ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗವೆ ಪ್ರಾಣಲಿಂಗವೆಂಬ ಮಿಟ್ಟಿಯ ಭಂಡರು ನೀವು ಕೇಳಿರೆ. ಇಷ್ಟಲಿಂಗವನೂ ಕಾಯವನೂ ಮೆಟ್ಟಿ ಹೂಳುವಲ್ಲಿ, ಬಿಟ್ಟು ಹೋಹ ಪ್ರಾಣಕ್ಕೆ ಇನ್ನಾವುದು ಲಿಂಗ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ. ಹೇಳಿಹೆನು ಕೇಳಿರಣ್ಣಾ: ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ, ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ. ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಭಿಲಾಷೆಯುಳ್ಳಡೆ, ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ. ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ_ ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ, ಭಾವಲಿಂಗದ ಸಮರಸವ ಬಲ್ಲವರಾರೊ ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ. ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ. 66 ಸಿದ್ಧಿಗಳೊಡನೆ ಕೂಡಿದ ಸಿದ್ಧ ಪುರುಷರೂ ಸರಿಯಲ್ಲ. ಲಾವಣ್ಯದೊಡನೆ ಕೂಡಿದ ಜಯಂತ ಮನ್ಮಥ ವಸಂತರೂ ಸರಿಯಲ್ಲ. ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಭದ್ರಪೀಠ ಮೊದಲಾದ ಮಹದೈಶ್ವರ್ಯವುಳ್ಳ ದೇವೇಂದ್ರನೂ ಸರಿಯಲ್ಲ. ದೇವೇಂದ್ರನ ಮೇಲೆ ಕೋಟ್ಯನುಕೋಟಿ ಮೊದಲಾದ ಹರಿ ವಿರಿಂಚ್ಯಾದಿಗಳ ಸಂಪದವೂ ಸರಿಯಲ್ಲ. ಶ್ರುತಿ ವಿದ್ಯದೊಡನೆ ಕೂಡಿದ ವ್ಯಾಸ ದಕ್ಷಾದಿಗಳೂ ಸರಿಯಲ್ಲ. ಸಪ್ತಕೋಟಿ ಮಹಾಮಂತ್ರಂಗಳ ಬಲ್ಲಂತಹ ಮಹಾಮುನಿಗಳೂ ಸರಿಯಲ್ಲ. ಮಹಾರಾಜಯೋಗದೊಡನೆ ಕೂಡಿದ ಮನುಮಾಂಧಾತರೂ ಸರಿಯಲ್ಲ. ಮಹಾಲಿಂಗದೊಡನೆ ಕೂಡಿದ ಶಾಂಭವಯೋಗಕ್ಕೆ ಆವಾವ ಪದವೂ ಸರಿಯಲ್ಲ. ಈ ಶಾಂಭವಯೋಗವಾರಲ್ಲಿ ಸ್ಥಾವರವಾಗಿದ್ದಿತ್ತು, ಅವರಲ್ಲಿ ಸರ್ವಲಕ್ಷಣಂಗಳು, ಸರ್ವ ವಿಚಿತ್ರಂಗಳು, ಸರ್ವ ಸುಖಂಗಳು ಸರ್ವ ಭಕ್ಷ್ಯಂಗಳು, ಸರ್ವೈಶ್ವರ್ಯಂಗಳು ಸರ್ವ ಪದಂಗಳು ಸರ್ವ ಸಿದ್ಧಿಗಳು ಸರ್ವ ಕ್ರಮಂಗಳು ಸರ್ವ ಕರ್ತೃತ್ವಮುಂಟು. ಪ್ರಕೃತಿಯೋಗವಂ ಮಾಡುವ ನರಸುರಾಸುರರು ಮೂಲಪ್ರಕೃತಿಯೋಗವ ಮಾಡುವ ಮನು ಮಾಂಧಾತರು ತೃಣ ಮಾತ್ರವು. ನಿತ್ಯನಿಜಶಿವಸ್ವರೂಪವಾದ ಶಾಂಭವ ಯೋಗಿಗಳಿಗೆ ಸರ್ವಯೋಗಂಗಳು ತೃಣಮಾತ್ರವು_ಗುಹೇಶ್ವರಲಿಂಗವನರಿದರಾಗಿ.
--------------
ಅಲ್ಲಮಪ್ರಭುದೇವರು
ಇದು ಎನಗೆ ಆಶ್ಚರ್ಯ; ಹೇಳವ್ವಾ ! ಕಾಯವಿಲ್ಲದ ಸುಖವ ಜೀವವಿಲ್ಲದ ಭವವ ! ಆಠಾವ ಹೇಳಾ ಗುಹೇಶ್ವರಲಿಂಗಕ್ಕೆ ?
--------------
ಅಲ್ಲಮಪ್ರಭುದೇವರು
ಇಂದು ಸಾವ ಹೆಂಡತಿಗೆ, ನಾಳೆ ಸಾವ ಗಂಡನವ್ವಾ ! ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ ! ಅರಿವು ಕುರುಹನು ಮರವೆ ನುಂಗಿತ್ತು; ಗುಹೇಶ್ವರನುಳಿದನವ್ವಾ !
--------------
ಅಲ್ಲಮಪ್ರಭುದೇವರು
ಇರುಳೊಂದು ಮುಖ ಹಗಲೊಂದು ಮುಖ ಕಾಯವೊಂದು ಮುಖ ಜೀವವೊಂದು ಮುಖ, ಬುದ್ಧಿಯನರಿಯದಿದೆ ನೋಡಾ ! ಪ್ರಾಣಲಿಂಗವೆಂಬ ಭ್ರಾಂತು ನೋಡಾ ! ಇದು ಕಾರಣ_ಮೂರುಲೋಕವೆಯ್ದೆ ಬರುಸೂರೆವೋಯಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಇಕ್ಷುದಂಡಕ್ಕೆ ಕೀಳು ಮೇಲಲ್ಲದೆ ಸಕ್ಕರೆಯ ದಂಡಕ್ಕೆ ಕೀಳು ಮೇಲುಂಟೆ ? ಪರುಷಪಾಷಾಣಕ್ಕೆ ಕೀಳು ಮೇಲಲ್ಲದೆ ಕಡೆಯಾಣಿಗುಂಟೆ ಒರೆಗಲ್ಲು ? `ಉಂಟು' `ಇಲ್ಲ' ಎಂಬ ಸಂದೇಹ ನಿಂದಲ್ಲಿ ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಇವಳ (ಅವಳ?) ನೋಟವೆನ್ನ ಮತ್ರ್ಯಕ್ಕೆ ತಂದಿತ್ತಯ್ಯಾ. ಇವಳ ಕೂಟ ಸವಿಯನವಗಡಿಸಿ ಕಾಡಿತ್ತಯ್ಯಾ. ಇವಳ ಬೇಟದ ಬೇರ ಹರಿದಲ್ಲಿ ತ್ರಿಪುರ ಹಾಳಾದುದ ಕಂಡೆನು. ಉರಿಯ ಮೇಲೆ ಉರಿ ಎರಗಿದಡೆ ತಂಪು ಮೂಡಿತ್ತ ಕಂಡೆನು. ಕರಿಯ ಬೇಡನ ಕಸ್ತುರಿಯ ಮೃಗ ನುಂಗಿದಡೆ ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು. ಕಾರಿರುಳ ಕೋಟೆಯಲಿ ಕಲಿಯ ಕಾಳೆಗವ ಗೆಲಿದು ಹೂಳಿರ್ದ ನಿಧಾನವ ಕಂಡೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಂತೀ ಮರ್ತ್ಯಲೋಕದ ಮಹಾಗಣಂಗಳು ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ, ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮಾರ್ಗಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯವಾದರು ನೋಡ ! ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ ನಡೆನುಡಿಗಳ ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮೀರಿದ ಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯ ನಿರಂಜನರಾದರು ನೋಡ ! ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕಿ[ಯೆ]ಯ ನಡೆ_ನುಡಿ_ಪರಿಣಾಮ_ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ ! ಗುಹೇಶ್ವರಲಿಂಗಪ್ರಭುವೆಂಬ ನಾಮರೂಪುಕ್ರಿಯವಳಿದು ಸಂಗನಬಸವಣ್ಣನ ಬೆಳಗಿನೊಳಗೆ ಮಹಾಬಯಲಾದರು ನೋಡ !
--------------
ಅಲ್ಲಮಪ್ರಭುದೇವರು
ಇಲ್ಲದಲ್ಲಿ ಇಲ್ಲವಿದ್ದಿತ್ತು. ಇಲ್ಲವೆಂಬುದು ಉಂಟು ನೋಡಾ. ಉಂಟೆಂದಲ್ಲಿ `ಇಲ್ಲ' ಉಂಟಾಯಿತ್ತು. ಉಂಟೆಂದು ತಿಳಿದಡೆ ಅದೆ `ಇಲ್ಲ'. ಆ `ಇಲ್ಲ'ದಲ್ಲಿ ಒಂದು ತಲೆ ಉದಿಸಿತ್ತು. ಆ ತಲೆಯೊಳಗೆ ಮೂರು ಲಿಪಿಯ ಕಂಡೆ. ಲಿಪಿಯೊಳಗೊಂದು ಧ್ವನಿಯ ಕಂಡೆ. ಧ್ವನಿಯ ಬಣ್ಣ ತಲೆಯೆತ್ತದ ಮುನ್ನ, ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು. ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ. ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು. ಅಡವಿಯ ಸುಟ್ಟು ಆಕಾಶವ ಹೊಕ್ಕು ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು
--------------
ಅಲ್ಲಮಪ್ರಭುದೇವರು
ಇರುಳ ನುಂಗಿತ್ತು, ಇರುಳಿಲ್ಲ; ಹಗಲ ನುಂಗಿತ್ತು ಹಗಲಿಲ್ಲ. ಅರಿವ ನುಂಗಿತ್ತು ಅರಿವಿಲ್ಲ, ಮರಹ ನುಂಗಿತ್ತು ಮರಹಿಲ್ಲ. ಕಾಯವ ನುಂಗಿತ್ತು ಕಾಯವಿಲ್ಲ, ಜೀವವ ನುಂಗಿತ್ತು ಜೀವವಿಲ್ಲ. ಇವೆಲ್ಲವ ನುಂಗಿತ್ತು_ಇದೇನಯ್ಯಾ, ಸಾವ ನುಂಗದು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇಪ್ಪತ್ತೈದು ತಲೆಯೊಳಗೆ, ಏಳು ಮೊಲೆ ಮುಖವೆಂಟು, ºದಿನಾಲ್ಕು ಬಾಯಿ ನೂರಿಪ್ಪತ್ತು ಕೋರೆದಾಡೆ. ಹೃದಯದಲ್ಲಿ ಹುದುಗಿದ ಅಗ್ನಿಯ ತೆಗೆದು ಮುದ್ದಾಡಿಸಿ (ಸೆ ?) ದನಿಯ ಧರ್ಮವ ನುಂಗಿ ಮನದ ಬಣ್ಣಗಳಡಗಿ ಹೆತ್ತ ತಾಯಿ ಮಗನ ನುಂಗಿ, ಶಿಶು ತಾಯ ಬೆಸಲಾಗಿ ಗುಹೇಶ್ವರನೆಂಬ ನಿಲವ ಅಂಗಯ್ಯ ಮೊಲೆ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಇಲ್ಲವೆಯ ಮೇಲೊಂದು ಉಂಟೆಂಬ ಪರಿಭಾವ, ಅಲ್ಲಿ ಇಲ್ಲಿ ಎನ್ನದೆ ತಾನೆ ನಿಂದಿತ್ತು ನೋಡಾ ! ತನ್ನಲ್ಲಿಯ ಪ್ರಕೃತಿಯ ತಾನೆ ಹಿಂಗಿಸಲು; ಅಲ್ಲಿಯೆ ಜ್ಞಾನ ಉದಯಿಸಿತ್ತು ! ಎಲ್ಲಾ ಎಡೆಯಲ್ಲಿ ನಿಂದ ನಿಜಪದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ಇದು ಲೇಸಾಯಿತ್ತು: ತುಂಬಿದ ಲೆಕ್ಕಕ್ಕೆ ಮತ್ತೊಂದೆಂದು ಕಡೆಗಾಣಿಸುವಂತೆ, ಸ್ಥಾಣುವಿನ ಮರೆಯ ಚೋರನಂತೆ, ಅಂಬುಧಿಯ ಕೊಂಬಿನಲ್ಲಿದ್ದ ವಿಹಂಗನಂತೆ, ಎಲ್ಲಿ ಬಂದಡೂ ಗುಹೇಶ್ವರನೆಂಬ ಭಾವ ಒಂದಾಯಿತ್ತು !
--------------
ಅಲ್ಲಮಪ್ರಭುದೇವರು
ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. ಇಲ್ಲದ ತನುವ ಉಂಟೆಂಬನ್ನಕ್ಕರ, ಅದೇ ಮಾಯೆಯಾಗಿ ಕಾಡುತ್ತಿಪ್ಪುದು. ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ. ಮನವ ಮನೆಯ ಮಾಡಿಕೊಂಡಿಪ್ಪ ಲಿಂಗದ ಅನುವನರಿಯಬಲ್ಲಡೆ, ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮರುಳೆ.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ ? ಅಂತರಂಗವೆಂಬ ಶಬ್ದಕ್ಕೆ ಬಹಿರಂಗ ಮುಂದುಗೊಂಡಿಪ್ಪುದು. ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು. ಮನವನೆಡೆಗೊಂಡ ಲಿಂಗದ ಅರಿವು, ವಿಚಾರ ವ್ಯಾಕುಲಕ್ಕೊಳಗಾಗಬಾರದೆಂದು ಮನ ಭಾವ ಜ್ಞಾನ ನೋಟಕ್ಕೆ ತಂದು, ಕರಸ್ಥಲದಲ್ಲಿ ನಿಕ್ಷೇಪಿಸಿ ಅಂತರಂಗ ಬಹಿರಂಗವೆಂದರಿಯದೆ, ಅನಿಮಿಷನಾಗಿಪ್ಪನು ಶರಣನು. ಪ್ರಾಣಲಿಂಗದ ಪ್ರಸನ್ನಮುಖವ ನೋಡಿ ಪರಿಣಾಮಿಸಲೋಸುಗ ತೇಜ (ಜಂಗಮ?)ವೆಂಬ ದರ್ಪಣವ ಹಿಡಿದಿಪ್ಪ ನೋಡಯ್ಯಾ. ಗುಹೇಶ್ವರಲಿಂಗದಲ್ಲಿ ನಿಜವನೆಯ್ದಿಹೆನೆಂದಡೆ, ಕುರುಹುವಿಡಿದು ಕುರುಹುಗೆಡಬೇಕು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಇಂದ್ರನಂತೆ ಮಾಡುವೆ, ಚಂದ್ರನಂತೆ ಮಾಡುವೆ, ಮಾಣಿಕ್ಯದ ಹೊಳಹಿನಂತೆ ಮಾಡುವೆನಯ್ಯಾ. ನೀ ನೋಡದಿರಯ್ಯಾ. ಮಾಡುವೆನು ಸೂರ್ಯನ ಪ್ರಭೆಯಂತೆ, ನೀ ನೋಡಿ ಮತ್ತಡಗುವ ಕೃತಕವ ನಾನು ಬಲ್ಲೆ. ಬೆಡಗು ನಿರಾಳ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಪ್ಪತ್ತೆ ೈದು ತತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯಾ? ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ ಮುತ್ತಯ್ಯನ ಬೆಣ್ಣೆಯ, ಶಿಶು ನುಂಗಿತ್ತು. ಮತ್ತೆ ಶಿಶುವಿನ ಸುಖವನೇನೆಂಬೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಇಷ್ಟಲಿಂಗವ ತೋರಿ ಮೃಷ್ಟಾನ್ನವ ಹಾರುವವರಿಗೆ ಇಷ್ಟಾರ್ಥಸಿದ್ಧಿ ಇನ್ನೆಲ್ಲಿಯದೊ ? ಅದೆಲ್ಲಿಯದೊ ಲಿಂಗ ಅದೆಲ್ಲಿಯದೊ ಜಂಗಮ ? ಅದೆಲ್ಲಿಯದೊ ಪಾದೋದಕ ಪ್ರಸಾದ ? ಅಲ್ಲದಾಟವನಾಡಿ ಎಲ್ಲರೂ ಮುಂದುಗೆಟ್ಟರು,_ ಗುಹೇಶ್ವರಾ ನಿಮ್ಮಾಣೆ.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗವ ಪೂಜಿಸಿದರಾಗಿ ನಿಷೆ* ನೆಲೆಗೊಳ್ಳದು. ಬಹುಲಿಂಗವ ಪೂಜಿಸಿ ಭ್ರಮಿತರಾದರು. ಅನ್ಯಲಿಂಗವ ಪೂಜಿಸಿ ಭಿನ್ನರಾದರು. ಸ್ಥಾವರ ಲಿಂಗವ ಪೂಜಿಸಿ ಸಾವಿಗೊಳಗಾದರು ಬಳ್ಳ ಲಿಂಗವೆಂದು ಪೂಜಿಸಿ ಏನುವನರಿಯದೆ ಹೋದರು. ಗುಹೇಶ್ವರನೆಂಬ ಲಿಂಗವ ಪೂಜಿಸಿ ನಿಮ್ಮ ಶರಣರು ಅಲ್ಲಿಗಲ್ಲದೆ ಇಲ್ಲಿಗಲ್ಲದೆ ಹೋದರು ನೋಡಾ.
--------------
ಅಲ್ಲಮಪ್ರಭುದೇವರು
ಇನ್ನೇವೆ ಇನ್ನೇವೆ ? ಇದು ಮುನ್ನ ಮಾಯದಲಾದ ಭೂತದ ಲಿಂಗ. ಅಗಲಲಾಗದ ಮುನ್ನ ಆರೋಗಣೆಯಾಯಿತ್ತು, ಕೈದೊಳೆಯದ ಮುನ್ನ ! (ಎಂಜಲು ಹೋಯಿತ್ತು) ನಾನಾಗದ ಮುನ್ನ ತಾನೆಯಾಯಿತ್ತು. ಗುಹೇಶ್ವರನೆಂಬ ಲಿಂಗ ಎನ್ನೊಳಗಡಗಿತ್ತು.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗಕ್ಕೆ ರೂಪನರ್ಪಿಸಿ ದ್ರವ್ಯಶುದ್ಧವಾಯಿತ್ತೆಂದು ಪ್ರಾಣಲಿಂಗಕ್ಕೆ ಆರೋಗಣೆಯನಿಕ್ಕುವಾಗ, ನಿಚ್ಚನ[ಕ್ಕೆ] ನಿಚ್ಚ ಕಿಲ್ಬಿಷವೆಂದರಿಯರು. ಇಷ್ಟಲಿಂಗ ಪ್ರಾಣಲಿಂಗದ, ಆದಿ ನಅಂತುವಫ ನಾರೂ ಅರಿಯರು_ ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು ಹಿಂದುಗಾಣದೆ ಮುಂದುಗೆಟ್ಟರು.
--------------
ಅಲ್ಲಮಪ್ರಭುದೇವರು
ಇದ್ದುದ ಹೇಳಲಿಲ್ಲ, ಇದ್ದುದ ತೋರಲಿಲ್ಲ, ಹೊದ್ದಿದ ಆಶ್ರಮವ ನಾನೇನೆಂಬೆನು ಶಿವನೆ? ಭದ್ರಕಾಳಿಯ ಬಸಿರೊಳಗಿರ್ದ ಬಾವಿಯ ಸರ್ಪನು, ಸಿದ್ಧರಸದ ಘಟಿಕೆಯ ನುಂಗಿ ಎದ್ದು ಆಡಿತ್ತು ನೋಡಾ ! ಹದ್ದಿನ ಹೆಡೆಯಲ್ಲಿ ಮಾಣಿಕವಿದ್ದುದು ಇಲ್ಲೆಂಬ ಎದ್ದು ಹೇಳುವ ಕನಸು ತಾನಲ್ಲ ಗುಹೇಶ್ವರ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...