ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದ್ರವ್ಯ ನೀನು ದ್ರವ್ಯಾರ್ಥ ನೀನು; ಪದ ನೀನು, ಪದಾರ್ಥ ನೀನು. ಸಕಲ ನೀನು ನಿಷ್ಕಲ ನೀನು. ಸಕಲ ನಿಷ್ಕಲಾತ್ಮಕ ಪರಿಪೂರ್ಣ ಶಿವನಲ್ಲದೆ ಅನ್ಯ ಭಿನ್ನಭಾವ ಉಂಟೆ ? ಸಕಲ ನಿಷ್ಕಲ ತತ್ವಂಗಳು; ನಿಮ್ಮೊಳಗೆ ಸಮಾಸವನೆಯ್ದುವೆವೆಂದು ತಮ್ಮ ತಮ್ಮ ಅಂಗದ ಮೇಲೆ ಸರ್ವಪದಾರ್ಥಂಗಳ ಹೆಸರಿಟ್ಟು ಹೊತ್ತುಕೊಂಡೈದಾವೆ ನೋಡಾ ! ಅದೆಂತೆಂದಡೆ: ``ದ್ರವ್ಯಾರ್ಥಂ ಚ ಮಹಾದೇವೋ ದ್ರವ್ಯರೂಪೋ ಮಹೇಶ್ವರಃ ಇತಿ ಮೇ ಭೇದನಂ ನಾಸ್ತಿ ಸರ್ವರೂಪಸ್ಸದಾಶಿವಃ'' _ ಇಂತೆಂದುದಾಗಿ_ನಾದ ನೀನು, ಬಿಂದು ನೀನು, ಕಳೆ ನೀನು, ಕಳಾತೀತ ನೀನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದೇವನೊಲಿದ, ನೀನೊಲಿದೆ_ಎಂಬುದು ಅದಾವುದಕ್ಕಾ ? ಭಾವಶುದ್ಧವಾದಲ್ಲಿ ಸೀರೆಯನಳಿದು ಕೂದಲು ಮರೆಸಲೇತಕ್ಕೆ ? ಅದು ಅಂತರಂಗದ ನಾಚಿಕೆ ಬಾಹ್ಯದಲ್ಲಿ ತೋರಿತ್ತು. ಅದು ಗುಹೇಶ್ವರಲಿಂಗಕ್ಕೆ ಒಲವರವಲ್ಲ.
--------------
ಅಲ್ಲಮಪ್ರಭುದೇವರು
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ. ಮಾಡಿದಡೇನಹುದೊ? ಮಾಡದಿರ್ದಡೇನಹುದೊ? ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ. ಮಾಡಿದಡೇನಹುದೊ?
--------------
ಅಲ್ಲಮಪ್ರಭುದೇವರು
ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ;_ ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ದೇವರೆಲ್ಲರ ಹೊಡೆತಂದು ದೇವಿಯರೊಳಗೆ ಕೂಡಿತ್ತು ಮಾಯೆ, ಹರಹರಾ ಮಾಯೆ ಇದ್ದೆಡೆಯ ನೋಡಾ. ಶಿವಶಿವಾ ಮಾಯೆ ಇದ್ದೆಡೆಯ ನೋಡಾ. ಎರಡೆಂಬತ್ತುಕೋಟಿ ಪ್ರಮಥಗಣಂಗಳು, ಅಂಗಾಲ ಕಣ್ಣವರು ಮೈಯೆಲ್ಲಾ ಕಣ್ಣವರು, ನಂದಿ ವಾಹನ ರುದ್ರರು_ಇವರೆಲ್ಲರು, ಮಾಯೆಯ ಕಾಲಗಾಹಿನ ಸರಮಾಲೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇಗುಲವೇಕಯ್ಯಾ ? ಎರಡಕ್ಕೆ ಹೇಳಲಿಲ್ಲಯ್ಯಾ. ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪನು ?
--------------
ಅಲ್ಲಮಪ್ರಭುದೇವರು
ದೇಹಿಗೆ ದೇಹಿಯಾಗಿರ್ಪುದರ ಭೇದವನು ಆರು ಬಲ್ಲರು ? ಹರಿಬ್ರಹ್ಮಾದಿಗಳರಿಯರು, ಮನುಮುನಿಗಳರಿಯರು, ಸಿದ್ಧಸಾಧಕರರಿಯರು. ಅರಿವಿಂಗೆ ಅರಿವಾಗಿರ್ಪುದನು ನಿನ್ನ ಅರಿವಿಂದ ಅರಿಯಬಹುದೆ ? ಗುಹೇಶ್ವರಲಿಂಗವನರಿವಡೆ ನೀನರಿಯದಂತಿರಬೇಕು.
--------------
ಅಲ್ಲಮಪ್ರಭುದೇವರು
ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು ಶಕ್ತಿಗೊಳಗಾಯಿತ್ತಾಗಿ ಬಚ್ಚಬಯಲೆಂಬುದಕ್ಕುಪಮಾನವಿಲ್ಲಯ್ಯ [ಗುಹೇಶ್ವರ].
--------------
ಅಲ್ಲಮಪ್ರಭುದೇವರು
ದೇವ ಕಂಡಾ, ಭಕ್ತ ಕಂಡಾ; ಮರಳಿ ಮರಳಿ ಶರಣೆಂಬ ಕಂಡಾ. ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ ! ಸಾವನ್ನಕ್ಕ ಸರಸವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ದಾರಿಗೊಂಡು ಹೋಹವರೆಲ್ಲರೂ ನೀವು ಕೇಳಿರೆ. ಮೂರು ಬಟ್ಟೆ ಕೂಡಿದಠಾವಿನಲ್ಲಿ ಒಬ್ಬ ಹೆಮ್ಮಾರಿ ಐದಾಳೆ. ಆ ಮಾರಿಯ ಬಾಯೊಳಗೆ ಮೂರು ಘಟ್ಟವಿಪ್ಪುವು. ನಂಜಿನ ಸೊನೆ ಸುರಿವುತ್ತಿಪ್ಪುದು. ಕಾಡ ಕೋಣನ ಮುಖದಲ್ಲಿ ಕತ್ತಲೆ ಕಾಣಲೀಸದು. ಐದು ಬಾಯ ಹುಲಿ ಆಗುಳಿಸುತ್ತಿಪ್ಪುದು. ಇವೆಲ್ಲವ ಗೆದ್ದಲ್ಲದೆ ಗುಹೇಶ್ವರನ ಕಾಣಬಾರದು
--------------
ಅಲ್ಲಮಪ್ರಭುದೇವರು
ದೇವಲೋಕದವರ ತೃಣವೆಂಬೆ. ಮರ್ತ್ಯಲೋಕದವರ ಕ್ಷಣವೆಂಬೆ. ಅಹಂಕಾರವೆಂಬ ಶೃಂಗಾರವ ಮಾಣೆ ! ಆನಲ್ಲದೆ ಅನ್ಯವ ಅಲ್ಲೆಂಬೆ ಗುಹೇಶ್ವರನೆಂಬವನು ತಾನೆ ತಾನಾಗಿ.
--------------
ಅಲ್ಲಮಪ್ರಭುದೇವರು
ದೇವಲೋಕದವ[ರೆಲ್ಲರ] ವ್ರತಗೇಡಿಗಳೆಂಬೆ. ಮತ್ರ್ಯಲೋಕದವ[ರೆಲ್ಲರ] ಭಕ್ತದ್ರೋಹಿಗಳೆಂಬೆ. ದೇವಸಂಭ್ರಮ ಗಣಪದವಿಯ ಕಂಡವರೆಲ್ಲರ ಕುಂಭಕರ್ಣನಂತೆ ಅತಿನಿದ್ರಿಗಳೆಂಬೆ. ಅನಂತಶೀಲರ ಕಂಡಡೆ ಕೈಕೂಲಿಕಾರರೆಂಬೆ_ ಗುಹೇಶ್ವರಾ ಲಿಂಗೈಕ್ಯವನರಿಯರಾಗಿ.
--------------
ಅಲ್ಲಮಪ್ರಭುದೇವರು
ದೂರದ ತುದಿಗೊಂಬನಾರಯ್ಯ ಗೆಲುವರು ? ಮೀರಲಿಲ್ಲದ ನಿರಾಳದ ಘನವನು (ನಿಲವನು ?), ಮೀರಿ, ಕಾಬ ಘನವನು ಬೇರೆ ತೋರಲಿಲ್ಲ. ತೋರಿ ಕಾಬಡೆ ತನ್ನ ಹಿಡಿಯಲಿಲ್ಲ. ಓರೆ ಆವಿನ ಹಾಲನಾರಯ್ಯ ಕರೆವರು ? ಮೂರು ಲೋಕದೊಳಗೆ ತಾನಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದೇವಲೋಕದ ದೇವಗಣಂಗಳೆಲ್ಲ ಎನ್ನ ಹೊರಗೆಂಬರು; ಅದು ದಿಟವೆ. ಸತ್ಯ ಸಾತ್ವಿಕ ಸದ್ಭಕ್ತರು ಎನ್ನ ಹೊರಗೆಂಬರು; ಅದು ದಿಟವೆ. ಹದಿನಾಲ್ಕು ಭವನದೊಳಗೆ ಅವರು ತಾವಿರಲಿ, ನಾ ನಿಮ್ಮೊಳಗು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ. ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ. ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ. ನೀ ಗುರಿಯಾಗಿ ಹೋದವರನಾರನೂ ಕಾಣೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದರ್ಪಣದೊಳಗಣ ರೂಹಿಂಗೆ ಆ ದರ್ಪಣವೆ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ರ್ಯಲೋಕದೊಳಗಣ ಆಕೃತಿ ಅಲ್ಲಿಲ್ಲವೇಕಯ್ಯಾ ? ಆ ಲೋಕದೊಳಗೆ ಉತ್ಪತ್ಯ(ತ್ತಿ ?) ಸ್ಥಿತಿ ಲಯ_ಇದೆಂತಹ ಕರ್ಮಬದ್ಧರು ? ಒಂದರ ಪರಿ ಒಂದಕ್ಕಿಲ್ಲ ಕಂಡಿರೆ ! ದೃಷ್ಟವಹ ಗುರುಹಸ್ತದೊಳಗಣ ಸದ್ಭಕ್ತಂಗೆ, ಅಲ್ಲಿಯ ಉತ್ಪತ್ತಿ ಸ್ಥಿತಿ ಲಯ_ಇದೆಂತಹ ಕರ್ಮದ ಪರಿಯೊ ? ಮತ್ತಾವ ಪರಿಯೂ ಇಲ್ಲ, ಲಿಂಗದ ಪರಿಯ ಮಾಡಿದ ಗುಹೇಶ್ವರ.
--------------
ಅಲ್ಲಮಪ್ರಭುದೇವರು