ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಸೋಂಕೆಂಬುದು ಅಧಮವು. ಉರಸೆಜ್ಜೆಯೆಂಬುದು ಎದೆಯ ಗೂಂಟ. ಕಕ್ಷೆಯೆಂಬುದು ಕವುಚಿನ ತವರುಮನೆ. ಅಮಳೋಕ್ಯವೆಂಬುದು ಬಾಯ ಬಗದಳ. ಮುಖಸೆಜ್ಜೆಯೆಂಬುದು ಪಾಂಡುರೋಗ. ಕರಸ್ಥಳವೆಂಬುದು ಮರವಡದ ಕುಳಿ. ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ. ಎಲ್ಲರಿಗೆಯೂ ಸೋಂಕಾಯಿತ್ತು ! ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು, ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು, ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ. ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ? ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ? ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ? ಅಂತರಂಗ ಬಹಿರಂಗ ಆತ್ಮಸಂಗ_ಈ ತ್ರಿವಿಧದ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ. ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ. ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ
--------------
ಅಲ್ಲಮಪ್ರಭುದೇವರು
ಅಂಬುದ್ಥಿs ಉರಿಯಿತ್ತು ಅವನಿಯ ಮೇಲನರಿಯಲು. ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ, ಆ ಪ್ರಸಾದದಿಂದ ಸುಖಿಯಾದೆನಯ್ಯಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ ಭೇದಿಸಿ ನೋಡಿ ಅರಿವರಿನ್ನಾರಯ್ಯಾ ? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ? ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ. ಅಂದಂದಿನ ಸಂದೇಹ ಹರಿಯಿತ್ತು. ನೀ ಭಕ್ತನಾಗಿ ನಾ ಜಂಗಮವಾಗಿ, ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು, ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು, ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ. ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ? ಅಂಗದೊಳಗಣ ಲಿಂಗವನು ಹಿಂಗಿದವರಿಗೆ ಭವಮಾಲೆಯುಂಟು, ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ ಗಂಡಗಂಡರನರಸಿ ತೊಳಲುತ್ತೈದಾರೆ. ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ: ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು. ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು. ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು.
--------------
ಅಲ್ಲಮಪ್ರಭುದೇವರು
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಡಜ ಒಡೆಯದರಿಂದ ಮುನ್ನ, ದ್ವೀಪಾದ್ವೀಪವಿಲ್ಲದ ಮುನ್ನ, ಅನಲಪವನರಿಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ಗುಹೇಶ್ವರಲಿಂಗವಲ್ಲಿಂದ ಮುನ್ನ.
--------------
ಅಲ್ಲಮಪ್ರಭುದೇವರು
ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ ! ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ ! ಭಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ ! ತನ್ನಿಂದ ತಾನಾದಳು ! ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ ಮಹಾದೇವಿಯಕ್ಕಗಳ ನಿಲವಿಂಗೆ ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗದ ಕಳೆಯಲೊಂದು ಲಿಂಗವ ಕಂಡೆ. ಲಿಂಗದ ಕಳೆಯಲೊಂದು ಅಂಗವ ಕಂಡೆ. ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ. ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ; ಕಾಯವಳಿಯದ ಮುನ್ನ ನೋಡಬಲ್ಲಡೆ. ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ?
--------------
ಅಲ್ಲಮಪ್ರಭುದೇವರು
ಅಂಬುಧಿಯೊಳಗಾದ ನದಿಗಳು ಮರಳುವುವೆ ? ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ? ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ? ಲಿಂಗವನರಿದು ಲಿಂಗೈಕ್ಯವಾದ ಶರಣ ಮರಳಿ ಹುಟ್ಟುವನೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
--------------
ಅಲ್ಲಮಪ್ರಭುದೇವರು
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು, ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು, ಈ ಎರಡರ ಸಂಗವೆ ತಾನೆಂದರಿದನು ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
--------------
ಅಲ್ಲಮಪ್ರಭುದೇವರು
ಅಂಗ ಮೂವತ್ತಾರರ ಮೇಲೆ ಲಿಂಗ. ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ, ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ ಸುಸಂಗ ಪ್ರಸಾದವ ಕೊಳಬಲ್ಲವಂಗೆ ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !
--------------
ಅಲ್ಲಮಪ್ರಭುದೇವರು
ಅಂಡವ ಮೇಲು ಮಾಡಿ ಪಿಂಡಿಯಾಗಿ, ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು ! ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು, ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಬರದೊಳಗೊಂದು ಅಡವಿ ಹುಟ್ಟಿತ್ತು. ಆ ಅಡವಿಯೊಳಗೊಬ್ಬ ವ್ಯಾಧನೈದಾನೆ. ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು. ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು ! ಅರಿವು ಬರಿದುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಂಜಬೇಡ ಅಳುಕಬೇಡ; ಹೋದವರಾರು ಇದ್ದವರಾರು ? ಎಲೆ ಮರುಳೆ ! ಒಂದು ಮುಖದಲ್ಲಿಪ್ಪ ದೇವನೊಬ್ಬನೆ. ಹಲವು ಮುಖದಲ್ಲಿಪ್ಪ ದೇವನೊಬ್ಬನೆ. ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ ! ಮನದೊಳಗಣ ಘನವು ತನುವನಗಲುವುದೆ ? ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ. ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ. ಮನಬಂದ ಪರಿಯಲ್ಲಿ ನುಡಿವಿರಿ, ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಅಂಗದ ಲಿಂಗವೆ ಮನದ ಲಿಂಗ, ಮನದ ಲಿಂಗವೆ ಭಾವದ ಲಿಂಗ, ಭಾವದ ಲಿಂಗವೆ ಜಂಗಮದಾಸೋಹ, ದಾಸೋಹವೆಂಬುದು ಸಂದಿಲ್ಲದ ನಿಜ ನೋಡಾ. ಅದರಂದವನೆ ತಿಳಿದು ನಿಂದ ನಿಲುಕಡೆಯ ಭೇದವ ಕೇಳಬೇಕೆಂದು ಬಂದಲ್ಲಿಯೆ ತಿಳುಹಬೇಕಯ್ಯಾ. ಇಂತೀ ಪ್ರಕಾರದಲ್ಲಿ ಸಂದ ಸೌಖ್ಯದ ಭೇದವನು, ಸಂದಿಲ್ಲದ ಲಿಂಗದ ನಿಜವನು, ಇಂದು ನಮ್ಮ ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ ತಿಳುಹಿ ಕೊಡಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ? ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ? ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ? ಭಾವಭ್ರಮೆಯಳಿದು, ಗುಹೇಶ್ವರಾ ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ ಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಅಂಗವಿಡಿದಂಗಿಯನೇನೆಂಬೆ ? ಆರನೊಳಕೊಂಡ ಅನುಪಮನು ನೋಡಾ ! ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ. ತತ್ತ್ವ ಮೂವತ್ತಾರ ಮೀರಿ, ಅತ್ತತ್ತವೆ ತೋರ್ಪ ಆಗಮ್ಯನು ನೋಡಾ ! ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ ಪರಮಪ್ರಸಾದಿ ಮರುಳಶಂಕರದೇವರ ನಿಲವ ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...