ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ. ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ. ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ. ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ? ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ
--------------
ಅಲ್ಲಮಪ್ರಭುದೇವರು
ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು, ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇಧಿಸಬಾರದು ?) ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜಾÕನ. ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆ ಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ. ಜಾÕನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ. ಸಂಗಡ ಸಹಿತ ಕರಸ್ಥಲಕ್ಕೆ ಬಂದು, ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ_ಗುಹೇಶ್ವರಾ,
--------------
ಅಲ್ಲಮಪ್ರಭುದೇವರು
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ, ನೇತ್ರವೆ ಸೂತ್ರ, ಸೂತ್ರವೆ ಲಿಂಗ, ಲಿಂಗವೆ ಗುಹ್ಯ. ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ. ಈ ನೇತ್ರಮಹಿಮೆಯ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
--------------
ಅಲ್ಲಮಪ್ರಭುದೇವರು
ಕೆಳಗೇಳು ಭುವನಂಗಳಿಲ್ಲದಂದು, ಮೇಲೇಳು ಭುವನಂಗಳಿಲ್ಲದಂದು,_ ಅಂದು ಆದ ಗುರು, ಅಂದು ಆದ ಲಿಂಗ, ಅಂದು ಆದ ಜಂಗಮ, ಅಂದು ಆದ ಪ್ರಸಾದ, ಅಂದು ಆದ ಪಾದೋದಕ. ಇಂದಿನದಾವುದೂ ಹೊಸತಿಲ್ಲಯ್ಯಾ. ಶಶಿಧರಂಗೆ ವೃಷಭನಾಗಿದ್ದಂದು ಗುಹೇಶ್ವರನ ಶರಣ ಸಂಗನಬಸವಣ್ಣನಂದೆ ಸಾಹಿತ್ಯನು.
--------------
ಅಲ್ಲಮಪ್ರಭುದೇವರು
ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ. ಪರರ ಬೋಧಿಸಿಕೊಂಡುಂಬಾತ ಜಂಗಮವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ. ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ, ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ. ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ. ಆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಿಡಿದು ಮಾಡುವಾತ ಭಕ್ತ_ ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
--------------
ಅಲ್ಲಮಪ್ರಭುದೇವರು
ಕರು(ರ?)ಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕೈಯ ನೀಡಿದಡೆ ಆ ಪುಷ್ಪ ಕರಣದೊಳಗಡಗಿತ್ತಯ್ಯ. ಷೋಡಶ ಕಳೆ ಹದಿನಾರರೆಸಳು ವಿಕಸಿತವಾಯ್ತು. ಪುರುಷ ಪುಷ್ಪದ ಮರನು, ಅದು ಓಗರದ ಗೊಬ್ಬರವನುಣ್ಣದು, ಕಾಮದ ಕಣ್ಣಿರಿಯದು. ನಿದ್ರೆಯ ಕಪ್ಪೊತ್ತದು. ಅರುಣ ಚಂದ್ರಾದಿಗಳಿಬ್ಬರ ತೆರೆಯುಂಡು ಬೆಳೆಯದ ಪುಷ್ಪ ಲಿಂಗವೆ ಧರೆಯಾಗಿ ಬೆಳೆಯಿತ್ತು, ಆ ಪುಷ್ಪ ನೋಡಾ ! ಆ ಪುಷ್ಪವೆಂದಿಗೂ ನಿರ್ಮಾಲ್ಯವಲ್ಲೆಂದು ಗುಹೇಶ್ವರ, ನಿಮ್ಮ ಶರಣ ಪ್ರಾಣಲಿಂಗಕ್ಕೆ ಪ್ರಾಣಪೂಜೆಯ ಮಾಡಿದ.
--------------
ಅಲ್ಲಮಪ್ರಭುದೇವರು
ಕಾರಿಯ (ಕಾರ್ಯ?)ವನರಿಯರು ಕೊರತೆಯನರಿಯರು. ವಾಯಕ್ಕೆ ಬಳಲುವರು ತಾವು ಜ್ಞಾನಿಗಳೆಂದು. ತಾಯಿಯಿಲ್ಲದ ಮೂಲನ ತಲೆವಿಡಿಯಲರಿಯದೆ ದೇವರಾದೆವೆಂದಡೆ ನಾಚಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಂಗಳೇಕೆ `ನೋಡಬೇಡಾ' ಎಂದರೆ ಮಾಣವು ? ಶ್ರೋತ್ರಂಗಳೇಕೆ `ಆಲಿಸಬೇಡಾ' ಎಂದರೆ ಮಾಣವು ? ಜಿಹ್ವೆ ಏಕೆ `ರುಚಿಸಬೇಡಾ' ಎಂದರೆ ಮಾಣವು (ದು ?) ನಾಸಿಕವೇಕೆ `ವಾಸಿಸಬೇಡಾ' ಎಂದರೆ ಮಾಣವು ? (ದು ?) ತ್ವಕ್ಕು ಏಕೆ `ಸೋಂಕಬೇಡಾ' ಎಂದರೆ ಮಾಣವು ? (ದು ?)_ ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು! ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
--------------
ಅಲ್ಲಮಪ್ರಭುದೇವರು
ಕೆಟ್ಟ ಒಡವೆಯನರಸ ಹೋಗಿ, ಆ ಕೆಟ್ಟ ಒಡವೆಯ ಕಂಡ ಬಳಿಕ, ಆರನೂ ಕೇಳಲಿಲ್ಲ ಹೇಳಲಿಲ್ಲ, ಅದು ಮುನ್ನಲಿದ್ದ ಹಾಂಗೆ ಆಯಿತ್ತು. ಅಂತು ಶರಣನು ಆ ಪರಿಯಲೆ ತನ್ನ ಸ್ವಯಾನುಭಾವದಿಂದ ತನ್ನ ನಿಜವ ತಾ ಕಂಡು ಸೈವೆರಗಾಗಿರಲು, ಅದನ್ನು ಅಜ್ಞಾನಿಗಳು ಬಲ್ಲರೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ. ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ, ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ,_ ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕಾಮಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ. ಕಲ್ಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಭಾವಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ರೂಪಿಸಿ ದೃಷ್ಟಿ ನಟ್ಟು ನಿಬ್ಬೆರಗಾದವರ ಕಂಡೆನಯ್ಯಾ ಪೂರ್ವಾಚಾರ್ಯ ಸಂಗನಬಸವಣ್ಣನ ಕಂಡು ಗುಹೇಶ್ವರಲಿಂಗವು ಅಲ್ಲಿಯೆ ಅನುಶ್ರುತವಯ್ಯಾ !
--------------
ಅಲ್ಲಮಪ್ರಭುದೇವರು
ಕಾಯದ ಒಲವರದಲ್ಲಿ ನಿಲುವ ಚಿತ್ತ, ಕಂಗಳ ಗೊತ್ತಿನಲ್ಲಿ ಕಟ್ಟುವಡೆದು ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ ಮನದ ಸೂತಕ ಹರಿದು ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
--------------
ಅಲ್ಲಮಪ್ರಭುದೇವರು
ಕಾಮದಿಂದ ಕಂಡ, ಕ್ರೋಧದಿಂದ ಅಸ್ಥಿ, ಲೋಭದಿಂದ ಸಕಲ ವಿಷಯಂಗಳು. ಮೋಹದಿಂದ ನೋಡಿಹೆನೆಂಬುದೆಲ್ಲವು ಕಾಮನ ಬಲೆಯೊಳಗು. ಕಾಮನ ಗೆದ್ದಠಾವಾವುದು ಹೇಳಾ ಗುಹೇಶ್ವರಲಿಂಗಕ್ಕೆ ?
--------------
ಅಲ್ಲಮಪ್ರಭುದೇವರು
ಕಾಯಕ್ಕೆ ಕಾಯವಾಗಿ, ತನುವಿಂಗೆ ತನುವಾಗಿ ಮನಕ್ಕೆ ಮನವಾಗಿ ಜೀವಕ್ಕೆ ಜೀವವಾಗಿ ಇದ್ದುದನಾರುಬಲ್ಲರೊ ? ಅದು ದೂರವೆಂದು, ಅದು ಸಮೀಪವೆಂದು ಮಹಂತ ಗುಹೇಶ್ವರನೊಳಗೆಂದು, ಹೊರಗೆಂದು ಬರುಸೂರೆಹೋದರೆಲ್ಲರೂ.
--------------
ಅಲ್ಲಮಪ್ರಭುದೇವರು
ಕನಕಾಚಲದಲ್ಲಿ ದಿನನಾಯಕ ಎಂಬ ರತ್ನ ಹುಟ್ಟಿ, ಅಹುದಲ್ಲ (ಅಹುದು ಅಲ್ಲ?) ಎಂಬ ಕೊಳಗದ ಕೊರಳಿನಲ್ಲಿ ಅಳೆವುತ್ತೈದಾನೆ. ಕೊಳಗದ ಕೊರಳು ತುಂಬಿ ಅಳೆವಾತನ ಹೃದಯ ತುಂಬಿ ಗುಹೇಶ್ವರಲಿಂಗದ ಕಂಗಳು ತುಂಬಿ ಮಂಗಳಮಯವಾಯಿತ್ತು !
--------------
ಅಲ್ಲಮಪ್ರಭುದೇವರು
ಕಾಲ,_ಕಾಲವರವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲವೈವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ನಾಲ್ವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಮೂವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಇಪ್ಪತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಹತ್ತು; ಕಾಲ ಕಾಲವನೆ ಅರಿವುದು. ಇಂತೀ ಕಾಲಂಗಳ ಕಾಲವನರಿವಡೆ ಗುಹೇಶ್ವರಲಿಂಗದಲ್ಲಿ ಹೇಳು ಚೆನ್ನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಕಾಗೆಯ ತಿಂದವನಲ್ಲದೆ ಭಕ್ತನಲ್ಲ. ಕೋಣನ ತಿಂದವನಲ್ಲದೆ ಮಹೇಶ್ವರನಲ್ಲ. ಕೋಡಗನ ತಿಂದವನಲ್ಲದೆ ಪ್ರಸಾದಿಯಲ್ಲ. ನಾಯ ತಿಂದವನಲ್ಲದೆ ಪ್ರಾಣಲಿಂಗಿಯಲ್ಲ. ಹೇಯವ ತಿಂದವನಲ್ಲದೆ ಶರಣನಲ್ಲ. ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ !
--------------
ಅಲ್ಲಮಪ್ರಭುದೇವರು
ಕಾಯವೆಂಬ ದೇಗುಲದಲ್ಲಿ ಜೀವವೆಂಬ ದೇವರು, ಕರಣೇಂದ್ರಿಯಂಗಳೆಂಬ ಸ್ಥಾನಿಕರ ಕೈಯಲ್ಲಿ ಪೂಜಿಸಿಕೊಂಬುದು ಗುಹೇಶ್ವರಲಿಂಗಕ್ಕೆ ದೂರ !
--------------
ಅಲ್ಲಮಪ್ರಭುದೇವರು
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕಂಗಳೊಳಗಣ ಕಟ್ಟಿಗೆಯ ಮುರಿಯದ, ಕೈಯೊಳಗಣ ಕಪ್ಪರವನೊಡೆಯದ, ತನ್ನೊಳಗಿಪ್ಪ ನಿಕ್ಷೇಪವ ಭೇದಿಸಿ ಕಾಣಲರಿಯದ ಬಿನುಗರೆಲ್ಲ, ಹಲುಗಿರಿವುತ್ತಿಹರು ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕಾಮನ ಕಣ್ಣ ಮುಳ್ಳ ಕಳೆದು ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ ತಿಳಿದು ನೋಡಾ ಸಂಗನಬಸವಣ.
--------------
ಅಲ್ಲಮಪ್ರಭುದೇವರು
ಕೃತ್ಯಕ್ಕೆ ಬಾರದ ಲಿಂಗವ ಕೃತ್ಯಕ್ಕೆ ತಂದವರಾರೊ ? ವಾಙ್ಮನಕ್ಕಗೋಚರ ಲಿಂಗ, ಬೊಟ್ಟಿಡಲೆಡೆದೆರಹಿಲ್ಲದ ಲಿಂಗ ! ಪರಾತ್ಪರಗುರು ಕೊಟ್ಟ, ಶಿಷ್ಯ ತೆಗೆದುಕೊಂಡ ಎಂಬ ರಚ್ಚೆಯ ಭಂಡರ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಯವುಳ್ಳನ್ನಕ್ಕ ಶರಣರ ಸಂಗದಿಂದ ಅರಿಯಬೇಕು. ಜೀವವುಳ್ಳನ್ನಕ್ಕ ಅರಿವಿನ ಮುಖದಿಂದ ಹರಿಯಬೇಕು. ಅರಿವನ್ನಬರ ಗುಹೇಶ್ವರನೆಂಬ ಕುರುಹಾಯಿತ್ತು.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...