ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತೋರಬಾರದ ಘನವ ಹೇಳಲೆಂದೇನಯ್ಯಾ ? ಹೇಳಬಾರದ ಘನವ ತೋರಲೆಂದೇನಯ್ಯಾ ? ಶರಸಂಧಾನದ ಪರಿಯಲ್ಲ ನೋಡಾ ! ಗುಹೇಶ್ವರಲಿಂಗವು ಕಲ್ಪಿತವಲ್ಲ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ತನ್ನ ಮುಟ್ಟಿ ನೀಡಿದುದೆ ಪ್ರಸಾದ, ತನ್ನ ಮುಟ್ಟ[ದೆ] ನೀಡಿದುದೆ ಓಗರ. ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ. ಇದು ಕಾರಣ_ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಜೀವಕ್ಕೆ ಜೀವವಾಗಿ, ಇದ್ದುದನಾರು ಬಲ್ಲರೊ? ಅದು ದೂರವೆಂದು, ಸಮೀಪವೆಂದು, ಮಹಂತ ಗುಹೇಶ್ವರ[ನು]À, ಒಳಗೆಂದು ಹೊರಗೆಂದು, ಬರುಸೂರೆವೋದರು.
--------------
ಅಲ್ಲಮಪ್ರಭುದೇವರು
ತೋಟವ ಬಿತ್ತಿದ[Àರೆಮ್ಮ]sÀವರು, ಕಾಹ ಕೊಟ್ಟವರು ಜವನವರು. ನಿತ್ಯವಲ್ಲದ ಸಂಸಾರ ವೃಥಾ ಹೋಯಿತಲ್ಲಾ ! ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು, ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ ಮೂರ್ತಿಗೊಳಿಸಿ_ ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂಧಿಸಿ ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ ಝಲ್ಲಿ ಪಟ್ಟೆಯನಲಂಕರಿಸಿ ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ ಮಹಾನಾದವೆಂಬ ಭೇರಿ ವಾದ್ಯಂಗಳಿಂ ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ_ಪಿಡಿಸಿ,_ ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ_ ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ ಪ್ರವೇಶವಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ. ನೋಟವೇ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಆರತುದಯ್ಯಾ. ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರಾ ನಿರಾಳವಯ್ಯಾ !
--------------
ಅಲ್ಲಮಪ್ರಭುದೇವರು
ತನು ಒಂದು ದ್ವೀಪ, ಮನ ಒಂದು ದ್ವೀಪ, ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ._ ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ ಗುಹೇಶ್ವರಾ_ನಿಮ್ಮ ಸ್ಥಾನಂಗಳು.
--------------
ಅಲ್ಲಮಪ್ರಭುದೇವರು
ತನುವರ್ಪಿತವೆಂದಡೆ ಗುರುದ್ರೋಹ. ಮನವರ್ಪಿತವೆಂದಡೆ ಲಿಂಗದ್ರೋಹ. ಧನವರ್ಪಿತವೆಂದಡೆ ಜಂಗಮದ್ರೋಹ_ ಇಂತೀ ತನುಮನಧನಗಳೆಂಬ ಅನಿತ್ಯವನು ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ. ಒಡೆಯರಿಗೆ ಉಂಡೆಯ ಮುರಿದಿಕ್ಕಿ ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ? ನಮ್ಮ ಗುಹೇಶ್ವರಲಿಂಗಕ್ಕೆ, ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ತುಂಬಿ ಪರಿಮಳವನುಂಡಿತೊ, ಪರಿಮಳ ತುಂಬಿಯ ನುಂಡಿತೊ ? ಲಿಂಗ ಪ್ರಾಣವಾಯಿತೊ ? ಪ್ರಾಣ ಲಿಂಗವಾಯಿತೊ ? ಗುಹೇಶ್ವರಾ, ಇವರ ಈ ಉಭಯದ ಭೇದವ ನೀನೆ ಬಲೆ
--------------
ಅಲ್ಲಮಪ್ರಭುದೇವರು
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ, ಆ ಸುಳುಹಾಗಿ ಸುಳಿಯಬೇಕು. ನಿಂದಡೆ ನೆಟ್ಟನೆ ಭಕ್ತನಾಗಿ ನಿಂದು ಸಹಜ ಮಾಟವ ಮಾಡಬೇಕು. ಸುಳಿದಡೆ ನೆಟ್ಟನೆ ಪರಮಜಂಗಮವಾಗಿ ಸುಳಿಯಬೇಕು. ನಿಂದು ಭಕ್ತನಾಗಲರಿಯದ, ಸುಳಿದು ಜಂಗಮವಾಗಲರಿಯದ ಉಭಯಭ್ರಷ್ಟರನೇನೆಂಬೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು. ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು. ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ? ಭ್ರಾಂತು ಭ್ರಾಂತನೆ ನುಂಗಿ ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ
--------------
ಅಲ್ಲಮಪ್ರಭುದೇವರು
ತುಂಬಿ ಬಂದಡೆ ಪರಿಮಳ ಓಡಿತ್ತ ಕಂಡೆ ! ಇದೇನು ಸೋಜಿಗ ಹೇಳಾ ? ಮನ ಬಂದಡೆ ಬುದ್ಧಿ ಓಡಿತ್ತ ಕಂಡೆ, ದೇವ ಬಂದಡೆ ದೇಗುಲ ಓಡಿತ್ತ ಕಂಡೆ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಲೆಯಲಟ್ಟುಂಬುದ, ಒಲೆಯಲಟ್ಟುಂಬರು, ಒಲೆಯಲುಳ್ಳುದ, ಹೊಟ್ಟೆಯಲುಂಬೈಸಕ್ಕರ ಹೊಗೆ ಘನವಾಯಿತ್ತು_ ಇದ ಕಂಡು ಹೇಸಿಬಿಟ್ಟೆನು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ? ಭಾವನಾಸ್ತಿಯಾಗಿರಬೇಕು. ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು. ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು ಕುರುಹಳಿದು ಕೂಡುವ ಪರಮಸುಖವು, ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ ಮಡಿವಾಳ ಮಾಚಯ್ಯಾ ?
--------------
ಅಲ್ಲಮಪ್ರಭುದೇವರು
ತನ್ನ ತಾನರಿದಡೆ ನುಡಿಯೆಲ್ಲ ತತ್ವ ನೋಡಾ ! ತನ್ನ ತಾ ಮರೆದಡೆ ನುಡಿಯೆಲ್ಲ ಮಾಯೆ ನೋಡಾ ! ಅರಿದು ಮರೆದ ಶಿವಯೋಗಿಯ ಶಬ್ದವೆಲ್ಲವು ಉಪದೇಶವಲ್ಲದೆ ಭಿನ್ನವುಂಟೆ ? ನಿನ್ನ ಮನದ ಕಳವಳವ ತಿಳುಹಲೆಂದು ಮಾತನಾಡಿಸಿ ನೋಡಿದಡೆ, ಎನ್ನ ಮನದೊಳಗೆ ಕಂದು ಕಲೆ ಎಂಬುದಿಲ್ಲ ನೋಡಾ ! ನಮ್ಮ ಗುಹೇಶ್ವರಲಿಂಗಕ್ಕೆ ನೀನು ಕರುಣದ ಶಿಶುವಾದ ಕಾರಣ ಬಾಯ್ದೆಗೆದೆನಲ್ಲದೆ, ಭಿನ್ನವುಂಟೆ ಹೇಳಾ ಮರುಳೆ ?
--------------
ಅಲ್ಲಮಪ್ರಭುದೇವರು
ತನುವಿನಲ್ಲಿಪ್ಪ ಲೋಭವ ಮನವ ಕದ್ದು ಮಾತನಾಡಿದಡೆ ಆ ತನುವೆ ಮನೋರೂಪವಾಗಿ ಕಾಣಬರುತ್ತದೆ. ಆ ಮನದಲ್ಲಿ ಬಯಕೆ ಸಮರತಿಯಾಗದಾಗಿ; ಕಾಮ(ಯ?)ದ ಕರುಳು ಲೋಭದ ಬಯಕೆಯೊಳಗದೆ. ಅರಿದೆನೆಂದು ಬರುಮಾತ ನುಡಿದಡೆ ನಮ್ಮ ಗುಹೇಶ್ವರಲಿಂಗವು ಮೆಚ್ಚ ನೋಡಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ತುಂಬಿದ ತೊರೆಯ ಹಾಯ್ದಹೆವೆಂದು ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ. ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ. ಎಚ್ಚತ್ತು ನಡಿಸಿರೆ. ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ, ಹರುಗೋಲು ಮುಳುಗದೆ, ಏರಿದವರು ಸತ್ತರು. ಇದರೊಳಹೊರಗನರಿದಾತನಲ್ಲದೆ ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
--------------
ಅಲ್ಲಮಪ್ರಭುದೇವರು
ತ್ರಿನದಿಯ ಮಧ್ಯದಲ್ಲೈದು ಕುದುರೆಯ ಕಟ್ಟಿದ್ದ ಕಂಭ ಮುರಿಯಿತ್ತು. ಎಂಟಾನೆ ಬಿಟ್ಟೋಡಿದವು. ಹದಿನಾರು ಪ್ರಜೆ ಬೊಬ್ಬಿಡುತ್ತಿದ್ದವು. ಶತಪತ್ರಕಮಲಕರ್ಣಿಕಾ ಮಧ್ಯದಲ್ಲಿ ಗುಹೇಶ್ವರಲಿಂಗವು ಮುಗ್ಧವಾಗಿರ್ದನು.
--------------
ಅಲ್ಲಮಪ್ರಭುದೇವರು
ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ ತಾಯಿ ಮೊಲೆಯನೂಡಿದಳು. ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ ! ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ ! ಈ ನಿಜದ ನಿರ್ಣಯವ ಎನಗೆ ತೋರಿದ ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ತಮ್ಮ ತಮ್ಮ ಮುಖದಲ್ಲಿ; ಲಿಂಗವನೊಲಿಸಿದರು, ಆರಾಧಿಸಿದರು, ಬೇಡಿತ್ತ ಪಡೆದರು ಎಲ್ಲಾ_ ಲಿಂಗಭೋಗೋಪಭೋಗಿಗಳಾಗಿ ಭೋಗಿಸುವವರಿಲ್ಲ. ಗಂಗೆವಾಳುಕರೆಲ್ಲ ವರಮುಖಿಗಳಾಗಿ ಮೂರ್ತಿಯಳಿದು ಹೋದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಂದೆಯ ಸದಾಚಾರ ಮಕ್ಕಳೆಂಬರು, ಗುರುಮಾರ್ಗಾಚಾರ ಶಿಷ್ಯನದೆಂಬರು. ಮೇಲು ಪಂಕ್ತಿಯ ಕಾಣರು ನೋಡಾ. ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು. ಕತ್ತಲೆಯ ಮರೆಯಲ್ಲಿ ಕಾಣರು ನೋಡಾ. ತತ್ವದ ಹಾದಿಯನು, ಭಕ್ತಿಯ ಭೇದವನು, ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ತತ್ವವ ನುಡಿವ ಹಿರಿಯರೆಲ್ಲರು. ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗಪಡುತ್ತಿದ್ದರು ನೋಡಾ, ನಿತ್ಯಾನಿತ್ಯವ ಹೇಳುವ ಹಿರಿಯರು ತಮ್ಮ ಒಡಲ ಕಕ್ಕುಲತೆಗೆ ಹೋಗಿ, ಭಕ್ತಿಯ ಹೊಲಬನರಿಯದ, ಜಡಜೀವಿ ಮಾನವರ ಇಚ್ಛೆಯ ನುಡಿದು, ಹಲುಬುತ್ತಿಪ್ಪರು ನೋಡಾ ! ಕತ್ತೆಗೆ ಕರ್ಪೂರವ ಹೇರಿದಂತೆ, ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನ್ನನರಿಯೆನೆಂಬುದು ಅಜ್ಞಾನ ನೋಡಾ. ಅರಿಯದ ಅಜ್ಞಾನವ ಅಗಳೆದು ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ ! ಎಲ್ಲವನು ತೋರುವ ಘನವನು ಎಲ್ಲಿಯೂ ಕಾಣಬಾರದು. ಕಾಣಬಾರದ ನಿಜವ ತೋರಬಾರದು, ತೋರಬಾರದ ನಿಜವ ತಿಳಿಯಬಾರದು,. ಗುಹೇಶ್ವರಲಿಂಗದಲ್ಲಿ ಬಯಕೆಯುಳ್ಳನ್ನಕ್ಕ ತವಕ ಎಡೆಗೊಂಡಿಪ್ಪ ಕಾರಣ ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ತಾನೆಂದೆನಲೊಲ್ಲದೆ ಗುರುವೆಂದು ಹಿಡಿದವನ, ಗುರುವೆಂದಲ್ಲಿಯೆ ನೀನೆಂದು ನಡೆದವನ, ನೀನೆಂದಲ್ಲಿಯೆ ಲಿಂಗಜಂಗಮದ ಸಕೀಲಸಂಬಂಧವ ನೆಲೆಗೊಳಿಸಿದವನ, ಲಿಂಗಜಂಗಮದಲ್ಲಿ ತನ್ನ ಮರೆದು ಕರಿಗೊಂಡ ಲಿಂಗೈಕ್ಯನ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ತಾ ಬಾಳಲಾರೆ ವಿಧಿಯ ಬೈದನೆಂಬ ನಾಣ್ಣುಡಿ ದಿಟವಾಯಿತ್ತಲ್ಲಾ ಬಸವಣ್ಣಾ. ಅವಧಾನ ತಪ್ಪಿ ಆಚಾರಗೆಟ್ಟು ನಡೆದು ಶಿವನಾಧೀನವೆಂದಡೆ ಹೋಹುದೆ ? ಗುಹೇಶ್ವರಲಿಂಗದಲ್ಲಿ ಈ ಬಣ್ಣಿಗೆಯ ಮಾತು ಸಲ್ಲದು ಕೇಳಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...