣ್ಮುಖಸ್ವಾಮಿ
ಅನುಭಾವ ಅನುಭಾವವೆಂದು ನುಡಿವುತಿರ್ಪರೆಲ್ಲರು. ಅನುಭಾವದ ಕೀಲವನಾರೂ ಅರಿಯರಲ್ಲ ! ಅನುಭಾವವೆಂದೊಡೆ, ಅಂತರಂಗದ ಹೃದಯಕಮಳದ ಅಷ್ಟದಳಂಗಳ ಮೆಟ್ಟಿ ಚರಿಸುವ ಜೀವಹಂಸನ ಕೊಂದು, ಇಂದ್ರದಿಕ್ಕಿನ ಎಸಳಿನಲ್ಲಿ ತೋರುವ ಭಿನ್ನಭಕ್ತಿಯನಳಿದು, ಅಗ್ನಿದಿಕ್ಕಿನ ಎಸಳಿನಲ್ಲಿ ತೋರುವ ಜಡನಿದ್ರೆಯ ಮರ್ದಿಸಿ, ಯಮದಿಕ್ಕಿನ ಎಸಳಿನಲ್ಲಿ ತೋರುವ ವ್ಯಸನವಿಕಾರವ ಮಸುಳಿಸಿ, ನೈಋತ್ಯದಿಕ್ಕಿನ ಎಸಳಿನಲ್ಲಿ ತೋರುವ ಪಾಪದ ದುಷ್ಕøತವ ಪಲ್ಲಟಿಸಿ, ವರುಣದಿಕ್ಕಿನ ಎಸಳಿನಲ್ಲಿ ತೋರುವ ಮಂದಗಮನವ ಪರಿಹರಿಸಿ, ವಾಯುವ್ಯದಿಕ್ಕಿನ ಎಸಳಿನಲ್ಲಿ ತೋರುವ ದುಷ್ಟಾಚಾರವ ದೂರಮಾಡಿ, ಕುಬೇರದಿಕ್ಕಿನ ಎಸಳಿನಲ್ಲಿ ತೋರುವ ದ್ರವ್ಯಾಪೇಕ್ಷೆಯ ಧಿಕ್ಕಿರಿಸಿ, ಈಶಾನ್ಯದಿಕ್ಕಿನ ಎಸಳಿನಲ್ಲಿ ತೋರುವ ವನಿತಾದಿ ವಿಷಯ ಪ್ರಪಂಚುಗಳ ಈಡಾಡಿ ನೂಂಕಿ, ಇಂತೀ ಅಷ್ಟದಳಂಗಳ ಹಿಡಿದು ತೋರುವ ಪ್ರಕೃತಿಗುಣಂಗಳ ನಷ್ಟಮಾಡಿ, ನಟ್ಟನಡು ಚೌದಳಮಧ್ಯದಲ್ಲಿರ್ದ ಪರಬ್ರಹ್ಮವನು ನೆಟ್ಟನೆ ಕೂಡಿ, ಅಷ್ಟಾವಧಾನಿಯಾಗಿ, ಅಚಲಿತಜ್ಞಾನದಲ್ಲಿ ಸುಳಿಯಬಲ್ಲಡೆ ಆತನೆ ನಿಜಾನುಭಾವಿ, ಆತನೆ ನಿತ್ಯಮುಕ್ತನು, ಆತನೆ ನಿರ್ಭೇದ್ಯನು. ಇಂತೀ ಭೇದವನರಿಯದೆ, ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋ ಮಾತುಗಳ ಕಲಿತು ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಟೆಗುಟ್ಟುವ ಒಣ ಹರಟೆಗಾರರ ಶಿವಾನುಭಾವಿಗಳೆಂತೆಂಬೆನಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಷ್ಟಮೂರ್ತಿಗಳು ದೇವರೆಂಬ ಭ್ರಷ್ಟಭವಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ? ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ ಅರತು ಹೋಗುವುದೆ ? ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ ಆರಿ ಹೋಗುವುದೆ ? ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ? ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ? ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು ಜನನಮರಣಂಗಳಲ್ಲಿ ಬಂಧನವಡೆವನೆ ? ಚಂದ್ರಸೂರ್ಯರು ದೇವರಾದಡೆ ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ? ಇದು ಕಾರಣ ಇಂತೀ ಅಷ್ಟತನುಗಳು ಎಂತು ದೇವರೆಂಬೆನು ? ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ !
--------------
ಷಣ್ಮುಖಸ್ವಾಮಿ
ಅಂಜನದ ಬಲದಿಂದೆ ನೆಲದ ಮರೆಯ ದ್ರವ್ಯವ ಕಾಣುವಂತೆ, ಎನ್ನ ಚಿತ್ತಿನ ಮಧ್ಯದಲ್ಲಿ ನಿತ್ಯ ಶಿವಜ್ಞಾನಾಂಜನವು ಪ್ರಜ್ವಲಿಸಲಾಗಿ, ತತ್ವಾತತ್ತ್ವಂಗಳು ವ್ಯಕ್ತವಾದವು. ಅಖಂಡೇಶ್ವರನೆಂಬ ಪರವಸ್ತುವು ಹೂಳಿರ್ದ ಗೊತ್ತು ಕಾಣಬಂದಿತ್ತು.
--------------
ಷಣ್ಮುಖಸ್ವಾಮಿ
ಅಂಧಕಂಗೆ ಕಣ್ಣು ಬಂದಂತೆ, ಹೆಳವಂಗೆ ಕಾಲು ಬಂದಂತೆ, ಬಂಜೆಗೆ ಮಗನಾದಂತೆ, ನಿರ್ಧನಿಕಂಗೆ ನಿಧಾನವು ಸೇರಿದಂತೆ, ಮರಣವುಳ್ಳವಂಗೆ ಮರುಜೇವಣಿಗೆ ದೊರೆಕೊಂಡಂತೆ, ಅಖಂಡೇಶ್ವರಾ, ನೀವೆನ್ನ ಕರಸ್ಥಲಕ್ಕೆ ಬಂದ ಫಲವು ಇಂತುಟಯ್ಯ.
--------------
ಷಣ್ಮುಖಸ್ವಾಮಿ
ಅರಿಯದೆ ಒಂದು ವೇಳೆ `ಓಂ ನಮಃಶಿವಾಯ' ಎಂದಡೆ ಮರೆದು ಮಾಡಿದ ಹಿಂದೇಳುಜನ್ಮದ ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ ! ಅರಿದೊಂದು ವೇಳೆ `ಓಂ ನಮಃಶಿವಾಯ' ಎಂದಡೆ ದುರಿತಸಂಕುಳವೆಲ್ಲ ದೂರಾಗಿಹವು ನೋಡಾ ! ಇದು ಕಾರಣ `ಓಂ ನಮಃಶಿವಾಯ, ಓಂ ನಮಃಶಿವಾಯ' ಎಂಬ ಶಿವಮಂತ್ರವನು ಜಪಿಸಿ, ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆ ಹಸ್ತ. ಆ ಹಸ್ತಕ್ಕೆ ಇಚ್ಛಾಶಕ್ತಿ, ಆ ಶಕ್ತಿಗೆ ಶಿವಲಿಂಗ, ಆ ಶಿವಲಿಂಗಕ್ಕೆ ನೇತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಸುರೂಪುಪದಾರ್ಥ ; ಆ ಪದಾರ್ಥವನು ನೇತ್ರದಲ್ಲಿಹ ಶಿವಲಿಂಗಕ್ಕೆ ಸಾವಧಾನಭಕ್ತಿಯಿಂದರ್ಪಿಸಿ, ಆ ಸುರೂಪುಪ್ರಸಾದವನು ಪಡೆದು ಸುಖಿಸುವಾತನೆ ಪ್ರಸಾದಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನುಪಮಲಿಂಗದಲ್ಲಿ ಅಂಗ ಮನ ಪ್ರಾಣಂಗಳನಡಗಿಸಿ ಅವಿರಳ ಸಮರಸದಿಂದಿರ್ಪ ಮಹಾಶರಣನ ಅರುಹಿನ ಪಂಚಮುದ್ರೆಗಳು ಆವುವೆಂದಡೆ : ಸರ್ವಾಚಾರಸಂಪತ್ತೆಂಬ ಕಂಥೆ, ಅನಾದಿಯೆಂಬ ಕರ್ಪರ, ಅಖಂಡವೆಂಬ ದಂಡ, ಅಜಾಂಡವೆಂಬ ಕಮಂಡಲು, ಪರಿಪೂರ್ಣಮಹಾಜ್ಞಾನವೆಂಬ ಭಸ್ಮದಗುಂಡಿಗೆ, ಇಂತೀ ಅರುಹಿನ ಪಂಚಮುದ್ರೆಗಳ ಅಂತರಂಗದಲ್ಲಿ ಧರಿಸಿ ಹೊರಗೆ ಬಹಿರಂಗದ ಮೇಲೆ ಮುನ್ನಿನ ಮಾರ್ಗಕ್ರಿಯೆಯಂತೆ ಪಂಚಮುದ್ರೆಗಳ ಧರಿಸಿಕೊಂಡು, ಮಾಯಾವಿರಹಿತವೆಂಬ ಹಾವಿಗೆಯ ಮೆಟ್ಟಿಕೊಂಡು, ಅಂಗ ಮನ ಪ್ರಾಣಂಗಳಲ್ಲಿ ಕ್ಷಮೆ ದಮೆ ಶಾಂತಿ ಸೈರಣೆ ಕರುಣ ಹರ್ಷಾನಂದವ ತುಂಬಿಕೊಂಡು, ಲೋಕಪಾವನವ ಮಾಡುತ್ತ ಭಕ್ತಿಭಿಜಿಕ್ಷಾಂದೇಹಿಯಾಗಿ ಸುಳಿವ ಮಹಾಘನ ಪರಮಮಹಾಂತಿನ ಜಂಗಮದ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ ಮಹಾಘನಲಿಂಗದಲ್ಲಿ ತನ್ನ ಅಂಗ ಮನ ಪ್ರಾಣೇಂದ್ರಿಯ ವಿಷಯ ಕರಣಂಗಳ ಹೂಳಿ, ತಾನಿಲ್ಲದೆ ನಡೆವುತ್ತೆ , ತಾನಿಲ್ಲದೆ ನುಡಿವುತ್ತೆ , ತಾನಿಲ್ಲದೆ ಹಿಡಿವುತ್ತೆ, ತಾನಿಲ್ಲದೆ ಬಿಡುತ್ತೆ, ತಾನಿಲ್ಲದೆ ನೋಡುತ್ತೆ, ತಾನಿಲ್ಲದೆ ಆಡುತ್ತೆ ಬಯಲ ಬೊಂಬೆಯಂತೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಬರದೊಳಗಣ ಅಮೃತದ ಕೊಣನುಕ್ಕಿ ಕುಂಭಿನಿಯ ಮೇಲೆ ಸೂಸಲು, ಅಲ್ಲಿದ್ದ ಸಕಲ ಜನವೆಲ್ಲ ಅಮೃತವ ಕಂಡು ದಣಿಯಲುಂಡು, ಅನಿತ್ಯದ ಭೋಗವ ಮರೆದು ಮರ್ತ್ಯದ ಹಂಗು ಹರಿದು ನಿತ್ಯಮುಕ್ತರಾಗಿರ್ದರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಶ್ವವ ಕೊಂದವನಾದಡಾಗಲಿ, ಪಶುವ ಕೊಂದವನಾದಡಾಗಲಿ, ಬ್ರಾಹ್ಮಣನ ಕೊಂದವನಾದಡಾಗಲಿ, ಶಿಶುವ ಕೊಂದವನಾದಡಾಗಲಿ, ಸ್ತ್ರೀಯ ಕೊಂದವನಾದಡಾಗಲಿ, ಅನಂತ ಪಾತಕಂಗಳ ಮಾಡಿದವನಾದಡಾಗಲಿ, ಶಿವಲಿಂಗದ ದರ್ಶನವಾದಾಕ್ಷಣದಲ್ಲಿಯೇ ಆ ಪಾತಕಂಗಳು ಪಲ್ಲಟವಾಗಿಹವು ನೋಡಾ. ಅದೆಂತೆಂದೊಡೆ : ``ಅಭಕ್ಷ್ಯಭಕ್ಷಕೋ ವಾಪಿ ಬ್ರಹ್ಮಹಾ ಯದಿ ಮಾತೃಹಾ | ಪಿತೃಹಾ ಬಾಲಘಾತೀ ಚ ಗೋಘ್ನಃ ಸ್ತ್ರೀ ಶೂದ್ರಘಾತಕಃ || ವಕ್ತಾಚ ಪರದೋಷಸ್ಯ ಪರಸ್ಯ ಗುಣದೂಷಕಃ | ಕೃಪಣೋýನೃತವಾದೀ ಚ ಮಣಿರತ್ನಾಪಹಾರಕಃ | ಸರ್ವಪಾಪಮಯಃ ಪೂತೋ ಮುಚ್ಯತೇ ಲಿಂಗದರ್ಶನಾತ್ ||'' ಎಂದುದಾಗಿ, ಪರಮಪದವಿಯನೈದುತಿಹನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.
--------------
ಷಣ್ಮುಖಸ್ವಾಮಿ
ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ, ಬಹಿರಂಗದಲ್ಲಿ ಕಂಥೆ ಕರ್ಪರ ದಂಡ ಕಮಂಡಲು ಭಸ್ಮದಗುಂಡಿಗೆ ಎಂಬ ಪಂಚಮುದ್ರೆಗಳ ಧರಿಸಿ, ಧರೆಯ ಮಂಡಲದೊಳಗೆ ಚರಿಸುವ ಅಣ್ಣಗಳ ಕಂಡು ಬೆರಗಾದೆನಯ್ಯಾ. ಅದೇನು ಕಾರಣವೆಂದೊಡೆ : ಪುರಜನರ ಮೆಚ್ಚಿಸುವೆನೆಂದು ಜಾತಿಕಾರನು ಓತು ವೇಷವ ಧರಿಸಿ ಒಡಲ ಹೊರೆವಂತೆ, ಕೊಡುಕೊಂಬುವ ಭಕ್ತನ ಮೆಚ್ಚಿಸುವೆನೆಂದು ಮೃಡನ ವೇಷವ ಧರಿಸಿ, ಒಡಲ ಕಕ್ಕುಲತೆಗೆ ತಿರುಗುವ ಕಡುಪಾತಕ ಜಡಜೀವಿಗಳ ಮುಖವ ನೋಡಲಾಗದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಜನಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಮಂಜುಗವಿಸಿ ಹೊರಗಾದನು ನೋಡಾ ಪರಶಿವನು. ಘುಟಿಕಾಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಸಟೆಯ ತೋರಿಸಿ ಹೊರಗಾದನು ನೋಡಾ ಪರಶಿವನು. ಯಂತ್ರ ಮಂತ್ರ ತಂತ್ರ ಸಿದ್ಧಿ ವಾದ ವಶ್ಯವ ಸಾಧಿಸುವ ಅಣ್ಣಗಳ ಕಣ್ಮನಕ್ಕೆ ಗಾಢ ಕತ್ತಲೆಗವಿಸಿ ಹೊರಗಾದನು ನೋಡಾ ಪರಶಿವನು. ಭಕ್ತಿಸಿದ್ಧಿಯ ಸಾಧಿಸುವ ಅಣ್ಣಗಳ ಮನಕ್ಕೆ ಮುಕ್ತಿಯ ಬೆಳಗನೇ ತೋರಿ ಒಳಗಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನೆಂಬ ಪರಶಿವನು.
--------------
ಷಣ್ಮುಖಸ್ವಾಮಿ
ಅಡವಿಯಲ್ಲಿರ್ದ ಗೋವು ಮನೆಯಲ್ಲಿರ್ದ ಕರುವಿಂಗೆ ಚಿಂತಿಸಿ ಬಂದು ಹಾಲನೂಡಿ ಮೋಹಮಾಡುವುದಲ್ಲದೆ, ಆ ಕರುವೆತ್ತ ಬಲ್ಲುದಯ್ಯ ! ನಾನು ಕರ್ಮದೇಹವಿಡಿದು ಪರಿಭವದಲ್ಲಿ ತೊಳಲುತ್ತಿರಲು, ನೀನು ದಯಹುಟ್ಟಿ ಎನ್ನ ಮರವೆಯ ಸಂಸಾರವ ತೊಲಗಿಸಿ ಕರುಣದಿಂದ ಸಲಹಬೇಕೆಂಬ ಚಿಂತೆ ನಿನಗಲ್ಲದೆ ನಾನೇನಬಲ್ಲೆನಯ್ಯ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅರ್ಥ ಗುರುವಿನಲ್ಲಿ ಸವೆದು, ಪ್ರಾಣ ಲಿಂಗದಲ್ಲಿ ಸವೆದು, ಅಭಿಮಾನ ಜಂಗಮದಲ್ಲಿ ಸವೆದು, ಆ ಗುರುಲಿಂಗಜಂಗಮವೇ ತನ್ನ ಪ್ರಾಣವೆಂದು ತಿಳಿಯಬಲ್ಲಾತನೇ ಸದ್‍ಭಕ್ತನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನಂತಕಾಲ ಎನ್ನ ಒಡಲ ಮರೆಯೊಳಗೆ ಅಡಗಿರ್ದು ಎನಗೆ ಕಾಣಿಸದೆ ಇದ್ದುದು ಇದೇನು ನಿಮ್ಮ ಗಾರುಡವಯ್ಯಾ ! ನೀವು ನಿಮ್ಮ ಕರುಣದಿಂದೆ ಎನ್ನ ಒಡಲ ಮರವೆಯ ಒಡೆದು, ಎನ್ನ ಕಣ್ಣ ಮುಂದಣ ಸತ್ತ್ವ-ರಜ-ತಮದ ಪರದೆಯ ಹರಿಯಲೊಡನೆ ನಿಮ್ಮ ನಿತ್ಯದ ನಿಲವ ಕಂಡೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ