ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ. ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ. (ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?) ಉತ್ಪತ್ತಿ ಪ್ರಳಯ ತಪ್ಪದು. ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ ಅಚ್ಚಭವಿಯಾದ ಶರಣನೊಬ್ಬನೆ_ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಒತ್ತಿ ಹಣ್ಣ ಮಾಡಿದಡೆ ಅದೆತ್ತಣ ರುಚಿಯಪ್ಪುದೊ? ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೆ ಭಂಗ. ಭಾವಿಸುವ ಭಾವನೆಗಿಂದ ಸಾವು[ದೆ]ಲೇಸು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ? ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ
--------------
ಅಲ್ಲಮಪ್ರಭುದೇವರು
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು. ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು. ಬೆಟ್ಟವ ಬೆಳ್ಳಕ್ಕಿ ನುಂಗಿತ್ತು. ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ. ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ !
--------------
ಅಲ್ಲಮಪ್ರಭುದೇವರು
ಒಂದೆರಡಾದುದ ಬಲ್ಲವರಾರೊ ? ಎರಡರೊಳಗಣ ಮೂರ ಬಲ್ಲವರಾರೊ ? ಮೂರರ ಮುಖವನರಿದು ಕೂಡಿ ಮಾಡಬಲ್ಲವರಾರೊ ? ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ. ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ. ಒಕ್ಕು ಹೋಹುದು ಕಾಯ, ಮಿಕ್ಕು ಹೋಹುದು ಪ್ರಾಣ. ಇದು ತಕ್ಕುದೆಂದರಿದು, ಕೊಳಬಲ್ಲಡೆ ಸಿಕ್ಕುವನು ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಒಂದು ಮುಳ್ಳ ಮೊನೆಯ ಮೇಲೆ ಎಂಬತ್ನಾಲ್ಕು ಲಕ್ಷ ಪಟ್ಟಣವ ಕಟ್ಟಿ, ಈ ಎಂಬತ್ನಾಲ್ಕು ಲಕ್ಷ ಪಟ್ಟಣಕ್ಕೆ ತಲೆಯಿಲ್ಲದ ತಳವಾರ, ಆ ತಲೆಯಿಲ್ಲದ ತಳವಾರನ ತಂಗಿ ಮಾತಿನಲಿ ಕಡುಜಾಣೆ. ಆಕೆ ಸರ್ಪನ ಸಿಂಬೆಯ ಮಾಡಿಕೊಂಡು ತಳವಿಲ್ಲದ ಕೊಡನ ತಕ್ಕೊಂಡು ಜಲವಿಲ್ಲದ ಬಾವಿಗೆ ನೀರಿಗೆ ಹೋದಳು. ಆ ಜಲವಿಲ್ಲದ ಬಾವಿಯೊಳೊಂದು ಬೇರಿಲ್ಲದ ಸಸಿ ಪುಟ್ಟಿತ್ತು. ಆ ಬೇರಿಲ್ಲದ ಸಸಿ ವೃಕ್ಷವಾಗಿರಲಾವೃಕ್ಷವ ಕಾಲಿಲ್ಲದ ಮೃಗ ಏರಿ ಹೋಗುತ್ತಿತ್ತು. ಅದ ಕಣ್ಣಿಲ್ಲದ ಕುರುಡ ಕಂಡ. ಕೈಯಿಲ್ಲದ ಪುರುಷ ಹೆದೆಯಿಲ್ಲದ ಬಿಲ್ಲ ಪಿಡಿದು, ಅಲಗಿಲ್ಲದಂಬಿನಲ್ಲೆಸೆಯಲಾ ಮೃಗವ ತಾಕಲಿಲ್ಲ. ಅದರ ಹೊಟ್ಟೆಯೊಳಗಿರ್ದ ಪಿಂಡಕ್ಕೆ ತಾಕಿತ್ತು. ಇದ ಕಂಡು ಬೆರಗಾದ ನಮ್ಮ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಒಳಗ ತೊಳೆದು ಜಲವ ತುಂಬಲರಿಯದ ಅರೆಮರುಳನೇನಾದ ಹೇಳಿರೆ ? ಜಲದ ಸಂಗವ ತೊರೆಯಲರಿಯದೆ ಜಲವ ಬಯಸುವನೆಂತಿರ್ದ ಹೇಳಿರೆ ? ನೆಲನ ಶೋಧಿಸಿ ನೆಲೆಯನರಿಯದೆ, ಕೆರೆಯ ಕಟ್ಟಿಸುವ ಒಡ್ಡ ರಾಮನ ಇರವೆಂತು ಹೇಳಿರೆ ? ನಮ್ಮ ಗುಹೇಶ್ವರನ ನಿಲವನರಿಯದ ಮರುಳ ಸಿದ್ಧರಾಮನೆಂತಿರ್ದಹ ಹೇಳಿರೆ ?
--------------
ಅಲ್ಲಮಪ್ರಭುದೇವರು
ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ ಬೆಳೆಯಿತ್ತು. ಒಡನೆ ಹುಟ್ಟಿತ್ತು ತನ್ನನರಿಯದ ಕಾರಣ. ಇದು ಒಂದು ಸೋಜಿಗವ ಕಂಡೆ. ಕೂಡೆ ಭರಿತವೆಂದರಿಯಲು ಅಂಗದಲಳವಟ್ಟಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ ? ಬೇಟದ ಮರುಳಗೆ ಲಜ್ಜೆ ಮುನ್ನುಂಟೆ ? ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ ? ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ ? ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ ?
--------------
ಅಲ್ಲಮಪ್ರಭುದೇವರು
ಒಂದು ಧನುವಿಂಗೆ ಮೂರಂಬ ಹಿಡಿದೆ. ಒಂದು ಬಾಣವ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು, ಮತ್ತೊಂದು ಬಾಣವ ಬಿಡಲಾಗಿ ಪದ್ಮೋದ್ಭವನ ಹೆಡಗಯ್ಯ ಕಟ್ಟಿತ್ತು. ಕಡೆಯ ಬಾಣವು ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು. ನಾರಿ ಜಾರಿತ್ತು, ನಾರಿಯ ಹೂಳುವ ಹಿಳಿಕು ಹೋಳಾಯಿತ್ತು. ಗುಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲು ಮುರಿಯಿತ್ತು.
--------------
ಅಲ್ಲಮಪ್ರಭುದೇವರು
ಒಂದಡಕೆಯನಿಟ್ಟರೆ ಅಡ್ಡಗೋಡೆ ಬಸುರಾಯಿತ್ತು, ನಡುಮನೆಯೊಳಗಣ ಕಂಭ ಗಂಡು ಮಗನ ಹಡೆಯಿತ್ತು. ಹೊರಗೆ ಕಿಚ್ಚನಿಕ್ಕಿ ಒಳಗೆ ಅಗ್ನಿ ಪುಟವ ಹಾಕಿ, ಹಾದಿ ಹೋಗೋ ಅಣ್ಣ ನಮ್ಮ ಕರುವ ಕಾಣಲಿಲ್ಲವೆ. ನಿನ್ನೆ ಬಿತ್ತಿದ ಹೊಲದಾಗೆ ಮೊನ್ನೆ ಮೇಯ್ವುದ ಕಂಡೆ. ಕೊರಳ ಕೊಯ್ವುದ ಕಂಡೆ, ರಕ್ತವ ಕಾಣಲಿಲ್ಲ, ಸುಡುವುದ ಕಂಡೆ ಬೂದಿಯ ಕಾಣಲಿಲ್ಲ. ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೆ, ಬಿಡದೆ ಕಾಡುವುದು ವಿಧಿ ಮೂರುಲೋಕವನೆಲ್ಲ. ಒಡಲು ಒಡವೆಯನು ಒಲ್ಲೆನೆಂಬವರುಗಳಿಗೆ ತೊಡರನಿಕ್ಕಿತ್ತು ಮಾಯೆ. ಆರುದರ್ಶನಕ್ಕೆಲ್ಲ ಮಡದಿ ಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ ತೊಡರನಿಕ್ಕಿತ್ತು ಮಾಯೆ. ಮೃಡ ಮೊದಲಾದ ಹರಿ ವಿರಿಂಚಿಗಳನೆಲ್ಲರನು ಕೋಡಗದಾಟವ ಆಡಿಸಿತ್ತು, ಗುಹೇಶ್ವರಾ ನಿಮ್ಮ ಮಾಯೆ
--------------
ಅಲ್ಲಮಪ್ರಭುದೇವರು
ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ, ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ_ ಭಾವಿಸಿ ಕಂಡರು ಒಂದೆ ಮನದವರು. ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು. ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು ಗುಹೇಶ್ವರಾ_ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !
--------------
ಅಲ್ಲಮಪ್ರಭುದೇವರು
ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ. ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ. ಹೊಲದಲ್ಲಿ ಆವಿಲ್ಲ ಮನೆಯಲ್ಲಿ ಕರುವಿಲ್ಲ. ನೆಲಹಿನ ಮೇಲಣ ಬೆಣ್ಣೆ_ಇದು ದಿಟವೊ? ನಾರಿವಾಳದ ಕಾಯೊಳಗಣ ತಿರುಳ ಒಡೆಯದೆ ಮೆಲಬಲ್ಲಡೆ ಬೆಡಗು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಂದೆ ಹೂ, ಒಂದೆ ಅಗ್ಘವಣಿ, ಒಂದೆ ಓಗರ, ಒಂದೆ ಪ್ರಸಾದ, ಒಂದೆ ಮನ, ಒಂದೆ ಲಿಂಗ. ನಂದಾದೀವಿಗೆ, ಕುಂದದ ಬೆಳಗು; ಸ್ವತಂತ್ರ ಪೂಜೆ_ಒಂದೇ. ಅನಾಹತವೆರಡಾಗಿ ಬರುಮುಖರಾಗಿ ಕೆಟ್ಟುಹೋದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಂದು ಮನ; ಆ ಮನದಲ್ಲಿ ಲಿಂಗತ್ರಯವನು ಒಂದೆ ಬಾರಿ [ಗೆ] ನೆನೆವ ಪರಿಯೆಂತೊ ? ಅರಿದರಿದು ಲಿಂಗಜಾಣಿಕೆ ! ಮುಂದ ನೆನೆದಡೆ ಹಿಂದಿಲ್ಲ; ಹಿಂದ ನೆನೆದಡೆ ಮುಂದಿಲ್ಲ. ಒಂದರೊಳಗೆ ಎರಡೆರಡಿಪ್ಪವೆಂದಡೆ, ಅದು ಭಾವಭ್ರಮೆಯಲ್ಲದೆ ಸಹಜವಲ್ಲ. ನಿರುಪಾಧಿಕಲಿಂಗವನುಪಾಧಿಗೆ ತರಬಹುದೆ ? ಸ್ವತಂತ್ರಲಿಂಗವ ಪರತಂತ್ರಕ್ಕೆ ತರಬಹುದೆ ? ಗುಹೇಶ್ವರಾ_ನಿಮ್ಮ ಬೆಡಗು ಬಿನ್ನಾಣವನರಿದೆನಾಗಿ, ಎಂತಿರ್ದುದಂತೆ ಸಂತ !
--------------
ಅಲ್ಲಮಪ್ರಭುದೇವರು
ಒಳಗೆ ನೋಡಿಹೆನೆಂದಡೆ ಒಳಗ ನೋಡಲಿಲ್ಲ. ಹೊರಗೆ ನೋಡಿಹೆನೆಂದಡೆ ಹೊರಗ ನೋಡಲಿಲ್ಲ. ಜ್ಞಾನವೆಂತುಟೊ? ಅಜ್ಞಾನವೆಂತುಟೊ ? ಬಲೆಯ ಬೀಸಿ ಕೊಲುವನ ಮನೆಯಲ್ಲಿ ಸತ್ತಡೆ ಏನು ಕಾರಣ ಅಳುವರೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ, ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ, ಮೂವರರಿಯದ ಮುಗ್ಧನಠಾವ ತೋರಿಸು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ. ಅಂಗಸಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ! ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ ಗಸಣಿಗೊಳಗಾದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಳಗೆ ಪ್ರಾಣಲಿಂಗ, ಹೊರಗೆ ಕಾಯಲಿಂಗ ಮನಕ್ಕೆ ಮನ ನಾಚದಿದೇನೊ ? ಎರಡರ ನಿರಿಗೆಯ ಒಂದೆಂದರಿದಡೆ ಅದೇ ಪಥವಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಳಗ ತೊಳೆಯಲರಿಯದೆ ಹೊರಗ ತೊಳೆದು ಕುಡಿವುತ್ತಿರ್ದರಯ್ಯಾ, ಪಾದೋದಕ ಪ್ರಸಾದವನರಿಯದೆ. ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಂದರ ಮೋರೆಯನೊಂದು ಮೂಸಿನೋಡಿ ಮತ್ತೊಚ್ಚಿ ಬೇಕಿಂಗೆ (ಹೊತ್ತಿಂಗೆ ?) ಕಚ್ಚಿಯಾಡಿ ಹೋದಂತೆಯಾಯಿತ್ತು, ನೋಡಿರೆ, ಕಲಿಯುಗದೊಳಗಣ ಮೇಳಾಪವ ! ಗುರುವೆಂಬಾತ ಶಿಷ್ಯನಂತುವನರಿಯ. ಶಿಷ್ಯನೆಂಬಾತ ಗುರುವಿನಂತುವನರಿಯ. ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ. ಜಂಗಮರೆಂಬವರು ಜಂಗಮದೊಳಗೆ ಸಮವಿಲ್ಲ. ಇದು ಕಾರಣ_ಕಲಿಯುಗದೊಳಗೆ ಉಪದೇಶವ ತೋರುವ (ಮಾಡುವ ?) ಕಾಳಗುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು

ಇನ್ನಷ್ಟು ...