ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘುಟಿಕಾಸಿದ್ಧರ ಘುಟಿಕೆಯುರುಳಿತ್ತು ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು ಮಂತ್ರಿಗಳ ಮಂತ್ರ ಮರೆತುಹೋಯಿತ್ತು ಔಷಧಿಗರ ಔಷಧವನಾರಡಿಗೊಂಡಿತ್ತು ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು ಮೂರ್ಛಿತರಾದರು ಕಾಣಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಘಟಸರ್ಪನಂತೆ ಅತಿಶಯವು ! ನಾಭಿಸರವರಸ್ಥಾನಕವೆ ದಳವೆಂಟು ! ನವದಳಕಮಲ ಊಧ್ರ್ವಮಂಡಲದ ಅಮೃತಸೇವನೆಯಾಗಿ, ಶಿವಯೋಗಿಯಾದೆವೆಂಬರು. ಗುಹೇಶ್ವರಲಿಂಗವು ಪವನವಿಯೋಗ !
--------------
ಅಲ್ಲಮಪ್ರಭುದೇವರು
ಘನವ ಮನ ಕಂಡು ಆದನೊಂದು ಮಾತಿಂಗೆ ತಂದು ನುಡಿದಡೆ ಅದಕ್ಕದೇ ಕಿರಿದು ನೋಡಾ. ಅದೇನೂ ಇಲ್ಲದ ನಿಸ್ಸಂಗದ ಸುಖವು ಗುಹೇಶ್ವರ !
--------------
ಅಲ್ಲಮಪ್ರಭುದೇವರು
ಘಟಪಟದ ಭಿತ್ತಿಯಂತೆ ಭಿನ್ನವೆಂಬ ಹಾಂಗೆ ಇಹುದು. ತಿಳಿದು ನೋಡಿದಡೆ ಭಿನ್ನವುಂಟೆ ? ಘಟದೊಳಗಣ ಬಯಲು, ಪಟದೊಳಗಣ ನೂಲು; ಭಿತ್ತಿಯ ಮೃತ್ತಿಕೆಯಂತೆ ಒಂದಲ್ಲದೆ ಎರಡಿಲ್ಲ. ದೇಹಿಗಳೊಳಗೆ ಗುಹೇಶ್ವರನಲ್ಲದೆ ಮತ್ತಾರೂ ಇಲ್ಲ.
--------------
ಅಲ್ಲಮಪ್ರಭುದೇವರು
ಘನವ ನೆನೆವ ಮನದಲ್ಲಿ ತನುವಿನಾಸೆ ಮುನ್ನಿಲ್ಲ, ನೆನೆವ ಮನವನೊಳಕೊಂಡ ಘನವನೇನೆಂಬೆನಯ್ಯಾ ! ತನ್ನಲ್ಲಿ ತಾನೆಯಾಗಿತ್ತು ! ನೆನಹಳಿದ ನಿರಾಳವ ಕಂಡು ಬೆರಗಾದೆ ! ಅಂತು ಇಂತು ಎನಲಿಲ್ಲ. ಚಿಂತೆಯಿಲ್ಲದ ಘನಗುಹೇಶ್ವರಯ್ಯನ ಬೆರಸಲಿಲ್ಲ.
--------------
ಅಲ್ಲಮಪ್ರಭುದೇವರು
ಘನವಪ್ಪ ಬೋನವನು ಒಂದು ಅನುವಿನ ಪರಿಯಾಣದಲ್ಲಿ ಹಿಡಿದು, ಗುರುಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ. ಈ ತೆರೆದ ಘನವಪ್ಪ ಲಿಂಗವನು, ಒಂದನುವಿನಲ್ಲಿ ತಂದಿರಿಸಿ, ಘನವಪ್ಪ ಬೋನವನು ಲಿಂಗವಾರೋಗಣೆಯ ಮಾಡಿ, ಮಿಕ್ಕುದ ಕೊಳ್ಳಬಲ್ಲಡೆ ಪ್ರಸಾದಿ._ ಇಂತೀ ತೆರನ ಬೆಸಗೊಳ್ಳಬಲ್ಲಡೆ, ಎನ್ನ ಬೆಸಗೊಳ್ಳೈ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಘನವ ಕಂಡು ಮನ ಅವಗ್ರಾಹಕವಾಯಿತ್ತು. ಕಂಡು ಕಂಡು ಮನ ಮಹಾಘನವಾಯಿತ್ತು, ತಲ್ಲೀಯವಾಯಿತ್ತು !_ತದುಗತ ಶಬ್ದ ಮುಗ್ಧವಾದುದನೇನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಘನವಪ್ಪ ಪರಿಯಾಣದಲ್ಲಿ ಒಂದನುವಿನ ಬೋನವನಳವಡಿಸಿ, ಪರಿಪರಿಯ ಪದಾರ್ಥಂಗಳು ಬಗೆಬಗೆಯಿಂದ ಬರಲು, ನೋಡದ ಮುನ್ನವೆ ರೂಪವರ್ಪಿತವಾಯಿತ್ತು. ಮುಟ್ಟದ ಮುನ್ನವೆ ಸೋಂಕರ್ಪಿತವಾಯಿತ್ತು. ರುಚಿಸದ ಮುನ್ನವೆ ಸುಖವರ್ಪಿತವಾಯಿತ್ತು. ಅವಧಾರು ಅವಧಾರು ಲಿಂಗವೆ, ನಿನ್ನ ಮನಕ್ಕೆ ಬಂದ ಪದಾರ್ಥವ ನಿನ್ನ ಘನಕ್ಕೆ ನೀನರ್ಪಿಸಿದಡೆ ಎನ್ನ ಮನಕ್ಕೆ ಬಂದ ಪದಾರ್ಥವ ನಾ ನಿನಗರ್ಪಿಸುವೆನು. ಗುಹೇಶ್ವರಾ ನಿನಗೆ ಭರಿತ ಬೋನವನಳವಡಿಸಿ ನೀಡಬಲ್ಲವನಾಗಿ ಎನಗೂ ನಿನಗೂ ಸಂಗನಬಸವಣ್ಣನ ಪ್ರಸಾದ_ ಆರೋಗಿಸು ದೇವಾ.
--------------
ಅಲ್ಲಮಪ್ರಭುದೇವರು
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ, ಪ್ರಾಣವ ಬರೆಯಬಹುದೆ ಅಯ್ಯಾ? ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ, ಭಕ್ತಿಯ ಮಾಡಬಹುದೆ ಅಯ್ಯಾ? ಪ್ರಾಣವಹ ಭಕ್ತಿಯ ತನ್ಮಯ ನೀನು. ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಘನಚೈತನ್ಯಜಂಗಮದ ಕಾರಣಾಂಗವಾದಾತ ಗುರು, ನಿಜಚೈತನ್ಯವನುಳ್ಳ ಜಂಗಮದ ಸೂಕ್ಷ್ಮಾಂಗವಾದಾತ ಗುರು, ಸುಚೈತನ್ಯಜಂಗಮದ ಚರವಿಗ್ರಹವಾದಾತ ಗುರು, ಭಕ್ತಾಚಾರವನುಳ್ಳ ಸ್ಥೂಲಾಂಗವಾದಾತ ಗುರು, ಇಂತೀ ಘನಚೈತನ್ಯ ಜಂಗಮದ ಸ್ವರೂಪನಾದಾತ ಗುರು. ಅಂತಪ್ಪ ಜಂಗಮದ ಸಂಬಂಧವಾದ ಶ್ರೀಗುರುವಿಂಗೆ, ನಮೋ ನಮೋ ಎಂಬೆನು ಕಾಣಾ ಗುಹೇಶ್ವರಯ್ಯಾ.
--------------
ಅಲ್ಲಮಪ್ರಭುದೇವರು