ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು,
ಅದೆಂತೆಂದಡೆ:
ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ,
ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ,
ನಿಮ್ಮ ಹಾನಿವೃದ್ಧಿ ಎನ್ನದಾಗಿ.
ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ?
ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ,
ಅಡಿಗಲ್ಲನೊಡ್ಡಿ ಹೋದಬಳಿಕ
ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ !
ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ
ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ,
ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ
ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು !
ಅದೆಂತೆಂದಡೆ, ಶಿವರಹಸ್ಯದಲ್ಲಿ:
``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ
ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ
ಇಂತೆಂಬ ಶ್ರುತ್ಯರ್ಥವ ಕೇಳದೆ,
ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ,
ಇದಕ್ಕೆ ಮತ್ತೆಯೂ ಶ್ರುತಿ:
``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ
ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ
ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು
ಕೋಪ ತಾಪಮಂ ಬಿಟ್ಟು,
ಭ್ರಾಂತು ಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ.
ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ
ಭವ ಹಿಂಗದು ಕಾಣಾ ಗುಹೇಶ್ವರಾ.