ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲೋಕದವರನೊಂದು ಭೂತ ಹಿಡಿದಡೆ, ಆ ಭೂತದಿಚ್ಛೆಯಲ್ಲಿ ನುಡಿವುತ್ತಿಪ್ಪರು. ಲಾಂಛನ ಧಾರಿ ವೇಷವ ಧರಿಸಿ, ಆಸೆಯಿಂದ ಘಾಸಿಯಾಗಲೇಕಯ್ಯಾ ? ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವ ಮಾನವರನೇನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಲಿಂಗ ನಿಮ್ಮದಾದಡೆ ನಿಮ್ಮ ಅಂಗೈಯೊಳಗೇಕೆ ಅಡಗದು ? ನಿಮ್ಮ ಅಂಗಮಯ ಲಿಂಗವಾದಡೆ ಸಂಸಾರದ ಅಂಗವ ಉಲುಹೇತಕ್ಕೆ ? ಅದು ನಮ್ಮ ಗುಹೇಶ್ವರಲಿಂಗದಲ್ಲಿ ಲಿಂಗದ ಮೆಚ್ಚಲ್ಲವೆಲೆ ಭ್ರಾಂತು ಯೋಗಿ, ಘಟ್ಟಿವಾಳಯ್ಯ.
--------------
ಅಲ್ಲಮಪ್ರಭುದೇವರು
ಲೋಕದ ನಚ್ಚು ಮಚ್ಚು ಬಿಟ್ಟು ನಿಶ್ಚಿಂತವಾಯಿತ್ತು. ಏನು ಹತ್ತಿತ್ತೆಂದರಿಯೆನಯ್ಯಾ. ಏನು ಹೊಂದಿ(ಹೊದ್ದಿ?)ತ್ತೆಂದರಿಯೆನಯ್ಯಾ. ಗುಹೇಶ್ವರನೆಂಬ ಗ್ರಹ ಒಳಕೊಂಡಿತ್ತಾಗಿ ನಾನೇನೆಂದರಿಯೆನಯ್ಞ್ಯ.
--------------
ಅಲ್ಲಮಪ್ರಭುದೇವರು
ಲೋಕವಿರಹಿತ ಶರಣ, ಶರಣವಿರಹಿತ ಲೋಕ. ಹದಿನಾಲ್ಕು ಭುವನ ಒಬ್ಬ ಶರಣನ ಕುಕ್ಷಿಯೊಳಗು. ಅರಿವು ಮರಹಿಲ್ಲದ ಘನವು ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಲೋಕ ಅಳುತ್ತಿದೆ, ಇದ ಬೇಕು ಬೇಡ ಎಂಬವರ ಒಬ್ಬರನು ಕಾಣೆ. ದೇಹವೆಂಬುದೊಂದು ವಿಮಾನವ ಮಾಡಿ ದೇವರೆಂಬುದೊಂದು ಹೆಣನ ಮಾಡಿ ಕುಳ್ಳಿರಿಸಿ, ದೇವರು ಸತ್ತರೂ ತಮ್ಮಡಿ ಉಳಿದಡೆ ದೇಗುಲ ಹಾಳಾಯಿತ್ತ ನಾ ಕಂಡೆ. ಅಂಡಜದವರೆಲ್ಲ (ಪಿಂಡಜದವರೆಲ್ಲ ?) ಮುಂಡೆಯರಾದರು ನಿಮ್ಮ ಕಂಡವರು ಉ(ಅ?)ಳಿದರೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಲಿಂಗ ಒಳಗೊ ಹೊರಗೊ? ಬಲ್ಲಡೆ ನೀವು ಹೇಳಿರೆ ? ಲಿಂಗ ಎಡನೊ ಬಲನೊ ? ಬಲ್ಲಡೆ ನೀವು ಹೇಳಿರೆ ? ಲಿಂಗ ಮುಂದೊ ಹಿಂದೊ ? ಬಲ್ಲಡೆ ನೀವು ಹೇಳಿರೆ ? ಲಿಂಗ ಸ್ಥೂಲವೊ ಸೂಕ್ಷ್ಮವೊ ? ಬಲ್ಲಡೆ ನೀವು ಹೇಳಿರೆ ? ಲಿಂಗ ಪ್ರಾಣವೊ, ಪ್ರಾಣ ಲಿಂಗವೊ ? ಬಲ್ಲಡೆ ನೀವು ಹೇಳಿರೆ ಗುಹೇಶ್ವರಲಿಂಗವನು ?
--------------
ಅಲ್ಲಮಪ್ರಭುದೇವರು
ಲೋಕ ಒಂದನೆಂದಡೆ ತಾನೊಂದನೆನಬೇಡ. ಮತ್ತಾರೇನೆಂದಡೆಯೂ ತನ್ನನೆಂದರೆನಬೇಡ. ಭೈತ್ರಕ್ಕೆ ಬೆಂಗುಂಡನಿಕ್ಕಿದಂತಿರಬೇಕು ಹಿರಿಯರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗವಿಡಿದು ಅರಿವ ಅರಿವು ಅವಲ್ಲದೆ ಗುರುವಿಡಿದು ಅರಿವ ಅರಿವು ಅರಿವಲ್ಲ. ಗುರುವಿಡಿದು ಲಿಂಗವುಂಟೆಂಬುದು ಕಲ್ಪಿತ, ತನ್ನಿಂದ ತಾನಹುದಲ್ಲದೆ. ಗುಹೇಶ್ವರಲಿಂಗದಲ್ಲಿ ಹಂಗು ಹರಿಯದನ್ನಕ್ಕರ ತಾನಾಗಬಾರದು ಕಾಣು ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ, ಲಿಂಗವನರಿದ ಬಳಿಕ ಮತ್ತೇನನರಿದಡೆಯೂ ಫಲವಿಲ್ಲ. ಸರ್ವಕಾರಣ ಲಿಂಗವಾಗಿ, ಲಿಂಗವನೆ ಅರಿದರಿದು ಲಿಂಗಸಂಗವನೆ ಮಾಡುವೆ. ಸಂಗಸುಖದೊಳು ಓಲಾಡುವೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗಜಂಗಮ ಒಂದೇ ಎಂದು ಕಂದೊಳಲುಗೊಂಡಿರಲ್ಲಾ! ಮೂರೆಡೆಯ ಮುಟ್ಟಿತ್ತು ತ್ರಿವಿಧಾಚಾರ;_ ಲಿಂಗ ಒಂದೆಡೆಯಲ್ಲಿ, ಜಂಗಮ ಒಂದೆಡೆಯಲ್ಲಿ, ಪ್ರಸಾದ ಒಂದೆಡೆಯಲ್ಲಿ. _ಇಂತು ಎಲ್ಲಿಯ ಪ್ರಸಾದವೊ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗಾರ್ಚನೆಯಿಲ್ಲದ ಮುನ್ನ, ಸಿಂಗಿಯನಾರೋಗಿಸಿದಿರಿ. ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚನ್ನನ ಮನೆಯಲ್ಲಿ. ಚಿತ್ರಗುಪ್ತರರಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ, ಬೈಚಿಟ್ಟಿರಿ ಕೈಲಾಸದಲ್ಲಿ. ನಿಮ್ಮ ಚಿಕ್ಕುಟ ಉದರದಲ್ಲಿ ಈರೇಳು ಭುವನಂಗಳೆಲ್ಲವು. ನಿಮ್ಮ ರೋಮಕೂಪದಲ್ಲಿ ಅಡಗಿದವು; ಪ್ರಾಣ ಅಪಾನ ವ್ಯಾನ ಉದಾನ ಸಮಾನ [ಗಳು]_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲೋಭವೆಂಬ ಮಸೆದಡಾಯುಧವನೊರೆಯುಚ್ಚಬಾರದು ಇಂತಪ್ಪ ಕದಳಿಯಂ ಪೊಕ್ಕು ಪೊಡೆಮಾಡಿ ಮುಳ್ಮುಸೆ ಮುಟ್ಟದೆ ಕಳೆದುತ್ತರಿಸಿ ಗುಹೇಶ್ವರನೆಂಬ ನಿಜಸಮಾಧಿಯಲ್ಲಿ ನಿಂದು ಪರವಶನಾಗಿ ನಿರಾಳಕ್ಕೆ ನಿರಾಳ ನಿರಾಳ (ಅವಿರಳ) ವಾಗಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ಲಿಂಗಭಕ್ತನೆಂದು ಜಗವೆಲ್ಲಾ ಸಾರುತ್ತಿಪ್ಪರು. ಲಿಂಗಭಕ್ತನ ಇಂಬಾವುದೆಂದರಿಯರು. ಲಿಂಗಭಕ್ತ ಹಮ್ಮುಬಿಮ್ಮಿನವನೆ ? ಲಿಂಗಭಕ್ತ ಸೀಮೆಯಾದವನೆ ? ಪ್ರಾಣವಿಲ್ಲದ ರೂಹು, ಒಡಲಿಲ್ಲದ ಜಂಗಮ, ಉಳಿದುವೆಲ್ಲಾ `ಸಟೆ' ಎಂಬೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗವೆ ಪ್ರಾಣ, ಪ್ರಾಣವೆ ಲಿಂಗವಾಯಿತ್ತು. ಆ ಲಿಂಗವೆ ಲಿಂಗಾಂಗವಾಯಿತ್ತು. ಗುಹೇಶ್ವರಲಿಂಗದಲ್ಲಿ ಸರ್ವಾಂಗ ಪ್ರಾಣಲಿಂಗ ಸ್ವಾಯತವಾಯಿತ್ತು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಲಿಂಗವನೂ ಪ್ರಾಣವನೂ ಒಂದು ಮಾಡಿ ತೋರಿದ ಗುರುವಿದ್ದಾನಲ್ಲಾ ಲಿಂಗವಿದ್ದಾನಲ್ಲಾ, ಇದಕ್ಕೆ ಸಾಕ್ಷಿ ಮುಂದೆ ಜಂಗಮವಿದ್ದಾನಲ್ಲಾ_ ಈ ತ್ರಿವಿಧ ದೃಷ್ಟವ ಕಂಡು, ಬೇರೆಂಬ ಅಜ್ಞಾನಕ್ಕೆ ನಾನು ಬೆರಗಾದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಎಂದು ಅರಿದು ಮರೆದು ಬರುದೊರೆವೋದವರು, ಜಂಗಮವನಿನ್ನು ಬೇರೆ ಅರಸಲೇಕಯ್ಯಾ ? ಆ ಲಿಂಗದೊಳಗೆ ಜಂಗಮವ ಅರಸಿಕೊಂಬುದು. ಲಿಂಗಾರ್ಚನೆಯ ಅವಸರಕ್ಕೆ ಜಂಗಮ ಮನೆಗೆ ಬಂದಡೆ ಲಿಂಗಾರ್ಚನೆಯ ಮಾದು, ಜಂಗಮಕ್ಕೆ ಇದಿರೆದ್ದು ವಂದಿಸಿ ಭಕ್ತಿಯ ಮಾಡಬಲ್ಲಾತನೆ ಭಕ್ತ._ಆ ಜಂಗಮ ಹೊರಗಿರಲು ಲಿಂಗಾರ್ಚನೆಯ ಮಾಡುತ್ತಿಪ್ಪಾತನೇತರ ಭಕ್ತ ? ಜಂಗಮದ ಮುಂದೆ ಲಿಂಗವ ಕೈಯಲ್ಲಿ ಹಿಡಿದುಕೊಂಡು ಸಹಪಂಕ್ತಿಯಲ್ಲಿ ಕುಳ್ಳಿರ್ದು ಪೂಜಿಸುವಾತ ಭೃತ್ಯಾಚಾರದ್ರೋಹನು. ಆ ಭಕ್ತನ ಮನೆಯ ಹೋಗುವ ಜಂಗಮ ಅಜ್ಞಾನಿ. ನಮ್ಮ ಗುಹೇಶ್ವರನ ಶರಣರ ಕೂಡ ಅಹಂಕಾರವ ಹೊತ್ತಿಪ್ಪವರ ಕಂಡಡೆ ನಾನೊಲ್ಲೆ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಲಿಂಗವಂತಂಗೆ ಲಿಂಗದ ವಾರ್ತೆಯ ನುಡಿವುದೇ ಭಂಗ, ಹಂಗು ನೋಡಾ, ಹಂಗಿನ ಶಬ್ದ ನೋಡಾ ! ಕೊಡನ ತುಂಬಿದ ಹಾಲನೊಡೆಯ ಹಾಯಿಕಿ ಇನ್ನು ಉಡುಗಿಹೆನೆಂದಡೆ ಉಂಟೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಲಿಂಗ ಜಂಗಮವೆಂಬ ಸಕೀಲವ ಅರಿದು ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು ಆ ಲಿಂಗ ಜಂಗಮದೊಳಡಗಿ, ಆ ಜಂಗಮ ಪರಾಪರವೆಂದರಿದು ತೋರಿತ್ತು_ ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ, ಗುಹೇಶ್ವರಾ, ನಿಮ್ಮ ಅನುವನರಿದು ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ ನಾನು ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಲಿಂಗವಿಚಾರ ಆಚಾರದೊಳಡಗಿ, ಆಚಾರಕ್ರಿಯೆಗಳು ಗುರುವಿನೊಳಡಗಿ ಗುರುವೆನ್ನಂಗದೊಳಡಗಿ, ಅಂಗ ಲಿಂಗ ನೈಷೆ*ಯೊಳಡಗಿ, ಲಿಂಗನೈಷೆ*ಯ ಆಚರಣೆಯಾಚಾರವಾವರಿಸಿ, ಆಚಾರದ ನಿಲವ ಗುರುಮೂರ್ತಿಯಾವರಿಸಿ, ಗುರುಮೂರ್ತಿ ಸರ್ವಾಂಗವನಾವರಿಸಿ, ಸರ್ವಾಂಗವ ಲಿಂಗನೈಷೆ*ಯಾವರಿಸಿ, ಲಿಂಗನೈಷೆ*ಯ ಸಾವಧಾನವಾವರಿಸಿ, ಸಾವಧಾನ ಸುವಿಚಾರವ ಮಹಾಜ್ಞಾನವಾವರಿಸಿ, ಮಹಾಜ್ಞಾನದೊಳಗೆ ಪರಮಾನಂದ ನಿಜನಿಂದು, ನಿಜದೊಳಗೆ ಪರಮಾಮೃತ ತುಂಬಿ, ಮೊದಲ ಕಟ್ಟೆ ಒಡೆದು, ನಡುವಣ ಕಟ್ಟೆಯನಾಂತು ನಿಂದು, ನಡುವಣ ಕಟ್ಟೆಯು ಎರಡು ಕಟ್ಟೆಯು ಕೂಡಿ ಬಂದು ಕಟ್ಟೆಯನಾಂತುದು. ಈ ಮೂರು ಕಟ್ಟೆಯನೊಡೆದ ಮಹಾಜಲವೆ ಪರಮಪದವಾದುದು. ಆ ಪದದಲ್ಲಾನೆರಗಿ ಪಾದೋದಕ ಕೊಂಡೆನ್ನ ನಾನರಿಯದೆ ಹೋದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗಗಂಭೀರ ಸುನಾದವೆ ತನುಗುಣ ಚರಿತ್ರ ಜಂಗಮಗಂಭೀರ ಅನಾಹತವೆ ಮನಗುಣ ಸ್ವಭಾವ. ಈ ಎರಡರ ಸಂಬಂಧವೆ ಒಡಲು. ಪರಮಾನಂದ ಜಲದಲ್ಲಿ ಅಲುಬಿ, ಮಹಾಪ್ರಕಾಶದಲ್ಲಿ ಆರಿಸಿ ಅನಾಹತ ಮಥನದಲ್ಲಿ ಘಟ್ಟಿಸಿ ಆ ವಸ್ತ್ರವ ಎನಗೆ ಕೊಟ್ಟಡೆ ಉಡದ ಮುನ್ನವೆ ಉರಿ ಹತ್ತಿತ್ತು ನೋಡಾ ! ಆ ಉರಿಯು ಕಣ್ಣಿಗೆ ಕಾಣಬಾರದು ಮನಕ್ಕೆ ನೆನೆಯಬಾರದು. ಉರಿ ಉಂಟು ಉಷ್ಣವಿಲ್ಲದ ಆ ಸ್ವಯಂಜ್ಯೋತಿಯ ನಿಜನಿವಾಸದಲ್ಲಿ ನಿಶ್ಚಿಂತನಾಗಿದ್ದು, ಮಡಿವಾಳನ ಕೃಪೆಯಿಂದ ನಾನು ಬದುಕಿದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲೋಹ ಕರಗಿ ಗುಂಡಾದಲ್ಲಿ ಕಾಯವನಿರಿಯಬಲ್ಲುದೆ ? ಮಾತಿನ ಅದ್ವೈತದಲ್ಲಿ ನುಡಿವರೆಲ್ಲರೂ ಗುಹೇಶ್ವರಲಿಂಗವನೆತ್ತಬಲ್ಲರು ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಲಿಂಗಾರ್ಪಿತ ಲಿಂಗಾರ್ಪಿತ ಎಂಬರು ನಾವು ಇದನರಿಯೆವಯ್ಯಾ. ನಿತ್ಯತೃಪ್ತಲಿಂಗಕ್ಕೆ ಹಸಿವೆಂಬುದುಂಟೆ ? ಶಿವಾ ಶಿವಾ ತಮ್ಮ ತಮ್ಮ ಹಸಿವ ಲಿಂಗದ ಮೇಲಿಟ್ಟು ಉಣ್ಣದ ಲಿಂಗಕ್ಕಾಗಿ ಅರ್ಪಿತವ ಮೆರೆವರು. ನಮ್ಮ ಗುಹೇಶ್ವರಲಿಂಗಕ್ಕೆ ಒಡಲೆಂಬುದುಳ್ಳಡೆ ಉದರಾಗ್ನಿಯುಂಟು.
--------------
ಅಲ್ಲಮಪ್ರಭುದೇವರು
ಲಿಂಗ ಜಂಗಮವ ಪೂಜಿಸಿ ಭಕ್ತನಾದೆನೆಂದಡೆ ಸದಾಚಾರವಿರಬೇಕು ನೋಡಾ. ಆ ಸದಾಚಾರಕ್ಕೆ ಭೃತ್ಯಾಚಾರವೆ ಮೊದಲು ನೋಡಾ. ವಿಶ್ವಾಸವುಳ್ಳ ಭಕ್ತಿಗೆ ಹೊರೆಯಿಲ್ಲ ! ಅಲಂಕಾರವೆಂಬ ಅಲಗ ಹಿಡಿದು ಮಾಡುವ ಭಕ್ತಿ ತನ್ನನೆ ಇರಿವುದು ಗುಹೇಶ್ವರನೆಂಬ ಹಗೆಯ ಗೆಲುವಡೆ ಅರಿವೆಂಬ ಅಲಗ ಅವಧಾನ ತಪ್ಪದೆ ಹಿಡಿಯಬೇಕು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಲಿಂಗವಂತನ ನಡೆ ನುಡಿ ಚಾರಿತ್ರ ನಿಂದಕವನಾಡಿದಡೆ ಆ ಲಿಂಗ ನಿಮ್ಮ ಹಲ್ಲ ಕಳೆವ; ಆ ಲಿಂಗ ನಿಮ್ಮ ನರಕಕ್ಕಿಕ್ಕುವ. ಆ ಲಿಂಗವಂತ ಲಿಂಗ ಪ್ರಾಣಿಯಾಗಿಪ್ಪ. ಇದು ಸತ್ಯ ವಚನ. ಇದ ಕೇಳಿ ಲಿಂಗವಂತನ ನಾಸ್ತಿಕವನಾಡಿದಡೆ ರೌರವನರಕದಲ್ಲಿಕ್ಕುವ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲಿಂಗ ನೋಡಿದರೆ ನೋಡುವ, ಲಿಂಗ ಕೇಳಿದರೆ ಕೇಳುವ, ಲಿಂಗ ಮುಟ್ಟಿದರೆ ಮುಟ್ಟುವ, ಲಿಂಗ ರುಚಿಸಿದರೆ ರುಚಿಸುವ, ಲಿಂಗ ವಾಸಿಸಿದರೆ ವಾಸಿಸುವ ಲಿಂಗ ಕ್ರೀಡಿಸಿದರೆ ಕ್ರೀಡಿಸುವ. ಇಂತಪ್ಪ ಲಿಂಗ ಪ್ರಸಾದಭೋಗದಲ್ಲಿ ಪರಿಣಾಮಿ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...