ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಧರೆಯಾಕಾಶವಿಲ್ಲದಂದು, ತ್ರೈಮಂಡಲ ನೆಲೆಗೊಳ್ಳದಂದು, ಹೋಮ ನೇಮ ಜಪ ತಪವಿಲ್ಲದಂದು ನಿಮ್ಮನಾರು ಬಲ್ಲರು ? ಹರಿ ಬ್ರಹ್ಮಾದಿಗಳಿಗೆ ಅಗೋಚರ, ನಿರ್ಲೇಪ ನಿರಂಜನನಾಗಿ_ ವೇದಂಗಳರಿಯವು, ಶಾಸ್ತ್ರ ಸ್ಮೃತಿಗಳು ನಿಮ್ಮನರಿಯವು. ಗಗನಕಮಲಕುಸುಮ ಪರಿಮಳದಿಂದತ್ತತ್ತಲು ಗುಹೇಶ್ವರಾ ನಿಮ್ಮ ನಿಲವನಾರು ಬಲ್ಲರು ?
--------------
ಅಲ್ಲಮಪ್ರಭುದೇವರು
ಧರೆಯ ಮೇಲಣ ಜನಿತಕ್ಕೆ ಉರಗನ ಅಧರಪಾನ. ನಖಕಂಕಣ (ನ ಖ ಕಂ ಕ ಣ ?) ಮುಖ ಮೂವತ್ತೊಂದು ಶಿರವ ನುಂಗಿತ್ತು ನೋಡಾ ! ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಅಡಗಿ, ಸಾಕಾರದ ಸಂಗವ ನುಂಗಿದ ಭಾಷೆಯನರಿಯದ ಮುಗ್ಧೆ ! ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ಗುಹೇಶ್ವರಲಿಂಗವು ತ್ರಿಕಾಲ ಪೂಜೆಯ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಧರೆಯ ಮೇಲುಳ್ಳ ಅರುಹಿರಿಯರೆಲ್ಲರೂ ಮರುಳುಗೊಂಡಾಡುತ್ತಿದ್ದಾರೆ ನೋಡಾ. ಮಂಜಿನ ಮಡಕೆಯೊಳಗೆ ರಂಜನೆಯ ಭಂಡವ ತುಂಬಿ ಅಂಜದೆ ಪಾಕವ ಮಾಡಿಕೊಂಡು ಉಂಡು, ಭಂಡವ ಮಾರುತ್ತಿರ್ಪರು ನೋಡಾ. ಸಂಜೀವನಿಯ ಬೇರೆ ಕಾಣದೆ ಮರಣಕ್ಕೊಳಗಾದರು ಗುಹೇಶ್ವರನನರಿಯದ ಭವಭಾರಕರೆಲ್ಲರು.
--------------
ಅಲ್ಲಮಪ್ರಭುದೇವರು
ಧರೆಯಾಕಾಶ ಕೂಡಿ ಜಗವಾದಂತೆ, ಕಾಯ, ಜೀವ ಕೂಡಿ ಸಾವಯವಾದಂತೆ, ನಾದ ಬಿಂದು ಕೂಡಿ ಲಿಂಗವಾಯಿತ್ತು. ಅದೆಂತೆಂದಡೆ: ನಾದ ಬಿಂದು ಶಕ್ತಿ ರೂಪಾಗಿ, ಈ ಉಭಯ ಸಂಪುಟದಿಂದ ಲಿಂಗವಾಗಿ, ಅದು ಕಾಯ ಜೀವದಂತೆ ಕೂಡಿ ಏಕವಾದಲ್ಲಿ ಆ ಕಾಯದಿಂದ ಜೀವ ವಿಯೋಗವಾಗಿಹುದೇ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಧರೆಯೂ ಬ್ರಹ್ಮಾಂಡವೂ ಚಂದ್ರಸೂರ್ಯ ತಾರಾಮಂಡಲವೂ ಇಲ್ಲಿಂದತ್ತಲೆ ನೋಡಾ. ನರನಲ್ಲ ಸುರನಲ್ಲ ಭ್ರಾಂತನಲ್ಲ ಶರಣನು, ಲಿಂಗಸನ್ನಹಿತ ಅಪಾರಮಹಿಮನು. ಸುರಾಸುರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದರು ! ಸರಸದೊಳಗಲ್ಲ ಹೊರಗಲ್ಲ ಕೇಳು ಭಾವ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಧರೆಯ ಮೇಲುಳ್ಳ ಅರುಹಿರಿಯರೆಲ್ಲರು ನೆರಹಿ ಪರಿಯಾಯಪರೀಕ್ಷೆಯನೊರೆದು, ಬಣ್ಣವ ನೋಡಿ, ಸರೋವರದ ಪುಷ್ಪದೊಳು ಭರಿತ ಪರಿಮಳ ತುಂಬಿ, ಪರಮಜ್ಞಾನ ಜ್ಯೋತಿ ಪರಬ್ರಹ್ಮವನು ಮೀರಿ ಪುರುಷರತ್ನದೊಳಡಗಿ, ಗುಹೇಶ್ವರ ನಿಂದ ನಿಲುವು_ ಮೇರು ಗಗನವ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ? ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ. ಸುಜ್ಞಾನಭರಿತ, ಅನುಪಮಸುಖಿ_ಗುಹೇಶ್ವರಾ ನಿಮ್ಮ ಶರಣನು.
--------------
ಅಲ್ಲಮಪ್ರಭುದೇವರು
ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು. ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು. ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು. ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಧ್ಯಾನ ಆಧ್ಯಾತ್ಮಿಕದಲ್ಲಿ ಕಂಡಹೆನೆಂಬುದು ಜೀವನಲ್ಲದೆ ಪರಮನಲ್ಲ. ಜಪ ತಪ ನೇಮ-ನಿತ್ಯಂಗಳಿಂದ ಕಂಡಹೆನೆಂಬುದು ಪ್ರಕೃತಿಯಲ್ಲದೆ ಸುಚಿತ್ತವಲ್ಲ. ಭಾವದಿಂದ ಪ್ರಮಾಣಿಸುವುದೆ ಏಕರೂಪು, ಗುಹೇಶ್ವರಲಿಂಗವು ತಾನೆ.
--------------
ಅಲ್ಲಮಪ್ರಭುದೇವರು
ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು, ಅದನರಸಲರಸ ಹೋಯಿತ್ತಯ್ಯಾ. ನಡುನೀರೊಳಗೆ ಮುಳುಗಿ, ಆಳವರಿದು ನೋಡಿ, ಕಂಡೆಹೆನೆಂದಡೆ ಕಾಣಬಾರದು. ಧಾರೆವಟ್ಟಲ ಕಳೆದುಕೊಂಡು ನೀರ ಶೋಧಿಸಿ ನೋಡಿದಡೆ ದೂರದಲ್ಲಿ ಕಾಣಬರುತ್ತಿಹುದು ನೋಡಾ. ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ಧೀರರೆಲ್ಲರ ಮತಿಯ ಬಗೆಯ ನುಂಗಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಧರೆಯಾಕಾಶ ತಾರಾಮಂಡಲ ಸಪ್ತಸಮುದ್ರಂಗಳಿಲ್ಲದಂದು, ಒಂದು ಮಹಾವೃಕ್ಷವಿದ್ದಿತ್ತಯ್ಯಾ. ಆ ವೃಕ್ಷವ ಕಂಡು ನಾನು `ಓಂ ನಮಃ ಶಿವಾಯ' ಎನುತಿದ್ದೆನು. ಆ ವೃಕ್ಷದಿಂದ ಷಡುಸಾದಾಖ್ಯಂಗಳು ಪುಟ್ಟಿದುವು. ಆ ಷಡುಸಾದಾಖ್ಯಂಗಳ ನೆಳಲಲ್ಲಿ ಕುಳ್ಳಿರ್ದು ನಾನು ಬಸವಾ ಬಸವಾ ಬಸವಾ ಎನುತಿರ್ದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಧರೆಯ ಮೇಲೊಂದು ಪಿರಿದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆನು ! ಪರಿಪರಿಯ ಭಂಡದ ವ್ಯವಹಾರದೊಳಗೆ ಕೊಡಲಿಲ್ಲ, ಕೊಳಲಿಲ್ಲ. ವ್ಯಥಾ ವಿಳಾಸವಿದೇನೊ ? ಅರೆಮರುಳೆಂಬ ಶಿವನು, ನೆರೆ ಮರುಳೆಂಬ ಜಗವ ಹುಟ್ಟಿಸಿದ ಪರಿಯ ಕಂಡು ಬೆರಗಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು