ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಚನದ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ನೋಡಾ. ಹೊಲಳಿ ಕಂಡವರೆಲ್ಲರು ಮೂರ್ತಿಗೊಳಗಾದರು. ವೇದ ಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ, ಗುಹೇಶ್ವರ ಸಾಕ್ಷಿಯಾಗಿ ಮೂರುಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
--------------
ಅಲ್ಲಮಪ್ರಭುದೇವರು
ವಾಚಾತೀತಂ ಮನೋತೀತಂ ಭಾವಾತೀತಂ ಜ್ಞಾನಾತೀತಂ ನಿರಂಜನಂ ಅಣೋರಣೀಯಾನ್ ಮಹತೋಮಹೀಯಾನ್ ಎಂದೆನಿಸುವ ಅತಿಶಯಬ್ರಹ್ಮವು, ದಿವ್ಯ ಜ್ಞಾನವೆಂಬ ಭಕ್ತಿಮಂದಿರಕ್ಕೆ ಕರ್ತೃವಾದ ಈಶ್ವರ_ಗುಹೇಶ್ವರ.
--------------
ಅಲ್ಲಮಪ್ರಭುದೇವರು
ವಿರಹದಲುತ್ಪತ್ಯವಾದವರ, ಮಾಯದ ಬೇಳುವೆ ಹತ್ತಿತ್ತಲ್ಲಾ ! ಸ್ವರೂಪ ನಿರೂಪವೆಂದರಿಯರು, ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ವಿಶ್ವಾಸದಿಂದ ಭಕ್ತನಾಗಿ, ಆ ವಿಶ್ವಾಸದೊಳಗಣ ನೈಷ್ಠೆಯಿಂದ ಮಹೇಶ್ವರನಾಗಿ, ಆ ನೈಷ್ಠೆಯೊಳಗಣ ಸಾವಧಾನದಿಂದ ಪ್ರಸಾದಿಯಾಗಿ, ಆ ಸಾವಧಾನದೊಳಗಣ ಸ್ವಾನುಭಾವದಿಂದ ಪ್ರಾಣಲಿಂಗಿಯಾಗಿ, ಆ ಸ್ವಾನುಭಾವದೊಳಗಣ ಅರಿವಿನಿಂದ ಶರಣನಾಗಿ, ಆ ಅರಿವು ನಿಜದಲ್ಲಿ ಸಮರಸಭಾವವನೈದಿ ನಿರ್ಭಾವಪದದೊಳು ನಿಂದ ಭೇದವೇ ಐಕ್ಯಸ್ಥಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಿಭೂತಿ, ಆವ ಭೂಷಣದೊಳಗು ? ಪುಲಿಯ ಚರ್ಮ ಆವ ವಸ್ತ್ರದೊಳಗು ? ಖಟ್ಟಾಂಗ ಆವ ಆಯುಧದೊಳಗು ? ನೀ ಇಡುವುದು ಇಂತುಟು ನೀ ಹೊದೆವುದು ಇಂತುಟು ನೀ ಹಿಡಿವುದು ಇಂತುಟು, ನೀ ಕೊಡುವುದು ಇಂದ್ರಪದವಿ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವೇದಶಾಸ್ತ್ರ ಪುರಾಣ ಆಗಮಂಗಳೆಲ್ಲವೂ ಐವತ್ತೆರಡಕ್ಷರದೊಳಗು ಐವತ್ತೆರಡಕ್ಷರಂಗಳೆಲ್ಲವು ಒಂದು ಜಿಹ್ವೆಯೊಳಗು. ಆ ಜಿಹ್ವೆ ಮನದೊಳಗು, ಆ ಮನ ಪ್ರಾಣದೊಳಗು. ಆ ಪ್ರಾಣ ನಾದದೊಳಗು, ಆ ನಾದ ಬ್ರಹ್ಮದೊಳಗು. ಆ ನಾದಬ್ರಹ್ಮದ ಸಂಚವ ತಿಳಿದೊಡೆ, ಗುಹೇಶ್ವರಲಿಂಗವು ತಾನೆ.
--------------
ಅಲ್ಲಮಪ್ರಭುದೇವರು
ವೇದ ಘನವೆಂಬೆನೆ, ವೇದ ನಾದದೊಳಗಡಗಿತ್ತು. ನಾದ ಘನವೆಂಬೆನೆ, ನಾದ ಬಿಂದುವಿನೊಳಗಡಗಿತ್ತು. ಬಿಂದು ಘನವೆಂಬೆನೆ, ಬಿಂದು ಅಂಗದೊಳಗಡಗಿತ್ತು. ಅಂಗ ಘನವೆಂಬೆನೆ, ಅಂಗ ಲಿಂಗದೊಳಗಡಗಿತ್ತು. ಲಿಂಗ ಘನವೆಂಬೆನೆ, ಲಿಂಗ ನಿಶ್ಚಿಂತದೊಳಗಡಗಿತ್ತು. ನಿಶ್ಚಿಂತ ಘನವೆಂಬೆನೆ, ನಿಶ್ಚಿಂತ ನಿರಾಳದೊಳಗಡಗಿತ್ತು. ನಿರಾಳ ಘನವೆಂಬೆನೆ, ನಿರಾಳ ನಿರೂಪದೊಳಗಡಗಿತ್ತು. ನಿರೂಪ ನಿಃಕಳಂಕ ನಿಃಶೂನ್ಯ ನಿರಂಜನ ಪರಾಪರ ನೀನೇ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ. ವಿಚಾರಿಸುವನ್ನಕ್ಕರ ನೀನಾರೆಂಬುದನೆತ್ತ ಬಲ್ಲೆ ? ಮರುಳೆ ವಾಙ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೆ ? ಗುಹೇಶ್ವರನೆಂಬ ಲಿಂಗವು ತನ್ನ ತಿಳಿದು ನೋಡಿಹೆನೆಂಬವರ[ನು] ವಿಚಾರವೆಂಬ ಬಲೆಯಲ್ಲಿ ಕೆಡಹಿದನು.
--------------
ಅಲ್ಲಮಪ್ರಭುದೇವರು
ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು. ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು, ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ, ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ, ಆ ಸಂಸಾರದಿಂದಾಯಿತ್ತು ಮರವೆ. ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲಾ ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ ಮಾಯೆಯ ಬಾಯ ತುತ್ತಾದರಲ್ಲಾ ! ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವಾಙ್ಮನಕ್ಕತೀತವಾದ ಪರಶಿವನು(ನೆ?) ಪರಮಾತ್ಮಸ್ವರೂಪನಾಗಿ ವಿಶ್ವವೆಂಬ ನಾಣ್ಣುಡಿಯ ತೆರೆಯ ಸೀರೆಯ ಮರೆಯಲ್ಲಿ. ಸಕಲ ಭೋಗಾದಿಭೋಗಂಗಳ ಭೋಗಿಸುತಿಪ್ಪಿರಿ. ಗುಹೇಶ್ವರಾ ನಿಮ್ಮ ನಿಲವಿನ ಪರಿಣಾಮದ ಸುಖವ ನೀವೆ ಬಲ್ಲಿರಿ.
--------------
ಅಲ್ಲಮಪ್ರಭುದೇವರು
ವಾಯದ ಪಿಂಡಿಗೆ ಮಾಯದ ದೇವರಿಗೆ ವಾಯಕ್ಕೆ ಕಾಯವ ಬಳಲಿಸದೆ ಪೂಜಿಸಿರೊ. ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು, ಸೂಜಿಯ ಪೋಣಿಸಿ ದಾರವ ಮರೆದಡೆ ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷೆ*ಯ ಮಾಡುವರು. ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷೆ*ಯ ಮಾಡುವರು. ನುಡಿಯಬಾರದ ಲಿಂಗಕ್ಕೆ ಜಪಸ್ತೋತ್ರ ಪೂಜೆಯ ಮಾಡುವರು. ಮುಟ್ಟಬಾರದ ಲಿಂಗಕ್ಕೆ ಕೊಟ್ಟು ಕೊಂಡಾಡಿಹೆವೆಂಬರು. ಬೊಟ್ಟಿಡಲು ಎಡೆಯಿಲ್ಲದ ಲಿಂಗವ ಮುಟ್ಟಿ ಪೂಜಿಸಿಹೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವರ ವೇಷದ ವಿಭೂತಿ ರುದ್ರಾಕ್ಷಿಯ ಧರಿಸಿಕೊಂಡು ವೇದ ಶಾಸ್ತ್ರ ಪುರಾಣಾಗಮದ ಬಹುಪಾಠಿಗಳು ಅನ್ನ ಹೊನ್ನು ವಸ್ತ್ರವ ಕೊಡುವನ ಬಾಗಿಲಕಾಯಿದು ಮಣ್ಣ ಪುತ್ಥಳಿಯಂತೆ ಅನಿತ್ಯನೇಮದ ಹಿರಿಯರುಗಳು. ಅದೆಂತೆಂದಡೆ: ವೇದವೃದ್ಧಾ ವಯೋವೃದ್ಧಾ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೆ ಧನವೃದ್ಧಸ್ಯ ದ್ವಾರೇ ತಿಷ*ಂತಿ ಕಿಂಕರಾಃ ಎಲ್ಲಾ ಹಿರಿಯರುಗಳು ಲಕ್ಷ್ಮಿಯ ದ್ವಾರಪಾಲಕರಾದರಯ್ಯ. ಅರುಹಿಂಗೀ ವಿಧಿಯೇ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವ್ರತಗೇಡಿ ವ್ರತಗೇಡಿ ಎಂಬವ, ತಾನೆ ವ್ರತಗೇಡಿ. ವ್ರತ ಕೆಡಲಿಕೇನು ಹಾಲಂಬಿಲವೆ? ವ್ರತ ಕೆಟ್ಟ ಬಳಿಕ ಘಟ ಉಳಿಯಬಲ್ಲುದೆ ? ಕಾಯದೊಳಗೆ ಜೀವವುಳ್ಳನ್ನಕ್ಕ ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವೀರಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ ಈರೇಳು ಭುವನವ ಅಮಳೋಕ್ಯವ ಮಾಡಿ ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು ಮೂರ್ತಿಗೊಳಿಸಿದವರಾರು ? ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ. ಬಿಂದುವಿನ ರಸದ ಪರೀಕ್ಷೆಯ ಭೇದವ ಚಂದ್ರಕಾಂತದ ಗಿರಿಗೆ(ಯ?) ಅರುಣ ಚಂದ್ರರೊಡನೆ ಇಂಬಿನಲ್ಲಿಪ್ಪ ಪರಿಯ ನೋಡಾ ! ಅಂಗೈಯ ತಳದೊಳು ಮೊಲೆ ಕಂಗಳಲ್ಲಿ ಕರಸನ್ನೆ ಇಂಬಿನಲ್ಲಿ ನೆರೆವ ಸುಖ ಒಂದೆ ! ಆದಿ ಅನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು. ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ವಾರವೇಳು, ಜಾತಿ ಹದಿನೆಂಟೆಂದು ನುಡಿವ ಪಾತಕರ ನುಡಿಯ ಕೇಳಲಾಗದು ಅದೆಂತೆಂದಡೆ: ವಾರವೆರಡು, ಜಾತಿಯೆರಡು, ಭವಿಯೊಂದು ಕುಲ, ಭಕ್ತನೊಂದು ಕುಲ. ಇಂತೀ ಎಂಬತ್ತು ನಾಲ್ಕು ಲಕ್ಷ ಜೀವಕ್ಕೆ ಜೀವನವೇ ಆಹಾರ. ಜೀವ ತಪ್ಪಿಸಿ ಜೀವಿಸಬಾರದು. `ಯಥಾ ಮಂತ್ರ ತಥಾ ಸಿದ್ಧಿ'ಯೆಂದು ಲಿಂಗಕ್ಕರ್ಪಿತವ ಮಾಡಿಕೊಂಬುದೆ ಶುದ್ಧ, ಉಳಿದಾದುದೆಲ್ಲ ಜೀವನ್ಮಯ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ವೇದ ದೈವವೆಂದು ನುಡಿವರು, ಶಾಸ್ತ್ರ ದೈವವೆಂದು ನುಡಿವರು, ಪುರಾಣ ದೈವವೆಂದು ನುಡಿವರು, ಕಲ್ಲು ದೈವವೆಂದು ನುಡಿವರು, ಕಾಷ* ದೈವವೆಂದು ನುಡಿವರು, ಪಂಚಲೋಹ ದೈವವೆಂದು ನುಡಿವರು, ಇವರೆಲ್ಲ ಸಕಲದಲಾದ ಸಂದೇಹವನೆ ಪೂಜಿಸಿ ಸತ್ತು ಹೋದರಲ್ಲಾ ! ಸಮಸ್ತ ಪ್ರಾಣಿಗಳೂ_ತಾಯನರಿಯದ ತರ್ಕಿಗಳು, ತಂದೆಯನರಿಯದ ಸಂದೇಹಿಗಳು. ತನು ಪೃಥ್ವಿಯಿಂದಲಾಯಿತ್ತು ಮನ ವಾಯುವಿನಿಂದಲಾಯಿತ್ತು. ಕಲ್ಲು ಕಾಷ* ಸಕಲ_ನಿಷ್ಕಲದಿಂದಲಾಯಿತ್ತು. ವಾಯುವಾಧಾರದ ಪವನಸಂಯೋಗದ ಅನಾಹತ ಚಕ್ರದಿಂದ ಮೇಲಣ ಆಜ್ಞಾಚಕ್ರದಲ್ಲಿ ನಿಂದು; ಅನಂತಕೋಟಿಬ್ರಹ್ಮಾಂಡಗಳ ಮೆಟ್ಟಿ_ ಕಾಯದ ಕಣ್ಣ ಮುಚ್ಚಿ, ಜ್ಞಾನದ ಕಣ್ಣ ತೆರೆದು ನೋಡಲ್ಕೆ, ಅಲ್ಲಿ ಒಂದು ನಿರಾಕಾರ ಉಂಟು. ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ, ಅಲ್ಲಿ ಒಂದು ನಿಶ್ಶೂನ್ಯವುಂಟು. ಆ ನಿಶ್ಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ, ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷಿ*, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ವಾಮಭಾಗದಲೊಂದು ಶಿಶು ಹುಟ್ಟಿತ್ತ ಕಂಡೆ. `ಜೋ ಜೋ' ಎಂದು ಜೋಗುಳವಾಡಿತ್ತ ಕಂಡೆ. ಜೋಗುಳವಾಡಿದ ಶಿಶು ಅಲ್ಲಿಯೆ ಲಯವಾಯಿತ್ತು (ಬಯಲಾಯಿತ್ತು ?), ಗುಹೇಶ್ವರನೆಂಬ ಶಬ್ದ ಅಲ್ಲಿಯೆ ಲಯವಾಯಿತ್ತು !
--------------
ಅಲ್ಲಮಪ್ರಭುದೇವರು
ವಸುಧೆಯ ಮುಟ್ಟದೆ ರಸವ ಒಸರಲೀಯದೆ ರಸದಲ್ಲಿ ಕಟ್ಟಬಲ್ಲಡೆ ಅದು ಯೋಗ. ಹೊರಗಿದ್ದ ರಸವ ಕಟ್ಟಬಲ್ಲೆವೆಂಬರೆಲ್ಲಾ ಅಂಜನಸಿದ್ಧರಾಗಿ ಹೋದರು. ಸುಷುಮ್ನಸೂಕ್ಷ್ಮನಿಧಿಯ ಮಧ್ಯದ ಕೂಪ ಕಂಭದ ಮೇಲೆ ಪಂಚೇಂದ್ರಿಯವೆಂಬ ಗುಹ್ಯವ ತೊಡೆದು ರಸವ ಕಟ್ಟಬಲ್ಲ ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ವೇದ ಪ್ರಮಾಣವಲ್ಲ, ಶಾಸ್ತ್ರ ಪ್ರಮಾಣವಲ್ಲ ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ ! ಅಂಗಸಂಗದ ಮಧ್ಯದಲ್ಲಿಟ್ಟು ಬೈಚಿಟ್ಟು ಬಳಸಿದ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ವಾಗ್ಬ್ರಹ್ಮಿಗಳೆಲ್ಲರು ಪಡುವ ಪಾಟ ನೋಡಿ ನಮ್ಮ ಭಕ್ತರು, ತ್ಯಾಗಾಂಗದಲ್ಲಿ, ಇಷ್ಟ ಪ್ರಾಣ ಭಾವಕ್ಕೆ ಬಾಹ್ಯ ಪದಾರ್ಥರೂಪವ ಈಕ್ಷಣ ಜ್ಞಾನಸ್ಪರ್ಶದಿಂದ ಅರ್ಪಿಸಿ ದೇಹಪ್ರಸಾದಿಗಳಾಗಿ ಚರಶೇಷದಲ್ಲಿ ಇಷ್ಟಲಿಂಗಪೂಜಕರಾಗಿ ಅನಿಷ್ಟವ ಪರಿಹರಿಸಿದರು. ಭೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ದೇಹಪದಾರ್ಥರೂಪವ ರೂಪು ರುಚಿ ತೃಪ್ತಿಯಿಂದ ಅರ್ಪಿಸಿ ಪ್ರಾಣಪ್ರಸಾದಿಗಳಾಗಿ ಲಿಂಗಶೇಷದಲ್ಲಿ ಪ್ರಾಣಲಿಂಗ ನೈಷಿ*ಕರಾಗಿ ವಾಯುಗುಣವಿಕಾರವ ಕೆಡಿಸಿದರು. ಯೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ವಾಯು ಪದಾರ್ಥರೂಪವ ಸ್ಥೂಲ ಸೂಕ್ಷಕಾರಣದಿಂದ ಅರ್ಪಿಸಿ ಮಹಾಪ್ರಸಾದಿಗಳಾಗಿ ಗುರುಶೇಷದಲ್ಲಿ ಮನೋಗುಣ ವಿಕಾರ ಪರಿಹರಿಸಿದರು ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು. ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು: ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು. ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ವಾಯು ನಿದ್ರೆಗೆಯ್ದಡೆ ಆಕಾಶ ಜೋಗುಳವಾಡಿತ್ತು. ಬಯಲು ಬಳಲಿದೆನೆಂದಡೆ ನಿರಾಳ ಮೊಲೆಗೊಟ್ಟಿತ್ತು. ಆಕಾಶವಡಗಿತ್ತು ಜೋಗುಳ ನಿಂದಿತ್ತು ಗುಹೇಶ್ವರನೈದಾನೆ ಇಲ್ಲದಂತೆ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...