ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹರನ ಕರುಣವ ಪಡೆದ ಸಾಮರ್ಥ್ಯವ ಬಲುಹಿಂದ, ಶಿವಶರಣರೊಡನೆ ಸೆಣಸಿದಡೆ ಲೇಸುಂಟೆ ? ಅಘಟಿತಘಟತರಿಗೆ ಅಘಟಿತರುಂಟು ನೋಡಾ ! ನೊಸಲಲೊಬ್ಬ ಕಣ್ಣ ತೆಗೆದಡೆ, ಅಂಗಾಲಲೊಬ್ಬ ಕಣ್ಣ ತೆಗೆವನು. ಗುಹೇಶ್ವರನ ಶರಣರು ಉಪಮಾತೀತರು.
--------------
ಅಲ್ಲಮಪ್ರಭುದೇವರು
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು ! ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ. ಬಾಳೆ ಬೀಗಿ ಸರ್ಪನೆದ್ದೆಡೆ_ನಿರಾಳವು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ, ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು. ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು ! ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು. ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಹೊತ್ತಾರೆ ಪೂಜಿಸಲು ಬೇಡ ಕಂಡಾ. ಬೈಗೆಯೂ ಪೂಜಿಸಲು ಬೇಡ ಕಂಡಾ. ಇರುಳುವುನು ಹಗಲುವನು ಕಳೆದು, ಪೂಜೆಯನು ಪೂಜಿಸಲು ಬೇಕು ಕಂಡಾ, ಇಂತಪ್ಪ ಪೂಜೆಯನು ಪೂಜಿಸುವರ, ಎನಗೆ ನೀ ತೋರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು. ಆರರ ತಿರುಳ ತೆಗೆದು ಒದೂರೊಳಗೆ ನಿಲಿಸಬೇಕು. ಐದರ ಮುಸುಕನುಗಿದು, ಐದರ ಕೆಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು, ನಾಲ್ಕರೊಳಗೆ ನಿಲ್ಲದೆ ಮೂರು ಮುಖವು ಒಂದೆ ಭಾವವಾಗಿರಬೇಕು. ಈ ಭೇದವನರಿಯದೆ ಸುಳಿವವರ ಕಂಡು ಬೆರಗಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿವಿಲ್ಲದೆ ಉಣಬಲ್ಲಡೆ, ಉಪಾಧಿಯಿಲ್ಲದೆ ಬೇಡಬಲ್ಲಡೆ, ಅದು ವರ್ಮ, ಅದು ಸಂಬಂಧ. ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿ ನಿಲಬಲ್ಲಡೆ ಅದು ವರ್ಮ, ಅದು ಸಂಬಂಧ. ಅವರ ನಡೆ ಪಾವನ, ಅವರ ನುಡಿ ತತ್ವ, ಅವರು(ರ?) ಜಗದಾರಾಧ್ಯರೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು ? ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು ? ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ ಇಟ್ಟಿಗೆಯ ಮೇಲೆ ತೇಯಬಹುದೆ ? ರಂಭೆಯ ನುಡಿ ಸಿಂಬಿಗೆ ಶೃಂಗಾರವೆ ? ಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನಲ್ಲದೆ ಅಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನೆ ? ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ ?_ಅಂತೆ ಇದ್ದತ್ತು. ಬರದಲ್ಲಿ ಬರಡ ಕರೆದೆಹೆನೆಂದು, ಕಂದಲ ಕೊಂಡು ಹೋದರೆ, ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಠಯೋಗ ಲಂಬಿಕೆಯೆಂದು ಆಕುಂಚನವೆಂದು ವಜ್ರ ಅಮರಿಯ ಕಲ್ಪವೆಂದು ಮಲಮೂತ್ರಂಗಳ ಸೇವಿಸುತ್ತ ಇದು ಪೂರ್ವ ನವನಾಥಸಿಧhರ ಮತೋಕ್ತವೆಂದು ಕಾಪಾಲಿಕಾಚರಣೆಯ ಆಚರಿಸುವವರಲ್ಲ ಶರಣರು. ಮೇಣು, ತಲೆಯೊಳಗಣ ವಾತ ಪಿತ್ಥ ಶ್ಲೇಷ್ಮವ ತೆಗೆದು ಅಮೃತವೆಂದು ಬಿನುಗು ದೃಷ್ಟವ ತೋರುವರಲ್ಲ ಶರಣರು. ದ್ರವಿಸುವ ದೇಹದಲ್ಲಿ ಅಪ್ಪುವಿನ ಫಲರಸಕ್ಷೀರ ಘೃತ ಮೊದಲಾದವ ಸೇವಿಸುತ್ತ ಅನ್ನವ ಬಿಟ್ಟೆವೆಂಬ ಭೂತಚೇಷ್ಟಕರಲ್ಲ ಶರಣರು. ಇಂತಿವೆಲ್ಲವು ಕಾಕು ಸಟೆ ಭ್ರಾಂತೆಂದು ತಿಳಿದು ನಿರ್ಧರ ನಿಜದಿ ನಿಂದರು, ಗುಹೇಶ್ವರಾ ನಿಮ್ಮ ಶರಣರು ಅಗ್ರಗಣ್ಯರು
--------------
ಅಲ್ಲಮಪ್ರಭುದೇವರು
ಹಸಿದ ಕಾಳೋರಗನ ಹೆಡೆಯ ನೆಳಲಲ್ಲಿ ಕಾಳಂಧನೆಂಬ ಕಪ್ಪೆ ! ಅಂತಹ ಕಾಳೋರಗನ ಏಳ ನುಂಗಿತ್ತು. ಅದರ ಬೇಳುವೆಯಲ್ಲಿ ಮೇಲಾಗಿ ಬದುಕಿದೆ ಚೆನ್ನಬಸವಣ್ಣನಿಂದ ! ಗುಹೇಶ್ವರಲಿಂಗವೆಂಬುದು ಪ್ರಮಾಣವಾಯಿತ್ತು!
--------------
ಅಲ್ಲಮಪ್ರಭುದೇವರು
ಹುಸಿಯಿಲ್ಲದ ಗೂಡಿನೊಳಗೆ, ಹೊಸ ಬಣ್ಣದ ಹಕ್ಕಿಯ ಭಸ್ಮವ ಮಾಡಿ ಆ ಗೂಡನೆಯ್ದೆ ನುಂಗೆ, ಶಿಶು ತಾಯ ಬೆಸಲಾಗಿ, ತಾಯಿ ಶಿಶುವ ನುಂಗೆ, ಶಿಶು ಕೋಪದಿಂದ ತಾಯನೆಯ್ದೆ ನುಂಗೆ, ಹೊಸ ದೇಶದಿಂದೊಬ್ಬನಾರಯ್ಯ ಬಂದಾತ ಹೆಸರಿಲ್ಲದಂತಿಬ್ಬರನೆಯ್ದೆ ನುಂಗೆ ಬಸವ ಚನ್ನಬಸವ ಅನಿಮಿಷ ಗುಹೇಶ್ವರ ಸಹಿತ ಶಿಶುವಿನ ಕರಸ್ಥಲದಲ್ಲಿಯೆ ಸುಖಿಯಾದರು !
--------------
ಅಲ್ಲಮಪ್ರಭುದೇವರು
ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು. ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು. ಕಂಡವರ ಕಂಡು ಮಂಡೆಯ ಬೋಳಿಸಿಕೊಂಬುವರು. ಉಂಬುವರ ಕಂಡು ಉಂಬುವರು. ಪುಣ್ಯಕ್ಷೇತ್ರ ಪುರುಷಕ್ಷೇತ್ರ, ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಲ್ಲದೆ ತಮ್ಮ ನಿಧಾನವ ಸಾಧಿಸುವ ಭೇದವನರಿಯದೆ ಷಡುಸ್ಥಲಜ್ಞಾನಿಗಳೆಲ್ಲಾ ಸತ್ತರಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿವುಳ್ಳನ್ನಕ್ಕ ವ್ಯಾಪಾರ ಬಿಡದು, ಸೀತ ಉಳ್ಳನ್ನಕ್ಕ ಉಪಾಧಿಕೆ ಬಿಡದು, ಮಾತುಳ್ಳನ್ನಕ್ಕ ಬೂಟಾಟಿಕೆ ಬಿಡದು, ನಿದ್ರೆಯುಳ್ಳನ್ನಕ್ಕ ಸತಿಯ ಸಂಗ ಬಿಡದು. ಇದು ಕಾರಣ_ ಕ್ಷುತ್ತಿಂಗೆ ಭಿಕ್ಷೆ, ಸೀತಕ್ಕೆ ರಗಟೆ, ಮಾತಿಂಗೆ ಮಂತ್ರ, ಶಯನಕ್ಕೆ ಶಿವಧ್ಯಾನವೆಂದು ಹೇಳಿಕೊಟ್ಟ ಗುರುವಚನವ ಮೀರಿ ನಡೆವವರಿಗೆ ಪರದಲ್ಲಿ ಪರಿಣಾಮ ದೊರೆಕೊಳ್ಳದು ನೋಡಾ. ಇದು ಕಾರಣ_ ಗುರುವಾಜ್ಞೆಯ ಮೀರಿ ಮನಕ್ಕೆ ಬಂದಂತೆ ನಡೆವವರ ಎನಗೊಮ್ಮೆ ತೋರದಿರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹುಟ್ಟಿದ ನೆಲೆಯ ತೃಷ್ಣೆ ಬಿಡದವರಿಗೆ, ಲಿಂಗದ ಅನುಭಾವದ ಮಾತೇಕೊ ? ಮಾತಿನ ಮಾತಿನ ಮಹಂತರು ಹಿರಿಯರು ! ಗುಹೇಶ್ವರನೆಂಬ ಲಿಂಗಸಾರಾಯವು ಬಹುಮುಖಿಗಳಿಗೆ ತೋರದು, ತೋರದು.
--------------
ಅಲ್ಲಮಪ್ರಭುದೇವರು
ಹಾಸುಹೊಕ್ಕಿನಠಾವ ದಾಸಯ್ಯ ಬಲ್ಲ. ಉಂಬ ಉಡುವ (ಊಡುವ ?) ಠಾವ ಸಿರಿಯಾಳ ಬಲ್ಲ. ಕೊಂಬ ಕೊಡುವ ಠಾವ ಬಲ್ಲಾಳ ಬಲ್ಲ. ಲಿಂಗ ಜಂಗಮದ ಠಾವ ಬಸವಣ್ಣ ಬಲ್ಲ. ರುಚಿಯಠಾವ ಬಂಕಯ್ಯ ಬಲ್ಲ. ನಮ್ಮ ಗುಹೇಶ್ವರನ ನಿಲವ, ಸೊನ್ನಲಿಗೆಯ ಸಿದ್ಧರಾಮಯ್ಯನೆ ಬಲ್ಲ
--------------
ಅಲ್ಲಮಪ್ರಭುದೇವರು
ಹುಟ್ಟಿದ ನೆಲೆಯ ತೃಷೆ ಬಿಡದವರಿಗೆ, ಉದಕಲಿಂಗದ ಅನುಭಾವವೇಕೊ? ಮಾತಿನ ಮಾತಿನ ಮಹಂತರು ಹಿರಿಯರು ! ಗುಹೇಶ್ವರನೆಂಬ ಲಿಂಗಸಾರಾಯ, ತೋರದು ತೋರದು ಬಹುಮುಖಿಗಳಿಗೆ.
--------------
ಅಲ್ಲಮಪ್ರಭುದೇವರು
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ. ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ. ಮೀನಜರಿಗೆ ಮೀನ ಪ್ರಳಯವಾದಲ್ಲಿ, ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ. ಆ ಅಸಹಸ್ರನೆಂಬ ಗಣೇಶ್ವರನು ಪ್ರಳಯದಲ್ಲಿ ಅಳಿದುಳಿದಲ್ಲಿ, ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತುಕೋಟಿ ತಲೆ. ಇಂತಹ ರುದ್ರಾವತಾರ ಹಲವಳಿದಡೆ, ಗುಹೇಶ್ವರಲಿಂಗವನೆಂದೂ ಅರಿಯ !
--------------
ಅಲ್ಲಮಪ್ರಭುದೇವರು
ಹಿರಿಯರನೆಲ್ಲ ಹುಟ್ಟಿಸಿದಾತನನರಿಯಿರೊ, ಹಿರಿಯರ ಮಕ್ಕಳಿರಾ ? ಇಂದು ಎಂದೇನೊ ? ನಾಳೆ ಎಂದೇನೊ ? ಎಂದೂ ಒಂದೇ ಮಕ್ಕಳಿರಾ ? ಗುಹೇಶ್ವರಲಿಂಗ ಹಂಗಿಲ್ಲದ ಸಂಯೋಗ ಇದ ಬೇಗನರಿಯಿರೊ ಹಿರಿಯರ ಮಕ್ಕಳಿರಾ.
--------------
ಅಲ್ಲಮಪ್ರಭುದೇವರು
ಹೊರಗನೆ ಕೊಯ್ದು ಹೊರಗನೆ ಪೂಜಿಸಿದವರ ಕಂಡು, ನಾಚಿದೆ ನಾಚಿದೆನಯ್ಯಾ. ಒಳಗೆ, ಒಂದು ಅನು(ನಿ ?)ಮಿಷಲಿಂಗವ ಕಂಡು, ಎನ್ನ ಮನೋಪುಷ್ಪದಲ್ಲಿ ಪೂಜಿಸಿದಡೆ ನಾಚಿಕೆ ಮಾದು ನಿಸ್ಸಂದೇಹಿಯಾದೆನು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹುಟ್ಟಿ ಕೆಟ್ಟಿತ್ತು ಭಾಗ, ಹುಟ್ಟದೆ ಕೆಟ್ಟಿತ್ತು ಭಾಗ, ಮುಟ್ಟಿ ಕೆಟ್ಟಿತ್ತು ಭಾಗ, ಮುಟ್ಟದೆ ಕೆಟ್ಟಿತ್ತು ಭಾಗ. ಇದೇನೊ ? ಇದೆಂತೊ? ಅರಿಯಲೆ ಬಾರದು. ಇದೇನೊ ಇದೆಂತೊ ಎಂಬ ಎರಡು ಮಾತಿನ ನಡುವೆ, ಉರಿ ಹತ್ತಿತ್ತು ಮೂರು ಲೋಕವ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು. ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು. ವಾಯುವಿನ ಸಂಚದ ಪರಿಮಳದ ನಿಲವಿನಂತೆ ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿವರತಲ್ಲದೆ ಪ್ರಸಾದಿಯಲ್ಲ. ತೃಷೆಯರತಲ್ಲದೆ ಪಾದೋದಕಿಯಲ್ಲ. ನಿದ್ರೆಯರತಲ್ಲದೆ ಭವವಿರಹಿತನಲ್ಲ. ಅನಲ_ಪವನವರತಲ್ಲದೆ ಪ್ರಾಣಲಿಂಗಿಯಲ್ಲ._ ಇದು ಕಾರಣ, ಗುಹೇಶ್ವರಲಿಂಗವು ಎಲ್ಲರಿಗೆಲ್ಲಿಯದೊ?
--------------
ಅಲ್ಲಮಪ್ರಭುದೇವರು
ಹಸಿವ ಮುಂದಿಟ್ಟುಕೊಂಡು ಸುಳಿವಾತ ಜಂಗಮವಲ್ಲ. ಹಸಿವ ಮುಂದಿಟ್ಟುಕೊಂಡು ಸುಳಿಯಲದೇಕೊ ? ಹಸಿವೆಂಬುದೆ ತನುಗುಣಲಕ್ಷಣಕೆ ಚೈತನ್ಯವಾಗಿಹುದು. ಆ ತನುಗುಣಲಕ್ಷಣ ಹಿಂಗಿದಲ್ಲದೆ ಜಂಗಮವಲ್ಲ. ಅದಕ್ಕೆ ಏನಾಯಿತ್ತು ? ಹಸಿವ ಮುಂದಿಟ್ಟು ಸುಳಿವುದಕ್ಕೆ ತೆರನುಂಟು. ಉಂಡರೆ ಹಂಗಿಗನೆ ಶಿವಯೋಗಿ ? ಅನುವರಿದುಣಬಲ್ಲಡೆ ಎನ್ನವನೆಂಬೆನು. ಅನುವನರಿಯದೆ ಭಕ್ತನ ಹರುಷವ ಮುರಿದು ಉಂಡರೆ, ಕೊಂಡರೆ ಬ್ರಹ್ಮನವನಲ್ಲದೆ ಅವ ನಮ್ಮವನಲ್ಲ. ಅನುವನರಿಯದೆ ಭಕ್ತನ ಭ್ರಮೆಗೊಳಿಸಿ ಉಂಡರೆ, ಕೊಂಡರೆ ಹರಿಯವನಲ್ಲದೆ ನಮ್ಮವನಲ್ಲ. ಅನುವನರಿಯದೆ ಭಕ್ತರಿಗೆ ಕೋಪವ ಹುಟ್ಟಿಸಿ ಉಂಡರೆ, ಕೊಂಡರೆ ರುದ್ರನವನಲ್ಲದೆ ನಮ್ಮವನಲ್ಲ. ಇಂತೀ ತ್ರಿವಿಧ ತೆರೆನನರಿಯದೆ ಉಂಬವರೆಲ್ಲರು ತ್ರಿವಿಧ ಭಾಜನರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಹರಿದು ಹತ್ತಿ ಮುಟ್ಟಿ ಹಿಡಿದೆಹೆವೆಂದು ಜಾರಿ ಉರುಳಿ ಬಿದ್ದರು ಅನಂತರು. ಹಿಡಿದವರೆಲ್ಲ ಹೆಣನುಂಡು ಹೋದರು. ನಾ ಹಿಡಿದ ಬಂಡಿ(ಬಂದಿ?) ಒಡಬಂಡಿ(ಒಡಬಂದಿ?)ಯಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...