ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯುಗದ ಉತ್ಸಾಹವ (ಉತ್ಸವವ?) ನೋಡಿರೆ ! ಪಂಚಶಕ್ತಿಗಳಿಗೆ ಪಂಚಪ್ರಧಾನರು. ಅವರ ಆಗುಹೋಗನು ಆ ಶರಣನೆ ಬಲ್ಲ. ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ ! ಮೂರು ದರುಶನಕ್ಕೆ ಮುಯ್ಯಾನುವನಲ್ಲ, ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು, ನಿಘಂಟುಗಳೆಂಬುವಕ್ಕೆ ಭೇದಕನಲ್ಲ, ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ. ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು, ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು. ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು. ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
--------------
ಅಲ್ಲಮಪ್ರಭುದೇವರು
ಯುಗ ಜುಗವ ಬಲ್ಲೆನೆಂಬವರು, ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು. ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು. ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಯುಕ್ತಿಯ ಕೇಳಿದಡೆ ಭಕ್ತಿಯ ತೋರಿದ. ಭಕ್ತಿಯ ಕೇಳಿದಡೆ ಯುಕ್ತಿಯ ತೋರಿದ. ನಿತ್ಯವ ಬೆಸಗೊಂಡಡೆ ಅತ್ತತ್ತಲೋಸರಿಸಿದ. ಗುಹೇಶ್ವರನ ಶರಣ ಬಸವಣ್ಣ, ಮರೆಗೆ ಮರೆಯನೊಡ್ಡಿ ಜಾರಿದನು. ಬಸವಣ್ಣನ ಪರಿ ಎಂತು ಹೇಳಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಯೋಗ ಶಿವಯೋಗವೆಂಬರು, ಯೋಗದ ಹೊಲಬನಾರು ಬಲ್ಲರಯ್ಯಾ ? ಹೃದಯಕಮಲ ಮಧ್ಯದಲ್ಲಿ ಭ್ರಮಿಸುವನ ಕಳೆದಲ್ಲದೆ ಯೋಗವೆಂತಪ್ಪುದೊ ? ಐವತ್ತೆರಡಕ್ಷರದ ಲಿಪಿಯ ಓದಿ ನೋಡಿ ತಿಳಿದಲ್ಲದೆ ಯೋಗವೆಂತಪ್ಪುದೊ ? ಆರುನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲಡೆ ಅದು ಯೋಗ ! `ಸ್ಯೋಹಂ' ಎಂಬಲ್ಲಿ ಸುಳುಹಡಗಿ ಮನ ನಷ್ಟವಾಗಿರಬಲ್ಲ ಕಾರಣ, ಗುಹೇಶ್ವರಲಿಂಗದಲ್ಲಿ ನೀನು ಸ್ವತಂತ್ರಧೀರನೆಂಬುದು ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಯುಗಜುಗ ಮಡಿವಲ್ಲಿ ಬ್ರಹ್ಮಾಂಡಗಳಳಿವಲ್ಲಿ ಲಿಂಗವೆಂದರಿತವರಾರೊ ? ಶಿವ ಶಿವಾ ವಾಯದಲೊದಗಿದ ಮಾಯಾವಾದಿಗಳು ! ದೇವನೆಂದರಿತವರಾರೊ ? ಶಿವ ಶಿವಾ ಅಗ್ನಿ ತೃಣದೊಳಗಡಗಿ ಲೀಯವಾದುದ ಗುಹೇಶ್ವರಾ ನಿಮ್ಮ ಶರಣ ಬಲ್ಲ !
--------------
ಅಲ್ಲಮಪ್ರಭುದೇವರು
ಯೋಗದಾಗೆಂಬುದ ಮುನ್ನವೆ ಹೊದ್ದದ ಯೋಗಿಯೆ ಶಿವಯೋಗಿ ಮೂಗ ಕಂಡ ಕನಸಿನ ಸ್ನೇಹದಂತೆ, ಮುಗ್ಧೆಯ ಮನಹರುಷದ ರತಿಯಂತೆ, ಸಂಧಾನದಂತೆ; ನಡು ಬಟ್ಟೆಯ ಮೂರು ನಡೆಗಳಲ್ಲಿ ಬರಿಗೆಯ್ದಡೆ ನಡೆಯೊಂದೆ ಸಸಿನ ಕಂಡಾ. ಒಂದ ಮೂರು ಮಾಡಿದಡೆಯೂ ಒಂದೆ ಕಂಡಾ. ಮೂರಾರಾದಡೆಯೂ ಒಂದೆ ಕಂಡಾ. ಆರು ಮುವತ್ತಾರಾದಡೆಯೂ ಒಂದೆ ಕಂಡಾ. ನಿನ್ನ ಅವಯವಂಗಳೆಲ್ಲ ಒಂದೆ ಕಂಡಾ. ನಿನ್ನ ಅರಿವು ಹಲವಾದಡೆ ಅರಿವು ನಿನಗೊಂದೆ ಕಂಡಾ. ಕತ್ತಲೆಯ ಮನೆ, ಮಾಯೆಯೆ ಕಾಡುವ ನಿದ್ರೆ. ಜಾಗರವಾಗಿ ಕಂಗೆಡಿಸಲು, ಕಂಗಳ ಹರವರಿಯಲು, ಮನವ ಮಣ್ಣಿಸು ಕಂಡಾ. ಗುಹೇಶ್ವರ ತಾನಾದ ಮುಗ್ಧತನಕ್ಕೆ ಕಡೆಮೊದಲುಂಟೆ ?
--------------
ಅಲ್ಲಮಪ್ರಭುದೇವರು
ಯೋಗದಾಗೆಂಬುದನಾರು ಬಲ್ಲರೊ? ಅದು ಮೂಗ ಕಂಡ ಕನಸು ! ನಡೆವ ಬಟ್ಟೆ ಮೂರು, ನಡೆಯದ ಬಟ್ಟೆ ಒಂದೆ ! ಒಂದನೊಂಬತ್ತ ಮಾಡಿ ನಡೆದೆಹೆವೆಂಬರು ಒಂಬತ್ತನೊಂದ ಮಾಡಿ ನಡೆದೆಹೆವೆಂಬ[ನ್ನಕ್ಕರ], ಮೂರು ಮುಖದ ಕತ್ತಲೆ ಒಂದು ಮುಖವಾಗಿ ಕಾಡುತ್ತಿಪ್ಪುದು. ಪ್ರಾಣಲಿಂಗಸಂಬಂಧವೆಲ್ಲಿಯದು ಹೇಳಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಯೋಗ ವಿಯೋಗವೆಂಬ ಹೊಲಬ ಬಲ್ಲವರನಾರನೂ ಕಾಣೆನು. ನವನಾಳದ ಸುಳುಹ ತಿಳಿದಹೆನೆಂಬುದು ಯೋಗವಲ್ಲ. ಐವತ್ತೆರಡಕ್ಷರದ ಶಾಸನವ ತಿಳಿದು ನೋಡಿ, ಹೃದಯಕಮಲಕರ್ಣಿಕೆಯಲ್ಲಿ ಸಿಲುಕಿದೆನೆಂಬುದು ಯೋಗವಲ್ಲ. ಬಹಿರಂಗವೆಂಬಡೆ ಕ್ರಿಯಾರಹಿತ (ಬದ್ಧ?) ಅಂತರಂಗವೆಂಬಡೆ ವಾಙ್ಮನೋತೀತ ಗುಹೇಶ್ವರನೆಂಬ ಲಿಂಗವು ಷಡುಚಕ್ರದ ಮೇಲಿಲ್ಲ ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ ಭಕ್ತರೆಂತಾದಿರಿ ಭೋ ! ಭಕ್ತಿ ಷಟ್ಸ್ಥಲದ ಭೇದವ ನಿಶ್ಚೈಸಲರಿಯದೆ ಜಂಗಮವೆಂತಾದಿರಯ್ಯಾ ? ನಿಃ ಕಾಮಿಯಾಗಿ ನಿಃ ಪ್ರಿಯನಾಗಿ ನಿರ್ಮೋಹಿಯಾಗಿ, ನಿರಾಶ್ರಿತನಾಗಿ ನಿರ್ಲೇಪನಾಗಿ, ಉಭಯಗುಣ ರಹಿತನಾಗಿ, ಸರ್ವಾಂಗದಲ್ಲಿ ನಿರ್ಮೋಹಿಯಾಗಿ, ತನು ಮನ ಧನ ಸುಖಾದಿಗಳ ನಿರ್ವಹಿಸಿ, ಬಂದುದನೆ ಪರಿಣಾಮಿಸಿ ಇರಬಲ್ಲಡೆ ಜಂಗಮಸ್ಥಲವಹುದು. ಆತನೆ ಜಂಗಮವೆಂಬುದಾಗಿತ್ತಾಗಿ ಗುಹೇಶ್ವರ ಲಿಂಗ ತಾನೆಂಬೆ.
--------------
ಅಲ್ಲಮಪ್ರಭುದೇವರು