ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಗನದ ಮೇಲೊಂದು ಸರೋವರ; ಆ ಜಲದಲ್ಲಿ ಮುಖವ ತೊಳೆದು ಹೂವ ಕೊಯ್ವವರೆಲ್ಲರೂ; ದೇವರಿಗೆ ಮುಖಮಜ್ಜನವನೆರೆದು, ಪೂಜಿಸಿ ಹೊಡವಂಟಡೆ ಒಮ್ಮೆ ನಾಯಕನರಕ ತಪ್ಪದಲ್ಲಾ! ದೇವಲೋಕದ ಪ್ರಮಥರ ಲಜ್ಜೆಯನೇನ ಹೇಳುವೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಗಗನ ಮಂಡಳದ ಸೂಕ್ಷ್ಮನಾಳದಲ್ಲಿ `ಸೋಹಂ ಸೋಹಂ' ಎನುತ್ತಿರ್ದತ್ತದೊಂದು ಬಿಂದು, ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ. ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು.
--------------
ಅಲ್ಲಮಪ್ರಭುದೇವರು
ಗುರುವೆಂದರಿಯರು, ಹಿರಿಯರೆಂದರಿಯರು; ದೇವರೆಂದರಿಯರು, ಭಕ್ತರೆಂದರಿಯರು. ಲಿಂಗವೆಂದರಿಯರು, ಜಂಗಮವೆಂದರಿಯರು; ಬಂದ ಬರವನರಿಯರು ನಿಂದ ನಿಲವನರಿಯರು. ಶಿವಶರಣರ ನೋಯಿಸುವ ಪಾತಕರನೇನೆಂಬೆ ? ಗುಹೇಶ್ವರಾ, ನಿಮ್ಮ ಮನ ನೊಂದ ನೋವು ಬರಿದೆ ಹೋಗದು.
--------------
ಅಲ್ಲಮಪ್ರಭುದೇವರು
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ ! ಮಹಾದೇವ, ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ? ಮನವೆ ಗುರುವಾದ ಕಾರಣ,_ ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು !
--------------
ಅಲ್ಲಮಪ್ರಭುದೇವರು
ಗಗನಪವನದ ಮೇಲೆ ಉದಯಮುಖದನುಭಾವ, ಸದಮದದ ಗಜವ ನಿಲಿಸುವ ಮಾವತಿಗ ಬಂದ. ಅಷ್ಟದಳಕಮಲದೊಳು ಸೃಷ್ಟಿಯಂಕುರ ಭಜನೆ; ಮೆಟ್ಟಿ ನಿಂದಾತ ಪರಮಯೋಗಿಯಾಗದೆ ಮಾಣ ! ಬಯಲ ಬಣ್ಣವ ತುಂಬಿ, ನೆಳಲ ಶೃಂಗಾರವ ಮಾಡಿದ ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಗುರುವೆಂಬಾತ ಶಿಷ್ಯನಂತುವನರಿಯ, ಶಿಷ್ಯನೆಂಬಾತ ಗುರುವನಂತುವನರಿಯ. ಗುರುವಿನಲ್ಲಿ ಸಮವಿಲ್ಲ, ಶಿಷ್ಯನಲ್ಲಿ ಸಮವಿಲ್ಲ, ಜಂಗಮ ಜಂಗಮದಲ್ಲಿ ಸಮವಿಲ್ಲ, ಭಕ್ತ ಭಕ್ತನಲ್ಲಿ ಸಮವಿಲ್ಲ. ಇದು ಕಾರಣ ಕಲಿಯುಗದಲ್ಲಿ ಉಪದೇಶವ ಮಾಡುವ ಕಾಳುಕುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗತಿಗೆಟ್ಟೆ ಧೃತಿಗೆಟ್ಟೆ ಮತಿಗೆಟ್ಟೆ ನಾನಯ್ಯಾ. ನಡೆವಡೆ ಶಕ್ತಿಯಿಲ್ಲ ನುಡಿವಡೆ ಜಿಹ್ವೆಯಿಲ್ಲ. ಇದಿರಲೊಬ್ಬರ ಉಪಚಾರ ಸೇರದು ನೋಡಾ ಎಮಗೆ. ಬಂದ ಬರವನರಿದು ನಿಂದ ನಿಲವನರಿದು ಕೂಡಬಲ್ಲ ಶರಣಂಗೆ, ಬೇರೊಂದು ಏಕಾಂತವೆಂಬ ಸಂದೇಹ ಉಂಟೆ ? ತೆರಹಿಲ್ಲದ ಘನವನೊಳಕೊಂಡ ಬಳಿಕ ಬರಲೆಡೆಯುಂಟೆ ನಮ್ಮ ಗುಹೇಶ್ವರಲಿಂಗಕ್ಕೆ ?
--------------
ಅಲ್ಲಮಪ್ರಭುದೇವರು
ಗಗನದ ಮೇಲೊಂದು ಅಬ್ಥಿನವ ಗಿಳಿ ಹುಟ್ಟಿ ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆವ ಕೂಳಾದ ರುದ್ರನಾ ಗಿಳಿಗೆ ತಾ ಕೋಳಾದ (ಕೋಳುವೋದ ?) ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತು_ಇದೆಂತೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ ! ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ! ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ !
--------------
ಅಲ್ಲಮಪ್ರಭುದೇವರು
ಗತಿವಿರಹಿತನೇನೆಂಬೆ, ಎಂತೆಂಬೆ ? ಅಘಟಿತಘಟಿತ ಅಖಂಡಿತಮಹಿಮನನೇನೆಂಬೆನೇನೆಂಬೆ ? ಆದಿಯಿಂದತ್ತತ್ತ ಗುಹೇಶ್ವರ ! ಅಲ್ಲಯ್ಯನ ಸುಳುಹು ಜಗಕ್ಕೆ ಪಾವನ.
--------------
ಅಲ್ಲಮಪ್ರಭುದೇವರು
ಗಿರಿಗಳ ಗುಹೆಗಳ ಕಂದರದಲ್ಲಿ, ನೆಲಹೊಲನ ಮುಟ್ಟದೆ ಇಪ್ಪೆ ದೇವಾ ! ಮನಕ್ಕೆ ಅಗಮ್ಯ ಅಗೋಚರನಾಗಿ, ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ ! ಗುಹೇಶ್ವರಾ ನಿಮ್ಮನು ಅಗಲಕ್ಕೆ ಹರಿವರಿದು ಕಂಡೆ ನಾನು.
--------------
ಅಲ್ಲಮಪ್ರಭುದೇವರು
ಗುರುವಿನ ಪ್ರಾಣ ಲಿಂಗದಲ್ಲಿ ಲೀಯವಾದ ಬಳಿಕ ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಕರಸ್ಥಲದಲ್ಲಿ. ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ. ಇದ್ದಾನೆ ನೋಡಾ ಎನ್ನ ಗುರುವಿನ ಗುರು ಪರಮಗುರು ಬಸವಣ್ಣ ಎನ್ನ ಕಂಗಳ ಮುಂದೆ ! ಗುಹೇಶ್ವರ ಸಾಕ್ಷಿಯಾಗಿ, ಎನ್ನ ಮೇಲೆ ದ್ರೋಹವಿಲ್ಲ ಕಾಣಾ ಚನ್ನಬಸವಣ್ಣಾ !
--------------
ಅಲ್ಲಮಪ್ರಭುದೇವರು
ಗುರುಸ್ಥಲಭಕ್ತರ ಮೂಲ ಜ್ಞಾನಶಕ್ತಿಗಳಾರು ಗುರುಸ್ವರೂಪವಾದವು. ಆ ಗುರುಸ್ವರೂಪವನುಳ್ಳ ಶಕ್ತಿಗಳಿಂದ, ಪರಮಚೈತನ್ಯವೆಂಬ ಮಂಟಪ ಉದಯಿಸಿ ಸಕಲಲೋಕಕ್ಕೆ ಆದಿಯಾಯಿತ್ತು. ಆ ಮಂಟಪದ ಮೇಲೆ ನಾನು ಕುಳಿತು ಸಂತೋಷದಿಂದ ಗುಹೇಶ್ವರಲಿಂಗವ ಕಣ್ಣು ತುಂಬಿ ನೋಡಿದ ನೋಟ ಸಕಲಭಕ್ತರಿಗೆ ಕೂಟವಾಯಿತ್ತು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಗುರುಸ್ವಾಯತವಾಯಿತ್ತು ಲಿಂಗಸ್ವಾಯತವಾಯಿತ್ತು, ಜಂಗಮಸ್ವಾಯತವಾಯಿತ್ತು ಬಸವಣ್ಣನಿಂದಲೆಂದಡೆ_ ತನುವಿಲ್ಲದಿರಬೇಕು ಮನವಿಲ್ಲದಿರಬೇಕು ಧನವಿಲ್ಲದಿರಬೇಕು; ಅರಿವರಿತು ಮರಹು ನಷ್ಟವಾಗಿರಬೇಕು. ಗುಹೇಶ್ವರಲಿಂಗದಲ್ಲಿ. ನಿರ್ಲೇಪಿಯಾದಲ್ಲದೆ ಇಲ್ಲ ಕಾಣಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ಗುರುವಿಡಿದ ಅರಿವು ಅರಿವಲ್ಲ, ಲಿಂಗವಿಡಿದ ಅರಿವು ಅರಿವಲ್ಲ. ಇಲ್ಲದ ಗುರು ಇಲ್ಲದ ಲಿಂಗ ! ಕಲ್ಪಿತಕ್ಕೆ ಅರಿವಹುದೆ ? ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ_ ಬಸವಣ್ಣನ ಕರಸ್ಥಲದೊಳಗೆ ಅಡಗಿತ್ತಲ್ಲ ! ಇನ್ನಾರಿಗೆ ಭಕ್ತಿಸ್ಥಲ, ಇನ್ನಾರಿಗೆ ಸಾರುವುದೀ ಲಿಂಗಸ್ಥಲ ? ಗುಹೇಶ್ವರಾ ಸಂಗನಬಸವಣ್ಣನ ಮೊರೆಹೊಕ್ಕು ಬದುಕಿದೆನು.
--------------
ಅಲ್ಲಮಪ್ರಭುದೇವರು
ಗುದ ಲಿಂಗ ನಾಭಿಕಮಲದಿಂದ ಮೇಲೆ ಷಡಂಗುಲವನೊತ್ತಿದಡೆ ಕಣ್ಣಿಲ್ಲದೆ ಕಾಣಬಹುದು ಲಿಂಗಪ್ರಕಾಶವ, ಕಿವಿಯಿಲ್ಲದೆ ಕೇಳಬಹುದು ಮಹಾನಾದ ಸುನಾದವ ಕಂಡು ಕೇಳಿದ ಬಳಿಕ ಮನ ನಂಬದಿದ್ದಡೆ ಮಕ್ಕಳಾಟಿಕೆ ತಪ್ಪದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುತತ್ವದಲ್ಲಿ ಹುಟ್ಟಿ, ಶಿವತತ್ವದಲ್ಲಿ ಬೆಳೆದು ಪರತತ್ವದಲ್ಲಿ ಮಗ್ನವಾದ ಶರಣಂಗೆ ಕಾಯವಿಡಿದಡೇನು ? ಕಾಯವಳಿದು ನಿರ್ವಯಲಾದಡೇನು ? ಕಾಯಸಮಾಧಿ ಕರಣಸಮಾಧಿ ಭಾವಸಮಾಧಿಯಾದ ಬಳಿಕ, ಗುಹೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು ಸುಜ್ಞಾನಸಮಾಧಿಯನೆಯ್ದಬಲ್ಲಡೆ ಅದೇ ನಿಜಸಮಾಧಿ ಕೇಳಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಗಗನದ ಮೇಘಂಗಳು ಸುರಿದಲ್ಲಿ ಒಂದು ಹಿರಿಯ ಕೆರೆ ತುಂಬಿತ್ತು. ಆ ಕೆರೆಗೆ ಏರಿ ಮೂರು; ಅಲ್ಲಿ ಒಳಗೆ ಹತ್ತು ಬಾವಿ ಹೊರಗೆ ಐದು ಬಾವಿ ! ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ ಆಕಾಶವೆಲ್ಲ ಜಲಮಯವಾಗಿತ್ತು ! ತುಂಬಿದ ಜಲವನುಂಡುಂಡು ಬಂದು ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ, ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರನೋಗರ !_ಸಯಧಾನ ನೋಡಾ ! ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ !
--------------
ಅಲ್ಲಮಪ್ರಭುದೇವರು
ಗುರುವೊಂದೆ ಬಸಿರು, ಲಿಂಗ ಒಂದೆ ಬಸಿರು ಜಂಗಮ ಒಂದೆ ಬಸಿರು ಪ್ರಸಾದ ಒಂದೆ ಬಸಿರು_ ಇದನಾರಯ್ಯಾ ಅಮಳೋಕ್ಯವ ಮಾಡಿ ತೋರಿದವರು ? ಇದನಾರಯ್ಯಾ ಪ್ರಜ್ವಲಿತವ ಮಾಡಿ ಬೇರೆ ತೋರಿದವರು ? ಪೂರ್ವಾಚಾರಿ ಭಕ್ತಿಭಾಂಡಾರಿ ಬಸವಣ್ಣಾ ಎನಗೆ ನೀನು ಗುಹೇಶ್ವರಲಿಂಗವ ತೋರಿದೆಯಾಗಿ ಲೋಕಾದಿಲೋಕವೆಲ್ಲವು ಎನಗೆ ಕಿಂಚಿತ್.
--------------
ಅಲ್ಲಮಪ್ರಭುದೇವರು
ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು, ಭಕ್ತನ ಬಾಡನಟ್ಟು, ದೇವನ ಸಾಸವೆಗಲಸಿ, ಬ್ರಹ್ಮನಡ್ಡಣಿಗೆ, ವಿಷ್ಣು ಪರಿಯಾಣ, ರುದ್ರನೋಗರ, ಈಶ್ವರ ಮೇಲೋಗರ, ಸದಾಶಿವ ತುಪ್ಪ; ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು_ವ, ಶ, ಷ, ಸ, ಅದರ ವರ್ಣ ಸುವರ್ಣ, ಅದಕ್ಕೆ ಅಧಿದೇವತೆ ದಾಕ್ಷಾಯಣಿ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು_ಬ, ಭ, ಮ, ಯ, ರ, ಲ, ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅಧಿದೇವತೆ ಬಹ್ಮನು. ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು_ ಡ, ಢ, ಣ, ತ, ಥ, ದ, ಧ, ನ, ಪ, ಫ, ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅಧಿದೇವತೆ ವಿಷ್ಣು. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು_ ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ,Àಠ, ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅಧಿದೇವತೆ ಮಹೇಶ್ವರನು. ಕÀಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಲಾಕಾರ, ಷೋಡಶದಳ ಪದ್ಮ ಅಲ್ಲಿ ಇಹ ಅಕ್ಷರ ಹದಿನಾರು_ ಅ, ಆ, ಇ, ಈ, ಉ, ಊ, ಋ, Iೂ, , , ಏ, ಐ, ಓ, ಔ, ಅಂ, ಅಃ, ಅದರ ವರ್ಣ ಶ್ವೇತವರ್ಣ, ಅದಕ್ಕೆ ಅಧಿದೇವತೆ ಸದಾಶಿವನು. ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು_ ಹಂ, ಕ್ಷಂ, ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅಧಿದೇವತೆ ಶ್ರೀಗುರು. ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ, ಅಲ್ಲಿ ಅಮೃತವಿಹುದು ಅಲ್ಲಿ `ಓಂ' ಕಾರಸ್ವರೂಪವಾಗಿ ಗುಹೇಶ್ವರಲಿಂಗವು ಸದಾಸನ್ನಹಿತನು.
--------------
ಅಲ್ಲಮಪ್ರಭುದೇವರು
ಗುರುವಿನ ಪರಿ ವಿಪರೀತವಾಯಿತ್ತಯ್ಯಾ, ಭ್ರಮರ_ಕೀಟ ನ್ಯಾಯದಂತಾಯಿತ್ತು. ಗುರು ತನ್ನ ನೆನೆವನ್ನಬರ ಎನ್ನನಾ ಗುರುವ ಮಾಡಿದನು. ಇನ್ನು ಶಿಷ್ಯನಾಗಿ ಶ್ರೀಗುರುವ ಪೂಜಿಸುವರಾರು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಗುರು, ಶಿಷ್ಯ ಸಂಬಂಧವನರಸಲೆಂದು ಹೋದಡೆ, ತಾನೆ ಗುರುವಾದ ತಾನೆ ಶಿಷ್ಯನಾದ, ತಾನೆ ಲಿಂಗವಾದ. ಗುಹೇಶ್ವರಾ_ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು !
--------------
ಅಲ್ಲಮಪ್ರಭುದೇವರು

ಇನ್ನಷ್ಟು ...