ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು. ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು. ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು. ಪ್ರಾಣ ಹೋದರೆ ಕಾಯ ಬಿದ್ದಿತ್ತು, ಲಿಂಗ ಒಂದೆಸೆಯಾದಡೆ ಮನ ನಾಚಿತ್ತು. ಗುಹೇಶ್ವರನೆನಲಿಲ್ಲದ ಘನವು.
--------------
ಅಲ್ಲಮಪ್ರಭುದೇವರು
ಪರಮಸುಖದ ಪರಿಣಾಮದ ಇರವ ಬಲ್ಲವರಾರೊ? ಅದು ದೊರಕೊಳ್ಳದು ನೋಡಾ ! ತನತನಗೆ ತನ್ನ ಇರವ ಲಿಂಗದಲ್ಲಿರಿಸಿ, ಪರವ ಮನದಲ್ಲಿ ಹಿಡಿದು ಇಹ ಪರವೆಂಬುದೊಂದು ಭ್ರಾಂತಳಿದು, ನಿರತಿಶಯ ಸುಖದೊಳಗೆ ನಿಜವಾಗಿರಬಲ್ಲ ನಿಮ್ಮ ಶರಣನನುಪಮಪ್ರಸಾದಿ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ. ಹೂವಿಲ್ಲದ ಪರಿಮಳದ ಪೂಜೆ! ಹೃದಯಕಮಳದಲ್ಲಿ `ಶಿವಶಿವಾ' ಎಂಬ ಶಬ್ದ_ ಇದು, ಅದ್ವೈತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪರವನರಿದ ಸತ್ಪುರುಷರ ಸಂಗದಿಂದ ಶಿವಯೋಗದ ವಚನಾಮೃತವನು, ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರಮುಖದಲ್ಲಿ ಕೇಳಿ, ಮನೋಮುಖದಲ್ಲಿ ಹಾರೈಸಿ, ತೃಪ್ತಿಮುಖದಲ್ಲಿ ಸಂತೋಷವನೆಯ್ದಬಲ್ಲಡೆ ಆ ಸುಖವು ಪರಿಣಾಮವನೊಡಗೂಡುವುದು ! ಹೀಂಗಲ್ಲದೆ, ಸಂಸಾರವಿಷಯರಸವ ತಮ್ಮ ಹೃದಯಕೂಪದಲ್ಲಿ ತುಂಬಿಕೊಂಡಿಪ್ಪ ಜೀವರು ಕಾಯದಲ್ಲಿ ವಚನಾಮೃತವ ತುಂಬಿದಡೆ, ಭಿನ್ನಘಟದಲ್ಲಿ ಉದಕವ ಹೊಯ್ದಂತೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗುರುವಾರೂ ಇಲ್ಲ ಚೋಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಭಕ್ತರಾರೂ ಇಲ್ಲ ಬಸವಣ್ಣ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ನಿರ್ವಾಣಿಗಳಾರೂ ಇಲ್ಲ ಅಕ್ಕಗಳು ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಹಿರಿಯರಾರೂ ಇಲ್ಲ ಚೀಲಾಳ ತಪ್ಪಿಸಿ. ಪರಮಾರ್ಥದಲ್ಲಿ ಪರೀಕ್ಷಿಸಿ ತಿಳಿದು ನೋಡುವಡೆ ಗಂಭೀರರಾರೂ ಇಲ್ಲ ಅಜಗಣ್ಣ ತಪ್ಪಿಸಿ. ಇಂತೀ ಐದು ತೆರದನುವು ಆರಿಗೂ ಇಲ್ಲವೆಂದೆನಬೇಡ. ಅವರ ಕರುಣ ಉಳ್ಳವರಿಗೆ ಆ ಮುಕ್ತಿಯುಂಟು. ಆ ಐವರ ಕಾರುಣ್ಯದ ಪ್ರಸಾದವ ಕೊಂಡು ನಾನು ಬಯಲಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು. ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು. ಗುಹೇಶ್ವರಾ ನಿಮ್ಮ ಶರಣರು, ಹಿಂದ ನೋಡಿ ಮುಂದನರ್ಪಿಸುವರು.
--------------
ಅಲ್ಲಮಪ್ರಭುದೇವರು
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ ಫಲವೇನೊ ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ_ ವಿಷಯವನತಿಗಳೆದಲ್ಲಿ ಫಲವೇನೊ ? ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಪಂಚಾಶತ್‍ಕೋಟಿ ಭೂಮಂಡಲವನು, ಒಂದು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು. ತಲೆಯಿಲ್ಲದೆ ಕಂಡು ಬೆರಗಾದೆನು ನವಖಂಡ ಮಂಡಲ ಭಿನ್ನವಾದಂದು_ ಆ ತಲೆಯ ಕಂಡವರುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಪರಿಪರಿಯ ಅವಲೋಹ[ವ]ಪರುಷ ಮುಟ್ಟಲು ಹೊನ್ನು ಪರಿವರ್ತನಕ್ಕೆ ಬಂದು ಸಲುತ್ತಿರ್ದುವು ನೋಡಾ ಪರುಷವ ಮಾಡುವ ಪುರುಷರೆಲ್ಲರು ಪರುಷ ಮುಟ್ಟಿದ ಹೊನ್ನಿನಂತಿದ್ದರು ನೋಡಾ. ಪರುಷ ತಾನಾಗಲು, ಹರಿಬ್ರಹ್ಮರಿಗಳವಲ್ಲ. ಸುರರು ಕಿನ್ನರರೆಲ್ಲರು ನಿಮ್ಮ ವರದಲ್ಲಿ ಸಿಲುಕಿದ್ದರು. ಪರುಷದಂತಿದ್ದರು ನಮ್ಮ ಗುಹೇಶ್ವರನ ಶರಣರು.
--------------
ಅಲ್ಲಮಪ್ರಭುದೇವರು
ಪೂರ್ವಬೀಜವು ಬ್ರಹ್ಮಚರ್ಯವೆ ? ಅರಿವು ತಾ ಬ್ರಹ್ಮಚರ್ಯವೆ ? ಜ್ಞಾನಾಜ್ಞಾನದುದಯ ತಾ ಬ್ರಹ್ಮಚರ್ಯವೆ ? ಗುಹೇಶ್ವರಾ ನಿಮ್ಮ ಶರಣರ ಪರಿಣಾಮವೆ ಬ್ರಹ್ಮಚರ್ಯವು.
--------------
ಅಲ್ಲಮಪ್ರಭುದೇವರು
ಪಿಂಡಬ್ರಹ್ಮಾಂಡದೊಳಗೆ ತಂಡ ತಂಡದ ಲೋಕ. ಗಂಡ ಗಂಡರನಿರಿಸಿ, ಬಡವರೊಡೆಯರ ನುಂಗಿ, ನಾಡೊಳಗೆ ನಿಡು ನಡೆದು, ಮಡುವನೆಲ್ಲವ ತೊಡೆದು ನಡುರಂಗದಲ್ಲಿ ಕೊಡನೊಡೆಯಲೀಯದೆ; ಮಡದಿಯೊಡಗೂಡಿ, ಗಗನವನಡಿಗೆಯ ಮಾಡಿ ಉಂಡು ಸುಖಿಯಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಂಚವರ್ಣದಬಿಂದು ಪ್ರಪಂಚವನಳಿದುಳಿದಿರಲು, ಸಂಚರಿಸುವಡೆ ಆವೆಡೆಯೂ ಇಲ್ಲ. ನಿಂದ ಚಿತ್ತಿನ ಪ್ರಭೆ ಅಂಗವನು ನೆರೆ ನುಂಗೆ, ಹಿಂದು ಮುಂದು ಎಡಬಲನೆಂಬುದಿಲ್ಲ ! ಅಡಿಯಾಕಾಶವೆಂಬುದಿಲ್ಲ ಕೆಳಗೆ ನಿಲಲು, ಆಧಾರ ಮೊದಲಿಂಗಿಲ್ಲ ಕಡೆಗೆ ಸಾರುವೆನೆನಲು ಊಧ್ರ್ವವಿಲ್ಲ. ನಡುವೆ ನಾನಿದ್ದಿಹೆನೆಂದಡೆ, ತನ್ನೊಡಲೊಳಗೆ ಒಡೆದು ಮೂಡಿತ್ತು ತನ್ನಂತೆ ಬಯಲು ! ಈ ಬೆಡಗು ಬಿನ್ನಾಣವ ಬಡವರರಿವರೆ ? ಇದನರಿದು ನುಡಿದು ತೋರಿದನು ಗುಹೇಶ್ವರನ ಶರಣ ಚನ್ನಬಸವಣ್ಣನು.
--------------
ಅಲ್ಲಮಪ್ರಭುದೇವರು
ಪೂರಾಯ ಗಾಯ ತಾಗಿ ನೊಂದೆನೆಂದರಿಯೆನಯ್ಯಾ, ಇದ್ದೆನೆಂದರಿಯೆನಯ್ಯಾ, ಸತ್ತೆನೆಂದರಿಯೆನಯ್ಯಾ, ಕಾಯ ಪಲ್ಲಟವಾಯಿತ್ತು ಗುಹೇಶ್ವರಲಿಂಗ ಸ್ವಾಯತವಾಗಿ.
--------------
ಅಲ್ಲಮಪ್ರಭುದೇವರು
ಪಂಚಮಹಾಪಾತಕವಾವುದೆಂದರಿಯರು _ ಭವಿಯ ತಂದು ಭಕ್ತನ ಮಾಡೂದು ಪ್ರಥಮ ಪಾತಕ. ಭಕ್ತರಿಗೆ ಶರಣೆಂಬುದು ದ್ವಿತೀಯ ಪಾತಕ, ಗುರುವೆಂಬುದು ತೃತೀಯ ಪಾತಕ. ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ. ಗುಹೇಶ್ವರಲಿಂಗದಲ್ಲಿ ಹಿರಿದು ಭಕ್ತಿಯ ಮಾಡೂದು ಪಂಚಮ ಪಾತಕ !
--------------
ಅಲ್ಲಮಪ್ರಭುದೇವರು
ಪುಣ್ಯಪಾಪವಿಲ್ಲಾಗಿ ಜನನದ ಹಂಗಿಲ್ಲ. ಬಂದುದನುಂಬನಾಗಿ ಮಾನವರ ಹಂಗಿಲ್ಲ. ಭವಗೆಟ್ಟನಾಗಿ ದೈವದ ಹಂಗಿಲ್ಲ. ಸತ್ಯಜ್ಞಾನಾನಂದವೆ ತಾನಾಗಿ ಇನ್ನಾರ ಹಂಗಿಲ್ಲ. ಇನ್ನಾರ ಹಂಗಿಲ್ಲದಾತ ಗುಹೇಶ್ವರಲ್ಲಯ್ಯನೊಬ್ಬನೆ !
--------------
ಅಲ್ಲಮಪ್ರಭುದೇವರು
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ, ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ; ಹೊರಗಣ ಹೊರಗನು ಅರಿಯಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು, ತಂದು ತೋರಿದ ನಮ್ಮ ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ಪೂಜೆಯಾಯಿತ್ತದೇನೊ ? ಪೂಜೆಯ ಮೇಲೆ ಸಿಂಹಾಸನವಿದೇನೊ ? ಧೂಪ ದೀಪ ನಿವಾಳಿ ಇದೇನೊ ? ತಳದಲ್ಲಿ ಜ್ಯೋತಿ ಮೇಲೆ ಪ್ರಣತೆ ! ಕಳಸದ ಮೇಲಣ ನೆಲಗಟ್ಟು ಕಂಡು ನೋಡಿ ಬೆರಗಾದೆ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು. ಆ ಅನಿರ್ವಾಚ್ಯವಾಗಿದ್ದ ಪರವಸ್ತು ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು ! ಆ ನಾಮವನೆಯ್ದಿ ಕುಳವಾಯಿತ್ತು, ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು. ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು. ಅದೆಂತೆಂದಡೆ: ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ, ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ, ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ, ಚಿತ್ತದಿಂದಾಯಿತ್ತು ಅಹಂಕಾರ. ಇಂತು_ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು. ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು. ಇದ ಕೆಡಿಸುವುದಕ್ಕೆ ಆರು ಸ್ಥಲವಾದವು. ಅವಾವೆಂದಡೆ: ಅಹಂಕಾರ ಅಡಗಿದಾಗ ಭಕ್ತಸ್ಥಲ, ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ, ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ, ಜೀವನ ಗುಣ ಸಂದಾಗ ಶರಣ ಸ್ಥಲ ಭಾವ ನಿರ್ಭಾವವಾದಾಗ ಐಕ್ಯಸ್ಥಲ. ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು. ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು. ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು, ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು. ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು. ಇಂತು_ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ: ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ, ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ, ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು ! ಇಂತು_ಷಡಂಗವಡಗಿದ ಪರಿ ಎಂತೆಂದಡೆ: ``ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ'' _ ಎಂದುದಾಗಿ ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಂಚಭೂತ ತ್ರಿಗುಣವನು ಸಂಚರಿಸಿ ರವಿಶಶಿಯ ಅಂತು ಕೂಡದ ರಜಬೀಜ ಬದ್ಧ ಬಂಧವಾಯಿತ್ತೊ ! ಸಂಗತಿಯಿಲ್ಲದವನಲ್ಲ, ಪವನಗತಿಯ ನಡೆವವನಲ್ಲ. ಭೇದಿಸುತ್ತಿದ್ದಿತು ಲೋಕವೆಲ್ಲ ಆತನ ! ರಜಬೀಜವಿಲ್ಲದ ಬಯಲು ಬದ್ಧವಾಯಿತ್ತೆ ? ಇನ್ನೇನೆಂದು ಉಪಮಿಸುವೆ ಗುಹೇಶ್ವರಾ ಸಿದ್ಧರಾಮನ ನಾಮವನು ?
--------------
ಅಲ್ಲಮಪ್ರಭುದೇವರು
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ. ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ. ಅಜಾತನ ಚರಿತ್ರ ಪವಿತ್ರ. ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ, ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರ[ನ] ತೋರಿದೆನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು
--------------
ಅಲ್ಲಮಪ್ರಭುದೇವರು
ಪರಮಜ್ಞಾನವೆಂಬ ಸಸಿಗೆ, ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ. ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಪಿಂಡಮುಕ್ತನ ಪದಮುಕ್ತನ ರೂಪಮುಕ್ತನ_ತಿಳಿದೆ ನೋಡಾ. ಪಿಂಡವೆ ಕುಂಡಲಿಯ ಶಕ್ತಿ, ಪದವೆ ಹಂಸನ ಚರಿತ್ರ, ಬಿಂದು ಅನಾಹತವೆಂದರಿದು_ಗುಹೇಶ್ವರಲಿಂಗವ ಕೂಡಿದೆನು.
--------------
ಅಲ್ಲಮಪ್ರಭುದೇವರು
ಪೂರ್ವಗುಣವನೆಲ್ಲ ಅಳಿದು ಪುನರ್ಜಾತನಾದ ಬಳಿಕ ಗುರುವಿನ ಕರಸ್ಥಲದಲ್ಲಿ ಉತ್ಪತ್ತಿ ಸದ್ಭಕ್ತರಲ್ಲಿ ಸ್ಥಿತಿ ಲಿಂಗದಲ್ಲಿ ಲಯ_ ಇಂತೀ ನಿರ್ಣಯವನರಿಯದೆ; ಶೀಲವಂತರ ಶೀಲ ತಪ್ಪಿದಡೆ ಹೇಳಬಹುದೆ ? ಹೇಳಬಾರದು. ಸೂಳೆ ಮುತ್ತು ಗೊರವಿತಿಯಾದಂತೆ, ಬಂಟ ಮುತ್ತು ಬಾಗಿಲಕಾಯ್ದಂತೆ, ನರಿ ಮುತ್ತು ಬಳ್ಳಾದಂತೆ, ಹಾವು ಮುತ್ತು ಸಿಂಗಿಯಾದಂತೆ ! ಎಲ್ಲ ದೇವರಿಗೆ ಮಸ್ತಕ ಪೂಜೆ ಜಂಗಮದೇವರಿಗೆ ಪಾದಪೂಜೆ. ಪಾದೋದಕ ಪ್ರಸಾದವ ಕೊಡುವ ಜಂಗಮದೇವರು, ಕÀಂಠಪಾವಡ ಧೂಳಪಾವಡ ಸರ್ವಾಂಗಪಾವಡ ಶೀಲಸಂಬಂಧವೆಂದಡೆ ಕೇಸರಿ ಶುನಕನಾದಂತೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಾಣವ ಮಾರುವವರಿಂಗೆ ಪ್ರಾಣಲಿಂಗವೆಲ್ಲಿಯದೊ? ಇಷ್ಟಲಿಂಗಪೂಜಕರೆಲ್ಲ ನೇಮವ ಮಾಡುತ್ತಿಪ್ಪರು. ಸೂನೆಗಾರಂಗೆ ಪ್ರಸಾದವೆಲ್ಲಿಯದೊ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...