ಅಥವಾ
(8) (4) (5) (0) (3) (0) (0) (0) (4) (1) (0) (0) (0) (0) ಅಂ (2) ಅಃ (2) (16) (0) (7) (1) (0) (2) (0) (5) (0) (0) (0) (0) (0) (0) (0) (14) (0) (7) (0) (15) (8) (1) (7) (2) (9) (1) (0) (0) (2) (7) (4) (0) (13) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಜದಿಂದ ಕ್ಷತ್ರಿಯನೆಂದು ನಿಜವನರಿಯದ ಕರ್ಣನ ವ್ಯಾಧಭಾವ ಬಿಡದಂತೆ ತಾನು ತನ್ನ ನಿಜವನರಿದಡೂ ಜಾತಿಯಾಶ್ರಮ ಗುಣಧರ್ಮ ಜೀವಾದಿ ಭೇದಂಗಳೊಳಗಾದ ಮಾಯಾ ಮಯಂಗಳೆಂಬ ಮುನ್ನಿನ ಭ್ರಮೆಗಳ ಬಿಡಲರಿಯದ ಬಡ ಮನುಜರೆಲ್ಲರೂ ನಿಜಗುಣನ ನಿಜಭಾವದಲೂ ನಿಲ್ಲದವಂಗೆ ನಿಜಸುಖವು ಸಾಧ್ಯವಪ್ಪುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನೇಣ ಹಾವೆಂದು ಬಗೆದವನಂತೆ ಇದೇ ಹಾದಿ ಆನೆಂದು ಬಗೆದು ತನ್ನ ಭ್ರಮೆಯಿಂದ ಇಲ್ಲದ ಸಂಸಾರದ ಸಕಲ ದುಃಖಕ್ಕೊಳಗಾದರಯ್ಯಾ. ಆ ಭ್ರಮೆಯ ಹುಸಿಯೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನೆನೆವಾಗ ತನ್ನ ಮನದಿಂದಗಲಿಪ್ಪನೆಂಬಲ್ಲಿ ಎನಗೆಯೂ ಆತ್ಮಂಗೆಯೂ ಕಂಡರಿವ ಠಾವುಂಟೆ? ಇಲ್ಲದ ಮಾತ ಕೊಂಡುಬಂದಲ್ಲಲ್ಲಿಗೆ ಒಡವಿರಿಸಲ್ಲದದು. ನಿಮ್ಮ ಬಲ್ಲತನಕ್ಕಾನಂಜುವೆ ಕಾಣಿಭೋ! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವಿಲ್ಲದವರಿಗಿಲ್ಲ ಬರುಮಾತೇನು.
--------------
ಚಂದಿಮರಸ
ನಿಚ್ಚ ಕನಸಿನಲ್ಲಿ ಅಶ್ವಮೇಧ ಬ್ರಹ್ಮಹತ್ಯವ ಮಾಡಿದಡಂ ಎಂತು ನಡೆದಡಂ ದೇವದತ್ತಂಗೆ ಗುಣದೋಷವುಂಟೆ? ಸ್ವರ್ಗನರಕವುಂಟೆ ಹೇಳಾ? ಅದೆತ್ತಣ ಮಾತೊ! ಕನಸು ತಾ ಮಿಥ್ಯೆಯಪ್ಪುದರಿಂ ಮಾಯಾಮಯ. ಈ ಮಾಯೆಯನರಿದು ಹುಸಿ ಜೀವಭಾವದಿಂದ ಏನ ಮಾಡಿದಡೇನೋ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಾಯ ಕುನ್ನಿಯ ಕಚ್ಚಬೇಡ, ಬಗುಳಬೇಡವೆಂದಡೆ ಮಾಣ್ಬುದೆ? ಹಂದಿಯನಶುದ್ಧವ ತಿನಬೇಡ, ಹೊರಳಬೇಡವೆಂದಡೆ ಮಾಣ್ಬುದೆ? ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ? ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಿಚ್ಚ ನಿಚ್ಚ ಮುಟ್ಟಿ ನಿಚ್ಚ ನಿಚ್ಚ ಅಗಲುವದ ಕಂಡು ನಾಚಿತ್ತಯ್ಯಾ ಎನ್ನ ಮನ, ನಾಚಿತ್ತು. ಸಂದಿಲ್ಲದಲ್ಲಿ ಸಂದ ಮಾಡಿದರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ ಸಂಸಾರ ಸಂಬಂಧಿಗಳು.
--------------
ಚಂದಿಮರಸ
ನೇಣಿನಲ್ಲಿ ಹಾವನಿಲ್ಲೆಂದು ಹೇಳುವಂಗೆ ಹಾವಿನಲ್ಲಿನೇಣು ಉಂಟಾಗಬಲ್ಲುದೆ ಹೇಳಾ? ಶಿವನಿಂದನ್ಯವೇನೂ ಇಲ್ಲೆಂದು ಬೋಧಿಸುವಂಗೆ ತನು ಕರಣೇಂದ್ರಿಯ ಶಬ್ದಾದಿ ವಿಷಯ ಸಂಸಾರ ಸುಖದುಃಖಗಳಾಗಬಲ್ಲವೆ? ಇಲ್ಲದುದ ಕಂಡೆ, ಉಂಟೆಂಬುದತರ್ಕ `ನೇಹನಾ ನಾಸ್ತಿಕಿಂಚನ, ಏಕಮೇವ ನಿರಂತರಂ' ಎಂದುದು ವೇದ. ಶಿವನಿಂದನ್ಯವೇನೂ ಇಲ್ಲ ಎಂದರಿದರಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನೀನಲ್ಲದುದ ನೀನೆಂಬೆ, ನಿನಗಿಲ್ಲದುದ ನಿನ್ನದೆಂಬೆ, ನೀನಲ್ಲದುದಿನ್ನಿಲ್ಲ ಕಾಣಾ! ನಿನಗೇನೂ ಇಲ್ಲ, ಅಹಂಮಮತೆಯ ಬಿಟ್ಟು ನೋಡಾ, ನೀನೇ ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಿಜವಸ್ತುವೊಂದೆ, ಎರಡಾಗಬಲ್ಲುದದೊಂದೆ, ಬೇರೆ ತೋರಬಲ್ಲುದದೊಂದೆ, ತನ್ನ ಮರೆಯಬಲ್ಲುದದೊಂದೆ, ಆ ಮರವೆಯ ಬಲ್ಲುದದೊಂದೆ, ತಾನಲ್ಲದನ್ಯವಿಲ್ಲೆಂದರಿದರಿವು ತಾನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಿರವಯ ನಿರ್ಗುಣ ಪರಿಪೂರ್ಣದ್ವಯನಾಗಿ ಕಾ ಎಂಬ ಕರ್ಮವಿಲ್ಲ ಮ ಎಂಬ ಮಂತ್ರವಿಲ್ಲ, ಏನೂ ಇಲ್ಲ ನಿನ್ನಲ್ಲಿ. ನೋಡುವಡೆ ನಿಜಗುಣ ನಿಜತತ್ವ ನೀನೇ ಸಿಮ್ಮಲಿಗೆಯ ಚೆನ್ನರಾಮನೆಂಬುದು ಮುನ್ನಿಲ್ಲ.
--------------
ಚಂದಿಮರಸ
ನೋಡಿದಡೆ ಕಾಣಬಾರದು, ನೋಡದಿರ್ದಡೆ ಕಾಣಬಹುದು; ಇದು ಸೋಜಿಗ! ಸತ್ತಲ್ಲ ಅಸತ್ತಲ್ಲ; ಅದು ತಾನೆ ಮಾಯೆ; ಹುಸಿ. ಅಹಿ ರಜ್ಜುವಿನಿಂ ನೋಡಿದ ನೋಟ ತಾನೆ, ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ನಡೆಯೊಂದು ನುಡಿಯೊಂದು ಪರಿಯುಳ್ಳವ ತತ್ತ್ವವಿದನಲ್ಲ. ಜಡಮತಿ ತನ್ನ ನಗುವವರನರಿಯ. ಕರ್ಮವಿಲ್ಲ, ಭಕ್ತಿ ಜ್ಞಾನವಿಲ್ಲೆಂಬ, ಒಮ್ಮೆಯೂ ವೈರಾಗ್ಯ ತನ್ನಲಿಲ್ಲ. ಎಕ್ಕಸಿಕ್ಕರ ಪರಿಯಾಯದವದ್ವೈತಿ, ವಿಕಳ. ಅಕ್ಕಟಕ್ಕಟಾ! ಎರಡರಿಂದಲೂ ಕೆಟ್ಟರು ನೋಡಾ! ಸಿಮ್ಮಲಿಗೆಯ ಚೆನ್ನರಾಮನ ನಿಜವನರಿಯದೆ.
--------------
ಚಂದಿಮರಸ
ನಿರಾಚರಣ ನಿರ್ಜನಿತ ನಿರ್ಲೇಪ ನಿಃಕಪಟಿ ನಿರ್ವಚನೀಯನುಪಮಿಸಲಿಲ್ಲ ನಿಲ್ಲೋ! ನಿರಾಳ ನಿರ್ಮಾಯ ನಿಸ್ಸಂಗಿ ನಿರ್ಲಿಖಿತ ನಿರವಯನ ಅವಯವಕ್ಕೆ ತರಲಿಲ್ಲ ನಿಲ್ಲೋ! ಸಿಮ್ಮಲಿಗೆಯ ಚೆನ್ನರಾಮನೆಂಬ ಜಂಗಮಲಿಂಗವನು ಉಪಮಿಸಲಿಲ್ಲ ನಿಲ್ಲೋ!!
--------------
ಚಂದಿಮರಸ
ನಿತ್ಯ ಪರಿಪೂರ್ಣನೆಂದು ಪ್ರತ್ಯಕ್ಷ ಶ್ರುತಿ ಸಾರುತ್ತಿರಲು ಮತ್ತೆ ಪರಿಭಾವಿಸಲೇನುಂಟು ಹೇಳಾ? ಕರೆದಡೆ ಬಂದಿತ್ತು, ಕಳೆದಡೆ ಹೋಯಿತ್ತು. ಎಂಬ ಕರ್ಮಕೌಟಿಲ್ಯದಲ್ಲಿ ಬಂದವನಲ್ಲ. ಪ್ರತಿ ವ್ಯತಿರಿಕ್ತ ಗತಿ ಬಿಡದು. ಸಿಮ್ಮಲಿಗೆ ಚೆನ್ನರಾಮನೆಂಬ ಲಿಂಗವು ಜಡರುಗಳಿಗೆಲ್ಲಿಯದೊ?
--------------
ಚಂದಿಮರಸ
ನೆನೆದೆನೆಂಬಲ್ಲಿ ಎನ್ನ ಮನದಿಂದ ತೊಲಗಿಪ್ಪನೆ? ಅರಿದೆನೆಂಬಲ್ಲಿ ಎನಗೆ ಆತಗೆ ಕಂಡರಿತವುಂಟೆ? ಇಲ್ಲದ ಮಾತ ತಂದು ಅಲ್ಲಲ್ಲಿ ಆಡುವಿರಿ! ನಿಮ್ಮಬಲ್ಲತನಕ್ಕೆ ನಾನಂಜುವೆ ಕಾಣಿರೊ! ಸಲ್ಲದು! ನಿಮ್ಮ ಮಾತು ನಿಲ್ಲಲಿ! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ನಾನೆ ಕಾಣಾ! ಜಡನೆ!
--------------
ಚಂದಿಮರಸ