ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ? ಬೆಟ್ಟದ ಮೇಲಣ ನೆಲ್ಲಿಯ ಕಾಯಿ ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯಾ ? ಗುಹೇಶ್ವರಲಿಂಗಕ್ಕೆಯೂ ನಮಗೆಯೂ ಎತ್ತಣಿಂದೆತ್ತ ಸಂಬಂಧವಯ್ಯಾ.
--------------
ಅಲ್ಲಮಪ್ರಭುದೇವರು
ಎನ್ನ ಕಾಯವ ಬಸವಣ್ಣನಳವಡಿಸಿಕೊಂಡ. ಎನ್ನ ಮನವ ಚನ್ನಬಸವಣ್ಣನಳವಡಿಸಿಕೊಂಡ. ಎನ್ನ ಭಾವವ ಮಡಿವಾಳಯ್ಯನಳವಡಿಸಿಕೊಂಡ._ ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ ಗುಹೇಶ್ವರಾ, ನಿಮ್ಮ ಶರಣರೆಂಬ ತ್ರಿಮೂರ್ತಿಗಳಿಗೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು. ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು. ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು. ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು. ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ ರೂಹಿಸಲೆಡೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಎನ್ನಲ್ಲಿ ನಾನು ದೃಷ್ಟವೆಂದಡೆ ನಿಮ್ಮಲ್ಲಿ ನೀವು ಮೆಚ್ಚುವಿರೆ ? ಸಂದೇಹದಿಂದ ಸವೆಯಿತ್ತು ಲೋಕವು. ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು, ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು.
--------------
ಅಲ್ಲಮಪ್ರಭುದೇವರು
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು, ಮನ ಘನವನರಿಯದು, ಘನ ಮನವನರಿಯದು. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲ ಒಂದು ಮಾತಿನೊಳಗು !
--------------
ಅಲ್ಲಮಪ್ರಭುದೇವರು
ಎರಡೆಂಬತ್ತು ಕೋಟಿ ಗೀತವ ಹಾಡಿದರೇನಯ್ಯಾ ? ಬೆಟ್ಟಕ್ಕೆ ನಾಯಿ ಬೊಗಳಿದಂತಾಯಿತ್ತಯ್ಯಾ. ಮನವು ಘನವ ನೆಮ್ಮದು, ಘನವು ಮನವ ನೆಮ್ಮದು. ಹಾಡಿದರೇನು ಓದಿದರೇನು ? ಗುಹೇಶ್ವರ ನೀನೊಲಿದ ಕಾಲಕ್ಕೆ ಎರಡೆಂಬತ್ತು ಕೋಟಿ ಗೀತವೆಲ್ಲವೂ ನಿಮ್ಮದೊಂದು ಮಾತಿನೊಳಡಕವಯ್ಯಾ.
--------------
ಅಲ್ಲಮಪ್ರಭುದೇವರು
ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು, ಬೀಜಕ್ಷೇತ್ರದೆರಕ ಹರಿಹರಯೋಗ. ವಿರತರತಿ ನಿಕ್ಷೇಪವಿದುವೆ ಗರ್ಭಾದಾನ. ಪರಮಬೀಜಾವಾಪವಿದರ ಫಲನಿರ್ವಾಣ ! ಸರಸಲಿಂಗದ ನಿಷೇಕವನರಿವುದೆ ಸಾಜ, ಗುರುವೆ ಕರುಣಿಸಿದ ಶಿವಲಿಂಗಕಮಲಾರ್ಚನೆಯನು. ಇದು ಗುಹ್ಯ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎನ್ನ ಕಾಯವೆಂಬ ಸಿಂಹಾಸನದಲ್ಲಿ ಪ್ರಾಣವೆಂಬ ಲಿಂಗವ ಮೂರ್ತಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಚ್ಚಿ ಪೂಜಿಸುತಿರಲು, ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ, ಬಯಲ ಬೆರಸಿ, ನಾ ನೀನೆಂಬ ಭೇದವಳಿದು, ಮಹಾದಾನಿ ಗುಹೇಶ್ವರನ ನೋಡಲಾಗಿ ನಿಜಲಿಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಎನಗೊಂದು ಲಿಂಗ ನಿನಗೊಂದು ಲಿಂಗ ಮನೆಗೊಂದು ಲಿಂಗವಾಯಿತ್ತು. ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ. ಉಳಿ ಮುಟ್ಟದ ಲಿಂಗವ ಮನ ಮುಟ್ಟಬಲ್ಲುದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎಲೆ ಬಸವಣ್ಣ ನಾವು ಬಹುದಕ್ಕೆ ಮುನ್ನವೆ ಬಂದಹರೆಂದು ಶುಭಸೂಚನೆ ತೋರಿತ್ತೆಂದೆ. ಮನೆಯ ಮೀರಿ ಮಂದದ ದೈವ ಉಂಟೆ ಎಂಬುದ ತಿಳಿ, ಗುಹೇಶ್ವರಲಿಂಗದಲ್ಲಿ ಸಂಗನಬಸವಣಾ
--------------
ಅಲ್ಲಮಪ್ರಭುದೇವರು
ಎನ್ನ ಹೃದಯಕಮಲ ಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ_ ಎನ್ನ ಕ್ಷಮೆಯೆ ಅಭಿಷೇಕ, ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ ಎನ್ನ ಸಮಾಧಿಸಂಪತ್ತೆ ಗಂಧ, ಎನ್ನ ನಿರಹಂಕಾರವೆ ಅಕ್ಷತೆ, ಎನ್ನ ಸದ್ವಿವೇಕವೆ ವಸ್ತ್ರ, ಎನ್ನ ಸತ್ಯವೆ ದಿವ್ಯಾಭರಣ ಎನ್ನ ವಿಶ್ವಾಸವೆ ಧೂಪ, ಎನ್ನ ದಿವ್ಯಜ್ಞಾನವೆ ದೀಪ, ಎನ್ನ ನಿಭ್ರಾಂತಿಯೆ ನೈವೇದ್ಯ, ಎನ್ನ ನಿರ್ವಿಷಯವೆ ತಾಂಬೂಲ ಎನ್ನ ವರಿõ್ಞನವೆ ಘಂಟೆ, ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ, ಎನ್ನ ಶುದ್ಧಿಯೆ ನಮಸ್ಕಾರ, ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು_ ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣ (ಲಿಂಗ) ಪೂಜೆಯೆ ಮಾಡಿ ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಎನ್ನಂಗದಲ್ಲಿ ನಿಮಗೆ ಮಜ್ಜನ, ಎನ್ನ ತುರುಬಿನಲ್ಲಿ ನಿಮಗೆ ಕುಸುಮ ಪೂಜೆ ಎನ್ನ ನೇತ್ರದಲ್ಲಿ ನಿಮಗೆ ನಾನಾರೂಪು ವಿಚಿತ್ರ ನೋಟ. ಎನ್ನ ಶ್ರೋತ್ರದಲ್ಲಿ ನಿಮಗೆ ಪಂಚ ಮಹಾವಾದ್ಯದ ಕೇಳಿಕೆ. ಎನ್ನ ನಾಸಿಕದಲ್ಲಿ ನಿಮಗೆ ಸುಗಂಧ ಧೂಪ ಪರಿಮಳ. ಎನ್ನ ಜಿಹ್ವೆಯಲ್ಲಿ ನಿಮಗೆ ಷಡುರಸಾನ್ನ ನೈವೇದ್ಯ. ಎನ್ನ ತ್ವಕ್ಕಿನಲ್ಲಿ ನಿಮಗೆ ವಸ್ತ್ರಾಭರಣಾಲಂಕಾರ ಪೂಜೆ. ಎನ್ನ ಆನಂದವೆಂಬ ಸಜ್ಜೆಗೃಹದಲ್ಲಿ ನೀವು ಸ್ಪರುಸನಂಗೈದು ನೆರೆದಿಪ್ಪಿರಾಗಿ, ನಾನು ನೀನೆಂಬೆರಡಳಿದು, ತಾನು ತಾನಾದ ಘನವನೇನೆಂಬೆ ಗುಹೇಶ್ವರಯ್ಯಾ.
--------------
ಅಲ್ಲಮಪ್ರಭುದೇವರು
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ? ಮುನ್ನ [ನೀ] ಬಾಯ ಮುಚ್ಚಿಕೊಂಡಿರ್ದೆ ಎಂಬುದ, ನಾ ನಿನ್ನ ಕಣ್ಣಿಂದ ಕಂಡೆನು, ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡಿದಡೆ ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ. ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ! ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ.
--------------
ಅಲ್ಲಮಪ್ರಭುದೇವರು
ಎಸೆಯದಿರು ಎಸೆಯದಿರು ಕಾಮಾ, ನಿನ್ನ ಬಾಣ ಹುಸಿಯಲೇಕೊ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_ಇವು ಸಾಲದೆ ನಿನಗೆ ? ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ, ಮರಳಿ ಸುಡಲುಂಟೆ ಮರುಳು ಕಾಮಾ ?
--------------
ಅಲ್ಲಮಪ್ರಭುದೇವರು
ಎರಡು ಬೆಟ್ಟದ ನಡುವೆ ಹಳ್ಳವ ಮಿಳಿಯ ಮಾಡಿ, ಬಾವಿಯನುತ್ತೆನೆಂಬ ಮರುಳತನವ ನೋಡಾ ! ತೊರೆಯ ಮೇಲೆ ಮಾರುಗೋಲನಿಕ್ಕಿ ಹುಟ್ಟ ಮುರಿದು ಹೋದ ಅಂಬಿಗನ ನೋಡಾ. ಮರೆದು ಮಲಗಿದ ಬೆಕ್ಕಿನ ಕಿವಿಯ ಇಲಿ ಮೇದಂತೆ ಗುಹೇಶ್ವರನೆಂಬ ಲಿಂಗ ನಿರಾಳದ ನಿಲವು.
--------------
ಅಲ್ಲಮಪ್ರಭುದೇವರು
ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ ಅದು ನಿಮ್ಮ ಮತಕ್ಕೆ ಬಪ್ಪುದೆ? ಎನ್ನ ನಾನು ಮರೆದು, ನಿಮ್ಮನರಿದಡೆ, ಅದು ನಿಮ್ಮ ರೂಪೆಂಬೆ. ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎಲೆ ಮನವೆ, ಎಲ್ಲಿ ಹವಣಿಸಬಾರದ ಅಖಂಡ ಬೆಳಗು ತೋರುತ್ತಿಹುದು ಅದೀಗ ನಿನ್ನ ನಿಜ. ಎಲೆ ಮನವೆ, ಆವಲ್ಲಿ ನೀನೆಂಬ ಶಂಕೆ ಹಿಂಗಿ ತಾನೆ ತೋರುತ್ತಿಹುದು ಅದೀಗ ನಿನ್ನ ನಿಜ. ಎಲೆ ಮನವೆ, ನಿನ್ನ ನಿಜವನರಿಯಬಲ್ಲಡೆ ಅದೇ ಬ್ರಹ್ಮಜ್ಞಾನ, ಅದೇ ಕೇವಲಮುಕ್ತಿ, ಅದೇ ನಮ್ಮ ಗುಹೇಶ್ವರಲಿಂಗವನರಿವ ಸಹಜಭಕ್ತಿಯ ಕುಳ ಕಾಣಾ. ಎಲೆ ಮನವೆ-ನೀನಿದ ನಿಶ್ಚಯಿಸಿಕೊ ಮರೆಯದೆ.
--------------
ಅಲ್ಲಮಪ್ರಭುದೇವರು
ಎಂಟು ನೆಲೆಯ ಮಣಿಮಾಡದ ಮಂಟಪದ ಮೇಲೆ, ಏಳು ವಶ್ಯ ಕನ್ನಿಕೆಯರು, ಮಹಾಲಿಂಗಕ್ಕೆ ಮಾಣಿಕದಾರತಿಯನೆತ್ತಿದರಲ್ಲಾ ! ಚಾಮರಂಗಳು ಬೀಸದೆ, ಮಾಣಿಕಸೂಸಕ ಕೆದರದೆ ಅಧರಪಟಂಗಳು ಹಳಚದೆ, ಸ್ವಯಲಿಂಗಾರ್ಚನೆಯ ಮಾಡುವಲ್ಲಿ ಪ್ರಸಾದಕ್ಕೆ ಕರುಣದಿಂ ದಯಮಾಡೈ (ದಯಮಾಡಿಸೈ?) ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎರಡು ನೇತ್ರ ಒಂದಾದ ಭಾಳನೇತ್ರವು ಇಷ್ಟಲಿಂಗದ ಗೋಳಕಕ್ಕೆ ಕೂಟವು. ಒಂದು ಲಿಂಗ ಎರಡಾದುದೆ ಇಷ್ಟ ಪ್ರಾಣಲಿಂಗವು. ಆ ಪ್ರಾಣಲಿಂಗದ ಹಸ್ತಂಗಳಿಗೆರಡು ನೇತ್ರಂಗಳೆ ಕುಚಂಗಳು, ಆ ಕುಚಂಗಳು ಹಿಡಿಯಲಿಕೆ, ಈ ಕುಚವೆರಡು ಗುಹ್ಯ ಒಂದು ಕೂಡಿ ತ್ರಿಕೂಟವೆಂಬ ಹೆಸರಾಯಿತ್ತು. ಆ ತ್ರಿಕೂಟವೆಂಬ ಶಾಂಭವಪುರದ ಮಧ್ಯದಲ್ಲಿ ಜ್ಯೋತಿರ್ಲಿಂಗವೇಕವಾದ ಬಳಿಕ, ತನುತ್ರಯದ ವಿಕಾರವ ಹೊದ್ದಲಾಗದು. ವಿಕಾರವ ಹೊದ್ದಿದರೆ ಮೀಸಲೋಗರವ ಶುನಿಮುಟ್ಟಿದಂತಾಯಿತ್ತು ಆ ಜೀವಾತ್ಮಪದಾರ್ಥವು ಲಿಂಗಕ್ಕೆ ಸಲ್ಲದು, ಅವರ ತೆರನೆಂತಾಯಿತ್ತೆಂದಡೆ ; ಜನ್ಮದಾರಿದ್ರನು ನಿಕ್ಷೇಪವಂ ಕಂಡು ಹೋಗಲಾಗಿ ದಿಗಿಲುಬಿದ್ದು ಸತ್ತಂತಾಯಿತ್ತು. ಅಂಥ ನಿರ್ಭಾಗ್ಯ ದುರ್ಮರಣನ ಕಂಡು ಹೇಸಿ, ತಮ್ಮ ತನುತ್ರಯವಿಕಾರಮಂ ಪೊರ್ದದೆ, ಲಿಂಗ ನಿಕ್ಷೇಪದಲ್ಲಿ ನಿರಂಗವಾಗಿ, ಮನ್ಮಥರತಿಯೆಂಬ ನರಕವ ಬೀಳದೆ, ಅಕ್ಷಯಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಎರಡೆಂಬರಯ್ಯಾ ಕರಣದ ಕಂಗಳಲ್ಲಿ ನೋಡಿದವರು. ಎರಡುವನತಿಗಳೆದು ಒಂದೆಂಬರಯ್ಯಾ. ಕಾಮಿಸೂದಿಲ್ಲಾಗಿ ಕಲ್ಪಿಸೂದಿಲ್ಲ. ಭಾವಿಸೂದಿಲ್ಲಾಗಿ ಬಯಸೂದಿಲ್ಲ. ಗುಹೇಶ್ವರನೆಂಬುದಿಲ್ಲಾಗಿ ಮುಂದೆ ಬಯಲೆಂಬುದೂ ಇಲ್ಲ.
--------------
ಅಲ್ಲಮಪ್ರಭುದೇವರು
ಎನ್ನಂತರಂಗವೆಂಬ ಭೂಮಿಯಲ್ಲಿ ಮಹಾಜ್ಞಾನವೆಂಬ ನಿಧಾನ ಭೂಗತವಾಗಿದ್ದಿತ್ತಯ್ಯಾ. ಶ್ರೀಗುರುವೆಂಬ ಅಂಜನಸಿದ್ಧನು ಬಂದು, ಎನ್ನ ಅದಕ್ಕೆ ಬಲೆಯನಿಕ್ಕಿ, ತನ್ನ ಕರುಣಾಮೃತವೆಂಬ ಮರುಜವಣಿಯ ಹಿಂಡಿ ಆ ನಿಧಾನವನೆನಗೆ ಕರತಳಾಮಳಕವ ಮಾಡಿಕೊಟ್ಟನಯ್ಯಾ. ಗುಹೇಶ್ವರಾ_ನಿಮ್ಮ ಶರಣ ಅನಿಮಿಷನೆಂಬ ಶ್ರೀಗುರು.
--------------
ಅಲ್ಲಮಪ್ರಭುದೇವರು
ಎರಡು ಕಣ್ಣುಳ್ಳಡೆ ಚತುರ್ಭುಜನೆಂಬೆನು. ಮೂರು ಕಣ್ಣುಳ್ಳಡೆ ಮಹೇಶ್ವರನೆಂಬೆನು ಮೈಯೆಲ್ಲಾ ಕಣ್ಣಾದಡೆ ಸದಾಶಿವನೆಂಬೆನು (ಹದಿನೈದು ಕಣ್ಣಾದಡೆ ಪರಶಿವನೆಂಬೆನು?) ಗುಹೇಶ್ವರಾ ನಿಮ್ಮ ಶರಣಂಗೆ ಅಂಗಾಲ ಕಣ್ಣು ಮೂಡಿದಡೆ ನಿರುಪಮ ಮಹಿಮ ಅಲ್ಲಯ್ಯನೆಂಬೆನು.
--------------
ಅಲ್ಲಮಪ್ರಭುದೇವರು
ಎನ್ನ ಕಂಗಳೊಳಗಣ ರೂಹಿಂಗೆ ಅನು ಬೇಟಗೊಂಡು ಬಳಲುವಂತೆ, ಹಿಡಿದು ನೆರೆಯಲಿಲ್ಲಯ್ಯಾ. ತುರೀಯದ ತವಕವನೇನೆಂಬೆನಯ್ಯಾ. ಸಂಗಸಂಯೋಗವಿಲ್ಲದ ರತಿಸುಖವನರಸಲುಂಟೆ? ಗುಹೇಶ್ವರಲಿಂಗದ ಕೃತಕದಾಳಿಯನೇನೆಂಬೆ?
--------------
ಅಲ್ಲಮಪ್ರಭುದೇವರು
ಎಣ್ಣೆ ಬೇರೆ ಬತ್ತಿ ಬೇರೆ:ಎರಡೂ ಕೂಡಿ ಸೊಡರಾಯಿತ್ತು. ಪುಣ್ಯ ಬೇರೆ ಪಾಪ ಬೇರೆ:ಎರಡೂ ಕೂಡಿ ಒಡಲಾಯಿತ್ತು. ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು. ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ, ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎಂತಯ್ಯಾ ? ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲ ಭಕ್ತಿರಸ_ ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ? ಅರುಹಿನ ಕುರುಹಿನ ಮರವೆ ಮಾತಿನೊಳಗದೆ. ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ? ಕುರುಹಳಿದು ಕುರುಹನರಿಯ ಬಲ್ಲಡೆ ಗುಹೇಶ್ವರಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ ಕಾಣಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...